January 18, 2025
MARUHUTTU

ಬೀಸುವ ತಂಗಾಳಿಗೂ ಒಮ್ಮೊಮ್ಮೆ ಮುನಿಸು ಬಂದು ಬಿಸಿಗಾಳಿ ಬೀಸುತ್ತದೆ.ಪ್ರಕೃತಿ ಧರ್ಮವೋ, ಅಥವಾ ಮನುಷ್ಯನ ಮನೋಧರ್ಮವೋ, ಅರಿಯದ ಪರಿಸ್ಥಿತಿಯಲ್ಲಿ ತನ್ನದೇ ಲೋಕದಲ್ಲಿ ಮುಳುಗಿ ಅಡಿಗೆ ಮನೆಯಲ್ಲಿದ್ದ ಕಾವ್ಯಳಿಗೆ ಗಂಡನ ಇರುವಿಕೆ ಕಾಣದೆ ಅಸಹಾಯಕತೆ ಹತಾಶೆಯಿಂದ ಚಡಪಡಿಸಿದಳು.

“ರೀ,,,ಯಾಕೋ ನಂಗೆ ಇವತ್ತು ತುಂಬಾ ಬೇಸರ ಆಗ್ತಿದೀರಿ”.ನನ್ನ ಮನಸ್ಸು ಸ್ಥಿಮಿತದಲ್ಲಿಲ್ಲ.”
“ಮನಸ್ಸಿನ ಭಾವನೆಗಳನ್ನು ಹಿಡಿದಿಟ್ಟು ಕೊಳ್ಳಲು ನನ್ನಿಂದ ಆಗ್ತಾಯಿಲ್ಲ.ನೆನಪುಗಳು ನನ್ನನ್ನು ಚುಚ್ಚುತ್ತಿವೆ. ಜೋರಾಗಿ ಅಳ್ಬೇಕು ಅಂತ ಅನಿಸ್ತಿದೆ ಬಾಬಾ”.
ಸದಾ ನೂರಾರು ಚಿಂತನೆಯೊಳಗೆ ಮುಳುಗಿಹೋದ ಕಾವ್ಯಳ ಮನ ತನಗರಿವಿಲ್ಲದೆ ಕೂಗುತ್ತಿತ್ತು.
ಅಯ್ಯೋ! ಕರ್ಮವೇ,,, ನನ್ನ ಹಣೆಬರಹನೇ ಇಷ್ಟು, ಯಾವಾಗಲೂ ಹೀಗೆ ನಾನು.
“ರೀ,,, ರಿ,,,
ನಿಮಗೆ ಆಗಿಂದ ಕರೆದು ಹೇಳ್ತಾನೆ ಇದಿನಿ ಆದ್ರೆ ನೀವು ಮಾತ್ರ ನನ್ನ ಕಡೆ ಗಮನನೇ ಕೊಡ್ತಾ ಇಲ್ಲ”.
ಹೊರ ಪ್ರಪಂಚದ ಚಿಂತನೆ ಅಷ್ಟಾಗಿ ಇರದ ಕಾವ್ಯಳಿಗೆ ಸಣ್ಣ ಪುಟ್ಟ ಕಾರಣಗಳಿಗೂ ಮನಸ್ಸು ಮುದುಡಿಕೊಳ್ಳುತ್ತಿತ್ತು.
ತನ್ನಷ್ಟಕ್ಕೆ ತಾನೆ ಒಂದೇ ಸಮನೇ ಹತಾಶೆಯ ಮನದೊಳಗೆ ನಲುಗುತ್ತಾ, ಕಾವ್ಯಳ ಕಣ್ಣಿಂದ ತಡೆಹಿಡಿಯಲಾರದೆ ಗಂಗೆ ಕೋಪಗೊಂಡಂತೆ ಒಮ್ಮೆಲೇ,,ದುಮ್ಮುಕ್ಕಿ ಹರಿಯುತ್ತಿದ್ದಳು.

ಇದ್ಯಾವುದರ ಪರಿವೇ ಇಲ್ಲದೆ ಹೊರಗೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಹನಿಗಳ ತುಂತುರು ಗಾನವನ್ನು, ಅವುಗಳು ಮಾಡುವ ಶಬ್ದದ ಆಲಾಪವನ್ನು ಸುಮ್ಮನೆ ಕಿಟಿಕಿಯಿಂದ ನೋಡುತ್ತಾ, ತನ್ನೊಳಗೆ ತಾನೆ ಮೈ ಮರೆತು ಹೋಗಿದ್ದ ಪ್ರತಾಪನಿಗೆ ತನ್ನ ಮುದ್ದಿನ ಮಡದಿಯು ಹಾಕುವ ಕಣ್ಣೀರಿನ ಶಬ್ದ ಹೊರಗೆ ಸುರಿಯುವ ಆಶ್ಲೇಷ ಮಳೆಯ ಜೋರಿಗೆ ಕೇಳಲೆ ಇಲ್ಲ.

ಬೆಳಬೆಳಗ್ಗೆ ಹಿಡಿದ ಮಳೆಯಿಂದಾಗಿ ಹೊರಹೋಗಲು ಆಗದೆ, ಒಳಗಿರಲು ಆಗದೆ ಒಂದೇ ಸಮನೆ ಮಳೆಯನ್ನೇ ದಿಟ್ಟಿಸಿ ನೋಡುತ್ತಾ,, ತನ್ನೊಳಗೆ ಲೆಕ್ಕಾಚಾರ ಹಾಕುತ್ತಲಿದ್ದ ಪ್ರತಾಪ. ಹೇಳಿ ಕೇಳಿ ಬ್ಯೂಜಿನಸ್ ಮ್ಯಾನ್ ಆದ ಅವನು ಪ್ರತಿಯೊಂದು ಕ್ಷಣಗಳನ್ನು ಸಹ ಅಮೂಲ್ಯವೆಂಬಂತೆ ಜತನದಲ್ಲಿ ಕಾಪಾಡುವ ಉಮೇದು ಹೊಂದಿದವನಾಗಿದ್ದ.ಇತ್ತೀಚಿನ ಸಮಾಜದ ಆಗುಹೋಗುಗಳು ಎಲ್ಲ ತರದ ವ್ಯಾಪಾರ ವಹಿವಾಟುಗಳಿಗೆ ಹೊಡೆತ ತಂದೊಡ್ಡಿರುವುದು ಸಹಿಸಲೇಬೇಕಾಗಿದೆ ಎಂದು ಮನದಲ್ಲೆ ಯೋಚಿಸುತ್ತ ಕಿಟಕಿಯಾಚೆ ದೃಷ್ಟಿ ಬೀರಿ ನಿಂತಿದ್ದ.

ಇದೇ ಯೋಚನೆಯಲ್ಲಿಯೇ,,, ತಲೆಬಿಸಿ ಅನಿಸಿ, “ಚಿನ್ನ,, ಒಂದು ಲೋಟ ಬಿಸಿ ಬಿಸಿ ಕಾಫಿ ತಗೊಂಡು ಬಾರಮ್ಮ” ಅಂತ ಸವಿನಯವಾಗಿ ಹೊರಗಿಂದಲೇ ಕರೆದು ಹೇಳಿದ ಪ್ರತಾಪನಿಗೆ, ಒಳಗಿಂದ ಬಹಳ ಸಮಯಗಳ ನಂತರವೂ ಯಾವುದೇ ತೆರನಾದ ಶಬ್ದ ಬರದೆ ಇರುವುದನ್ನು ಗಮನಿಸಿ ತಾನೇ,,ಒಳಗೋಗಿ ನೋಡಿದ.

“ಚಿನ್ನು,,, ಚಿನ್ನು,,,
ಹೇ,,ಚಿನ್ನ,,,ಮಾತಾಡೋ,,”
ಎಂದೇಳುತ್ತಾ, ಡೈನಿಂಗ್ ಟೇಬಲ್ ಗೆ ತಲೆಯಾನಿಸಿ ಕೂತಿದ್ದ ತನ್ನ ಮುದ್ದಿನ ಹೆಂಡತಿ ಕಾವ್ಯಳನ್ನು ಕರೆಯುತ್ತಲೇ ಹತ್ತಿರ ಧಾವಿಸಿದ ಪ್ರತಾಪನಿಗೆ ಒಮ್ಮೆಲೇ ದಿಗ್ಬ್ರಮೆ ಮೂಡಿಸಿತು. ಕಾವ್ಯ ಕೂತ ಭಂಗಿ ಕಂಡು, ಮತ್ತೆ ಮತ್ತೆ ಅಲುಗಾಡಿಸಿದಾಗ ಅವಳು ಕೂತಿರುವ ಚೇರ್ ನಿಂದ ತಲೆ ವಾಲಿಸಿಯೇ ಬಿಟ್ಟಳು ಕಾವ್ಯ.

“ಕಾವ್ಯ ಕಾವ್ಯ,,,
ಚಿನ್ನ ಚಿನ್ನು,,, ಏಳು,,, ಏನಾಯ್ತೋ ನಿಂಗೆ?,,, ಈಗಷ್ಟೆ ಚೆನ್ನಾಗಿದ್ಯಲ್ಲ”? ಎಂದು ಗೋಳಾಡಲು ಶುರುವಾಯಿತು ಪ್ರತಾಪನ ಹೃದಯ. ತಲ್ಲಣ ತಳಮಳಗಳ ಬೇಗುದಿಯಲ್ಲಿ ಒಂದು ಕ್ಷಣ ಏನು ಮಾಡಬೇಕೆಂದು ತೋಚದೆ ನಿಂತಲ್ಲೆ ಚಡಪಡಿಸಿದ. ಮತ್ತೆ ನೀರು ಚಿಮುಕಿದಾಗಲೂ ಎಚ್ಚರವಿರದಿದ್ದಾಗ, ಕಾವ್ಯಳ ಮೂಗಿನ ಹತ್ತಿರ ಕೈ ತಂದು, ಎದೆಯ ಗೂಡಿಗೆ ತಲೆ ಇಟ್ಟಾಗ, ಕ್ಷೀಣವಾದ ಶ್ವಾಸದ ನಾಡಿಮಿಡಿತ ತಿಳಿದಾಕ್ಷಣವೇ, ಒಂದು ಕ್ಷಣವೂ ತಡಮಾಡದೆ, ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಕರೆದ್ಯೋಯ್ದ.

ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಂಡು ಮೊದಲು ತುರ್ತು ಚಿಕಿತ್ಸೆ ಪ್ರಾರಂಭಿಸಿದರು ಡಾಕ್ಟರ್. ಒಂದೇ ಕ್ಷಣದಲ್ಲಿ ನೂರಾರು ತರದ ಪರೀಕ್ಷೆಗಳನ್ನು ಮಾಡಿದರು. ಎದೆಯ ಬಡಿತ ಮತ್ತೆ ಚೇತರಿಕೆ ಕಾಣಲು ಎದೆಯ ಮೇಲೆ ಕೈಯಿಟ್ಟು ಬಲವಾಗಿ ಒತ್ತುತ್ತಿದ್ದರು. ಹೊರಗೆ ನಿಂತಿದ್ದ ಪ್ರತಾಪನ ಹೃದಯ ಬಾಯಿಗೆ ಬಂದಂತಾಯಿತು. ಕೈಕಾಲು ಆಡುತ್ತಿಲ್ಲ. ಹೊರಗೆ ಎದೆ ಭಾರದಿಂದ ಅತ್ತಿತ್ತ ಓಡಾಡುತ್ತಿದ್ದ ಪ್ರತಾಪನಿಗೆ ಕಿರಿದಾದ ಕಿಂಡಿಯ ಗ್ಲಾಸ್ ಡೋರ್ ನಲ್ಲಿ ಕಾಣುತ್ತಿರುವ ದೃಶ್ಯ ಕರುಳು ಕಿತ್ತು ಬರುವಂತಿತ್ತು.

ಆತುರಾತುರವಾಗಿ ಓಡಿ ಬಂದ ನರ್ಸ್ ಒಬ್ಬರು,, ‘ಯಾರು ಪೆಷೆಂಟ್ ಕಡೆಯವರು ,ಈ ಮೆಡಿಸಿನ್‌ ಅರ್ಜಂಟ್ ತಂದುಕೊಡಿ”.
ಎಂದಾಗ,, ನಾ,,ನ,, ಎಂದು ತೊದಲುತ್ತಲೇ ಓಡಿ ಬಂದು, ಕಣ್ಣಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳದೆ, ನರ್ಸ್ ಕೊಟ್ಟ ಚೀಟಿ ತಗೊಂಡು ನೋಡಿದರೆ, ಅಕ್ಷರಗಳೆಲ್ಲ ಮಬ್ಬು ಮಬ್ಬಾಗಿ ಕಾಣಿಸಿತು. ಮುಂದೇನು ಯೋಚಿಸದೆ ಚೀಟಿ ತಗೊಂಡು ಓಡಿದ ಪ್ರತಾಪ.

ಮೆಡಿಕಲ್ ನಲ್ಲಿ ನೀಡಿದ ಔಷಧಿಯನ್ನು ತಂದು ಮತ್ತೆ ಅದೆ ನರ್ಸ್ ಕೈಯಲ್ಲಿ ಕೊಡುತ್ತಾ,
“ಸಿಸ್ಟರ್,,,ನನ್ನ ಹೆಂಡ್ತಿಗೆ ಏನಾಗಿದೆ? ಈಗ ಹೇಗಿದ್ದಾಳೆ? ಅವಳ್ಯಾಕೆ ಹಾಗೆ ಆಗಿದ್ದಾಳೆ? ಪ್ಲೀಸ್ ಪ್ಲೀಸ್ ಹೇಳಿ”,
ಎಂದು ದೈನ್ಯತೆಯಲ್ಲಿ ಅಂಗಲಾಚಿದ ಪ್ರತಾಪ.
ಒಂದು ಕ್ಷಣ ದಿಟ್ಟಿಸಿದ ನರ್ಸ್, “ನೋಡೋಣ ಇರಿ, ಈಗ್ಲೆ ಏನು ಹೇಳೊಕೆ ಆಗಲ್ಲ. ಡಾಕ್ಟರ್ ಬಂದು ಎಲ್ಲ ಹೇಳ್ತಾರೆ”, ಎಂದು ಹೇಳಿ ಚುರುಕಿನಲ್ಲಿ ಒಳಹೋದರು ನರ್ಸ್.

