September 20, 2024

ಮಹಿಳೆಯರ ಬದುಕು ಕಾಲಘಟ್ಟದಲ್ಲಿ ಬದಲಾಗುತ್ತಿರುವ ಸಮಯದಲ್ಲಿಯೂ ಇಂದಿಗೂ ಅವಳು ಅನೇಕ ತೊಡಕುಗಳನ್ನು ಅನುಭವಿಸುತ್ತಿದ್ದಾಳೆ . ಅವಳ ಬಾಲ್ಯ, ಯೌವ್ವನ, ವಿದ್ಯಾಭ್ಯಾಸ, ಮದುವೆ ಮಕ್ಕಳು, ಸಂಸಾರ, ಸಮಾಜ ತದ ನಂತರ ಮುಪ್ಪಿನಲ್ಲಿ ಬರುವ ಬವಣೆಗಳನ್ನು ನೋಡಿದರೆ ಹೆಣ್ಣು ಎನ್ನುವವಳು ಎಷ್ಟು ಸುಖಿ! ಎಂಬುದು ಪ್ರಶ್ನಾರ್ಥಕ? .

ಬಾಲ್ಯದಲ್ಲಿ: ಒಂದು ಹೆಣ್ಣು ಸಂಪೂರ್ಣ ತನ್ನ ತಂದೆಯ ಅಧೀನದಲ್ಲಿ ಬೆಳೆಯುತ್ತಾಳೆ. ತಂದೆಯಾದವನು ಅವನ ಭಾವನೆಗೆ, ಅನುಕೂಲತೆಗೆ ತಕ್ಕಂತೆ ಆ ಮಗುವನ್ನು ಬೆಳೆಸುತ್ತಾನೆ. ಕೆಲವರು ತುಂಬಾ ಪ್ರೀತಿಯಿಂದ ನೋಡಿಕೊಂಡರೂ, ಕೆಲವರು ಇದರಿಂದ ವಂಚಿತರಾಗಬಹುದು . ಏನೇ ಇರಲಿ ಅವಳು ಹುಟ್ಟಿ ದ ಮನೆಯ ವಾತಾವರಣ ತಕ್ಕಂತೆ ಬೆಳೆಯುತ್ತಾಳೆ. ಅವಳು ಅಲ್ಲಿಯೇ ಬೆಳೆಯಲೇಬೇಕು! ಕಷ್ಟವೋ, ಸುಖವೋ ಹೆಣ್ಣಿನ ಸ್ಥಾನದ ವಿವರಕ್ಕೆ ಪದಗಳು ಬೇಕಿಲ್ಲ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ, ಅಕ್ಕನಾಗಿ, ತಂಗಿಯಾಗಿ , ಅತ್ತೆಯಾಗಿ, ಅತ್ತಿಗೆಯಾಗಿ ಹೀಗೆ ಹಲವು ಸಂಬಂಧಗಳನ್ನು ತುಂಬುವ ಕಲೆ ಅವಳಲ್ಲಿದೆ. ಆದರೂ ಈ ದೌರ್ಜನ್ಯ, ಅತ್ಯಾಚಾರ, ಕೀಳು ಮನೋಭಾವನೆ ತಾರತಮ್ಯ ಏಕೆ? ಸಮಾಜದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಯಾರಿಗೆ ಕಡಿಮೆಯಿಲ್ಲ?  ಹೆಣ್ಣು ಸ್ತ್ರೀಶಕ್ತಿ, ಮಾತಾ ದುರ್ಗಾ ಎಂದು ಏನೇನೋ ಭಾಷಣ ಬಿಗಿಯುತ್ತಾರೆ ಆದರೆ, ಅದೇ ಹೆಣ್ಣು ಒಂಟಿಯಾಗಿ ರಾತ್ರಿಯಲ್ಲಿ ತಿರುಗಲು ಎಷ್ಟು ಅರ್ಹಳು? ಅವಳಿಗೆ ಎಷ್ಟು ಭದ್ರತೆ ಇದೆ ಸಮಾಜದಲ್ಲಿ?

