January 18, 2025
vitalbhandary

ಹುಟ್ಟು ಹೋರಾಟಗಾರ, ಸಾಮಾಜಿಕ ಕಾರ‍್ಯಕರ್ತ, ಸಂಘಟಕ, ಸಾಹಿತಿ, ಪತ್ರಕರ್ತ, ಕಲಾಪೋಷಕ, ಸಮಾಜಸೇವಕ ಹೀಗೇ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿಠಲ ಭಂಡಾರಿ ಹರೇಕಳ ಅವರು ಕೈಯಾಡಿಸದ ಕ್ಷೇತ್ರಗಳಿಲ್ಲ. ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ಅಗ್ರಸಾಲೆ ಎಂಬ ಪುಟ್ಟ ಊರು ವಿಠಲ ಭಂಡಾರಿಯವರ ಹುಟ್ಟೂರು. ಗೋಪಾಲ ಭಂಡಾರಿ ಮತ್ತು ಕಲ್ಯಾಣಿ ಭಂಡಾರ‍್ತಿಯವರ ಹಿರಿಯ ಮಗನಾಗಿ ಜುಲೈ 22, 1952ರಂದು ಜನಿಸಿದ ಅವರು ಪದವಿಪೂರ್ವ ಶಿಕ್ಷಣದ ತನಕ ವಿದ್ಯಾಭ್ಯಾಸ ಪಡೆದರು.

 

 

1974ರಲ್ಲಿ ಮಂಗಳೂರಿನ ಖ್ಯಾತ ವಕೀಲರಾಗಿದ್ದ ಎಸ್.ಆರ್. ಹೆಗ್ಡೆ ಅವರ ಬಳಿ ಬೆರಳಚ್ಚು ಬರಹಗಾರ, ವಕೀಲರ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಎಸ್.ಆರ್. ಹೆಗ್ಡೆಯವರು ಅತ್ಯುತ್ತಮ ಸಂಘಟಕರು ಕೂಡಾ ಆಗಿದ್ದರು. ಅವರು ತುಳುಕೂಟ ಸಂಘಟನೆ ಮತ್ತು ತುಳುಕೂಟ ಪತ್ರಿಕೆ ಆರಂಭಿಸಿದರು. ಆ ಸಂದರ್ಭದಲ್ಲಿ ಎಸ್.ಆರ್. ಹೆಗ್ಡೆಯವರ ಜೊತೆ ಸಂಘಟನೆಯಲ್ಲಿ ತೊಡಗಿಸಿಕೊಂಡ ವಿಠಲ ಭಂಡಾರಿಯವರು ತುಳುಕೂಟ ಪತ್ರಿಕೆಗೆ ತುಳುವಿನಲ್ಲಿ ಲೇಖನ ಬರೆಯುತ್ತಿದ್ದರು.  ವಿಠಲ ಭಂಡಾರಿಯವರ ತುಳು ಲೇಖನಗಳು, ಸಾಮಾಜಿಕ ಮೌಲ್ಯಗಳೊಂದಿಗೆ ಓದುಗರನ್ನು ತಲುಪಿ ಜನ ಅವರನ್ನು ಗುರುತಿಸುವಂತೆ ಮಾಡಿತ್ತು. ಉತ್ತಮ ಸಾಹಿತಿ, ಬರಹಗಾರರಾಗಿ ಅವರು ಹೊರಹೊಮ್ಮಿದರು. ಮುಂದೆ,ಅವರು ದ.ಕ.-ಉಡುಪಿ ಜಿಲ್ಲಾ ವಕೀಲರ ಗುಮಾಸ್ತರ ಸಂಘದ ಸ್ಥಾಪನೆಗೆ ಕಾರಣರಾದರು.

 

ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಬಗ್ಗೆ ಒಲವು ಹೊಂದಿದ್ದ ಅವರು ವರನಟ ಡಾ. ರಾಜ್‌ಕುಮಾರ್ ಮತ್ತು ಮಿನುಗುತಾರೆ ಕಲ್ಪನಾ ಅವರ ಅಭಿಮಾನಿಯಾಗಿದ್ದರು. ಅಂದು ಡಾ. ರಾಜ್‌ಕುಮಾರ್ ಅಭಿಮಾನಿಗಳನ್ನು ಸೇರಿಸಿ ಕಲಾಜ್ಯೋತಿ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಮಂಗಳೂರು ಎಂಬ ಜನಪರ ಸಂಘಟನೆಯನ್ನು ಸ್ಥಾಪಿಸಿದರು.