“ಛೇ,,, ನನ್ನದು ಒಂದು ಬದುಕಾ ಇದು”? ಬುದ್ದಿ ತಿಳಿದಾಗಿಂದ ಒಂಟಿ ಬದುಕೆ ಆಗಿದೆ. ಕಣ್ಣೇದುರಿಗೆ ಪ್ರತಾಪನ ಅಪ್ಪ ಅಮ್ಮ ಆಕ್ಸಿಡೆಂಟ್ ಆಗಿ ತೀರಿಹೋದರು.ಆಗಿನಿಂದ ಚಿಕ್ಕಪ್ಪನ ಮನೆ,ಚಿಕ್ಕಮ್ಮನ ಕೂಗು ಬೈಗುಳ, ಹೊಡೆತ,ಎಲ್ಲ ಸಾಕಾಗಿ, ಓದಿಗೆ ತಿಲಾಂಜಲಿ ಹಾಡಿ.ಅಲ್ಲಿ ಇಲ್ಲಿ ಅವರಿವರ ಅಂಗಡಿಯಲ್ಲಿ ದಿನಸಿ ಸಾಮಾನು ಕಟ್ಟಲು ನಿಂತಿದ್ದು.ಕೊನೆ ಕೊನೆಗೆ ಅಂಗಡಿ ಸಾಹುಕಾರ ಮನೆಯಲ್ಲೆ ಪ್ರತಾಪನ ಎಲ್ಲ ನಿತ್ಯ ಕರ್ಮ ಮುಗಿಯುತ್ತಿತ್ತು.ಪ್ರತಾಪನ ಅಪ್ಪ ಅಮ್ಮ ಮಾಡಿದ ಪುಣ್ಯವೋ ಏನೋ, ಸಾಹುಕಾರರ ಮಡದಿ ಮಾತ್ರ ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು.
‘ಇಂತಹ ಕಲಿಗಾಲದಲ್ಲಿ ಯಾರು ಇರ್ತಾರೆ ?ಹೀಗೆ’ ಎಂದು ಮನದೊಳಗೆ ಪ್ರತಾಪನಿಗೆ ಆಗಾಗ ಅನಿಸುತ್ತಿತ್ತು.

ಕಣ್ಣಿಂದ ಸುರಿಯುತ್ತಿದ್ದ ನೀರಿಗೆ ಒಂಟಿಯಾಗಿ ಕೂತಿದ್ದ ಪ್ರತಾಪನಿಗೆ ದಾತರು ಯಾರು ಇರಲಿಲ್ಲ. ಸುಮಾರು ೧೦ ವರ್ಷ ಇದ್ದಾಗಲೇ ತಂದೆತಾಯಿಯನ್ನು ಕಳೆದುಕೊಂಡ ಪರಮಪಾಪಿ ಪ್ರತಾಪ.ಮತ್ತೈದಾರು ವರ್ಷ ತಂದೆಯ ತಮ್ಮನಾದ ಬಸಪ್ಪ ಚಿಕ್ಕಪ್ಪನ ಮನೆಯಲ್ಲಿ, ಆ ಚಿಕ್ಕಮ್ಮನ ಬೈಗಳು ಹೊಡೆತ ತಿಂದು ಸಾಕಾಗಿ ಇತ್ತ ಬಂದಾಗಷ್ಟೆ ಮರುಜನ್ಮ ಪ್ರಾಪ್ತಿಯಾದ ಹಾಗೆ ಆಗಿತ್ತು ಪ್ರತಾಪನಿಗೆ.

ಅವನಿಗೆ ಬರಬೇಕಾಗಿದ್ದ ಅಪ್ಪನ ಆಸ್ತಿಯನ್ನು ಸಹ ಚಿಕ್ಕಪ್ಪನೆ ಅಷ್ಟು ವರ್ಷ ಅನುಭವಿಸುತ್ತಿದ್ದರು. ಅವನ ಸಾಹುಕಾರು ಹೀರೆಗೌಡರು ಮತ್ತು ಅವರ ಮಡದಿ ಜಾನಕಮ್ಮನವರ ಕೃಪಾಕಟಾಕ್ಷದಿಂದ ಮತ್ತೆ ಪ್ರತಾಪ ಆಸ್ತಿಯನ್ನು ಮರಳಿ ಪಡೆಯುವಂತೆ ಮಾಡಿರುವ ಅವರ ಹೃದಯ ವೈಶಾಲ್ಯತೆಯನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ.

ಮತ್ತೆಲ್ಲ ಮುಂದಿನ ಜೀವನ ಕಾವ್ಯ ಬಂದ ಮೇಲೆ ಖುಷಿ ಖುಷಿಯೋ ಸಂತಸದಲೆ ತೇಲಿ ಅವನ ಅಂತರಂಗಕ್ಕೆ ಸದಾ ಬಡಿಯುತ್ತಿತ್ತು.

