January 18, 2025
download (1)

ಕಳೆದ 2014ರ ಮಾರ್ಚ್ ತಿಂಗಳ ಪ್ರಥಮ ವಾರದಲ್ಲಿ ಇದ್ದಕ್ಕಿದ್ದಂತೆ ನನಗೆ ಕಿಬ್ಬೊಟ್ಟೆಯಿಂದ ಆರಂಭವಾಗಿ ಎದೆಯ ಚರ್ಮದ ಮೇಲೆ ಅಲ್ಲಲಿ ಕೆಂಪು ಗುಳ್ಳೆಗಳು ಒಂದಕ್ಕೊಂದು ತಾಗಿ ಉದ್ದನೆಯದಾಗಿ ಬಳ್ಳಿಯಂತೆ ಹರಡಿತ್ತು.

ಆರಂಭದ ಎರಡು ದಿನ ನಾನೇ ತರ್ಕಿಸಿ ಇದು ಮಾವಿನ ಹಣ್ಣು ಕೊಯ್ಯಲು ಹೋದಾಗ ಮಾವಿನ ಹಣ್ಣಿನ ಸೊನೆ ತಗುಲಿ ಆಗಿರಬಹುದೆಂದು ಭಾವಿಸಿದೆ.

           ಮೂರನೇ ದಿನ ಮೈ ಮೇಲಿನ ಕೆಂಪು ಗುಳ್ಳೆಗಳು ಸ್ವಲ್ಪ ಉರಿಯಲಾರಂಬಿಸಿತು. 4 ನೇ ದಿನ ಬೆಳಿಗ್ಗೆ ನಾನು ಮಲ ವಿಸರ್ಜನೆ ಮಾಡುವ ವೇಳೆ ಮಲ ಹೊರ ಬರುವ ಮೊದಲೆ ನನಗೆ ಯಾವುದೇ ರೀತಿಯ ನೋವಿನ ಅರಿವಿಲ್ಲದೆ ರಕ್ತ ಹರಿಯಿತು, ಬಳಿಕ ಮಲ ವಿಸರ್ಜನೆಯ ಕೊನೆಯಲ್ಲಿ ಮತ್ತೆ ರಕ್ತ ಬಂತು. ನನಗೆ ಸುಮಾರು 25 ವರುಷಗಳ ಹಿಂದೆ ಮೂಲ ವ್ಯಾಧಿ ಸರ್ಜರಿಯಾಗಿದ್ದು ಸಂಪೂರ್ಣ ಗುಣಮುಖವಾಗಿತ್ತು. ಆದರೂ ಸಂಶಯ ನಿವಾರಿಸಲು ಸ್ಥಳೀಯ ಮೆಡಿಕಲ್ ಕಾಲೇಜಿಗೆ ಹೋಗಿ ಒರ್ವ ಶಸ್ತ್ರ ಚಿಕಿತ್ಸಾ ತಜ್ಞರ ಬಳಿ ರಕ್ತ ಹರಿದ ಬಗ್ಗೆ ತಿಳಿಸಿದೆ. ವೈದ್ಯರು ಪರೀಕ್ಷಿಸಿ ತೊಂದರೆ ಏನು ಇಲ್ಲ ಹೇಳಿ ಕೆಲವು ಮಾತ್ರೆ ಸೇವಿಸಲು ಔಷಧಿ ಚೀಟಿ ಕೊಟ್ಟರು.

ಔಷಧಿ ಪಡೆದು ಅದೇ ದಿನ ತುರ್ತು ಕಾರಣದಿಂದ ಕೋಣಾಜೆಯಿಂದ ಹೊರಟು ನನ್ನ ಮಗಳ ಮನೆಗೆ ಪುತ್ತೂರಿಗೆ ಬಂದೆ. ಆದರೆ ನನ್ನ ಮೈ ಮೇಲಿನ ಕೆಂಪುಗುಳ್ಳೆಗಳು ಇನ್ನಷ್ಟು ಉರಿಯ ತೊಡಗಿತು. ಆದರೆ  ಕೆಂಪು ಗುಳ್ಳೆಯ ಲಕ್ಷಣಗಳು ಆರಂಭವಾದಾಗಿನಿಂದಲೂ, ಉರಿ ಶಮನ ಮಾಡುವುದಕ್ಕೆಂದು, ಕೊತ್ತಂಬರಿ ಮತ್ತು ಜೀರಿಗೆ ಕಷಾಯ, ಮೆಂತೆ ಕಷಾಯ, ಹಾಗೂ ಇನ್ನಿತರ ಸೊಪ್ಪು ತರಕಾರಿಗಳನ್ನೇ ನಾನು ಸೇವಿಸುವ ಮೂಲಕ ಸ್ವಯಂ ಪಥ್ಯೆ ಮಾಡಲಾರಂಭಿಸಿದೆ. 5 ನೇ ದಿನ ಉರಿ ತಡೆಯಲಾರದೆ, ಅಂದೇ ಬೆಳಿಗ್ಗೆ ಪುತ್ತೂರು ನಗರದಲ್ಲಿರುವ ಖ್ಯಾತ ಚರ್ಮ ರೋಗ ತಜ್ಞರ ಬಳಿ ಹೋದೆ.

