ಹೊಸ ವರ್ಷದ ಸಂಭ್ರಮ ಬರಮಾಡಿಕೊಳ್ಳುವ ಹಪಾಹಪಿ ಯುವಮನಸ್ಸುಗಳಲ್ಲಿ ಸಂಭ್ರಮದ ಬುಗ್ಗೆ, ಇಡಿಯ ವಿಶ್ವವೇ ಆಚರಿಸುವ ಅತೀದೊಡ್ಡಹಬ್ಬ. ಇಷ್ಟು ದೊಡ್ಡ ಹಬ್ಬವಾದರೂ ಅದಕ್ಕೊಂದು ಸಂಸ್ಕೃತಿಯ ನೆಲೆಗಟ್ಟಿಲ್ಲದೇ ಅರ್ಥವಿಲ್ಲದಂತೆ ವ್ಯರ್ಥವಾಗಿ ಆಚರಿಸುವ ಪರಿನೋಡಿದರೆ ಎತ್ತಸಾಗುತ್ತಿದೆ ಯುವಸಮಾಜ ಎನ್ನುವುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಸಂಸ್ಕೃತಿಯ ನೆಲೆಬೀಡಾದ ಭಾರತವನ್ನು ಇಡೀ ವಿಶ್ವವೇ ಅತೀ ಗೌರವದಿಂದ ನೋಡುವ ಸಮಯದಲ್ಲಿ ಅರ್ಥವಿಲ್ಲದ ಆಚರಣೆ ನೆಡೆಸಿ ಅಪಾರ್ಥವನ್ನು ಕಲ್ಪಿಸಿ ತಲೆತಗ್ಗಿಸುವಂತೆ ಮಾಡುವಾಗ ಯಾವುದೇ ಸುಸಂಸ್ಕೃತ ಹಿರಿಯಜೀವಿಗಳ ಕರುಳು ಚುರುಕ್ ಎನ್ನುವುದು ನಿಶ್ಚಿತ. ಯಾವುದೇ ಒಂದು ಆಚರಣೆಗಳಿದ್ದರೂ ಅದನ್ನು ಅರ್ಥಪೂರ್ಣವಾಗಿ ಆಚರಿಸುವುದೇ ಭಾರತದ ವೈಶಿಷ್ಟ್ಯ. ಇದನ್ನೇ ವಿಶ್ವವೂ ಮೆಚ್ಚಿರುವಂತಹದು. ಆದರೆ ಇಂದಿನ ಯುವಜನಾಂಗ ಅದನ್ನು ಅರ್ಥವಿಲ್ಲದೇ ಆಚರಿಸುವಾಗ ಪಾಶ್ಚಿಮಾತ್ಯರಿಂದ ಬಂದಬಳುವಳಿಯನ್ನು ಅವರಂತೆಯೇ ಆಚರಿಸುತ್ತೇವೆ ಎಂಬ ಹುಂಬತನವನ್ನು ತೋರುತ್ತಾ ತನ್ನತನವನ್ನು ಕಳೆದುಕೊಳ್ಳುತ್ತಿರುವಾಗ ಮರುಗದಿರಲು ಸಾಧ್ಯವೇ ?
ಹೊಸವರ್ಷದ ದಿನವನ್ನು ಬಹುಶಃ ವಿಶ್ವ ಕುಡುಕರ ದಿನಾಚರಣೆ ಎಂದು ಆಚರಿಸಿದರೆ ಅರ್ಥಪೂರ್ಣವಾಗಿರುತ್ತೇನೋ, ಯಾಕೆಂದರೆ ಅಂದಿನ ರಾತ್ರಿ ಸೇರಿ ಬಹಿರಂಗವಾಗಿ ಮಾಡುವುದು ಅದನ್ನೇ ಅಲ್ಲವೇ ? ಅದಲ್ಲದೇ ಕುಡಿತದ ಅಮಲಿನಲ್ಲಿ ತೇಲಿ ತಿರುಗುವವರ ಮಧ್ಯೆ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂದು ತಿಳಿಸಿದರೂ ಕೆಲ ಮಹಿಳಾಮಣಿಗಳು ಅದಾವುದೋ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರ ವಿರೋಧವಿದ್ದರೂ ತಾವು ಅಲ್ಲಿ ಆಚರಿಸಿಯೇ ಸಿದ್ದ ಎಂದು ಹೇಳಿ, ಸುರಕ್ಷತೆ ಒದಗಿಸಿ ಎಂದು ಕೂಗಿ, ಅವರುಗಳಿಂದ ಪ್ರೇರಿತರಾಗಿ ಬಂದ ಮಹಿಳಾವಾದಿಗಳು ಅಲ್ಲಿ ಕಹಿಯ ಅನುಭವವನ್ನು ಪಡೆದು ಮಾರನೆ ದಿನ ಭಾರತ ಮಹಿಳೆಯರಿಗೆ ಎಷ್ಟು ಸುರಕ್ಷಿತ ? ಎಂದು ಬೊಬ್ಬಿಡುವಾಗ ಈ ವಿಚಾರವಿಲ್ಲದ ವಿಚಾರವಾದಿಗಳಿಂದ ಆಚಾರವೂ ಹಾಳಾಗುವಾಗ ಏನೆಂದು ಹೇಳುವುದು ಭಾರತದ ಭವಿಷ್ಯತ್ತಿಗೆ ??