ಆ ದಿನ ಸಾಹುಕಾರರೊಟ್ಟಿಗೆ ಅನಾಥಾಶ್ರಮಕ್ಕೆ ಸಿಹಿಹಂಚಲು ಹೋದಾಗ ಅವನ ಕಣ್ಣ ಸೆಳೆವಿನಂಚಲಿ,ಕಡು ನೀಲಿ ಚೂಡಿದಾರ್ ಗೆ ಮೇಲೊಂದು ವೇಲ್ ಹಾಕಿಕೊಂಡು, ನಗುಮೋಗದ ಚೆಲುವೆ ನಸುನಾಚಿ ಮರೆಯಾಗಿದ್ದು ಮರೆಯಲಾರದ ಕ್ಷಣ.ಅಂದೇ ಅವನು ಗಟ್ಟಿ ನಿರ್ಧಾರಕ್ಕೆ ಬಂದಿದ್ದ. ಮದುವೆಯಾದರೆ ಈ ಚೆಲುವಿನೇ ಆಗ್ಬೇಕು ಅಂತ. ಆಮೇಲೆ ಎಲ್ಲ ಒಂದಕ್ಕೊಂದು ತಾಳೆಯಾದಂತೆ ಅವನ ಮದುವೆ ಸಾಹುಕಾರರ ಸಮ್ಮುಖದಲ್ಲಿ ಆಗಿದ್ದು.ನಂತರ ಅವರ ಇನ್ನೊಂದು ಅಂಗಡಿಯನ್ನು ಅವನಿಗೆ ವಹಿಸಿಕೊಟ್ಟಿದ್ದು. ಮನೆ ಮಗನಂತೆ ಈಗಲೂ ಕಾಪಾಡುತ್ತಿರುವುದು ಎಲ್ಲ ಪ್ರತಾಪನ ಅದೃಷ್ಟವೇ ಸರಿ.

ಯೋಚನೆಯಲ್ಲೇ ಮುಳುಗಿ ಹೋದ ಪ್ರತಾಪ್ ನಿಗೆ ಭುಜದ ಮೇಲೆ ಕೈಯಿಟ್ಟು. ಭುಜ ಒತ್ತಿದ ಬಿರುಸಿಗೆ ತಲೆಎತ್ತಿ ನೋಡಿದ. ಕಣ್ಣಂಚನ್ನು ಒರಸಿಕೊಳ್ಳದೆ ದಿಟ್ಟಿಸಿದ. ಸಾಕ್ಷಾತ್ ಶಿವಪಾರ್ವತಿಯಂತೆ ನಿಂತಿದ್ದ ಸಾಹುಕಾರರು ಮತ್ತು ಜಾನಕಮ್ಮನನ್ನು ನೋಡಿದಾಕ್ಷಣ, ಅಲ್ಲಿದ್ದ ಜನರ ಪರಿವೆ ಇಲ್ಲದೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ.

“ಏ!! ಸುಮ್ನಿರೋ ಏನು ಆಗಿರಲ್ಲ ನಿನ್ನ ಹೆಂಡ್ತಿಗೆ, ನಾ ಈಗಷ್ಟೆ ಡಾಕ್ಟರ್ ಕಂಡು ಮಾತಾಡಿ ಬಂದೆ”ಅಂದರು ಯಜಮಾನರು.
ಊರಿನಲ್ಲೆ ತನ್ನದೆ ಆದ ಒಂದು ವರ್ಚಸ್ ಹೊಂದಿದ ಹೀರೆಗೌಡರು, ಹತ್ತಾರು ಅಂಗಡಿಯ ಮಾಲೀಕರು. ಸಮಾಜ ಸೇವೆಯ ಮೂಲಕ ಗುರುತಿಸಿ
ಕೊಂಡವರು.ಘನತೆ ಗೌರವ ಹೊಂದಿದ ಸಾಹುಕಾರರೆಂದರೆ ಬಹುಶಃ ಎಲ್ಲರಿಗೂ ಸಹ ಆದರ್ಶಪ್ರಾಯರು.

