January 18, 2025
Hindu-Warrior-I

ಅವನೊಬ್ಬ ಕುಲೀನ, ಅಹುದು ಅವನು ಬೆಳೆದದ್ದು ಅವರ ಮನೆಯಂಗಳದಲ್ಲೇ, ಆದರೆ ಬೆಳೆಸಿದವರಿಗೂ ತಿಳಿಯಲಿಲ್ಲ ಅವನಾವ ಕುಲದವನೆಂದು. ಬೆಳೆದು ಬಂದ ಅವನ ಬೆಳೆಸಿದರು. ಬೆಳೆಸಿದವರಿಂದ ವಸುಷೇಣನೆಂಬ ನಾಮವು ದೊರೆಯಿತು. ಗುರು ಪರಶುರಾಮರಿಂದ ಶಸ್ತ್ರವಿದ್ಯೆಯು ದೊರೆಯಿತು.  ದುಂಬಿ ಬಂದು ತೊಡೆಕೊರೆವಾಗ ತೊಡೆಯಮೇಲೆ ಪವಡಿಸಿದ್ದ ಗುರುವಿಗೆ ನಿದ್ರಾಭಂಗವಾಗದಿರಲೆಂದು ಸಹಿಸಿದನು. ಎಚ್ಚೆತ್ತು ನೋಡಿದ ಗುರುವು, ವಿಪ್ರನಾಗಿದ್ದರೆ ಈ ಪರಿ ನೋವು ಸಹಿಸಲಸಾಧ್ಯ ಸುಳ್ಳನ್ನಾಡಿರುವೆ, ನೀನು ಕ್ಷತ್ರಿಯನೆ ಎಂದು ಕುಪಿತಗೊಂಡು ಶಾಪ ನೀಡಿದರು.

ಪಾಂಡವ-ಕೌರವರ ಶಸ್ತ್ರವಿದ್ಯಾ ಪರಿಣಿತಿ ತೋರ್ಪಡಿಸುವಿಕೆಯ ಸಂದರ್ಭ ತನ್ನ ವಿದ್ಯೆಯನ್ನು ಪ್ರದರ್ಶಿಸಿಸುವುದಾಗಿ ಕೇಳಿಕೊಂಡಾಗ ಸೂತಪುತ್ರನೆಂಬ ಬಿರುದು ದೊರೆಯಿತು. ಅಪ್ರತಿಮ ಪ್ರತಿಭೆಯಿದ್ದು ಕೇವಲ ಕುಲೀನನೆಂಬ ಒಂದೇ ಒಂದು ಕಾರಣದಿಂದ ಸಮಾಜದಲ್ಲಿ ಕಡೆಗಣಿಸಲ್ಪಟ್ಟಾಗ ದೇವರಂತೆ ಬಂದು ಕೈ ಹಿಡಿದು ಅಂಗದೇಶವನ್ನು ನೀಡಿ ಅಂಗಾಧಿಪತಿಯನ್ನಾಗಿ ಮಾಡಿದ ದುರ್ಯೋಧನನಿಗೆ ಅಂದಿನಿಂದ ಪ್ರಾಣಸ್ನೇಹಿತನಾಗಿ ಅತಿ ನಿಷ್ಠನಾಗಿಬಿಟ್ಟ. ತನ್ನ ಸ್ವಾಮಿಗೆ ನಿಷ್ಠನಾದ ಕಾರಣ ಆತನ ಹಗೆ ತನಗೂ ಹಗೆಯೆಂದು ಬಗೆದು ದೊರೆಯ ಪರವಾಗಿ ನಿಂತು ಆತನ ಪಾಪ ಪುಣ್ಯಗಳಲ್ಲೂ ಭಾಗ ಪಡೆದ. ತನ್ನಲ್ಲಿರುವುದನ್ನು ಕೇಳಿದಾಗ ಮರುಮಾತಿಲ್ಲದೇ ದಾನವಾಗಿ ನೀಡುತ್ತಿದ್ದ ಉದಾರ ದಾನಗುಣದಿಂದಾಗಿ ದಾನಶೂರನಾಗಿ ಮೆರೆದ. ಸ್ವಯಂವರದಲ್ಲಿ ವೀರಾಧಿವೀರರು ಸವಾಲನ್ನು ಎದುರಿಸಲಾಗದೇ ಹೋದಾಗ ಈತ ಸವಾಲನ್ನು ಸ್ವೀಕರಿಸಿ ಮತ್ಸಯಂತ್ರವನ್ನು ಭೇದಿಸಲು ಮುಂದೆ ಬಂದಾಗ ತಡೆದ ದ್ರೌಪಧಿ ಯಿಂದ ಸಭಾಮಧ್ಯದಲ್ಲಿ ಆದದ್ದು ಮತ್ತದೇ ಅಪಮಾನ -“ಸೂತಪುತ್ರ”ನೆಂದು. ಬಹುಶಃ ದ್ರೌಪಧಿ ವಸ್ತ್ರಾಪಹರಣದ ಸಂದರ್ಭ ಆತ ತೋರಿದ ಅನುಚಿತ ವರ್ತನೆ ಇದಕ್ಕೆ ಪ್ರತಿಯಾಗಿದ್ದಿರಬಹುದು.

