January 18, 2025
Childrena day8

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರಲಾಲ್ ನೆಹರುರವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ನೆಹರೂ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದರು . ಅವರ ಹೃದಯದಲ್ಲಿ ಮಕ್ಕಳಿಗೆ ವಿಶೇಷ ಸ್ಥಾನವನ್ನು ಹೊಂದಿದ್ದರು. ಅವರು ಮಹಾನ್ ರಾಜಕಾರಣಿ ಮಾತ್ರವಲ್ಲ, ಅಷ್ಟೇ ಸುಂದರ ವ್ಯಕ್ತಿತ್ವದವರಾಗಿದ್ದರು. ಭಾರತದಲ್ಲಿ ಶಿಕ್ಷಣದ ಉನ್ನತಿಗಾಗಿ ಹಲವಾರು ಕೆಲಸಗಳನ್ನು ಮಾಡಿದವರು, ಜ್ಞಾನವು ಯಶಸ್ಸಿನ ಹಾದಿಗೆ ಅಡಿಪಾಯವಾಗಿರುವ ದೇಶದ ಕನಸು ಕಂಡರು. ಆದ್ದರಿಂದ ಅವರ ಜನ್ಮದಿನವು ಮಕ್ಕಳ ದಿನಾಚರಣೆಯನ್ನು ಆಚರಿಸಲು ಅತ್ಯುತ್ತಮ ದಿನವಾಗಿದೆ. ಒಬ್ಬ ಮಹಾನ್ ರಾಜಕಾರಣಿ ಮತ್ತು ನಾಯಕನ ಜನ್ಮವನ್ನು ಪ್ರತಿನಿಧಿಸುವ ದಿನ ಮಾತ್ರವಲ್ಲದೆ ನಮ್ಮ ದೇಶದ ಭವಿಷ್ಯದ ದಿನವನ್ನೂ ಪ್ರತಿನಿಧಿಸುವ ದಿನ, ನಾವು ದೇಶವನ್ನು ನಿರಂತರ ಯಶಸ್ಸಿನತ್ತ ಕೊಂಡೊಯ್ಯಲು ಎದುರು ನೋಡುತ್ತಿದ್ದೇವೆ ಎಂಬ ದಿನ.

ಮಕ್ಕಳನ್ನು ದೇಶದ ಭವಿಷ್ಯ ಎಂದು ಪರಿಗಣಿಸಿದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು ಮತ್ತು ಮಕ್ಕಳು ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದೂ ಕರೆಯುತ್ತಿದ್ದರು. ಅವರನ್ನು ಚಾಚಾ ನೆಹರೂ ಎಂದು ಕರೆಯುವುದಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಲಾಗುತ್ತದೆ. ಅವರಲ್ಲಿ ಒಬ್ಬರ ಪ್ರಕಾರ, ಮಕ್ಕಳ ಬಗ್ಗೆ ಅವರ ಸ್ನೇಹಪರ ಮನೋಭಾವದಿಂದಾಗಿ ಮಕ್ಕಳು ಅವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು.

ಮಹಾತ್ಮಾ ಗಾಂಧಿಯವರ ನಿಕಟವರ್ತಿಯಿಂದಾಗಿ, ಅವರು ಮಹಾತ್ಮ ಗಾಂಧಿಯವರಿಗೆ ಕಿರಿಯ ಸಹೋದರರಂತೆ ಮತ್ತು ಮಹಾತ್ಮ ಗಾಂಧಿಯನ್ನು ಎಲ್ಲರೂ ಬಾಪು ಎಂದು ಕರೆಯುವುದರಿಂದ ಅವರಿಗೆ ಚಿಕ್ಕಪ್ಪ ಎಂಬ ಹೆಸರು ಬಂದಿತು ಎಂದು ನಂಬಲಾಗಿದೆ, ಪಂಡಿತ್ ನೆಹರು ಮಕ್ಕಳನ್ನು ದೇಶದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಇಂದಿನ ಮಕ್ಕಳು ಭವಿಷ್ಯದ ಭಾರತವನ್ನು ಕಟ್ಟುತ್ತಾರೆ ಎಂದು ಪಂಡಿತ್ ನೆಹರು ಹೇಳುತ್ತಿದ್ದರು. ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ ಎಂದು ಅಂದುಕೊಂಡಿದ್ದರು. ವಿದ್ಯಾಸಂಸ್ಥೆಗಳನ್ನು ತೆರೆದ ನೆಹರು ಮಕ್ಕಳ ಶಿಕ್ಷಣಕ್ಕೆ ಯಾವಾಗಲೂ ಹೆಚ್ಚಿನ ಒತ್ತು ನೀಡುತ್ತಿದ್ದರು. ದೇಶದಲ್ಲಿ ಕಾಲೇಜುಗಳ ಸ್ಥಾಪನೆಗೆ ನೆಹರು ಬಹಳ ಕೊಡುಗೆ ನೀಡಿದ್ದಾರೆ.