 

ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 60ರಿಂದ 7೦ ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಡಾ. ರಾಜ್ ಪ್ರಶಸ್ತಿ, ನಗದು, ಪ್ರಮಾಣ ಪತ್ರ, ಸ್ಮರಣಿಕೆಯನ್ನು ನೀಡುತ್ತಾ ಬಂದರು. ತುಳುನಾಟಕ ಬರೆಯುವ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಕಲ್ಪನಾ ಪ್ರಶಸ್ತಿ ನೀಡಿದರು. ದ.ಕ.- ಉಡುಪಿ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ (ರಿ)ದಲ್ಲಿ 3 ವರ್ಷಗಳ ಕಾಲ ಪ್ರಧಾನ ಕಾರ‍್ಯದರ್ಶಿಯಾಗಿ ಗಮನಾರ್ಹ ಸೇವೆ ಸಲ್ಲಿಸಿದರು.

 

‘ಸವಿತಾ ಮಿತ್ರ’ ಪತ್ರಿಕೆಯಲ್ಲಿ ಪತ್ರಕರ್ತನಾಗಿ 5 ವರ್ಷಗಳ ಕಾಲ ದುಡಿದರು. ‘ಸವಿತಾ ಮಿತ್ರ’ದ ಸಂಪಾದಕನಾಗಿ ಪತ್ರಿಕೆಯ ವಾರ್ಷಿಕೋತ್ಸವ ಸಂದರ್ಭ ಮಂಗಳೂರು ಟೌನ್‌ಹಾಲ್‌ನಲ್ಲಿ ಸತತ 5 ವರ್ಷಗಳ ಕಾಲವೂ ವಾರ್ಷಿಕೋತ್ಸವ ಕಾರ‍್ಯಕ್ರಮ ಸಂಘಟಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ, ಸನ್ಮಾನ ಮಾಡಿದರು. ನಾರಾಯಣ ಗುರು ಪ್ರಶಸ್ತಿ, ಡಾ. ರಾಜ್ ಪ್ರಶಸ್ತಿ, ಕಲ್ಪನಾ ಪ್ರಶಸ್ತಿ, ಯುವ ಪ್ರಶಸ್ತಿಗಳನ್ನು ನೀಡಿ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದರು.

 

ಇವರು ಸಮಾಜಸೇವಕರು ಹೌದು. ಸಮಾಜದ ಬಡವರಿಗೆ ತಮ್ಮಿಂದಾದಷ್ಟು ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಮಹಮ್ಮದ್ ರಫಿ ಸಾರಥ್ಯದ ‘ಶ್ರಮಿಕ ವಾಣಿ’ಯಲ್ಲಿ 3 ವರ್ಷಗಳ ಕಾಲ ಸಂಪಾದಕರಾಗಿ ದುಡಿದಿದ್ದಾರೆ. ಯಕ್ಷಗಾನ, ಭರತನಾಟ್ಯ ಕಲಾವಿದರನ್ನು, ಸಾಹಿತಿಗಳನ್ನು ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಮೂಲಕ ಸನ್ಮಾನಿಸಿದ ಹಿರಿಮೆ ಅವರದು.

 

ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘವನ್ನು ಜನಪರ ಕಾರ‍್ಯಕ್ರಮಗಳ ಮೂಲಕ ವಿಭಿನ್ನ ರೀತಿಯಲ್ಲಿ, ಜನಾನುರಾಗಿಯಾಗಿ ಜನಮೆಚ್ಚುಗೆ ಗಳಿಸುವಂತೆ ಶ್ರಮಿಸಿದ ಹೆಗ್ಗಳಿಕೆ ವಿಠಲ ಭಂಡಾರಿಯವರಿಗೆ ಸಲ್ಲುತ್ತದೆ. ತುಳು ವಾಲ್ಮೀಕಿ, ತುಳು ರಾಮಾಯಣ ಕರ್ತೃ ಮಂದಾರ ಕೇಶವ ಭಟ್ ಅವರನ್ನು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮೂಲಕ ಸನ್ಮಾನಿಸಿದ ವಿಠಲ ಭಂಡಾರಿ ಅವರು ತನ್ನ ಸ್ವಂತ ದುಡ್ಡಿನಿಂದ ಕೇಶವ ಭಟ್ ಅವರ ಅಪ್ರಕಟಿತ ಕವನಗಳನ್ನು ‘ಮಂದಾರ ಮಾಲೆ’ ಎಂಬ ಹೆಸರಿನಿಂದ ಮುದ್ರಣಗೊಳಿಸಿರುವುದು ಅವರ ಸಾಹಿತ್ಯ ಪೋಷಣೆಯ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿ ನಿಂತಿದೆ.

