ಭಂಡಾರಿ ವಾರ್ತೆಯು ತನ್ನ 4 ನೇ ವರ್ಷವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಭಂಡಾರಿ ವಾರ್ತೆಯು ಯಾವ ರೀತಿಯಲ್ಲಿ ಸಹಾಯ ಮಾಡಿದೆ ಎಂಬುದನ್ನು ಹೇಳಬೇಕಿದೆ.
ನನ್ನ ಹೆಸರು ರಜನಿ ಭಂಡಾರಿ , ನಾನು ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲಿನ ಶಂಕರ ಭಂಡಾರಿಯವರ ಪುತ್ರಿ . ನಮ್ಮ ಮನೆಯಲ್ಲಿ ನನ್ನ ತಾಯಿ, ಅಣ್ಣ ಮತ್ತು ನನ್ನ ಅಪ್ಪ ನಾಲ್ಕು ಜನ ಇದ್ದೇವೆ.ನನ್ನ ತಂದೆ ನಮ್ಮ ಮನೆಯ ಪಕ್ಕದಲ್ಲಿಯೇ ಚಿಕ್ಕದೊಂದು ಸಲೂನ್ ಇಟ್ಟುಕೊಂಡು ಕೆಲಸ ಮಾಡಿಕೊಂಡು ನಮ್ಮನ್ನೆಲ್ಲ ಸಾಕುತ್ತಿದ್ದಾರೆ. ನಾನು ಚಿಕ್ಕಂದಿನಲ್ಲಿಯೇ ದೃಷ್ಟಿಯನ್ನು ಕಳೆದುಕೊಂಡಿದ್ದು , ನನ್ನ ಅಣ್ಣನಿಗೂ ಶೇಕಡಾ 80 ರಷ್ಟು ದೃಷ್ಟಿ ಕಾಣುವುದಿಲ್ಲ.
ಬಡತನದಲ್ಲಿಯೂ ಮಂಗಳೂರಿನ ರೋಮನ್ ಮತ್ತು ಕ್ಯಾಥರಿನ್ ಲೋಬೊ ಅಂಧರ ಶಾಲೆಯಲ್ಲಿ ಎರಡು ವರ್ಷಗಳಲ್ಲಿಮೂಲ ಶಿಕ್ಷಣವನ್ನು ಬ್ರೈಲ್ ಲಿಪಿಯ ಮೂಲಕ ಕಲಿತು ನೇರವಾಗಿ 9 ನೇ ತರಗತಿಗೆ ಬೆಂಗಳೂರಿನ ಕರ್ನಾಟಕ ಅಂಧರ ಕಲ್ಯಾಣ ಸಂಘದ ಶಾಲೆಗೆ ಸೇರಿದೆ . ನಂತರ ಪದವಿ ಪೂರ್ವ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿರುವ ಶ್ರೀ ಹೊಂಬೇಗೌಡ ಪದವಿ ಪೂರ್ವ ಕಾಲೇಜ್ ಗೆ ಸೇರಿದೆ . ಅಲ್ಲಿ ಪಿ ಜಿ ಯಲ್ಲಿ ವಾಸ್ತವ್ಯ ಮಾಡಿಕೊಂಡು ಪಿ ಯು ಸಿ ಯಲ್ಲಿ ಶೇಕಡಾ 70 ಅಂಕ ಪಡೆದು ಉತ್ತೀರ್ಣಳಾದೆ.
ಈ ಮಾಹಿತಿಯನ್ನು ನಮ್ಮ ಸಂಬಂಧಿಕರೊಬ್ಬರು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದನ್ನು ಗುರುತಿಸಿದ ಭಂಡಾರಿ ವಾರ್ತೆಯ ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ಪ್ರಕಾಶ್ ಭಂಡಾರಿ ಕಟ್ಲಾ ರವರು ನೇರವಾಗಿ ನಮ್ಮ ಮನೆಗೆ ಭೇಟಿಕೊಟ್ಟು ವಿಚಾರಿಸಿದರು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಭಂಡಾರಿ ವಾರ್ತೆಯ ಮೂಲಕ ಸಾಧ್ಯವಿರುವ ಆರ್ಥಿಕ ಸಹಕಾರ ಕೊಡಿಸುವ ಭರವಸೆ ನೀಡಿದರು.
