January 18, 2025
ca14ed96-825a-491f-96bd-a0e7c7c38cc2

ದೇಶದ ಉನ್ನತ ಕಾನೂನು ಕಾಲೇಜು ಗಳಲ್ಲಿ ಮೂರನೇ ಸ್ಥಾನ ಹೊಂದಿರುವ ಪುಣೆಯ ಸಿಂಬಯೋಸಿಸ್ ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳೂರಿನ ಪ್ರಖ್ಯಾತ ವಕೀಲರಾಗಿರುವ ಶ್ರೀಯುತ ಮನೋರಾಜ್ ರಾಜೀವರವರು ಏಪ್ರಿಲ್ 7 ರ ಶುಕ್ರವಾರ ಉಪನ್ಯಾಸ ನೀಡಿದರು.

ಮನೋರಾಜ್ ರವರು ಕಳೆದ 8 ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ ಸಮಯದಲ್ಲಿನ ತನ್ನ ಅನುಭವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಸರಕಾರಿ ವಕೀಲರಾಗಿ ವಿವಿಧ ಪ್ರಕರಣಗಳನ್ನು ನಿಭಾಯಿಸಿದ ರೀತಿ, ವೃತ್ತಿಯಲ್ಲಿ ಆದ ಅನುಭವ ಹಾಗೂ ಸರಕಾರೀ ವ್ಯಾಜ್ಯ ಮತ್ತು ಅದಕ್ಕೆ ಸಂಬಂಧಪಟ್ಟ ಕಾನೂನುಗಳ ಬಗೆಗಿನ ವಿವರ, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಗರಣಗಳಲ್ಲಿ ಶಾಮೀಲಾಗಿ, ವಿವಿಧ ರೀತಿಯಲ್ಲಿ ಹಣದ ದುರ್ಬಳಕೆ ಮತ್ತು ಭೂ ಕಬಳಿಕೆ ಮಾಡುವುದನ್ನು ಹೇಗೆ ತಡೆ ಹಿಡಿಯಬಹುದು ಎಂಬ ಮಾಹಿತಿಯನ್ನು ಕಾನೂನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.

ಸರ್ಕಾರಿ ಅಧಿಕಾರಿಗಳು ಸರಕಾರದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಾಗ ಒಬ್ಬ ಅಭಿಯೋಜಕರಾಗಿ ಸರಕಾರಿ ಸಂಸ್ಥೆಗಳನ್ನು ಮತ್ತು ಜನರ ತೆರಿಗೆಯ ಹಣವನ್ನು ಹೇಗೆ ರಕ್ಷಿಸಿಕೊಳ್ಳಬೇಕು. ಭೂ ಹಗರಣದಂತಹ ಕೇಸ್ ಗಳಲ್ಲಿ ಅಧಿಕಾರಿಗಳು ಸಿಲುಕಿಕೊಂಡಾಗ ಯಾವ ರೀತಿ ನ್ಯಾಯಾಲಯವನ್ನು ಮತ್ತು ದೇಶದ ಪ್ರಜೆಗಳನ್ನು ದಾರಿ ತಪ್ಪಿಸುತ್ತಾರೆ. ಈ ಕುತಂತ್ರಗಳ ಬಗ್ಗೆ ವಕೀಲರು ಹೇಗೆ ಜಾಗರೂಕರಾಗಿರಬೇಕು ಮತ್ತು ಜನರಿಗೆ ಯಾವ ರೀತಿ ಸೂಕ್ತ ಮಾಹಿತಿ ನೀಡಬೇಕು ಎಂಬಂತಹ ಹಲವು ವಿಷಯಗಳ ಬಗ್ಗೆ ಉದಾಹರಣೆ ಸಹಿತ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದರು. ಈ ಸಂದರ್ಭದಲ್ಲಿ ತಾನೇ ವಹಿಸಿದ್ದ ಪ್ರಕರಣಗಳನ್ನೂ ಉದಾಹರಣೆಯಾಗಿ ತೆಗೆದುಕೊಂಡು ವಿವರಿಸಿದರು .

ಈ ಸಂದರ್ಭದಲ್ಲಿ ಸಂಸ್ಥೆಯ ಡೀನ್ ಶ್ರೀಮತಿ ಶಶಿಕಲಾ ಗುರುಪುರ ಉಪಸ್ಥಿತರಿದ್ದರು .

ನಮ್ಮ ಭಂಡಾರಿ ಸಮಾಜದ ವಕೀಲರೊಬ್ಬರು ಅಭಿಯೋಜಕರಾಗಿ ಖ್ಯಾತಿ ಪಡೆದಿರುವುದನ್ನು ಗಮನಿಸಿದ ಪುಣೆಯ ಸಿಂಬಯೋಸಿಸ್ ಲಾ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆಮಂತ್ರಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆ ಮತ್ತು ಕೀರ್ತಿ ತಂದುಕೊಟ್ಟಿದೆ.

ಭಂಡಾರಿ ವಾರ್ತೆಯ ಕಾನೂನು ಸಲಹೆಗಾರರಾಗಿರುವ ಮನೋರಾಜ್ 2015 ರಿಂದ 2023 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾಗಿದ್ದಾರೆ.

ಇವರು ಮೂಲತಃ ಮಂಗಳೂರಿನವರಾಗಿದ್ದು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ   ( Deputy Controller of State Account ) ಇವರು ರಾಜೀವ ಕೆಲೆಸಿ ಮತ್ತು ಜಲಜಾಕ್ಷಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದರು. ಮಂಗಳೂರಿನ ಎಸ್ ಡಿ ಎಮ್ ಕಾನೂನು ಪದವಿ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿ ತನ್ನ 23 ನೇ ವಯಸ್ಸಿನಲ್ಲೆ ಅಡ್ವೋಕೇಟ್ ಎಸ್ ಆರ್ ಹೆಗ್ಡೆ ಎಂಬವರ ಜೊತೆ ಕಿರಿಯ ವಕೀಲರಾಗಿ ವಕಾಲತ್ತು ಪ್ರಾರಂಭಿಸಿದರು. ನಂತರ ಅತೀ ಕಿರಿಯ ವಯಸ್ಸಿನಲ್ಲೆ ಸ್ವಂತ ಕಚೇರಿಯಲ್ಲಿ ಕಾನೂನು ವೃತ್ತಿ  ಆರಂಭಿಸಿದರು.

ಮನೋರಾಜ್ ರವರ ಮೂಲಕ ಈ ರೀತಿಯ ಮಾರ್ಗದರ್ಶನ, ಮಾಹಿತಿ,ತರಬೇತಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ದೊರಕುವ ಮೂಲಕ ಪ್ರಾಮಾಣಿಕರಿಗೆ ನ್ಯಾಯ ದೊರೆತು ಅಪರಾಧದ ಸಂಖ್ಯೆಯು ಇಳಿಮುಖವಾಗಿ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಲಿ ಜೊತೆಗೆ ನಮ್ಮ ಸಮಾಜಕ್ಕೆ ಕುಟುಂಬಕ್ಕೆ ಕೀರ್ತಿ ದೊರಕಲಿ ಎಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಇವರನ್ನು ಅಭಿನಂದಿಸಿ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *