January 18, 2025
anantharama

ಬೆಳ್ತಂಗಡಿ: ದಿನಾಂಕ 12-05-2019ನೇ ಭಾನುವಾರದಂದು ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದ ಕೆ ಅನಂತರಾಮ ಬಂಗಾಡಿಯವರ ಆತ್ಮಕ್ಕೆ ಸದ್ಗತಿ ಕೋರುವ ಸಲುವಾಗಿ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 28-05-2019ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದಾರ ಅರುವ ಕೊರಗಪ್ಪ ಶೆಟ್ಟಿ, ಕೋಳ್ತಿಗೆ ನಾರಾಯಣ ಗೌಡ, ದಾಸಪ್ಪ ರೈ ಕುಂಬ್ಳೆ, ಕೃಷ್ಣ ಶೆಟ್ಟಿ ಬೆಳ್ತಂಗಡಿ, ಗಂಗಾಧರ ಭಂಡಾರಿ ಕೆ, ಸಂಸ್ಕಾರ ಭಾರತಿ ಅಧ್ಯಕ್ಷರಾದ ರಮಾನಂದ ಸಾಲ್ಯಾನ್, ನಾಗರೀಕ ಸೇವಾ ಟ್ರಸ್ಟ್ ನ ಸೋಮನಾಥ ನಾಯಕ್, ಆಳ್ವಾಸ್ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ। ಯೋಗಿಶ್ ಕೈರೋಡಿ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ, ಭಂಡಾರಿ ವಾರ್ತೆ ಮಖ್ಯ ಕಾರ್ಯನಿರ್ವಹಾಕರಾದ ಪ್ರಕಾಶ್ ಕಟ್ಲಾ, ನಟ ಶೇಖರ ಭಂಡಾರಿ ಕಾರ್ಕಳ, ಮಾಜಿ ಶಾಸಕ ವಸಂತ ಬಂಗೇರ, ಪೂವರಿ ತುಳು ಪತ್ರಿಕೆಯ ವಿಜಯ ಕುಮಾರ್ ಹೆಬ್ಬಾರಬೈಲ್, ಪ್ರತಾಪ್ ನಾಯಕ್ , ವಾಣಿ ವಿದ್ಯಾಲಯದ ಪ್ರಾಂಶುಪಾಲರಾದ ಯದುಪತಿ ಗೌಡ ಹಾಗೂ ಬಂಗಾಡಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅನಾರೋಗ್ಯದ ನಡುವೆಯೂ ಫೆಬ್ರವರಿ ತಿಂಗಳಲ್ಲಿ “ತುಳು ಯಕ್ಷಗಾನ ಪುರ್ಸಂಗ ಬ್ರಹ್ಮೆ ಕೆ ಅನಂತರಾಮ ಬಂಗಾಡಿ” ಎಂಬ ಪುಸ್ತಕ ಬಿಡುಗಡೆಯಲ್ಲಿ ಬಂಗಾಡಿಯವರು ಭಾಗವಹಿಸಿದ್ದನ್ನು ಕಂಡರೆ ಅವರಿಗೆ ಕಲೆ ಸಾಹಿತ್ಯದ ಅಭಿಮಾನ ಎಷ್ಟು ಇದೆ ಎಂದು ತಿಳಿಯುತ್ತದೆ ಎಂದು ಡಾ॥ ಯೋಗಿಶ್ ಕೈರೋಡಿಯವರು ನುಡಿದರು.

ರಾಜ್ಯ ಪ್ರಶಸ್ತಿಗೆ ಯೋಗ್ಯರಾದ ಅನಂತರಾಮ ಬಂಗಾಡಿಯವರು ಎಂದೂ ಪ್ರಶಸ್ತಿಗೆ ಸನ್ಮಾನಕ್ಕೆ ಅದ್ಯತೆ ಕೊಟ್ಟವರಲ್ಲ ಎಂದು ಅರುವ ಕೊರಗಪ್ಪ ಶೆಟ್ಟಿಯರು ತನ್ನ ಮನದಾಳದ ಮಾತನಾಡಿದರು.