           ವೈದ್ಯರು ನನ್ನನು ತಪಾಸಣೆ ಕೋಣೆಗೆ ಕರೆದು ಭೂತ ಕನ್ನಡಿ ಬಳಸಿ ಕೆಂಪು ಗುಳ್ಳೆ ಪರೀಕ್ಷಿಸಿ ಹೇಳಿದರು, ಇದು ನಿಮಗೆ ಎಷ್ಟು ದಿವಸದಿಂದ ಇದೆ, ಆರಂಭವಾದಾಗಿನಿಂದ ನೀವೇನು ಆಹಾರ ಸೇವಿಸುತಿದ್ದೀರಿ? ಎಂದು ಪ್ರಶ್ನಿಸಿದರು. ನಡೆದ ಘಟನೆಯನ್ನೆಲ್ಲಾ ವಿವರಿಸಿದೆ ಮತ್ತು ಆಹಾರ ನಿಯಂತ್ರಣ ಮತ್ತು ಕಷಾಯ ಕುಡಿದ ಬಗ್ಗೆ ಹೇಳಿದೆ. ಹಾಗೆ ಈ ಹಿಂದೆ ವೈದ್ಯರು ಕೊಟ್ಟ ಮಾತ್ರೆಯಲ್ಲಿ ಕೇವಲ 2 ಮಾತ್ರೆ ಸೇವಿಸಿದ್ದೆ ಎಂದೆ.

           ವೈದ್ಯರು ಕೇಳಿದರು ನಿಮಗೆ ಈ ಚರ್ಮ ರೋಗದ ಬಗ್ಗೆ ಸಂಶಯವಿತ್ತೇ ಎಂದು. ಇಲ್ಲಾ ಎಂದೆ. ಅದಕ್ಕೆ ವೈದ್ಯರು ಪ್ರತ್ಯುತ್ತರಿಸಿ ನನ್ನ ಪ್ರಕಾರ ನಿಮಗೆ ಇದು ಇನ್ನಷ್ಟು ತೀವ್ರವಾಗಿ ಹರಡ ಬೇಕಿತ್ತು. ಆದರೆ ನೀವು ನಿಮ್ಮ ಆಹಾರ ಪಥ್ಯದಿಂದ ನಿಮ್ಮ ದೇಹವನ್ನು ಅಪಾಯದಿಂದ ತಪ್ಪಿಸಿದ್ದೀರಿ ಎಂದರು. ನಾನು ಸ್ವಲ್ಪ ದಿಗಿಲಾಗಿ ಏನಾದರು ತೊಂದರೆ ಇದೆಯಾ ಎಂದೆ. ವೈದ್ಯರು ನನ್ನನ್ನು ಸಾವಧಾನವಾಗಿ ಕುಳ್ಳಿರಿಸಿ, ಇದೇನು ದೊಡ್ಡ ಕಾಯಿಲೆ ಅಲ್ಲ ಬರೇ “ಸರ್ಪ ಸುತ್ತು”  ಅಥವಾ ವೈದ್ಯ ಲೋಕದಲ್ಲಿ ಹರ್ಪಿಸ್ ಅನ್ನುತ್ತೇವೆ ಎಂದರು.