ಮಹಾಭಾರತ ಯುದ್ದನಿಶ್ಚಯವಾದ ಸಂದರ್ಭ ಕೌರವಪಾಳಯದವರನ್ನು ಎದುರಿಸಲು ಪಾಂಡವರಿಂದ ಸಾಧ್ಯವಿದ್ದರೂ ಅರ್ಜುನನ್ನ ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ಇದ್ದದ್ದು ಇವನಲ್ಲಿ ಮಾತ್ರ. ಪಾಂಡವಪಕ್ಷಪಾತಿಯಾದ ಕೃಷ್ಣನಿಗೆ ಇವನನ್ನು ಭೇದಿಸಲು ಇದ್ದದ್ದು ಒಂದೇ ಒಂದು ಮಾರ್ಗ ಅದೇ ಆತನ ಜನ್ಮವೃತ್ತಾಂತ. ದೂರ್ವಾಸರ ಸತ್ಕಾರದಿಂದ ದೊರೆತ ಮಂತ್ರಸಿದ್ದಿಯ ಪರೀಕ್ಷಾರ್ಥ ಕುಂತಿಯ ಕುತೂಹಲದ ಕುಡಿ, ಪಾಂಡವರ ಹಿರಿಯಣ್ಣ,  ಜಗತ್ತನ್ನೇ ಬೆಳಗುವ ಸೂರ್ಯಪುತ್ರ ಸೂತಪುತ್ರನಲ್ಲ. ಆದರೆ ಇನ್ನೂ ಕನ್ಯೆಯಾಗಿದ್ದ ಆಕೆ ಲೋಕಪವಾದಕ್ಕೆ ಹೆದರಿ ಗಂಗೆಯಲ್ಲಿ ತೇಲಿಟ್ಟಳೆಂದು. ಸಿಂಹಾಸನಾರೂಢನನ್ನಾಗಿಸುತ್ತೇನೆ ಯುದ್ದ ಬಿಡು ಎಂದು ಕೃಷ್ಣ ನುಡಿದಾಗ, ಕಾನೀನನಲ್ಲ ಎಂದು ತಿಳಿಸಿದ್ದಕ್ಕಾಗಿ ಧನ್ಯವಾದ ತಿಳಿಸಿ. ಅಂದು ಸಮಾಜದಲ್ಲಿ ಕುಲೀನನಾಗಿದ್ದ, ತನ್ನನ್ನು ಸಮಾಜದಲ್ಲಿ ಗುರುತಿಸಿ ಕೈ ಹಿಡಿದ. ನಿಮ್ಮವರ ಬಾಯಿ ಮುಚ್ಚಿಸಲು ಅಂಗಾಧಿಪತಿಯನ್ನಾಗಿಸಿದ. ಯುದ್ದಕ್ಕಾಗಿ ಎಲ್ಲರಿಗಿಂತ ಹೆಚ್ಚಾಗಿ ತನ್ನಮೇಲೆ ನಂಬಿಕೆ ಇರಿಸಿರುವ ಕೌರವನ ನಂಬಿಕೆಯನ್ನು ಇಂದು ಅಧಿಕಾರಕ್ಕಾಗಿ ಮಾರಿಕೊಳ್ಳುವುದಿಲ್ಲ ಎಂದು ನುಡಿದ. ನಂದನ ಇಷ್ಟೇ ಸಾಲದೆಂಬಂತೆ ಆತನನ್ನ ಇನ್ನಷ್ಟು ಕುಗ್ಗಿಸಲು ಎಂದಿಗೂ ನೋಡಬರದ ತಾಯಿಯನ್ನ ಕಳುಹಿಸಿ ಇಟ್ಟಗುರಿ ತೂಟ್ಟಬಾಣವನ್ನು ಮತ್ತೆ ತೊಡದಂತೆ, ಅರ್ಜುನನ ಹೊರತಾಗಿ ಮತ್ತಾರಿಗೂ ಮರಣವನ್ನು ನೀಡದಂತೆ ವಚನವನ್ನು ಪಡೆಯಲು ಕೃಷ್ಣ ಸಫಲನಾಗಿಯೇಬಿಟ್ಟ.

