January 18, 2025
DKB_0373
ಭಂಡಾರಿ ಸಮಾಜದ ಹಿತಚಿಂತಕ, ಸಹೃದಯಿ, ಸ್ವಚ್ಚ ನೇರ ನಡೆ ನುಡಿಯ ಸಾಗರದ ಮಾಧವ ಭಂಡಾರಿಯವರು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಕುಂದಾಪುರ ತಾಲೂಕಿನ ಶಿರಿಯಾರದ ನಾರಾಯಣ ಭಂಡಾರಿ ಮತ್ತು ಕೊರ್ಗಿ ಮಿಣುಕು ಭಂಡಾರಿ ದಂಪತಿಯ ಮಗನಾಗಿ ಸಾಗರದಲ್ಲಿ ಜನಿಸಿದ ಮಾಧವ ಭಂಡಾರಿಯವರು ಸ್ನೇಹಿತರ ವಲಯದಲ್ಲಿ ಭಂಡಾರಿ ಎಂಬ ನಾಮದೇಯದಿಂದ ಚಿರಪರಿಚಿತರಾಗಿದ್ದಾರೆ. ವೋಲ್ಟಾಸ್ ಸಂಸ್ಥೆಯಲ್ಲಿ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರನ್ನು ವೋಲ್ಟಾಸ್ ಮಾಧವ ಭಂಡಾರಿ ಎಂದು ಕರೆಯುವುದೂ ಉಂಟು, ಆದರೆ ನಮ್ಮ ಭಂಡಾರಿ ಸಮುದಾಯದಲ್ಲಿ ಇವರು ಮಾಧವ ಭಂಡಾರಿ ಸಾಗರ ಎಂದೇ ಗುರುತಿಸಿಕೊಂಡಿದ್ದಾರೆ.
ತಮ್ಮ ಹುಟ್ಟೂರಾದ ಸಾಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಪೂರೈಸಿ,ಭದ್ರಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಎಲೆಕ್ಟ್ರಿಷಿಯನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಅವರು ಉದ್ಯೋಗ ಅರಸಿ ಬೆಂಗಳೂರಿನತ್ತ ಮುಖ ಮಾಡಿದರು.
ತಮ್ಮ ವೃತ್ತಿ ಜೀವನವನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಎರಡು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಮೂರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಆರಂಭಿಸಿದ ಮಾಧವ ಭಂಡಾರಿಯವರು NGEF,HAL,KIOCL, ಬೆಂಗಳೂರಿನ ರೈಲು ಗಾಲಿ ಮತ್ತು ಅಚ್ಚು ತಯಾರಿಕಾ ಘಟಕ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಗಮಗಳಲ್ಲಿ ಕೆಲವು ಕಾಲ ಸೇವೆ ಸಲ್ಲಿಸಿ ತಮ್ಮ ವೃತ್ತಿ ಜೀವನದ ಆತ್ಮತೃಪ್ತಿಗಾಗಿ ಮಾತೃಸಂಸ್ಥೆ ವೋಲ್ಟಾಸ್ ನ ಮುಂಬಯಿ ಶಾಖೆಯಿಂದ ತಮ್ಮ ಸೇವೆಯನ್ನು ಆರಂಭಿಸಿ ಭಾರತದ ಹಲವು ರಾಜ್ಯಗಳ ಒಟ್ಟು ಇಪ್ಪತ್ತೊಂದು  ಶಾಖೆಗಳಲ್ಲಿ ಸುಮಾರು ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದರು.ಸ್ನೇಹ ಜೀವಿಯಾದ ಇವರು ತಾವು ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲಾ ತಮ್ಮ ಸ್ನೇಹಿತರ ವಲಯವನ್ನು ಸೃಷ್ಟಿಸಿಕೊಂಡು ವಿಸ್ತರಿಸುತ್ತಾ ಹೋದರು.ಕನ್ನಡ, ತೆಲುಗು, ತಮಿಳು, ಮಲಯಾಳಂ ಹಿಂದಿ ಮರಾಠಿ, ಕೊಂಕಣಿ, ಇಂಗ್ಲಿಷ್ ಇನ್ನೂ ಮುಂತಾದ ವಿವಿಧ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಇವರು 1999 ರಲ್ಲಿ ವೋಲ್ಟಾಸ್ ಸಂಸ್ಥೆಗೆ ರಾಜೀನಾಮೆ ನೀಡಿ ತಮ್ಮದೇ ಆದ ಸ್ವಂತ ಸಂಸ್ಥೆ ಸ್ಥಾಪಿಸಿದರು.