 

ವಿಠಲ ಭಂಡಾರಿಯವರ ಧರ್ಮಪತ್ನಿ ಚಂದ್ರಾವತಿ, ಇವರಿಗೆ ಮೂವರು ಮಕ್ಕಳು. ಹಿರಿಯ ಮಗ ಶೈಲೇಶ್ ಮತ್ತು ಅವರ ಪತ್ನಿ ನಾಗವೇಣಿ, ಮಗಳು ಸ್ವಾತಿ ಅರವಿಂದ್ ಮೈಸೂರು, ಕಿರಿಯ ಮಗ ಸಂದೇಶ್ ಮತ್ತು ಅವರ ಪತ್ನಿ ರಶ್ಮಿ ಅವರು ಮೈಸೂರು ಸಿವಿಲ್ ಜಡ್ಜ್ ಕೋರ್ಟಲ್ಲಿ ನ್ಯಾಯಾಧೀಶರಾಗಿದ್ದಾರೆ. ನುಡಿದಂತೆ ನಡೆವ ನೇರ ನಡೆ ನುಡಿಯ, ಕೆಚ್ಚೆದೆಯ ಮಾತಿನ ಸರದಾರ, ಸಂಘಟಕ ವಿಠಲ ಭಂಡಾರಿಯವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ದೊರಕಿವೆ.

ಇತ್ತೀಚೆಗೆ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ತುಳು ರಾಮಾಯಣ ಪಾರಾಯಣ ಮತ್ತು ಅರ್ಥಗಾರಿಕೆ ಏಳದೆ ಮಂದಾರ ರಾಮಾಯಣ – 2022 ಸುಗಿಪು-ದುನಿಪು ಕಾರ‍್ಯಕ್ರಮವು ಮೂಡಬಿದ್ರೆ ಜೈನಕಾಶಿ ಮಠದ ಅಂಗಣದಲ್ಲಿ ನಡೆದಾಗ ವಿಠಲ ಭಂಡಾರಿ ಹರೇಕಳ ಅವರಿಗೆ ಮಂದಾರ ಸಮ್ಮಾನ – 2022 ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಮೂಡಬಿದ್ರೆ ಜೈನ ಕಾಶಿಮಠದ ಅಂಗಣದಲ್ಲಿ ನಡೆದ ಈ ಕಾರ‍್ಯಕ್ರಮವು ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ), ತುಳುಕೂಟ ಬೆದ್ರ, ಮಂದಾರ ಪ್ರತಿಷ್ಠಾನ (ರಿ), ತುಳು ವರ್ಲ್ಡ್ (ರಿ) ಮಂಗಳೂರು ಇವರ ಸಹಯೋಗದಲ್ಲಿ ನಡೆಯಿತು. ಜಗದ್ಗುರು ಪರಮಪೂಜ್ಯ ಸ್ವಸ್ತಿ ಶ್ರೀ ಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ‍್ಯರು ಈ ಕಾರ‍್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ‍್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ. ಶ್ರೀನಾಥ್, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಸುಚರಿತ ಶೆಟ್ಟಿ, ಇತಿಹಾಸ ಸಂಶೋಧಕ ಡಾ| ಪಿ.ಗಣಪಯ್ಯ ಭಟ್, ಕೆ.ಪಿ. ಜಗದೀಶ್ ಅಧಿಕಾರಿ, ಹೆರಾಲ್ಡ್ ತೌರೋ, ತುಳು ವರ್ಲ್ಡ್ ನ ರಾಜೇಶ್ ಆಳ್ವ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ ಪೂರ್ಣಿಮಾ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾದ ರಾಜೇಶ್ ಭಟ್ ಅವರು ಕಾರ‍್ಯಕ್ರಮ ನಿರೂಪಿಸಿದರು.

 

ಕೃಪೆ: MPMLA’S ನ್ಯೂಸ್

Leave a Reply

Your email address will not be published. Required fields are marked *