ತನ್ನ ಸುತನ ಉಳಿವಿಗೆ ಇಂದ್ರ ವಿಪ್ರವೇಷ ಧರಿಸಿಬಂದು ಹುಟ್ಟಿನಿಂದ  ರಕ್ಷಾಕವಚವಾಗಿ ಬಂದ ಕವಚಕುಂಡಲಗಳನ್ನು ದಾನವಾಗಿ ಪಡೆಯುತ್ತಾನೆ ಎಂದು ಸೂರ್ಯನಿಂದ ಅರಿವಿದ್ದರೂ ತನ್ನ ದಾನಗುಣವನ್ನು ಬಿಡದೇ ಇಂದ್ರನಿಗೆ ಅವುಗಳನ್ನು ದಾನಮಾಡಿಯೇಬಿಟ್ಟ ಇದಕ್ಕೆ ಪ್ರತಿಯಾಗಿ ಅರ್ಜುನನ ಹರಣಮಾಡಲು ದೊರಕಿದ ಶಕ್ತ್ಯಾಯುಧವನ್ನ ಕೃಷ್ಣ ಬುದ್ದಿವಂತಿಕೆಯಿಂದ ಘಟೋದ್ಘಜನ ಮೇಲೆ ಪ್ರಯೋಗಿಸುವಂತೆ ಮಾಡಿಬಿಟ್ಟ. ಅರ್ಜುನನ ವಿರುದ್ದ ಯುದ್ದ ಸಂದರ್ಭದಲ್ಲಿ ಸರ್ಪಾಸ್ತ್ರ ಪ್ರಯೋಗಮಾಡುವಾಗ ಶಲ್ಯ ತಲೆಗಿಟ್ಟ ಗುರಿಯನ್ನ ಎದೆಗಿರಿಸಲು ಹೇಳಿದಾಗ ಬದಲಿಸದೇ ವಿಫಲವಾದ ಸರ್ಪಾಸ್ತ್ರವು ಬಂದು ಮತ್ತೂಮ್ಮೆ ತೊಡಲು ತಿಳಿಸಿದಾಗ ಮತ್ತೆ ಬಿಲ್ಲಿಗೇರಿಸದೇ ಕೊಟ್ಟಮಾತಿಗಾಗಿ ಸಿಕ್ಕ ಅವಕಾಶದ ದುರುಪಯೋಗಪಡಿಸಿಕೊಳ್ಳಲಿಲ್ಲ. ಕೆಸರಿನಲ್ಲಿ ಹೂಳಲ್ಪಟ್ಟ ರಥದ ಚಕ್ರವನ್ನು ಎತ್ತಲು ಸಮಯ ಕೇಳಿ ಎತ್ತುತ್ತಿರುವಾಗ ಮುರಾರಿಯ ಪ್ರಚೋದನೀಯ ಮಾತುಗಳಿಗೆ ಮರುಳಾಗಿ ಆತನಮೇಲೆ ಅಂಜಲಿಕಾಸ್ತ್ರವನ್ನ ಪ್ರಯೋಗಿಸಿಯೇಬಿಟ್ಟ ಗಾಂಢೀವಿ. ಅದೆ ಸಂಧರ್ಭದಲ್ಲಿ ಗುರು ಪರಶುರಾಮ ಆಪತ್ಕಾಲದಲ್ಲಿ ತನ್ನಿಂದ ಕಲಿತ ವಿದ್ಯೆ ಫಲಿಸದೇಹೋಗಲಿ ಎಂದು ನೀಡಿದ ಶಾಪ ಫಲಿಸಿತು. ಎಲ್ಲಾರೀತಿಯ ಸಾಮರ್ಥ್ಯವಿದ್ದರೂ ಹುಟ್ಟಿಗಾಗಿ ಹುಡುಕಾಡಿ ಸಮಾಜದಲ್ಲಿ ಮತ್ತೆ ಮತ್ತೆ ಅದೊಂದೇ ಕುಲೀನ, ಸೂತಪುತ್ರನೆಂಬ ಕಾರಣಕ್ಕೆ ನಿಂದನೆಯ ಅನುಭವಿಸುತ್ತಿದ್ದಾಗ ಮೇಲೆತ್ತಿದ ದೊರೆಗೆ ನಿಷ್ಠನಾಗಿ ಅರಿವಿದ್ದರೂ ಅರಿವಿಲ್ಲದಂತೆ ಸಂದರ್ಭದ ಗಾಳಕ್ಕೆ ಸಿಕ್ಕು ಪಾಪದಲ್ಲಿ ಭಾಗಿಯಾಗಿ ಕೃಷ್ಣನಂತೆ ಮಿನುಗುವ ಅವಕಾಶವಿದ್ದರೂ ಕಾಲ ತಪ್ಪುಹಾದಿಗೆ ದೂಡಿದಾಗ ಸೂರ್ಯಪುತ್ರ ದಾನಶೂರ ಕರ್ಣ ಚಿರನಿದ್ದೆಗೆ ಜಾರಿದ.

                                                                                                                                                                                           
✍️ವಿಜಯ್ ನಿಟ್ಟೂರು

Leave a Reply

Your email address will not be published. Required fields are marked *