ವಿದ್ಯಾಭ್ಯಾಸ: ಕೆಲವರು ಹೆಣ್ಣು ಮಕ್ಕಳೆಂದರೆ ತುಂಬಾ ಕೀಳಾಗಿ ಕಾಣುತ್ತಾರೆ. ಅವಳು ಕಲಿತು ಏನಾಗಬೇಕು. ಹೆಣ್ಣಿಗೆ ವಿದ್ಯೆ ಏಕೆ ಬೇಕು? ಕಂಡವರ ಮನೆಗೆ ಹೋಗಿ ಮುಸುರೇ ತಿಕ್ಕುವುದು ತಪ್ಪುತ್ತದೆಯೇ ಎಂದು ಹಾಗಾಗಿ ಮದುವೆ ಮಾಡಿಕೊಟ್ಟರೆ ಸಾಕು. ಅಷ್ಟೋ, ಇಷ್ಟೋ ಓದು ಬಂದ್ರೆ ಸಾಕು. ಎನ್ನುವವರು ಈಗಲೂ ಇದ್ದಾರೆ. ಒಳ್ಳೆಯ ವಿದ್ಯೆ ಕಲಿತು ಒಂದು ಒಳ್ಳೆಯ ಕೆಲಸದಲ್ಲಿ ನನ್ನ ಮಗಳು ಇರಲಿ ಎಂದು ಕಷ್ಟ ಪಡುವವರೂ  ಇದ್ದಾರೆ. ವಿದ್ಯೆ ಪಡೆದುಕೊಳ್ಳುವವರಿಗೆ ಇಂದಿನ ಕಾಲದಲ್ಲಿ ಬರಗಾಲವಿಲ್ಲ, ಆದರೆ ವಿದ್ಯಾಭ್ಯಾಸದ ನೆಪದಲ್ಲಿ ಕೆಲವು ಹೆಣ್ಣು ಮಕ್ಕಳು ದಾರಿ ತಪ್ಪುವುದನ್ನು ಮಾಡಬಾರದು ಅಥವಾ ಪ್ರೀತಿ ಪ್ರೇಮದಲ್ಲಿ ಬಿದ್ದು ಒದ್ದಾಡುವುದು ಅಥವಾ ಕೆಲವು ದೌರ್ಜನ್ಯಗಳಿಗೊಳಗಾಗುವುದು ಇದು ಹೆಣ್ಣಿಗೆ ಬರುವ ಕಳಂಕಗಳು ಒಂದು ಸಾರಿ ಈ ಕಳಂಕಕ್ಕೆ ಒಳಗಾದ ಯಾವ ಹೆಣ್ಣೂ ಒಳ್ಳೆಯ ಜೀವನ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅವಳು ತನ್ನತನವನ್ನು ಕಾಪಾಡಿಕೊಳ್ಳಲು ತುಂಬಾ ಶ್ರಮ ಪಡಬೇಕು. ತನ್ನ ಜೀವನದ ಉದ್ದೇಶವಿಟ್ಟುಕೊಂಡು ಒಳ್ಳೆಯ ಸಾಧನೆ ಮಾಡುವವರು ಅನೇಕ ತರಹದ ಅವಕಾಶಗಳನ್ನು ದಕ್ಕಿಸಿಕೊಂಡು ಮುಂದೆ ಸಾಗುತ್ತಾರೆ. ಕೆಲವರಿಗೆ ಈ ಅವಕಾಶಗಳು ಸಿಕ್ಕಿದರೂ, ಬಡತನದ ರೇಖೆ ದಾಟಿ ಹೋಗಲು ತುಂಬಾ ಕಷ್ಟ ಪಡುತ್ತಾರೆ.  ಗಂಡಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ವಂಚಿತರಾಗುತ್ತಾರೆ. ಸಿರಿವಂತ ಮಕ್ಕಳ ರೀತಿಯೇ ಬೇರೆ, ಕೆಲವರು ಬೇಕಾಗಿ ಓದಿದರೂ ಕೆಲವರಂತೂ ಮನೆಯವರ ಒತ್ತಾಯಕ್ಕೆ ಓದು ಮುಗಿಸಬೇಕು ಎಂದು ಎನಿಸುವವರು ಇದ್ದಾರೆ. ಅದೇ ಬಡ ಹೆಣ್ಣು ಮಗು ತಾನು ಕಲಿತು ತನ್ನ ಕುಟುಂಬವನ್ನೆಲ್ಲ ಸಾಕಬಲ್ಲೆ ಈ ಬಡತನ ದೂರವಾಗಿಸಬಹುದು. ಎಂಬ ಧೃಢತೆಯಿಂದ ಶ್ರಮ ಪಡುತ್ತಾಳೆ, ಒಡಕು ತೊಡಕುಗಳನ್ನು ದಾಟಿ ಮುನ್ನುಗ್ಗಲು ಪ್ರಯತ್ನಿಸುತ್ತಾಳೆ, ತನ್ನ ಸ್ವಾಭಿಮಾನ ವನ್ನು ಕಾಪಾಡಿಕೊಂಡು ದಿಟ್ಟತನದಿಂದ ಹೋರಾಟ ಮಾಡಿ ಸಫಲತೆಯನ್ನು ಪಡೆಯುತ್ತಾಳೆ. ಈಗಂತೂ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಬಲರಾಗಿ ಮಹಿಳೆಯರೇ ಸೈ ಎನಿಸಿಕೊಂಡಿದ್ದಾರೆ. ಗಂಡಿನಷ್ಟೆ ಪ್ರಬಲರಾಗಿ ದುಡಿಯುತ್ತಾರೆ.