ಮೊಟ್ಟ ಮೊದಲ ಬಾರಿಗೆ ಯಕ್ಷಗಾನದ ಮುಂಗಡ ಟಿಕೆಟ್ ಕಾದಿರಿಸುವಿಕೆ ಪ್ರಾರಂಭವಾಗಿಸಿದ್ದು ಬಂಗಾಡಿ ರಚಿಸಿರುವ ಪಟ್ಟದ ಪದ್ಮಲೆ ಪ್ರಸಂಗ ಎಂದು ದಾಸಪ್ಪ ರೈ ಕುಂಬ್ಳೆಯವರು ತನ್ನ ಅನಿಸಿಕೆ ಹೇಳಿದರು.

ಬಂಗಾಡಿಯವರು ತುಳು ಭಾಷೆಯ ಪಾರ್ಥಿ ಸುಬ್ಬ ಎಂದು ಕರೆಯಬಹುದು ಅವರಲ್ಲಿ ತುಳು ಭಾಷೆಯ ಅನೇಕ ಶಬ್ದಗಳ ನಿಘಂಟು ಅವರಲ್ಲಿ ಇತ್ತು ಎಂದು ಕೋಳ್ತಿಗೆ ನಾರಾಯಣನ ಗೌಡರು ನುಡಿದರು. 

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಸ್ಮರಣ ಸಂಚಿಕೆಯಲ್ಲಿ ಪ್ರಧಾನ ಸಂಪಾದಕರಾಗಿ ದುಡಿದಿರುವುದನ್ನು ಹಾಗೂ ಅವರ ಜೊತೆ ಇದ್ದ ಒಡನಾಟವನ್ನು ಕಟ್ಲಾ ಪ್ರಕಾಶ್ ಭಂಡಾರಿಯವರು ಹಂಚಿಕೊಂಡರು.

ಬಂಗಾಡಿಯವರು ನೇರನುಡಿಯವರು ಅವರೊಬ್ಬ ಮಾನವೀಯ ವ್ಯಕ್ತಿ ಎಂದು ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಯವರು ನುಡಿದರು

ಬಂಗಾಡಿಯವರ ಸಂಶೋಧನೆಯ ಐತಿಹ್ಯಗಳಲ್ಲಿ ಬಹಳ ಸೂಕ್ಷ್ಮಗಳಿದ್ದವು, ಅದನ್ನು ತಿಳಿದುಕೊಳ್ಳವ ಹಂಬಲದಿಂದ ಅವರ ನಮ್ಮ ಒಡನಾಟ ಹೆಚ್ಚಾಯಿತು ಎಂದು ಯದುಪತಿ ಗೌಡರವರು ತಿಳಿಸಿದರು

ಕಾರ್ಯಕ್ರಮದ ನಿರ್ವಹಣೆಯನ್ನು ಗಂಗಾಧರ ಭಂಡಾರಿ ಕೆ ಯವರು ಮಾಡಿದರು, ವಿಜಯ ಕುಮಾರ್ ಹೆಬ್ಬಾರಬೈಲ್ ಉಪಸ್ಥಿತಿಯಲ್ಲಿದ್ದ ಪ್ರಮುಖರಿಗೆ ಸ್ವಾಗತ ಬಯಸಿದರು. ಬಂಗಾಡಿಯವರ ರಚನೆಯ ಆಯ್ದ ಯಕ್ಷಗಾನ ಪದ್ಯವನ್ನು ಹಾಗೂ ಶ್ರದ್ಧಾಂಜಲಿ ಹಾಡನ್ನು ಯಕ್ಷಗಾನ ಶೈಲಿಯಲ್ಲಿ ಮಹೇಶ್ ರವರು ಹಾಡಿ ಸಭೆಯಲ್ಲಿ ನೆರದವರ ಕಣ್ಣನ್ನು ತೇವಗೊಳ್ಳುವಂತೆ ಮಾಡಿದರು, ಬಂಗಾಡಿಯವರ ರಚಿಸಿದಂತ ಜಾನಪದ, ಭಾವಗೀತೆ ಹಾಡನ್ನು ಸುರೇಶ್ ಭಂಡಾರಿ ಬೆಳ್ತಂಗಡಿ ಇವರು ಹಾಡಿದರು. ನಂತರ ಭೋಜನೆ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಬಂಗಾಡಿ ಅಭಿಮಾನಿಗಳು ಬಂಗಾಡಿ ಯವರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು

Leave a Reply

Your email address will not be published. Required fields are marked *