ಅಲ್ಲಿಂದೀಚೆಗೆ ತಮ್ಮ ಸ್ವಂತ ಸಂಸ್ಥೆಯಡಿಯಲ್ಲಿ ವೋಲ್ಟಾಸ್ ಸಂಸ್ಥೆಯನ್ನೂ ಒಳಗೊಂಡು ಖಾಸಗಿ ಮತ್ತು ರಾಜ್ಯ, ಕೇಂದ್ರ ಸರ್ಕಾರಗಳ ಇನ್ನೂರಕ್ಕೂ ಹೆಚ್ಚು ಬೃಹತ್ ಕೈಗಾರಿಕಾ ಉದ್ಯಮಗಳಿಗೆ ಸೇವೆ ಮತ್ತು ಸಲಹಾ ಸರಬುದಾರರಾಗಿ ಸೇವೆ ಸಲ್ಲಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇಸ್ರೋ,DRDO,BARC,KAIGA ಹೀಗೆ ಹಲವಾರು ರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಗಳಿಗೆ ಸೇವೆ ಸಲ್ಲಿಸಿ ತಮ್ಮ ಸಂಸ್ಥೆಯನ್ನು ಗ್ರಾಹಕರ ಅತ್ಯಂತ ನಂಬಿಕಾರ್ಹ ಸಂಸ್ಥೆಯನ್ನಾಗಿ ಬೆಳೆಸಿದರು.
ಒಂದು ಹಂತದಲ್ಲಿ ತಮ್ಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನೂರಾ ನಲವತ್ತಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯ,ESI ಸೌಲಭ್ಯ ನೀಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ನಮೂನೆ, ಪ್ರಕಾರಗಳ ತೆರಿಗೆಗಳನ್ನು ಪ್ರಾಮಾಣಿಕವಾಗಿ ಕಾಲಕಾಲಕ್ಕೆ ಪಾವತಿಸುತ್ತಾ ಬಂದು ಸ್ವಚ್ಛ ಮತ್ತು ಕಳಂಕರಹಿತ ಆಡಳಿತ ನಡೆಸಿ ಯಾವೊಂದು ಕಪ್ಪು ಚುಕ್ಕಿ ಇಲ್ಲದೆ ಸೇವೆ ಸಲ್ಲಿಸಿದರು. ಇವರ ಕಾರ್ಯವೈಖರಿಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ವಿದ್ಯುತ್ ಸರಬರಾಜು ಮಾಡುವ ಪವರ್ ಹೌಸ್ ನ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಇವರಿಗೆ ವಹಿಸುತ್ತಾ ಬಂದಿದೆ.
ಸೇವೆಯನ್ನು ಸೇವೆಗಾಗಿ ಮಾತ್ರ ಎಂಬ ನೀತಿಯ ಇವರು ತಮ್ಮ ಸರಳ ಜೀವನಕ್ಕೆ ಬೇಕಾಗುವಷ್ಟನ್ನು ಮಾತ್ರ ಶ್ರೀ ದೇವರಿಂದ ಪಡೆಯಲಿಚ್ಚಿಸುವವರಾದ ಕಾರಣ ಕಳೆದೆರಡು ವರ್ಷಗಳಿಂದೀಚೆಗೆ ವಿಶ್ರಾಂತ ಜೀವನವನ್ನು ನಡೆಸುವ ಉದ್ದೇಶದಿಂದ ಕೆಲಸದ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ಬೆಂಗಳೂರಿನಲ್ಲಿ ನೆಲೆಸಿರುವ ಮಾಧವ ಭಂಡಾರಿಯವರ ಪತ್ನಿ ಶ್ರೀಮತಿ ಭಾರತಿ ಮಾಧವ ಭಂಡಾರಿಯವರು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದವರು. ಇವರ ಏಕೈಕ ಪುತ್ರಿ ಬಿಂದು.ಎಂ. ಭಂಡಾರಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಪದವಿಯನ್ನು ಪೂರೈಸಿದ್ದಾರೆ. ಮಾಧವ ಭಂಡಾರಿಯವರ ಸಮಾಜ ಸೇವೆ ಮಾಡುವ ಚಿಂತನೆಗೆ ಒತ್ತಾಸೆಯಾಗಿ ನಿಂತಿರುವ ಪತ್ನಿ ಮತ್ತು ಮಗಳು ಅವರಿಗೆ ತಮ್ಮ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ.ತಮ್ಮ ಸಮಾಜಮುಖಿ ಚಿಂತನೆಗೆ ಪ್ರೋತ್ಸಾಹಿಸುವ ಸಮಾನಮನಸ್ಕ ಪತ್ನಿ ಮತ್ತು ಮಗಳನ್ನು ಪಡೆದಿರುವ ಬಗ್ಗೆ ಅವರು ಹೆಮ್ಮೆಯಿಂದ ಸ್ಮರಿಸುತ್ತಾರೆ.