‘ಡಾಕ್ಟರ್ ಕರಿತಿದ್ದಾರೆ ನಿಮ್ಮನ್ನು’
ಎಂದು ನರ್ಸ್ ಬಂದು ಕರೆದ ದನಿಯನ್ನಾಲಿಸಿ ಎಲ್ಲರೂ ಅತ್ತ ತಿರುಗಿದರು’.
ಡಾಕ್ಟರ್! “ಏನಾಗಿದೆ ನನ್ನ ಕಾವ್ಯಳಿಗೆ ಹೇಳಿ ಪ್ಲೀಸ್”
“ಗಾಬರಿ ಆಗುವಂತದ್ದು ಏನಿಲ್ಲ.
ಆದರೆ ಇನ್ನೂ ಮುಂದೆ ನೀವು ಅವರನ್ನು ಬಹಳ ಜಾಗೃತರಾಗಿ ನೊಡ್ಬೇಕಷ್ಟೆ.ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ”.
“ಪ್ರಾಣಾಪಾಯ ಅಂದ್ರೆ?,
ಡಾಕ್ಟರ್! ಏನು ಹೇಳ್ತಿದ್ದಿರಾ ನೀವು”?
ಎಂದು ಆತಂಕದಿಂದ ಕೇಳಿದ ಪ್ರತಾಪ್.
“ನೋಡಿ!ಅವರು ಇತ್ತೀಚೆಗೆ ಬಹಳ ಡಿಸ್ಟರ್ಬ್ ಅಗಿದ್ದಾರೆ. ಅದಕ್ಕೆ ಕಾರಣಗಳು ಹತ್ತಾರು ಇರಬಹುದು. ಅಥವಾ ಇಲ್ಲದೇಯೂ ಇರಬಹುದು.ಈ ಮನಸ್ಸು ಒಮ್ಮೊಮ್ಮೆ ವಿಚಿತ್ರವಾಗಿ ಯೋಚಿಸುತ್ತೆ ಪ್ರತಾಪ್.ಇದು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಅವರನ್ನು ಕಾಡುವ ಚಿಂತನೆಗಳು ಇವು.
ಸದಾ ತಾನು ಒಂಟಿ ಅನಿಸುತ್ತದೆ. ನನಗ್ಯಾರು ಇಲ್ಲ. ನನ್ನನ್ನು ಯಾರು ಕೇರ್ ಮಾಡ್ತಿಲ್ಲ. ನಾನು ಯಾರಿಗೂ ಇಷ್ಟವಿಲ್ಲ,ಹೊರಪ್ರಪಂಚದ, ಅಕ್ಕಪಕ್ಕದ ಎಲ್ಲರ ಮಾತುಗಳು ಸಹ ತನ್ನನ್ನೆ ಕುರಿತು ಹೇಳಿದ್ದಾರೆ ಅಂದುಕೊಳ್ಳುವುದು, ಎಲ್ಲವನ್ನು ತನಗೆ ತಾನೆ ಅಂದುಕೊಳ್ಳುವುದು,ನನ್ನ ಸುಖಸಂತೋಷ ಯಾರಿಗೂ ಬೇಡವಾಗಿದೆ”. ಹೀಗೆ ನಾನಾ ತರದ ನೆಗೆಟಿವ್ ಸೆನ್ಸ್ ಅನ್ನು ಸದಾ ಮನದೊಳಗೆ ತುಂಬಿಕೊಂಡು ಹತಾಶೆ,ಖಿನ್ನತೆ, ದುಃಖ,ನೋವು,ಸಂಕಟ, ಯಾರು ಇಲ್ಲದಾಗ ಒಬ್ಬೊಬ್ಬರೆ ಮಾತಾಡಿಕೊಂಡು ಅಳುವುದು ಈ ತರದ ಎಲ್ಲ ಪ್ರಕ್ರಿಯೆಗಳು ಜರಗುತ್ತದೆ.ಇದೊಂದು ಅಬ್ನಾರ್ಮಲ್ ಕೇಸ್.ಆದರೆ ಇತ್ತೀಚಿನ ದಿನಮಾನಗಳಲ್ಲಿ ಈ ತರದ ಮಂದಿ ಬಹಳಷ್ಟು ಸಿಗ್ತಾರೆ ನಮಗೆ.

ಕೊನೆಕೊನೆಗೆ ಈ ತರದ ನೆಗೆಟಿವ್ ಎನರ್ಜಿ ಅವರನ್ನು ಸಾವಿನ ದವಡೆಗೂ ಸಹ ಎಳೆದ್ಯೋಯುತ್ತದೆ.ತಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಮೊದ ಮೊದಲು ಅವರ ಅರಿವಿಗೆ ಬರಲಾರದು.ಸದಾ ಆಯಾಸ, ಕೈಕಾಲು ನೋವು, ತಲೆ ಸುತ್ತುವುದು,ಬೆವರುವುದು,
ಹೀಗೆಲ್ಲ ಆಗುತ್ತಿರುತ್ತದೆ.ಆಗೆಲ್ಲ ಹೆಚ್ಚಾದ ಗಮನ ಹರಿಸಿದರೆ ತೀವ್ರತೆಗೆ ಹೋಗುವುದಿಲ್ಲ.
ಅಂತವರ ದೇಹದಲ್ಲಿ ಗ್ಲೂಕೋಸ್ ಅಂಶ ಕಡಿಮೆ ಗೊಳ್ಳುತ್ತದೆ.ಲೋ ಬಿಪಿ ಶುರುವಾಗುತ್ತದೆ.ತದನಂತರ ಸಾವು ಯಾವ ತರದಲ್ಲಿಯಾದರೂ, ಯಾವ ಕ್ಷಣ ಬಂದು ಅಪ್ಪಳಿಸಿದರೂ ಆಶ್ಚರ್ಯವಿಲ್ಲ.ಸಡನ್ ಆಗಿ ಹಾರ್ಟ್ ಆಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಸ್ಟ್ರೋಕ್ ಆಗಬಹುದು.ಬ್ರೈನ್ ಹೆಮರೆಜ್ ಆಗಬಹುದು.ಹೀಗೆ ನಿಮ್ಮ ಹೆಂಡತಿಗೂ ಇದೆ ತರ ಆಗಿರುವುದು.ನೀವು ಸರಿಯಾದ ಸಮಯಕ್ಕೆ ಕರೆತಂದಿರುವಿರ.
ಅವರು ಬದುಕಿಳಿದರು.

ಡಾಕ್ಟರ್ ಇನ್ನೇನೋ,, ಹೇಳುತ್ತಿದ್ದರು.ಅವರ ಮಾತು ಕೇಳುತ್ತಿದ್ದಂತೆ ನಿಂತ ನೆಲವೇ ಕುಸಿದ ಅನುಭವವಾಯಿತು. ಎಲ್ಲ ಅರೆ ಮಂಪರು ಅಮಲಿನಲ್ಲಿ ಕೇಳಿದಂತಾಯ್ತು ಪ್ರತಾಪ್ ನ ಮಾನಸಿಕ ಸ್ಥಿತಿ.