ಭವ್ಯ ಭರತದ ನಾರಿಮಣಿಯರು ಆ ರಾತ್ರಿಯ ಹೊತ್ತು ಕುಡಿದು ತೂರಾಡುವಾಗ, ಕುಡಿತ ಅಧಿಕವಾಗಿ ದಾರಿಮಧ್ಯದಲ್ಲಿ ಅದನ್ನು ಹೊರಹಾಕುವಾಗ, ಮಧ್ಯದ ಅಮಲಿನಲ್ಲಿ ಎಲ್ಲೆಂದರಲ್ಲಿ ಮೈಮೇಲೆ ಪ್ರಜ್ಞೆಯೇ ಇಲ್ಲದೇ ಬಿದ್ದಿರುವಾಗ ಪ್ರಜ್ಞಾವಂತ ಸಮಾಜ ಎತ್ತಸಾಗುತ್ತಿದೆ ಎನ್ನುವುದು ಸಹಜವಾಗಿಯೇ ಮೂಡುವ ಪ್ರಶ್ನೆ. ಇಷ್ಟೆಲ್ಲಾ ಆದರೂ ಕೆಲ ವಿಚಾರವಾದಿಗಳ ವಾದವೂ ಉಂಟು ಅವರು ಇಲ್ಲಿಯವರಲ್ಲ ಎಂದು. ಆದರೆ ಎಲ್ಲಿಯವರಾದರೇನು ಸ್ವಾಮಿ ಆಚರಿಸುತ್ತಿರುವುದು ಇಲ್ಲಿಯೇ ಅಲ್ಲವೇ ?? ಕುಡಿದು ತೂರಾಡಿಯೇ ಆಚರಣೆ ಮಾಡುವುದನ್ನೇ ಸಾಮಾಜಿಕ ಬೆಳವಣಿಗೆಯ ಹಂತ ಇದೇ ಪ್ರಗತಿಯ ಪರಿ ಎನ್ನುವವರಿಗೆ ಏನುಹೇಳಬಹುದು ?
ಇದು ಕೇವಲ ಮಹಿಳಾಮಣಿಯರಿಗಷ್ಟೇ ಸಂಬಂಧಿತವಾಗಿಲ್ಲದೆ ಪುರುಷರೂ ಮಾಡುವುದು ಇದನ್ನೇ ಆಗಿದೆ. ಮದ್ಯದ ಅಮಲಿನಲ್ಲಿ ಮೆರೆದು ಏನು ಮಾಡುತ್ತಿದ್ದೇವೆ ಎಂದು ಅವರಿಗೇ ತಿಳಿದಿರುವುದಿಲ್ಲ. ಕೆಲ ವಿಕೃತಿಗಳು ಇದರ ಮಧ್ಯೆ ಹೊರಹೊಮ್ಮಿ ಗಲಾಟೆಗಳಿಗೆ ದಾರಿಯಷ್ಟೆ. ಆದರೂ ಹೊಸ ವರ್ಷದ ಹುಚ್ಚು ಅವರನ್ನು ಮತ್ತೆ ಆ ಮಧ್ಯರಾತ್ರಿ ಅಲ್ಲಿ ಸೇರುವಂತೆ ಮಾಡಿಬಿಡುತ್ತದೆ. ಹೊಸ ಆಶಾವಾದದೊಂದಿಗೆ ಅದೇ ಗುಂಪಿನೊಂದಿಗೆ ಸೇರಿ ಹರ್ಷಿಸಲಿಕ್ಕಾಗಿ ಕೆಲ ಸುಸಂಸ್ಕೃತ ಪರಿವಾರವೂ ಸೇರಬಯಸಿ ಬಂದು. ಅಲ್ಲಿ ಮತ್ತೆ ಸಿಹಿಯ ಬದಲು ಕಹಿಯ ಅನುಭವದೊಂದಿಗೆ ಹೊಸ ವರ್ಷವನ್ನು ಬರ ಮಾಡಿಕೊಳ್ಳುವಂತಾಗುತ್ತದೆ.
ಹೊಸವರ್ಷವನ್ನು ಎಷ್ಟು ಹರ್ಷದಿಂದ ಬರಮಾಡಿಕೊಳ್ಳಬೇಕು ಆದರೆ ಈ ಪರಿಯ ಹರ್ಷ ಸರಿಯೇ ?? ಯಾಕೆ ಭಾರತದಲ್ಲಿ ಒಂದು ಅರ್ಥಪೂರ್ಣ ಹೊಸವರ್ಷವನ್ನು ಆಚರಿಸಲು ತಿಳಿದೇ ಇಲ್ಲವೇ ಅಥವಾ ಆ ಗುಲಾಮಗಿರಿಯನ್ನು ಬಿಡಲು ಆಗುವುದೇ ಇಲ್ಲವೇ ?? ಕುಡಿದು ಬೀದಿ ಬೀದಿಗಳಲ್ಲಿ ಅಲೆದು ವೃಥಾ ಕಹಿಯೊಂದಿಗೆ ಬರಮಾಡಿಕೊಳ್ಳುವ ಬದಲು ಒಂದೊಳ್ಳೆ ಆಚರಣೆಯನ್ನು ಮಾಡಿ ವಿಶ್ವಕ್ಕೆ ನೀಡಿದರೆ ವಿಶ್ವಗುರುವಾಗುವ ಮಾರ್ಗ ಸನಿಹವಿಲ್ಲವೇ ??