ಮಕ್ಕಳ ದಿನಾಚರಣೆಯ ಈ ದಿನ ಪೋಷಕರಾಗಿ ನಾವು ಮಾಡಬೇಕಿರುವ ಪ್ರಮುಖ ಜವಾಬ್ದಾರಿಯೆಂದರೆ ಮಕ್ಕಳ ಬೆಳವಣಿಗೆಗೆ ನಮ್ಮ ಕೊಡುಗೆ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು ಅಗತ್ಯ. ದೇಶದ ಪ್ರತಿ ಮಗುವಿಗೂ ಕೂಡ ಶಿಕ್ಷಣ ದೊರಕುವಂತಾಗಬೇಕು. ಲಾಲನೆ-ಪಾಲನೆಯಲ್ಲಿ ಯಾವುದೇ ಕೊರತೆಯಾಗಬಾರದು.

ಮಕ್ಕಳ ದಿನಾಚರಣೆಯು ನಮಗೆ ಪ್ರತಿ ಮಗುವೂ ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ಪಡೆಯಲು ಅರ್ಹತೆಯನ್ನು ಹೊಂದಿದೆ ಎಂಬುದನ್ನು ನೆನಪಿಸಬೇಕು. ಮಕ್ಕಳು ರಾಷ್ಟ್ರದ ಭವಿಷ್ಯದ ನಾಯಕರು ಮತ್ತು ದೇಶದ ಭವಿಷ್ಯವು ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬುದು ನಮಗೆ ತಿಳಿದಿರಬೇಕು. ಮಕ್ಕಳಿಗೂ ಮಕ್ಕಳ ಹಕ್ಕುಗಳು ಇದೆ ಎಂದು ನಮಗೆ ಮುಖ್ಯವಾಗಿ ತಿಳಿದಿರಬೇಕು. ಪ್ರತಿ ಮಗುವಿಗೂ ಅವರದೇ ಆದ ಗೌರವ ಇದೆ.


ಪ್ರತಿ ಮಗುವಿಗೂ ಗೌರವಯುತವಾಗಿ ಬದುಕುವ ಹಕ್ಕು, ಆರೋಗ್ಯವಾಗಿ ಇರುವ ಹಕ್ಕು,ರಕ್ಷಣೆಯನ್ನು ಹೊಂದುವ ಹಕ್ಕು, , ಉಚಿತ ಕಡ್ಡಾಯ ಶಿಕ್ಷಣದ ಹಕ್ಕು , ಸಮಾನವಾಗಿ ಪಾಲ್ಗೊಳ್ಳುವ ಹಕ್ಕು, ಅಭಿವೃದ್ಧಿಯ ಹಕ್ಕು, ಯಾವುದೇ ರೀತಿಯ ಶೋಷಣೆಯ ವಿರುದ್ಧ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕು ಎಲ್ಲಾ ಮಕ್ಕಳಿಗೂ ಇದೆ ಎಂದು ಪೋಷಕರಾದ ನಮಗೆ ತಿಳಿದಿರಬೇಕು.

 

ಮಕ್ಕಳ ದಿನಾಚರಣೆ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತ ಆಗದೆ ಮಕ್ಕಳಿಗೂ ನಮ್ಮಂತೆ ಗೌರವಯುತವಾಗಿ ಆರೋಗ್ಯವಾಗಿ ಘನತೆಯಿಂದ ಬದುಕುವ ಹಕ್ಕು ಇದೆ ಎಂದು ತಿಳಿದು ಅವರನ್ನು ಗೌರವಿಸೋಣ..
ಇಂದಿನ ಮಕ್ಕಳು ನಾಳಿನ ಸತ್ಪ್ರಜೆಗಳು ಎಂದು ನಮಗೆ ಗೊತ್ತಿರಲಿ ಹೆಣ್ಣು ಗಂಡು ಬೇಧವಿಲ್ಲದೆ ಅವರು ನಮ್ಮ ದೇಶದ ಆಸ್ತಿ ಎಂದು ಬೆಳೆಸೋಣ ಗೌರವಿಸೋಣ ಪ್ರೀತಿಸೋಣ.

ಸಮಸ್ತ ಓದುಗರಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *