January 18, 2025
Manoraj Rajeeva1

ಮಂಗಳೂರು ವಕೀಲರ ಸಂಘದ ಚುನಾವಣೆ ಜೂನ್ 10 ರ ಶುಕ್ರವಾರ ನಡೆಯಲಿದೆ .

ನಮ್ಮ ಸಮಾಜದ ಬಂಧು , ಭಂಡಾರಿ ವಾರ್ತೆಯ ಕಾನೂನು ಸಲಹೆಗಾರ ಹಾಗೂ ಜಿಲ್ಲಾ ಸರಕಾರಿ ಅಭಿಯೋಜಕರಾಗಿರುವ ಮಂಗಳೂರಿನ ಪ್ರಸಿದ್ಧ ವಕೀಲ ಮನೋರಾಜ್ ರಾಜೀವ ರವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಸ್ಪರ್ಧಿಸುತ್ತಿದ್ದಾರೆ .


19 ವರ್ಷಗಳ ಹಿಂದೆ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ಯೋಜನೆಗಳನ್ನು ಮಂಜೂರು ಮಾಡಲು ಶ್ರಮಿಸಿದ್ದ ಇವರು  ಇದೀಗ ಬಡ ಕುಟುಂಬದಿಂದ ಬಂದಿರುವ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಕೀಲರಿಗಾಗಿ ಹಲವಾರು ಮಹತ್ವದ ಯೋಜನೆ ಮತ್ತು ಯೋಚನೆಗಳನ್ನು ಇಟ್ಟುಕೊಂಡು  ಅಲ್ಲದೆ ವಕೀಲರ ಸಂಘಕ್ಕೆ ಬೇಕಾಗುವ ಇತರ ಸೌಲಭ್ಯಗಳನ್ನು ದೊರಕಿಸುವ ಆಶಯವನ್ನು ಹೊಂದಿಕೊಂಡು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ .

ತಮ್ಮ ವೈಯಕ್ತಿಕ ಕಾರ್ಯ ಒತ್ತಡ ಮತ್ತು ಸರಕಾರಿ ಕೆಲಸಗಳ ಒತ್ತಡದ ನಡುವೆ ವಕೀಲರ ಕ್ಷೇಮಾಭಿವೃದ್ಧಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲು ಮನೋರಾಜ್ ರವರು ತೀರ್ಮಾನಿಸಿದ್ದಾರೆ .

ಮಂಗಳೂರಿನಲ್ಲಿ ವಕೀಲರ ಭವನವನ್ನು ಸ್ಥಾಪಿಸುವುದು , ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಕಾಯಕಲ್ಪ ಕೊಡುವುದು, ವಕೀಲರಿಗೆ ಆರೋಗ್ಯ ವಿಮೆಯಲ್ಲಿ ಸಂಘದ ಮೂಲಕ ಸಹಕಾರ ನೀಡುವುದು ಮನೋರಾಜ್ ರ ಪ್ರಮುಖ ಯೋಜನೆಯಾಗಿದೆ.

ಇವರು ಮೂಲತಃ ಮಂಗಳೂರಿನವರಾಗಿದ್ದು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ   ( Deputy Controller of State Account ) ರಾಜೀವ ಕೆಲೆಸಿ ಮತ್ತು ಜಲಜಾಕ್ಷಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದರು. ಮಂಗಳೂರಿನ ಎಸ್ ಡಿ ಎಮ್ ಕಾನೂನು ಪದವಿ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿ ತನ್ನ 23 ನೇ ವಯಸ್ಸಿನಲ್ಲೆ ಅಡ್ವೋಕೇಟ್ ಎಸ್ ಆರ್ ಹೆಗ್ಡೆ ಎಂಬವರ ಜೊತೆ ಕಿರಿಯ ವಕೀಲರಾಗಿ ವಕಾಲತ್ತು ಪ್ರಾರಂಭಿಸಿದರು. ನಂತರ ಅತೀ ಕಿರಿಯ ವಯಸ್ಸಿನಲ್ಲೆ ಸ್ವಂತ ಕಚೇರಿಯಲ್ಲಿ ಕಾನೂನು ವೃತ್ತಿ  ಆರಂಭಿಸಿದರು. ವಕೀಲರಾದ ಉಷಾ ಮನೋರಾಜ್ ರವರನ್ನು 2005 ರಲ್ಲಿ ವಿವಾಹವಾಗಿ ದಾಂಪತ್ಯ ಜೀವನ ಆರಂಭಿಸಿದರು. ಪ್ರಸ್ತುತ ಇವರು ಮಂಗಳೂರಿನಲ್ಲಿ ಪತ್ನಿ ಮತ್ತು ಮಗಳು ದಿಯಾರೊಂದಿಗೆ ವಾಸವಿದ್ದು ಸ್ವಂತ ಕಚೇರಿ ಹೊಂದಿದ್ದಾರೆ.

ಇವರು ಮಂಗಳೂರಿನ ಪ್ರಭಾವಿ ವಕೀಲರಲ್ಲಿ ಒಬ್ಬರಾಗಿದ್ದು, ಅನೇಕ ಕಾನೂನು ವಿಚಾರ ಸಂಕಿರಣಗಳಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿತರು. ಪೋಲಿಸ್ ಇಲಾಖೆ, ಧಾರ್ಮಿಕ ಮತ್ತು ದತ್ತಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ  ಮುಂತಾದ ಸರ್ಕಾರಿ ಇಲಾಖೆಗಳಿಗೆ ಕಾನೂನು ಸಲಹೆ ಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆಗಳು, ಕ್ರೀಡಾ ಸಂಸ್ಥೆಗಳು , ಮತ್ತು ಪ್ರಮುಖ ದೇವಸ್ಥಾನಗಳು, ಮೆಡಿಕಲ್ ಕೌನ್ಸಿಲ್ , ಖಾಸಗಿ ಕಂಪೆನಿಗಳು, ವಿವಿಧ ಸಮಾಜ ಸೇವೆ ಸಂಸ್ಥೆಗಳು ಮತ್ತು ಮಂಗಳೂರಿನ ಬಹುರಾಷ್ಟ್ರೀಯ ಕಂಪೆನಿಗಳ  ಖಾಸಗಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.   

ಇವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಕಚ್ಚೂರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿ, ಮಂಗಳೂರು ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿ ಮತ್ತು ಕಚ್ಚೂರು ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರಾಗಿ  ಸೇವೆ  ಸಲ್ಲಿಸಿರುತ್ತಾರೆ. ಇವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ವಕಾಲತ್ತು ಆರಂಭಿಸಿದವರು ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಉನ್ನತ ಹುದ್ದೆಗೇರಿದವರಲ್ಲಿ ಭಂಡಾರಿ ಸಮುದಾಯದ ಹಲವರು ಇರುವುದು ಸಂತಸದ ವಿಚಾರವಾಗಿದೆ. 

ಮನೋರಾಜ್ ರಾಜೀವರವರು  ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಸ್ಥಾನ ದ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಹೊರ ಹೊಮ್ಮಲಿ , ಆ ಮೂಲಕ ವಕೀಲರಿಗೆ ಹಾಗೂ ಸಂಘಕ್ಕೆ ಇನ್ನಷ್ಟು ಹೆಚ್ಚಿನ ಸೇವೆಯು ಇವರಿಂದ ದೊರಕಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ                            

Leave a Reply

Your email address will not be published. Required fields are marked *