ಮೆಂತೆ ಕಾಳು ಸಾಂಬಾರು ಪದಾರ್ಥವಾದರೆ, ಮೆಂತೆ ಸೊಪ್ಪು ತರಕಾರಿ ಆಗಿ ಬಳಕೆಗೆ ಬರುತ್ತದೆ. ಇದು ಡಯಾಬಿಟಿಸ್ ರೋಗವನ್ನು ನಿವಾರಿಸುತ್ತದೆ. ಮೆಂತೆಯು ಬಾಯಿ ರುಚಿಗೆ ಕಹಿಯಾದರೂ ಆರೋಗ್ಯಕ್ಕೆ ಮಾತ್ರ ಸಿಹಿ. ಅಡುಗೆಯಲ್ಲಿ ಮೆಂತೆ ಒಳ್ಳೆಯ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ. ಮೆಂತೆ ದೇಹದಲ್ಲಿರುವ ಉಷ್ಣತೆ ಯನ್ನು ನಿವಾರಿಸಿ ತಂಪು ನೀಡುತ್ತದೆ. ಹಾಗೂ ಮೆದುಳಿಗೂ ತಂಪು ನೀಡುತ್ತದೆ. ಮೆಂತೆಯ ಸಹಜ ಗುಣಧರ್ಮ ಕಹಿಯಿಂದ ಶರೀರದ ವ್ಯಾಧಿ ಕ್ರಿಮಿಗಳನ್ನು ತಡೆಯುತ್ತದೆ. ಇದು ಎ ಮತ್ತು ಸಿ ಜೀವಸತ್ವ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಗಳಿಂದ ಕೂಡಿದೆ. ಮೆಂತೆಯಲ್ಲಿ ಪೌಷ್ಟಿಕಾಂಶ ಅಧಿಕವಾಗಿದ್ದು ಸೌಂದರ್ಯ ವರ್ಧಕವೂ ಹೌದು. ಶಕ್ತಿಯೂ ಹೆಚ್ಚಿಸುತ್ತದೆ. ಆಮಶಂಕೆ, ಮಧುಮೇಹ, ಅಜೀರ್ಣ ರೋಗ ಗುಣಪಡಿಸುತ್ತದೆ. ಇದರ ಉಪಯೋಗದಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಶೃಂಗಾರ ಕೇಶ ತೈಲ ಗಳಲ್ಲಿ ಮೆಂತೆಯನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಆಹಾರದಲ್ಲಿ ಹೆಚ್ಚು ಮೆಂತೆ ಸೊಪ್ಪು ಬಳಸುವುದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಹಿತಕರ. ರಕ್ತ ಶುದ್ಧಿ ಗೆ ಮೆಂತೆ ಒಳ್ಳೆಯ ಔಷಧಿ. ಮೆಂತೆಯ ಪುಡಿಯನ್ನು ಮೂಲಂಗಿ ರಸ , ಕಬ್ಬಿನ ರಸಗಳಲ್ಲಿ ಕಲಸಿ ಪ್ರತಿದಿನ 1ಲೋಟ ಸೇವಿಸಿದರೆ ಶರೀರಕ್ಕೆ ಕಾಂತಿಯನ್ನು ನೀಡುತ್ತದೆ. ಮೂತ್ರ ಸ್ವಚ್ಛ, ಮೂತ್ರಘಾತ ಮುಂತಾದ ಮೂತ್ರವ್ಯಾಧಿಗಳಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೆಂತೆಯ ಪುಡಿಯನ್ನು ಮೊಸರಿನಲ್ಲಿ ಹಾಕಿ ಕುಡಿಯುವುದರಿಂದ ಆಮಶಂಕೆ ಕಡಿಮೆಯಾಗುತ್ತದೆ. ಇನ್ನು ಎಳೆನೀರಿನಲ್ಲಿ ಮೆಂತೆ ಸೊಪ್ಪನ್ನು ಅರೆದು ತಲೆಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ. ಮೆಂತೆ ಸೊಪ್ಪನ್ನು ತುಪ್ಪದಲ್ಲಿ ಕುದಿಸಿ ಸೇವಿಸಿದರೆ ಪಿತ್ತ ಶಮನಕಾರಿ. ಮೊಸರು ಮತ್ತು ಮೆಂತೆ ಸೊಪ್ಪಿನ ರಸವನ್ನು ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಮೆಂತೆ ಸೊಪ್ಪಿನ ರಸ ನಿಂಬೆರಸ ಹಾಗೂ ಅರಿಶಿಣ ಪುಡಿ ಬೆರೆಸಿ ಮೊಡವೆ ಹಾಗೂ ಕಲೆ ಇರುವ ಜಾಗಕ್ಕೆ ಹಚ್ಚಿದರೆ ಅವು ನಿವಾರಣೆಯಾಗುತ್ತದೆ. ಎಳ್ಳೆಣ್ಣೆ ಗೆ ಮೆಂತೆ ಸೊಪ್ಪಿನ ರಸ ಬೆರೆಸಿ ಕೈ ಕಾಲುಗಳಿಗೆ ಹಚ್ಚಿದರೆ ಚಳಿಗಾಲದಲ್ಲಿ ಚರ್ಮ ಒಡೆಯುದಿಲ್ಲ. ಮೆಂತೆ ಸೊಪ್ಪು ಮತ್ತು ತೆಂಗಿನತುರಿಯನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ತಲೆ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆ ಮತ್ತು ಉದುರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಯುವಕ ಯುವತಿಯರಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಇದುವೇ ಅಂತ ಸ್ಪಷ್ಟವಾಗಿ ಹೇಳಲಾಗದಿದ್ದರೂ ಆಹಾರ ,ವಾತಾವರಣ, ಒತ್ತಡ ಮುಂತಾದವುಗಳಿಂದ ಕೂದಲು ಉದುರುವುದಂತೂ ನಿಜ. ಹಾಗಾಗಿ ಸರಿಯಾದ ಕಾರಣವನ್ನು ತಿಳಿದು ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ.
100ಗ್ರಾಂ ಸೊಪ್ಪಿನಲ್ಲಿ ಏನೇನಿದೆ?
ಪಿಷ್ಟ -10ಗ್ರಾಂ
ಸಸಾರಜನಕ -4.4ಗ್ರಾಂ
ಕೊಬ್ಬು-1ಗ್ರಾಂ
ರಂಜಕ-49ಮಿ. ಗ್ರಾಂ
ಕಬ್ಬಿಣ-17ಮಿ. ಗ್ರಾಂ
ಜಲಾಂಶ-80.1ಮಿ ಗ್ರಾಂ
ಖನಿಜ-1.5ಗ್ರಾಂ
ಸತ್ವ-4.55ಮಿ. ಗ್ರಾಂ
ಥಿಯಾಮಿನ್-0.04ಮಿ. ಗ್ರಾಂ
ಕಾರ್ಬೋಪ್ಲಾವಿನ್-0.31ಮಿ. ಗ್ರಾಂ
ಕಾರ್ಬೋಹೈಡ್ರೇಟ್-6ಗ್ರಾಂ
ನಿಯಾಸಿನ್-0.8ಮಿ.ಗ್ರಾಂ
ವಿಟಮಿನ್ ಎ,ಬಿ ಹಾಗೂ ಬಿ2 ಇದೆ.
-ಸುಪ್ರೀತ ಭಂಡಾರಿ ಸೂರಿಂಜೆ