ಕನ್ನಡ ಚಿತ್ರರಂಗದ ಹಿರಿಯ ನಟ,ಮಾಜಿ ಸಚಿವ,ಕಲಿಯುಗ ಕರ್ಣ,ಮಂಡ್ಯದ ಗಂಡು ಅಂಬರೀಶ್ ತೀವ್ರ ಹೃದಯಾಘಾತಕ್ಕೊಳಗಾಗಿ ನವೆಂಬರ್ 24 ರ ಶನಿವಾರ ರಾತ್ರಿ 11 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
1972 ರಲ್ಲಿ ನಾಗರಹಾವು ಚಿತ್ರದ ಜಲೀಲನ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಂಬರೀಶ್ “ಇನ್ಸ್ ಪೆಕ್ಟರ್ ಸುಶೀಲ್ ಕುಮಾರ್, ಇನ್ಸ್ ಪೆಕ್ಟರ್ ಕ್ರಾಂತಿಕುಮಾರ್, ಏಜೆಂಟ್ ಅಮರ್, ಎಮ್ಮೆಲ್ಲೆ, ಮೆಕ್ಯಾನಿಕ್, ಪ್ರೊಫೆಸರ್, ಮೂಕ,ಜಮೀನ್ದಾರ,ಡಾನ್, ಖದೀಮ, ಗೆಳೆಯ, ರಾಜಕಾರಣಿ, ಕುಚುಕು ಮುಂತಾದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತ ಕನ್ನಡ ಚಿತ್ರರಂಗದ ಹೈಕಮಾಂಡ್ ಆಗಿ, ರಾಜಕೀಯ ಕ್ಷೇತ್ರದ ರೆಬೆಲ್ ನಾಯಕನಾಗಿ, ಅಭಿಮಾನಿಗಳ ಪಾಲಿಗೆ ಪ್ರೀತಿಯ ಅಣ್ಣನಾಗಿ ಮೈಸೂರು ಮಂಡ್ಯದ ಅಭಿಮಾನಿಗಳ ಪಾಲಿಗೆ ಮಂಡ್ಯದ ಗಂಡಾಗಿ ಹೀಗೆ ಭಗವಂತ ಕರುಣಿಸಿದ ಎಲ್ಲ ರೀತಿಯ ಪಾತ್ರಗಳನ್ನು ನಿಭಾಯಿಸಿ ಇಂದು ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.
ನಮ್ಮನಿಮ್ಮೆಲ್ಲರ ಪ್ರೀತಿಯ ಅಂಬರೀಷ್. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ ಆರನೇ ಮಗನಾಗಿ 1952 ರ ಮೇ 29 ರಂದು ಜನಿಸಿದ ಅಮರನಾಥ್, ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕನ್ನಡದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಣ್ಣಿಗೆ ಬಿದ್ದು ನಾಗರಹಾವು ಚಿತ್ರದ ಜಲೀಲನ ಪಾತ್ರಕ್ಕೆ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು,ಅಂದಿನಿಂದ ಖಳನಾಯಕನಾಗಿ ಪೋಷಕ ನಟನಾಗಿ ನಾಯಕನಾಗಿ, ನಾಯಕನ ಮತ್ತು ನಾಯಕಿಯ ತಂದೆಯಾಗಿ ಹೀಗೆ ಅಭಿನಯಿಸುತ್ತಾ ಬಂದರು.