           ಇದಕ್ಕೆ  ಬರೇ ಸರಳವಾದ ಔಷಧಿ ಎಂದು ಹೇಳುತ್ತಾ, Soframycine ointment tube  &  ಮೂರು ದಿನಗಳ ಕಾಲ anti-biotic ಮಾತ್ರೆ ಕೊಟ್ಟು  ಅವರು ಹೇಳಿದರು, 15 ದಿನಗಳ ಕಾಲ ಖಾರದ ವಸ್ತು, ಎಣ್ಣೆ ಪದಾರ್ಥ, ಹೆಚ್ಚು ತೆಂಗಿನಕಾಯಿ ಪಲ್ಯ ಸೇವಿಸಬಾರದು ಎಂದರು. ಇದೇ ಔಷಧಿ ಸಾಕು, ಮತ್ತೆ ನೀವು ಮಂಗಳೂರಿನಿಂದ ಪುತ್ತೂರಿಗೆ ಬರುವ ಅವಶ್ಯಕತೆ ಬರುವುದಿಲ್ಲ.

           ಇದು ಯಾವ ಕಾರಣದಿಂದ ಸರ್ಪ ಸುತ್ತು ಬರುತ್ತದೆ ಎಂಬ ನನ್ನ ಪ್ರಶ್ನೆಗೆ ವೈದ್ಯರು ಉತ್ತರಿಸುತ್ತಾ ಹೀಗೆಂದರು. “ಇದೊಂದು ಕುಡಿಯುವ ನೀರಿನಿಂದ ಬರುವ “ವೈರಸ್”. ನಮ್ಮ ದೇಹವನ್ನು ಪ್ರವೇಶಿಸಿದ ಈ ವೈರಸ್  ದೇಹದ ಯಾವುದಾದರೊಂದು ನರಗಳನ್ನು ಅತಿಕ್ರಮಿಸಿ ಆ ನರಗಳನ್ನು ಸೋಂಕಿಗೀಡು ಮಾಡಿದಾಗ ಆ ನರಗಳು ನಮ್ಮ ದೇಹದ ಸೂಕ್ಷ್ಮ ನರಗಳು ಬಳ್ಳಿಯಂತೆ  ಎಲ್ಲಿಯವರೆಗೆ ಹರಡಿದೆಯೋ, ಅಲ್ಲಿಯವರೆಗೆ  ನರಗಳು ಸೊಂಕಿಗೆ ತುತ್ತಾಗುತ್ತವೆ. ಆರಂಭದಲ್ಲಿ ಎಷ್ಟೋ ದಿನಗಳ ಮೊದಲೇ ಹೊಟ್ಟೆಯ ಒಳಗೆ  ವೈರಸುಗಳು ನರಗಳ ಮೇಲೆ ದಾಳಿ ಮಾಡಿ ಒಳಗೆ ನರಗಳು ಘಾಸಿಗೊಂಡ ಬಳಿಕವೇ ಶರೀರದ ಮೇಲೆ ಕೆಂಪು ಗುಳ್ಳೆಯ ಗಾಯದ ಸ್ವರೂಪ ಹಾವಿನ಼ಂತೆ ಕಾಣುತ್ತದೆ ಎಂದು ಬೆನ್ನು ತಟ್ಟಿ ಹೋಗಲು ಸೂಚಿಸಿದರು. ನನ್ನನು ಹೊರ ಹೋಗಲು ಸೂಚಿಸಿದ ವೈದ್ಯರು, ತಕ್ಷಣವೇ ನನ್ನನ್ನು ಹಿಂದಕ್ಕೆ ಕರೆದು ಸರ್ಪಸುತ್ತು ರೋಗದ ಬಗ್ಗೆ ಓರ್ವ ವೈದ್ಯರಾಗಿ ನನಗೆ ಹೇಳಿದ ಕಿವಿ ಮಾತು ಈ ಕೆಳಗೆ ನಿಮ್ಮ ಗಮನಕ್ಕೆ ತರಬಯಸುತಿದ್ದೇನೆ.