“ನೋಡಿ ಪ್ರತಾಪ್!! ಇನ್ನೆರಡು ದಿನ ನಿಮ್ಮ ಹೆಂಡತಿಯನ್ನು ಅಬ್ಸರ್ವರ್ನೆಷನ್ ನಲ್ಲಿ ಇಡ್ತಿವಿ”. ನಂತರ ನೋಡಿ ಕಳಿಸ್ತಿವಿ. ಗಾಬರಿ ಆಗ್ಬೇಡಿ.ಇನ್ನೂ ಮುಂದೆ ಅವರ ಕಡೆ ಹೆಚ್ಚಾಗಿ ಕೇರ್ ಮಾಡಿ. ಇದೇ ತರ ಲೋ ಬಿಪಿ ಹೆಚ್ಚಾದ್ರೆ ಮುಂದೆ ಅವರಿಗೆ ಮಕ್ಕಳಾಗುವ ಸಾಧ್ಯತೆ ಸಹ ಬಹಳ ಕಡಿಮೆ ಇರುತ್ತದೆ.

“ಪೇಷಂಟ್ ಅನ್ನು ಈಗ ನೋಡಬಹುದು” ಅಂತೇಳಿ ಇಷ್ಟೆಲ್ಲವನ್ನು ಹೇಳಿ ಹೊರಟ ಡಾಕ್ಟರ್ ಕಡೆ, ಹಾಗೂ ಸಾಹುಕಾರ ದಂಪತಿಗಳ ಕಡೆ ನೋಡುತ್ತಾ ಜೀವ ಮನಸ್ಸು ಎರಡು ಚಡಪಡಿಸಿ ಹತಾಶೆ ಗೊಳಪಟ್ಟಿತ್ತು ಪ್ರತಾಪ್ ಮನ.

“ಹೇ!! ಧೈರ್ಯವಾಗಿ ಇರು ನೀನು, ಏನು ಆಗಲ್ಲ,ಇಷ್ಟರಲ್ಲೆ ಮುಗಿತಲ್ಲ”
ಅಂತ ಧೈರ್ಯ ಸಮಾಧಾನ ಮಾಡುವ ದಂಪತಿಗಳು ಪ್ರತಾಪ್ ಪಾಲಿಗೆ ಸದಾ ದೇವರೇ ಆಗಿದ್ದರು.

ಈಗಾಗಲೇ ಆಸ್ಪತ್ರೆಗೆ ಬಂದು ಒಂದು ದಿನವಾಗಿ ಹೋಗಿತ್ತು. ಒಳಹೋಗಿ ನೋಡಿದಾಗ, ಮುಗ್ದ ಸ್ಥಿಗ್ದ ಮಗುಮನದ ಕಾವ್ಯಳ ಮುಖ ಕಂಡಾಗ ದುಃಖ ಉಮ್ಮಳಿಸಿ ಬಂತು ಪ್ರತಾಪನಿಗೆ.
ಜಾನಕಮ್ಮ ನಿಧಾನವಾಗಿ ಪ್ರತಾಪ್ ಭುಜ ಅಮುಕಿದರು. ಧೈರ್ಯ ಮತ್ತು ಮಮಕಾರದ ಮುದ್ರೆಯಾಗಿತ್ತು ಅದು.ಮತ್ತು ಅವಳ ಎದುರಿಗೆ ನಿನ್ನ ನೋವು ತೋರಿಸಿ ಕೊಳ್ಳಬೇಡ ಎಂಬ ಸಂದೇಶ ಸಹ ನೀಡಿತ್ತು.