ಯೌವನಕ್ಕೆ ಕಾಲಿಡುತ್ತಿದ್ದಂತೆ ಸಮಾಜದ ನಡುವೆ ಹೇಗೆ ಇರಬೇಕು ಮಾನ ಮರ್ಯಾದೆ, ಮನೆತನದ ಗೌರವ, ರೀತಿ, ರಿವಾಜುಗಳು ಮನಸ್ಸಿಲ್ಲದಿದ್ದರೂ ನಡವಳಿಕೆಯಲ್ಲಿ ಬದಲಾಗಲೇಬೇಕಾದ ಅನಿವಾರ್ಯತೆ, ಹಿರಿಯರಿಗೆ ಕೊಡುವ ಗೌರವ, ಇದೆಲ್ಲಾ ಮನೆಯ ಮೊದಲ ಪಾಠ. ನಮಗೆ ಬೇಕಾಗಲಿ , ಬೇಡವಾಗಲಿ ಆ ಹೆಣ್ಣು ಪ್ರಾಯಕ್ಕೆ ಬರುವ ಅವಳ ಋತುಮತಿಯ ಮುಜುಗರ, ನಾಚಿಕೆ ಏನೋ ದೇಹದಲ್ಲಿ ಆಗುವ ಬದಲಾವಣೆಗೆ ಅವಳ ಮನಸ್ಸು, ಬುದ್ಧಿ, ಯೋಚಿಸಲು, ನಿರ್ಧರಿಸಿಕೊಳ್ಳಲು ತನ್ನನ್ನು ತಾನು ನೋಡಿಕೊಳ್ಳಲು ಆಗದಷ್ಟು , ವ್ಯತ್ಯಾಸ, ಪ್ರಭಾವ ಅವಳಿಗೆ .ಈ ಯೌವನವೆನ್ನುವುದು ಅತೀ ಸೂಕ್ಷ್ಮ ಸಮಾಜದಲ್ಲಿ ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸುವ ಗಟ್ಟಿಗಿತ್ತಿ ಆಕೆ ಆಗಬೇಕು . ಎಲ್ಲಾ ಕಲಿಯುವಷ್ಟರಲ್ಲಿ ಯೌವನವೂ ಒಂದು ಹಂತಕ್ಕೆ ಅಂದರೆ ಮದುವೆಯ ಪ್ರಾಯಕ್ಕೆ ಬಂದಿರುತ್ತದೆ.

