January 18, 2025
ln
ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ…
ನನ್ನ ಚೆಲುವೀಗೆ ಸೊಗಸೀನ ಲಾಲೀ…
ಮಲಗೇ ಮುಗಿಲೀನ ರಾಜಕುಮಾರಿ….
      ಹೀಗೆಂದು ಹಾಡುತ್ತ ಕನ್ನಡ ಚಿತ್ರರಸಿಕರ ಚಿತ್ತ ತನ್ನತ್ತ ಸೆಳೆದ ಮಾಂತ್ರಿಕ ಧ್ವನಿಯ ಹಾಡುಗಾರ ಎಲ್.ಎನ್.ಶಾಸ್ತ್ರಿ ಇನ್ನಿಲ್ಲ ಎಂದರೆ ನಂಬಲೇ ಆಗುತ್ತಿಲ್ಲ. ನಲವತ್ತಾರು ಅಂತ ಸಾಯುವ ವಯಸ್ಸೇನೂ ಅಲ್ಲ.
1996 ರಲ್ಲಿ ಅಜಗಜಾಂತರ ಚಿತ್ರದ ಮೂಲಕ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರೂ ಅವರನ್ನು ಪ್ರಸಿದ್ಧಿಯ ಉತ್ತುಂಗಕ್ಕೆ ಕರೆದೊಯ್ದದ್ದು ಜನುಮದ ಜೋಡಿ ಚಿತ್ರದ ಕೋಲುಮಂಡೆ ಜಂಗಮದೇವ ಗೀತೆ. ವಿ.ಮನೋಹರ್ ಸಂಗೀತ ನಿರ್ದೇಶನ ಈ ಹಾಡು ದಿನ ಬೆಳಗಾಗುವುದರಲ್ಲಿ ಅವರನ್ನು ಸೂಪರ್ ಸ್ಟಾರ್ ಮಾಡಿಬಿಟ್ಟಿತ್ತು. ಆ ಕಾಲದಲ್ಲಿ ಅವರು ಕನ್ನಡದ ಹಿಮೇಷ್ ರೇಷಮ್ಮಿಯಾ ಎಂದೇ ಜನಪ್ರಿಯರಾಗಿದ್ದರು. ಅದಾಗಿ ಕೆಲವು ವರ್ಷಗಳವರೆಗೂ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಗಾಯಕರಾಗಿದ್ದರು.ಒಂದಾದ ನಂತರ ಒಂದು ಸೂಪರ್ ಹಿಟ್ ಹಾಡುಗಳನ್ನು ಹಾಡುತ್ತಾ ಹೋದರು.
      ಅವರು ಕೇವಲ ಗಾಯಕರಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಚೈತನ್ಯ ಎಂಬ ಕಾವ್ಯನಾಮದಿಂದ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಸುಮಾರು  ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ರವಿಮಾಮ ಚಿತ್ರ. ಅವರ ಗುರುಗಳಾದ ನಾದಬ್ರಹ್ಮ ಹಂಸಲೇಖ ಅವರೇ ಅವರನ್ನು ಹೊಗಳಿ ಮಾತನಾಡುವಷ್ಟು ಹೆಸರು ಮಾಡಿದ್ದರು. ಗಾಯಕಿ ಸುಮಾ ಅವರನ್ನು ಮದುವೆಯಾಗಿ ನೆಮ್ಮದಿಯ ಜೀವನ ನೆಡೆಸುತ್ತಿರುವಾಗಲೇ ವಿಧಿ ಅವರ ಜೀವನದಲ್ಲಿ ಸಣ್ಣ ಕರುಳಿನ ಕ್ಯಾನ್ಸರ್ ರೂಪದಲ್ಲಿ ಕಾಲಿಟ್ಟಿತ್ತು‌. ಪಾಪ…ಹಾಡುಹಕ್ಕಿಯದು. ಕ್ಯಾನ್ಸರ್ ಎಂಬ ಪೆಡಂಬೂತದ ಮುಂದೆ ಎಷ್ಟಂತಾ ಬಡಿದಾಡೀತು. ರೆಕ್ಕೆ-ಪುಕ್ಕಗಳೆಲ್ಲಾ ಉದುರಿ, ಕೊನೆಗೂ ನೆಲಕಚ್ಚಿತು.
      ಇಂದು ಶಾಸ್ತ್ರಿ ಯವರ ಶರೀರ ನಮ್ಮೊಂದಿಗಿಲ್ಲ.ಆದರೆ ಅವರ ಶಾರೀರ ನಮ್ಮೊಂದಿಗೆ ನಿರಂತರವಾಗಿ ಇರುತ್ತದೆ. ಅವರು ಹಾಡಿರುವ ಮೂರು ಸಾವಿರಕ್ಕೂ ಹೆಚ್ಚಿನ ಹಾಡುಗಳಲ್ಲಿ ಅವರು ಯಾವತ್ತೂ ಜೀವಂತವಾಗಿರುತ್ತಾರೆ.
ಹಾಡು ನಿಲ್ಲಿಸಿದ ಹಾಡುಹಕ್ಕಿಗೆ  ಭಂಡಾರಿವಾರ್ತೆ ಯ ಪರವಾಗಿ ಅಂತಿಮನಮನ.
ಭಾಸ್ಕರ್ ಭಂಡಾರಿ. ಸಿ.ಆರ್
 ಶಿರಾಳಕೊಪ್ಪ

Leave a Reply

Your email address will not be published. Required fields are marked *