           “ನೋಡಿ ಸರ್ಪ ಸುತ್ತು ಬರುವುದು ಸರ್ಪ ದೋಷದಿಂದಲ್ಲ. ನಿಮಗೆ ಈಗ ಬಂದಿರುವ ಹರ್ಪಸ್ ಕಾಯಿಲೆ ಗುಣ ಆಗುವವರೆಗೆ ಯಾರಲ್ಲಿಯೂ ವಿಷಯ ಹಂಚಿಕೊಳ್ಳಬೇಡಿ. ಯಾಕೆಂದರೆ ನಿಮಗೆ ಈ ವಿಷಯವನ್ನು ನೀವು ಎಷ್ಟು ಮಂದಿಗೆ ಹೇಳುತ್ತೀರೋ ಅಷ್ಟೂ ಜನರು ಬೇರೆ ಬೇರೆ ರೀತಿಯ ಔಷಧ ಮಾತ್ರವಲ್ಲ ವೈದ್ಯರನ್ನೇ ಬದಲಾಯಿಸುವಂತೆ ಹೇಳಿ ಕೆಲವು ನಾಗ ದೋಷ ಪರಿಹಾರ ಎಂದು ನಾನಾ ಪೂಜೆಗಳನ್ನು ಮಾಡಿಸುತ್ತಾರೆ. ನಾಗನ ದೋಷವಿದೆ ಎಂದು ನಂಬಿಸುತ್ತಾರೆ. ಹಾಗೆಯೇ ಕೆಲವು  ಮೂಢ ನಂಬಿಕೆಯನ್ನು ಪ್ರತಿಪಾದಿಸುತ್ತಾರೆ” ಎಂದು ಆ ಖ್ಯಾತ ವೈದ್ಯರು ತಿಳಿಸಿದರು.

           ಆದರೆ  ಹಿಂದಿನ ಪೀಳಿಗೆಯವರ ಆರೋಗ್ಯ ಪದ್ಧತಿ ಪ್ರಕಾರ  ಈ ರೋಗಕ್ಕೆ ಆಹಾರ ಪಥ್ಯವೇ ಪ್ರಥಮ ಔಷಧ ಹಾಗೂ  ಈಗ ರೋಗ ಉಲ್ಭಣಗೊಳ್ಳದಂತೆ Alopathic antibiotic ಕೊಟ್ಟರೂ ಪಥ್ಯವೇ ಪ್ರಧಾನ ಎಂದರು.

           ಆದರೆ ಬುದ್ದಿವಂತ ಕೆಲ ಜನರು ಈ ರೋಗವನ್ನು ಕಾಡಿನಲ್ಲಿರುವ ಹಾಗೂ ಮುಗ್ಧ ನಮ್ಮ ಸುತ್ತಮುತ್ತಲಿನ  ಉರಗ ಜಾತಿಗೆ ಸೇರಿದ ನಾಗರ ಸರ್ಪಗಳ ಮೇಲೆ ದೋಷಾರೋಪಣೆ ಮಾಡುತ್ತಾ ತಮ್ಮ ಉದರ ಪೊಷಣೆ ಮಾಡವರೇ ಪರಿಸ್ಥಿತಿಯ ಲಾಭ ಪಡೆಯುತ್ತಾರೆ. ಪರಿಣಾಮ ನಮ್ಮ ಕರಾವಳಿ ಜಿಲ್ಲೆಯಾದ್ಯಂತ ಇರುವ ಮುಗ್ಧ ಸರಿಸೃಪ ಪ್ರಾಣಿ ನಾಗರ ಹಾವಿನ ಹೆಸರು ಹೇಳಿ ನಮ್ಮ ಮುಗ್ಧ ಜನರ ಧಾರ್ಮಿಕ ನಂಬಿಕೆಯನ್ನು ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುತ್ತಿರುವುದರ ಬಗ್ಗೆ ನಮ್ಮ ತುಳು ನಾಡಿನ ಜನರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ಹಾಗೆಯೇ ಇವುಗಳನ್ನು ಲೇಖನ ಮೂಲಕ ಮಾತ್ರವಲ್ಲ ತುಳುನಾಡಿನ ಸಾಮಾನ್ಯ ಜನರ ನಡುವೆ ಕುಟುಂಬದ ಸಭೆ ಸಮಾರಂಭಗಳು ನಡೆಯುವಾಗ ಜನರಲ್ಲಿ ವೈಚಾರಿಕತೆ ಬೆಳೆಸುವಂತೆ ಮಾಡಬೇಕು. 