ಮದುವೆ: ಇನ್ನು ಹೆಣ್ಣಿಗೆ ಮದುವೆ ಎಂದರೆ, ಅವಳಿಗೊಂದು ದೊಡ್ಡ ಅಗ್ನಿ ಪರೀಕ್ಷೆ. ಈಗಿನ ಕಾಲದಲ್ಲಿ ತುಂಬಾ ಬದಲಾವಣೆ ಆಗಿದೆ. ಆದರೂ ಹೆಣ್ಣು ತನ್ನ ಮನೆ, ತನ್ನವರನ್ನು ಬಿಟ್ಟು ಹೋಗುವ ಆ ಸಂದರ್ಭ ತುಂಬಾ ಶೋಚನೀಯ ಏಕೆಂದರೆ ಇನ್ನೊಂದು ಕುಟುಂಬದಲ್ಲಿ ಹೊಂದಿಕೊಳ್ಳಲು ಕಾಲಾವಕಾಶಗಳೇ ಬೇಕು. ಹಾಗೂ ಆ ಮನೆಯ ವಾತಾವರಣ ಅತ್ತೆ, ನಾದಿನಿ, ಮನೆಯ ಕುಟುಂಬದ ಸದಸ್ಯರು ಎಲ್ಲರ ಕಣ್ಣು ನೋಟವು ಇವಳ ಮೇಲೆಯೇ. ಎಲ್ಲರ ದೃಷ್ಟಿಯೂ ಎಲ್ಲರನ್ನು ಅರಿತುಕೊಂಡು ಅಲ್ಲಿಯ ಅಭ್ಯಾಸಗಳಿಗೆ ಒಗ್ಗಿ ನಡೆಯುವುದೇ ಹೆಣ್ಣಿನ ದೊಡ್ಡಗುಣ. ಗಂಡನಾದವನ ಪ್ರೀತಿ, ಪ್ರೇಮಗಳಿಗೆ ಅವನ ಮನದಿಚ್ಚೆಯಂತಿರುವ ಹೆಂಡತಿ ಆಗಿದ್ದರೆ ಅಲ್ಲಿ ಎಲ್ಲಯೂ ಸರಿದೂಗಿಸುವ ಹೊಣೆ ಅವಳದ್ದೇ. ಆಗ ನಮ್ಮ ಸಂಸಾರವಾಗಿ ನಡೆದುಕೊಂಡು ಹೋಗುತ್ತದೆ. ಅದೇ ಅವಳು ನಕಾರ, ಚಕಾರ ಎನ್ನುತ್ತಿದ್ದರೆ ನಾನೊಂದು ತೀರ, ನೀನೊಂದು ತೀರ ಆಗಿ ಬಿಡುತ್ತಾರೆ. ಇದರಲ್ಲಿ ತಪ್ಪು ಯಾರೇ ಮಾಡಿರಲಿ ಕಳಂಕ ಮಾತ್ರ ಹೆಣ್ಣಿಗೆ ಎಲ್ಲರ ದೃಷ್ಟಿಯಲ್ಲಿ! ಇನ್ನು ಕೆಲವು ಹೆಣ್ಣು ಮಕ್ಕಳಲ್ಲಿ ಆಸೆ ಅಕಾಂಕ್ಷೆಗಳು ಅತೀ ಹೆಚ್ಚು. ತಮ್ಮಲ್ಲಿ ಇಲ್ಲವಾದರೂ ಗಂಡನ ಪರಿಸ್ಥಿತಿ ಗೊತ್ತಿದ್ದು, ಅವನನ್ನು ಪೀಡಿಸಿಯಾದರೂ ಅವರ ಇಚ್ಚೆಯನ್ನು ಪೂರೈಸಿಕೊಳ್ಳುವವರು ಇದ್ದಾರೆ. ಇದು ಅವಳ ದಾಂಪತ್ಯ ಜೀವನಕ್ಕೆ ಒಡಕು, ತೊಡಕುಗಳಾಗಲು ಹೆಚ್ಚು ಸಮಯವಿಲ್ಲ ಜವಾಬ್ದಾರಿತ ಹೆಣ್ಣಾಗಿ ನಡೆದಲ್ಲಿ ತನ್ನ ಅತಿಯಾದ ಆಸೆಗಳಿಗೆ ಕಡಿವಾಣ ಹಾಕಲೇ ಬೇಕು ಇದು ಹೆಣ್ಣಿನ ಮಹತ್ವದ ಹೊಣೆಗಾರಿಕೆ.