ನಿದ್ರೆಯ ಮಂಪರಿನಲ್ಲಿ ಇದ್ದ ಕಾವ್ಯಳ ಬದುಕು ನೀರಮೇಲಿನ ಗುಳ್ಳೆಯಾಗಿತ್ತು.
ಎಲ್ಲರೂ ಇದ್ದು ಬಡತನವಾದರೂ ಸಹಿಸಬಹುದು.ಆದರೆ ಮನುಷ್ಯ ಹುಟ್ಟಿನಂದಿನಿಂದ ಅನಾಥರಾಗಬಾರದು.ಮಕ್ಕಳ ಬದುಕಿಗೆ ಅಪ್ಪ ಅಮ್ಮ ಅತಿದೊಡ್ಡ ಶಕ್ತಿ ಯಾವಾಗಲೂ.ಕೆಲವು ಮನಸ್ಥಿತಿಯವರು ಎಂತಹ ವಾತಾವರಣದಲ್ಲಿ ಇದ್ದರೂ ಸರಿಹೊಂದುತ್ತಾರೆ. ಇನ್ನೂ ಕೆಲವರು ಹೊಂದಿಕೊಂಡಂತೆ ಬದುಕುತ್ತಾರೆ. ಇನ್ನೂ ಕೆಲವರು ಹೊಂದಲಾರದೆ, ಇತ್ತ ಬದುಕಲಾರದೆ ಚಡಪಡಿಸಿ ಇಂತಹ ಸ್ಥಿತಿಗೆ ಬರುತ್ತಾರೆ.
ಕಾವ್ಯಳ ಬಾಲ್ಯವೆ ಹಾಗಿತ್ತು.ಒಂಟಿತನ,ಹತಾಶೆ, ಅನಾಥಪ್ರಜ್ಞೆ,ಯಾರೋ ಹುಟ್ಟಿಸಿದ್ದು,ಯಾರೋ ಕರೆತಂದು ಆಶ್ರಮ ಸೇರಿಸಿದ್ದು,ಸಮಾಜದ ಚುಚ್ಚುಮಾತುಗಳು,ಕೆಲವರ ತಿರಸ್ಕಾರ ನೋಟ,ಯಾರೋ ಜೀವನ ನೀಡಿದ್ದು.ಎಲ್ಲವೂ ಅವಳ ಬದುಕಿನಲ್ಲಿ ಅನಿವಾರ್ಯವೇ ಆಯಿತು. ಕೊನೆಗೆ ಸಿಕ್ಕಿರುವ ನೈಜ ಪ್ರೀತಿಯ ಆಳ ಅರಿಯಲಾರದಷ್ಟು ಮನಸ್ಸು ಪ್ರಕ್ಷುಬ್ಧ ಸ್ಥಿತಿಗೆ ಬಂದು ತಲುಪಿತ್ತು.

ಆಸ್ಪತ್ರೆಗೆ ಬಂದು ಎರಡು ದಿನ ಕಳೆದಾಗಲೂ ಕಾವ್ಯ ಇನ್ನೂ ಸುಧಾರಿಸಿಕೊಂಡಿರಲಿಲ್ಲ.ಇನ್ನೂ ಮುಂದೆ ಕಾವ್ಯಳನ್ನು ಮೊದಲಿಗಿಂತ ಹೆಚ್ಚಾಗಿ ಆರೈಕೆ ಮಾಡಬೇಕು.ಅವಳೇ ನನ್ನ ಸರ್ವಸ್ವ, ಅವಳಿಲ್ಲದೆ ನಾನಿಲ್ಲ ಎಂದು ಪ್ರತಾಪ ಯೋಚಿಸುತ್ತಾ,
ಯಾವಾಗ ಸರಿಹೋಗುವಳು, ಮೊದಲಿಗಿಂತ ಖುಷಿ ಖುಷಿಯಾಗಿ ಅವಳಿರಬೇಕು ಎಂದು ನೂರಾರು ತರದ ಚಿಂತನೆಯೊಳು ಮುಳುಗಿ,
ಅವಳ ಮುಗ್ದ ಮುಖ ನೋಡುತ್ತಾ ಯೋಚಿಸುತ್ತಿದ್ದ ಪ್ರತಾಪ್ ನಿಗೆ,
“ಕಣ್ಣು ಬಿಟ್ಟು ರೀ,,,ರೀ,,, ನಾ ಎಲ್ಲಿದ್ದಿನಿ,?
ನಂಗೆ ನೀರು ಬೇಕು ಬಾಯಾರಿಕೆ ಆಗ್ತಿದೆ ಅಂದಾಗ.”
ಸಾಹುಕಾರರ ದಂಪತಿಗಳ ಕಣ್ಣಂಚಲಿ ಕಂಡು ಕಾಣದಂತೆ ಪ್ರೀತಿ ಕಾರಂಜಿಯ ಪನ್ನೀರು ಚಿಮ್ಮಿತ್ತು.ಕೈನಲ್ಲಿ ಇದ್ದ ಡ್ರೀಪ್ ಅನ್ನು ಗಮನಿಸಿ,ಅವಳನ್ನು ನಿಧಾನವಾಗಿ ಒರಗಿಸಿ ಮೃದುವಾಗಿ ಆಲಂಗಿಸಿಕೊಂಡ ಪ್ರತಾಪನಿಗೆ ಮರುಜನ್ಮ ಸಿಕ್ಕಷ್ಟು ಸಂತಸವಾಗಿ,
ಹೃದಯ ತರಂಗ ಭಾವೋದ್ವೇಗದಲ್ಲಿ ಲಯಬದ್ದವಾಗಿ ತಾಳಹಾಕಿ ಸಂತಸದೆಲೆಯಲ್ಲಿ ನರ್ತಿಸುತ್ತಿತ್ತು.

✍️ ವಾಣಿ ಭಂಡಾರಿ
ಶಿವಮೊಗ್ಗ

1 thought on “ಮರುಹುಟ್ಟು – ✍️ವಾಣಿ ಭಂಡಾರಿ

  1. ವಾಣಿಜಿ (ಸರಸೊತಮ್ಮ) ಕತೆ ತುಂಬಾ ಚೆಂದ ಬಂದಿದೆ..

Leave a Reply

Your email address will not be published. Required fields are marked *