           ಜಗತ್ತಿನ ಸುಮಾರು 150 ರಾಷ್ಟ್ರಗಳಲ್ಲಿ ಕಾಣಸಿಗುವ ಉರಗ ಗುಂಪಿಗೆ ಸೇರಿದ ಸರ್ಪಗಳು ಜಗತ್ತಿನ ವಿವಿಧ ಧರ್ಮೀಯರಿಗೆ, ಇಡೀ ಭಾರತ ದೇಶದ ಜನರಿಗಾಗಲೀ ಅಥವಾ ANIMAL PLANNET ನಲ್ಲಿ ತೋರಿಸುವ ಉರಗ ತಜ್ನರಿಗಾಗಲಿ ಈ “ಸರ್ಪ ದೋಷ ಇಲ್ಲವೇ ಸರ್ಪ ಶಾಪ” ಯಾರಿಗೂ ತಟ್ಟದೆ ಇರುವಾಗ ನಮ್ಮ ಕರಾವಳಿ ಭಾಗದ ಮುಗ್ಧ ತುಳು ಬಾಂಧವರು ಮಾತ್ರ ಯಾಕೆ ನಾಗ ಹಾವಿನಿಂದ ದೋಷ ಹಾಗೂ ತಾನೇ ನಂಬಿದ ದೈವದಿಂದ ಉಪದ್ರಗಳು ಕಂಡುಬರುವುದು.

           ಈ ನಾಗದೋಷಗಳನ್ನು ಹಿಂದೆ ಅನಕ್ಷರಸ್ಥ ಬಡ ತುಳುವರು ಸರಳ ರೀತಿಯಲ್ಲಿ ಪರಿಹರಿಸಿಕೊಳ್ಳುತಿದ್ದರೆ, ಈಗ ಕೆಲ ವರುಷಗಳಿ಼ಂದ ಉನ್ನತ ವಿದ್ಯಾಭ್ಯಾಸ ಹೊಂದಿದ ಸುಶಿಕ್ಷಿತರು ಸಾಮಾಜಿಕ ಪ್ರತಿಷ್ಠೆಯೋ ಎಂಬಂತೆ ಅದ್ದೂರಿಯಾಗಿ ಪೂಜಿಸುತಿದ್ದಾರೆ.

           ನನ್ನ ತಂದೆ ಹೇಳುತ್ತಿದ್ದರು ಹಾವುಗಳು ಪರಸ್ಪರ ಮಿಲನವಾಗುವುದನ್ನು ನಾವು ನೋಡ ಬಾರದು, ನೋಡಿದರೆ ಶಾಪ ತಟ್ಟುವುದು ಎಂದು. ಹಾಗಾದರೆ ನಾಗ ಮಂಡಲದಲ್ಲಿ ಪರಸ್ಪರ ಮಿಲನದ ಕುಣಿತ ಯಾವ ಸಂದೇಶ ಸಾರುತ್ತದೆ ಎಂದು ಅನೇಕ ತುಳುವರು ನನ್ನಲ್ಲಿ ಪ್ರಶ್ನಿಸಿದ್ದಾರೆ, ನಿಮಗೆ ಗೊತ್ತೇ ಎಂದು?

          
           “ದೇವರ ಸೃಷ್ಠಿಯಲ್ಲಿ ಜಗತ್ತಿನ ಎಲ್ಲಾ ಪ್ರಾಣಿ ಪ್ರಪಂಚಗಳು ಒಂದೇ. ಎಲ್ಲದರಲ್ಲೂ ಜೀವಾತ್ಮವಿದೆ ಎಂದು ನನ್ನ ನಂಬಿಕೆ”.

           ವ್ಯತ್ಯಾಸವೇನೆಂದರೆ ಕೆಲವರು  ತಮ್ಮ ಆಹಾರ ಪದ್ಧತಿ ಎಂದು ಮಾಂಸ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೆಲವರು ಮಾಂಸ ತಿನ್ನದೆಯೇ ಪರೋಕ್ಷವಾಗಿ ಪ್ರಾಣಿಗಳ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

           ಇದು ಟೀಕೆಯಲ್ಲ, ವಿಮರ್ಶೆ…

 ದೇವರ ಸೃಷ್ಟಿಯ ಸಕಲ ಪ್ರಾಣಿಗಳನ್ನು ಒಂದೇ ರೀತಿಯಲ್ಲಿ ಪೂಜಿಸೋಣ…

✍️ M P ಸೀತಾರಾಮ ಭಂಡಾರಿ, ತುಳುನಾಡು

1 thought on “ಶರೀರದ ಮೇಲೆ ಸರ್ಪ ಸುತ್ತು ಗೋಚರಿಸಿದಾಗ ವೈದ್ಯೋಪಚಾರ – ನಂಬಿಕೆಗಳು -M P ಸೀತಾರಾಮ ಭಂಡಾರಿ

Leave a Reply

Your email address will not be published. Required fields are marked *