ಭಂಡಾರಿ ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುವ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸುತ್ತಾ ಅವುಗಳನ್ನು ಕಾರ್ಯರೂಪಕ್ಕೆ   ತರಲು ತುಡಿಯುತ್ತಿರುವ ಶ್ರೀಯುತ ಮಾಧವ ಭಂಡಾರಿಯವರು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈ ಶುಭ ಸಂದರ್ಭದಲ್ಲಿ ಅವರನ್ನು ಭಂಡಾರಿ ವಾರ್ತೆ ಮಾತಿಗೆಳೆಯಿತು….
ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಿಗೆ ಹಾರ್ದಿಕ ಅಭಿನಂದನೆಗಳು…
ಮಾಧವ ಭಂಡಾರಿ :  ಧನ್ಯವಾದಗಳು ನಿಮಗೂ ಮತ್ತು ಭಂಡಾರಿ ವಾರ್ತೆ ತಂಡಕ್ಕೂ….
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ನಿಮ್ಮ ಕನಸುಗಳೇನು? ಕಾರ್ಯ ಯೋಜನೆಗಳೇನು?
ಮಾಧವ ಭಂಡಾರಿ : ಕಾರ್ಯಕಾರಿ ಮಂಡಳಿಯಲ್ಲಿರುವ ನಾನೂ ಸೇರಿದಂತೆ ಎಲ್ಲ ಪದಾಧಿಕಾರಿಗಳು ಸಮಾಜ ಸೇವೆಗೆ ಸಮಾಜದ ಬಂಧುಗಳಿಂದ ನಿಯೋಜನೆಗೊಂಡಿರುವ ಸೇವಾರ್ಥಿಗಳು ಎಂದು ಭಾವಿಸುತ್ತೇವೆ.ಭಂಡಾರಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ಕೊಡುಗೆಯನ್ನು ನೀಡಲು ನಾವೆಲ್ಲಾ ಸೇರಿ ನಿರ್ಧರಿಸುವವರಿದ್ದೇವೆ.ವ್ಯಕ್ತಿ ವೈಭವಕ್ಕೆ ಅವಕಾಶವಿರದ, ಸಂಘಟನೆಯ ಹಿತ ಸಾಧನೆಗಳೇ ಸ್ವಾಸ್ಥ್ಯ ಸಮಾಜದ ಸಾಧ್ಯತೆ ಎಂಬ ರೀತಿ ನೀತಿಯ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘ ಇಂದಿನವರೆಗೂ ಅತ್ಯುಗ್ರವಾಗಿ ಗುರುತಿಸಿಕೊಂಡಿದೆ. ಸಾಧಿತರು ಮತ್ತು ಸೇವಾರ್ಥಿಗಳು ಸಮಾಜಕ್ಕೆ ನೀಡಿದ ಕೊಡುಗೆಗಳು ಮಾತ್ರ ಆಧರಣೀಯವಾಗಿ ಗುರುತಿಸುವ ಸಂಸ್ಕೃತಿಯನ್ನು ಚಾಲಿಸಿರುವ ವಲಯವನ್ನು ಹುಟ್ಟುಹಾಕಿದ ಮಹನೀಯರನ್ನು, ಗುರು ಹಿರಿಯರನ್ನು ಮೊದಲು ಗೌರವದಿಂದ ನಡೆಸಿಕೊಳ್ಳಬೇಕು ಹಾಗೂ ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಎಲ್ಲಾ ಸದಸ್ಯರು ಯಾವುದಾದರೂ ಒಂದು ಸಮಾಜಮುಖಿ ಚಿಂತನೆಯೊಂದಿಗೆ,ಕಾರ್ಯಕ್ರಮದೊಂದಿಗೆ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾದ್ಯ ಎಂಬ ನೀತಿಯನ್ನು ಅಳವಡಿಸಿಕೊಂಡು ಮುಂದುವರೆಯಬೇಕಾಗಿದೆ. ವಲಯದ ಮಹಿಳಾ ಸದಸ್ಯರನ್ನು ಸಂಘಟನೆಯಲ್ಲಿ ಸಕ್ರಿಯಗೊಳಿಸಿಕೊಳ್ಳಬೇಕು ಮತ್ತು ಅವರ ಪ್ರತಿಭೆಯ ಅನಾವರಣಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಬೇಕು.ಬೆಂಗಳೂರು ವಲಯದಡಿ ಬರುವ ಎಲ್ಲಾ ಒಂಬತ್ತು ಘಟಕಗಳಲ್ಲಿ ವಾರ್ಷಿಕ ಸಭೆಗಳು ಜರುಗಬೇಕು.ಆ ಸಭೆಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಪ್ರಯತ್ನಗಳಾಗಬೇಕು ಮತ್ತು ಅವರು ಬೆಂಗಳೂರು ವಲಯದ ವಾರ್ಷಿಕ ಮಹಾಸಭೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಭಂಡಾರಿ ಸಮಾಜದ ಸಾಧಕರ ಸಾಧನೆ ಒಂದು ಸನ್ಮಾನದೊಂದಿಗೆ ಅಂತಿಮಗೊಳ್ಳಬಾರದು. ಅವರ ಪರಿಶ್ರಮದ ಹಾದಿಯ ಅನುಭವದ ಮಾರ್ಗದರ್ಶನ ಮತ್ತು ಅವರ ಸಾಧನೆಯ ಫಲದ ಒಂದಂಶ ಸಮಾಜಕ್ಕೆ ಹಂಚುವುದರೊಂದಿಗೆ ಸಮಾಜದ ಸ್ವಾಭಿಮಾನವನ್ನು ಮೇಲ್ತರಲು ಸಾಧ್ಯ ಎಂಬ ನೀತಿಯೊಂದಿಗೆ ನಾವು ಮುಂದೆ ಸಾಗಬೇಕಿದೆ.ಹೀಗೆ ಹಲವಾರು ಕನಸುಗಳು ನಮ್ಮಲ್ಲಿ ಇದ್ದು ಅವುಗಳನ್ನು ಅನುಷ್ಠಾನಗೊಳಿಸಲು ಸಮಾಜದ ಪ್ರತಿಯೊಬ್ಬರ ಸಲಹೆ ಮತ್ತು ಸಹಕಾರ ಅಗತ್ಯವಾಗಿದೆ.ಮೊದಲು ಪ್ರತಿಯೊಬ್ಬರ ವಿಶ್ವಾಸ ಗಳಿಸಲು ಪ್ರತಿಯೊಂದು ಘಟಕಗಳನ್ನು ಖುದ್ದಾಗಿ ಬೇಟಿಯಾಗಿ ಸಮಾಲೋಚನೆ ನಡೆಸುವ ಚಿಂತನೆಯೂ ನಮ್ಮಲ್ಲಿ ಇದೆ.
ಮಾಧವಣ್ಣನವರೇ… ಸಮಾಜದ ಬಗ್ಗೆ ಇಷ್ಟೊಂದು ಕಾಳಜಿ ಹೊಂದಿರುವ ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ….
ಮಾಧವ ಭಂಡಾರಿ : ಧನ್ಯವಾದಗಳು ನಿಮಗೆ….ನಿಮ್ಮ ಸಹಕಾರ ಹೀಗೆ ನಿರಂತರವಾಗಿರಲಿ.
ಮತ್ತೊಮ್ಮೆ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಶ್ರೀ ಮಾಧವ ಭಂಡಾರಿ ಸಾಗರ ಅವರಿಗೆ ಹಾರ್ದಿಕ ಅಭಿನಂದನೆಗಳು. 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮಾಧವ ಭಂಡಾರಿ ಸಾಗರ.

Leave a Reply

Your email address will not be published. Required fields are marked *