ಸಂಸಾರ: ಎಂದರೇನು ನಾನು, ನನ್ನ ಗಂಡ ಮಕ್ಕಳು ಇಷ್ಟೇ ಅಲ್ಲ.. ಅವಳು ಇಡೀ ಸಂಸಾರದ ಕಣ್ಣು. ತನ್ನ ಕುಟುಂಬದ ಸದಸ್ಯರೆಲ್ಲರನ್ನು ಒಗ್ಗೂಡಿಸಿಕೊಂಡು ಬಂಧು, ಬಳಗದವರನ್ನು ಇವರೆಲರೂ ನನ್ನವರೇ ಎಂಬ ಪ್ರೀತಿ ಮಮಕಾರದಲ್ಲಿ ನೋಡಿಕೊಂಡರೆ ಆ ಮನೆಯೇ ಸ್ವರ್ಗ. ಆಚೆಯಿಂದ ತವರನ್ನು ಮರೆಯದೇ ಈಚೆಯಿಂದ ಗಂಡನ ಮನೆಯಲ್ಲಿಯೂ ಅವಳ ಪ್ರೀತಿಯೆ ಕರುಣೆ ಹರಿಸಿದಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಹ ಮಾತು ಸತ್ಯ. ಮಮತೆಯ ತಾಯಿಯಾಗಿ ಮಕ್ಕಳನ್ನು ಬೆಳೆಸುವಲ್ಲಿ ಆಕೆಯ ಹೊಣೆ ಬಹಳ ಮುಖ್ಯ. ಮಕ್ಕಳು ಬೆಳೆಯುವಾಗ ಅವರ ತಪ್ಪು ಒಪ್ಪುಗಳನ್ನು ತಿದ್ದಿ, ಅವರ ಬೆಳೆವಣಿಗೆಗೆ ಸರಿಯಾಗಿ ಸಮಾಜದ ದೃಷ್ಟಿಕೋನವನ್ನು ಇಟ್ಟುಕೊಂಡು ಅವರನ್ನು ದಾರಿ ತಪ್ಪದಂತೆ ನೋಡಿ ಕೊಂಡರೆ ಖಂಡಿತ ಮುಂದೆ ಬಂದು ಸಮಾಜಕ್ಕೂ, ಮನೆತನಕ್ಕೂ ಒಳ್ಳೆಯ ವ್ಯಕ್ತಿಯಾಗುವುದರಲ್ಲಿ ಸಂದೇಹವಿಲ್ಲ, ಇದೆಲ್ಲಕ್ಕೂ ಹೆಚ್ಚಿನ ಹೊಣೆ ತಾಯಂದಿರದ್ದೇ ಇರುತ್ತದೆ. ಗಂಡಸರಿಗೆ ಅವರದ್ದೇ ಆದ ಬೇರೆ, ಬೇರೆ ಕರ್ತ್ಯವ್ಯಗಳಿಂದಲೂ, ವ್ಯವಹಾರದಿಂದಲೂ ಮನೆಯಿಂದ ಹೊರಗೆ ಹೆಚ್ಚು ಹೊತ್ತು ಕಳೆಯಬೇಕಾದ ಅಗತ್ಯ ಇರುವುದರಿಂದ ಅವರಿಗೆ ಕಷ್ಟವೇ ಸರಿ.