1996 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ 1998 ರಲ್ಲಿ ಸಂಸದರಾಗಿ ಆಯ್ಕೆಯಾಗಿ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದರು. ಮನಮೋಹನ್ ಸಿಂಗ್ ರ ಕೇಂದ್ರ ಸಂಪುಟದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು. ಕಾವೇರಿ ನ್ಯಾಯಾಧಿಕರಣದ ಆದೇಶ ಕರ್ನಾಟಕದ ರೈತರ ವಿರುದ್ಧವಾಗಿ ಬಂದಾಗ ಅದನ್ನು ಪ್ರತಿಭಟಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮಾನಸದಲ್ಲಿ, ನಿಜ ಜೀವನದಲ್ಲಿ ಹೀರೊ ಎನಿಸಿಕೊಂಡರು.ಕೇವಲ ನಾಯಕ ನಟನಾಗಿ, ರಾಜಕಾರಣಿಯಾಗಿ ಹೆಸರು ಗಳಿಸದೆ ದೇಶಾದ್ಯಂತ ಎಲ್ಲ ರಂಗದಲ್ಲಿಯೂ ಸ್ನೇಹಿತ ವಲಯವನ್ನು ಸೃಷ್ಟಿಸಿಕೊಂಡು ಸ್ನೇಹಮಯಿ ಎನಿಸಿಕೊಂಡರು. ಕನ್ನಡ ಚಿತ್ರರಂಗದ ದಿಗ್ಗಜರಾದ ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಪ್ರಭಾಕರ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್ ಎಲ್ಲರೊಂದಿಗೆ ಅಭಿನಯಿಸಿ ಚಿತ್ರರಂಗವನ್ನು ಒಂದು ಕುಟುಂಬದಂತೆ ಮುನ್ನೆಡೆಸಿಕೊಂಡು ಹೋದ ಹೆಗ್ಗಳಿಕೆ ಅಂಬರೀಶ್ ಅವರದ್ದು.
“ಅಂತ, ನಾಗರಹಾವು, ಚಕ್ರವ್ಯೂಹ, ಪಡುವಾರಹಳ್ಳಿ ಪಾಂಡವರು, ಒಲವಿನ ಉಡುಗೊರೆ, ಮಂಡ್ಯದ ಗಂಡು, ಏಳು ಸುತ್ತಿನ ಕೋಟೆ, ಖದೀಮ ಕಳ್ಳರು, ತಿರುಗುಬಾಣ, ಗಂಡುಬೇರುಂಡ, ಮೃಗಾಲಯ, ಪ್ರೇಮಲೋಕ, ಅರ್ಜುನ್, ತಾಯಿಗೊಬ್ಬ ಕರ್ಣ, ಜಾಕಿ, ಇಂದ್ರಜಿತ್, ಒಂಟಿ ಸಲಗ, ಮತ್ಸರ, ರಾಣಿ ಮಹಾರಾಣಿ, ಬಜಾರ್ ಭೀಮ, ಒಡಹುಟ್ಟಿದವರು” ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. “ಅಂಬಿ ನಿನಗೆ ವಯಸ್ಸಾಯ್ತೋ” ಅವರ ಅಭಿನಯದ ಕಟ್ಟ ಕಡೆಯ ಚಿತ್ರ. ಅಂಬರೀಷ್ ಚಲನಚಿತ್ರದ ಅಭಿನಯಕ್ಕಾಗಿ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.2006 ರಲ್ಲಿ ಪ್ರತಿಷ್ಟಿತ ಎನ್ಟಿಆರ್ ಪ್ರಶಸ್ತಿ, 2011 ರಲ್ಲಿ ವಿಷ್ಣುವರ್ಧನ ಪ್ರಶಸ್ತಿ,2013 ರಲ್ಲಿ ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದರು.
1991 ರಲ್ಲಿ ಚಿತ್ರನಟಿ ಸುಮಲತಾರೊಂದಿಗೆ ವಿವಾಹವಾಗಿದ್ದ ಇವರಿಗೆ ಅಭಿಷೇಕ್ ಒಬ್ಬನೆ ಮಗ.
ಕನ್ನಡ ಚಿತ್ರರಂಗದ ಯಾವುದೇ ಸಮಸ್ಯೆಗಳಿಗೆ ಮನೆಯ ಹಿರಿಯಣ್ಣನಂತೆ ನಿಂತು ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದ್ದ, ಜೋರು ದನಿಯ, ಮೃದು ಮನಸ್ಸಿನ ಹಿರಿಯರೊಬ್ಬರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿದೆ. ರಾಜ್ ಕುಮಾರ್, ವಿಷ್ಣುವರ್ಧನ್ ರಂತಹ ಹಿರಿಯ ನಟರನ್ನು ಕಳೆದುಕೊಂಡು ಬಡವಾಗಿದ್ದ ಕನ್ನಡ ಚಿತ್ರರಂಗ ಈಗ ಅಂಬರೀಶ್ ಅವರನ್ನು ಕಳೆದುಕೊಂಡು ಶೂನ್ಯವಾಗಿದೆ.
ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ, ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