ಅತೀ ಕಡಿಮೆ ಅವಧಿಯಲ್ಲಿ ನಮ್ಮ ಸಮಾಜದ ಬಂಧುಗಳನ್ನು ಸಂಪರ್ಕಿಸಿ ಸುಮಾರು 16 ಸದಸ್ಯರ ಮೂಲಕ ರೂಪಾಯಿ 87000 /-(ಎಂಬತ್ತೇಳು ಸಾವಿರ ರೂಪಾಯಿಗಳು)ಮೊತ್ತವನ್ನು ಸಂಗ್ರಹಿಸಿ ನಮಗೆ ಹಸ್ತಾಂತರಿಸಿದರು.ನಾನು ಈಗ ಬೆಂಗಳೂರಿನ ಕೆ ಎಲ್ ಇ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನುಪಡೆಯುತ್ತಿದ್ದು ಮೂರು ವರ್ಷಗಳಿಗೆ ಬೇಕಾದ ಶುಲ್ಕವನ್ನುಸಂಗ್ರಹಿಸಿಕೊಟ್ಟ ಭಂಡಾರಿ ವಾರ್ತೆಯ ಮುಖ್ಯ ಕಾರ್ಯ ನಿರ್ವಾಹಕರಿಗೆ , ದೇಣಿಗೆ ಕೊಟ್ಟಿರುವ ಸಮಾಜದ ಬಂಧುಗಳಿಗೆ ಹಾಗೂ ಭಂಡಾರಿ ವಾರ್ತೆಯ ತಂಡದ ಸದಸ್ಯರಿಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ.
ಈಗ ಪದವಿ ಶಿಕ್ಷಣವನ್ನು ಬೆಂಗಳೂರಿನ ಲ್ಲಿರುವ ಕೆ ಎಲ್ ಇ ನಿಜಲಿಂಗಪ್ಪ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ.
ನಾನು ವಿದ್ಯಾಭ್ಯಾಸ ಪಡೆದು ಮುಂದೆ ಉತ್ತಮ ಸರಕಾರಿ ಉದ್ಯೋಗಕ್ಕೆ ಸೇರಬೇಕೆಂಬುದು ನನ್ನ ಮಹದಾಸೆ ಆ ಮೂಲಕ ವಿದ್ಯಾಭ್ಯಾಸದ ಶುಲ್ಕ ಪಾವತಿಸಲು ಬಡ ಮಕ್ಕಳಿಗೆ ನೆರವಾಗಬೇಕು ಎಂಬ ಆಸೆ ಇದೆ.
ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿರುವ ಭಂಡಾರಿ ವಾರ್ತೆಯು ನಾಲ್ಕು ವರ್ಷ ಪೂರೈಸಿ ,ಐದನೇ ವರ್ಷಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬ ಬಂಧುವಿನಲ್ಲಿ ನನ್ನ ವಿನಮ್ರ ವಿನಂತಿಯೇನೆಂದರೆ ಇಂತಹ ಸಂಘಟನೆಯನ್ನು ತಾವೆಲ್ಲರೂ ಪ್ರೋತ್ಸಾಹಿಸುವ ಮೂಲಕ ನನ್ನಂತಹ ಇನ್ನಷ್ಟು ಬಡ ಮಕ್ಕಳು ವಿದ್ಯಾಭ್ಯಾಸ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬಹುದು.
ಭಂಡಾರಿ ವಾರ್ತೆಯ ಸಿ ಇ ಓ ಗೆ , ಮತ್ತು ಇಡೀ ತಂಡಕ್ಕೆ ಹಾಗೂ ನನ್ನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿರುವ ನಮ್ಮ ಸಮಾಜದ ಎಲ್ಲಾ ಬಂಧುಗಳಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
ವಂದನೆಗಳು,
ರಜನಿ ಭಂಡಾರಿ , ಕುಂದಾಪುರ