ಸಮಾಜ: ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕಾಗಿ ಏನು ಮಾಡಿದೆ ಎಂದು ನೋಡಿದರೆ ಸಂಸಾರದಲ್ಲಿದ್ದುಕೊಂಡು ಸಮಾಜದ ಏಳಿಗೆಗಾಗಿ ಕೈ ಜೋಡಿಸುತ್ತಿರುವ ಮಹಿಳೆಯರು ಬೇಕಾದಷ್ಟು ಜನ ಇದ್ದಾರೆ. ಇದಕ್ಕಾಗಿ ತಮ್ಮ ಕುಟುಂಬದವರನ್ನು ಸರಿಯಾಗಿ ನೋಡಿಕೊಳ್ಳಲು ಆಗದಂತಹ ಸಂದರ್ಭಗಳು ಬೇಕಾದಷ್ಟು ಬಂದಿರಬಹುದು. ಆದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬಲ್ಲವರೂ ಇದ್ದಾರೆ. ಇಂತಹ ಕಷ್ಟವನ್ನೆಲ್ಲ ಪಟ್ಟ ಮಹಿಳೆ ಮುಂದೊಂದು ದಿನ ಆಕೆಗೂ ಪ್ರಾಯವಾಗುತ್ತದೆ. ಮುಪ್ಪು ಬರುತ್ತದೆ ಆಗ ತನ್ನವರೆನಿಸಿಕೊಂಡವರು ಕೆಲವರು ಇದ್ದರೆ ಕೆಲವರು ಕೈ ಬಿಟ್ಟು ಹೋಗಿರುತ್ತಾರೆ. ಆಗ ಅವಳ ಈ ಜೀವನ ಕಡೆಯ ಘಟ್ಟದಲ್ಲಿ ಅನಾಥ ಪ್ರಜ್ಞೆ ಕಾಡದೆ ತನ್ನವರೆನಿಸಿಕೊಂಡವರು ಸಾಂತ್ವನ ಪ್ರೀತಿಯ ಮಾತುಗಳಿಂದ ನೆಮ್ಮದಿಯ ಬದುಕು ಕೊಟ್ಟಲ್ಲಿ ನನ್ನ ಜೀವನ ಸಾರ್ಥಕವಾಯಿತು ಎನಿಸುತ್ತದೆ. ಅವಳಿಗೆ ಇದು ಮಕ್ಕಳಿಂದಲೂ, ಕುಟುಂಬಿಕರಿಂದಲೂಸಾಧ್ಯ. ಮನುಷ್ಯರಿಗೆ ಕಾಯಿಲೆಗಳು ಸಹಜ. ಮುಪ್ಪಿನಲ್ಲಿ ಬೇಡವೆಂದರೂ ಬರುವ ಹಲವು ಕಾಯಿಲೆಗಳು ಅವರನ್ನು ಬಾಧಿಸಬಹುದು , ವೇದನೆ ಇಲ್ಲದ ಬದುಕು ಕಾಣಬೇಕು. ಇಷ್ಟು ಕಷ್ಟ ಪಟ್ಟ ಜೀವಕ್ಕೆ ಮುಪ್ಪಿನ ಕಾಲಕ್ಕೆ ಮೊದಲು ಕೊಡಲು ಸಾಧ್ಯವಾದರೆ ಪ್ರೀತಿ , ಮಮಕಾರ ತೋರಿ ನಾವು ಇರುವೆವು ನಿಮ್ಮೊಂದಿಗೆ ಎಂಬುದೇ ಅವರಿಗೆ ದೊಡ್ಡ ಆಶ್ರಯ. ಇಲ್ಲವಾದಲ್ಲಿ ಬದುಕು ಯಾತನೀಯ. ಹಣ ಒಂದೇ ಬದುಕಲ್ಲ ಇಲ್ಲಿ ಯಾರೂ ಶಾಶ್ವತರಲ್ಲ ಆದರೆ, ಇನ್ನೊಬ್ಬರೊಂದಿಗೆ , ಮತ್ತೊಬ್ಬರೊಂದಿಗೆ ಕಟ್ಟಿದ ಬದುಕೆ ಉಳಿದವರಿಗೆ ದಾರಿದೀಪ.
ಇದಕ್ಕೆ ನಾರಿ ಕರುಣಾಮಯಿಯಾಗಿ ದುಡಿದ ಜೀವಕ್ಕೆ, ತ್ಯಾಗಮಯಿಯಾಗಿ ಮಾಡಿದ ಸೇವೆಗೆ ಇಕೋ ನಮ್ಮ ನಮನಗಳು.

 

 

 

 

 

✍️ನಿರ್ಮಲ ಶೇಷಗಿರಿ ಭಂಡಾರಿ, ಕುಂಜಿಬೆಟ್ಟು ಉಡುಪಿ.

Leave a Reply

Your email address will not be published. Required fields are marked *