January 18, 2025
Modalu Manavanagu 4
ನಾನು ನನ್ನ ನೋವನ್ನು ಯಾರಬಳಿ ಹೇಳಿಕೊಳ್ಳಲಿ ??? ಕಷ್ಟ ಬಂದರೆ ತಾಯಿ ಯಾರಬಳಿ ತಾನೇ ಹೇಳಿಕೊಳ್ಳುತ್ತಾಳೆ ಸಕಲ ಜೀವರಾಶಿಗಳಿಗೂ ತಾಯಿಯಾದ ನನ್ನದೂ ಅದೇ ಕಥೆಯಾಗಿದೆ .ಎಷ್ಟೇ ನೋವಿದ್ದರೂ ನನ್ನೊಳಗೆ ತುಂಬಿಕೊಂಡು ಮರುಗಬೇಕಾಗಿದೆ… ನನ್ನ ಬೇರೆ ಮಕ್ಕಳ ಚಿಂತೆ ನನಗೇನು ಅಷ್ಟಾಗಿ ಇಲ್ಲ, ಆದರೆ ಬುದ್ದಿವಂತರೆನಿಸಿಕೊಂಡ ನನ್ನ ಮಾನವ ಮಕ್ಕಳಮೇಲೆ ಕೋಪ, ದುಃಖ ಆದರೂ ಮಕ್ಕಳಮೆಲಿನ ಪ್ರೀತಿ ಕೆಲವೊಮ್ಮೆ ನನ್ನನ್ನು ಶಿಕ್ಷಿಸದಂತೆ ಮಾಡುತ್ತದೆ..  ನನ್ನನ್ನೇ ಅವರ ಆಸ್ತಿಯಂತೆ ಮಾರತೊಡಗಿದರು, ಅವರ ಹೆಂಡತಿಯಂತೆ ಆಳತೊಡಗಿದರು.. ಆದರೂ ಕೋಪವಾಗಲಿಲ್ಲ.. ಆಸೆಯು ಅತಿಯಾಸೆಯಾಗಿ ನನ್ನ ಗರ್ಭವನ್ನೇ ಬಗೆಯತೊಡಗಿದರು ಚಿಂತಿಸಲಿಲ್ಲ.. 
ಪ್ರಕೃತಿಯಾದ ನನಗೆ ಮರಗಿಡಗಳೇ ಸೊಬಗನ್ನು ತಂದುಕೊಡುತ್ತಿದ್ದವು, ಅವರುಗಳಿಗೆ ಬೇಕಾದ್ದನ್ನು ಒದಗಿಸಿಕೊಡುತ್ತಿದ್ದವು ಆದರೆ ಇವನು ಅದೆಲ್ಲವನ್ನು ಕಬಳಿಸುತ್ತಾ ಬಂದನು.. ಇಂದು ಮಳೆಯಿಲ್ಲದೆ ಜೀವಜಲಕ್ಕಾಗಿ ಪರಿತಪಿಸುತ್ತಿದ್ದಾನೆ… ಅವನ ತಪ್ಪಿನಿಂದಾಗಿ ಇಂದು ನಾನು ಉರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಹ್ಹ ಹ್ಹ ಹ್ಹಾ ಎಲ್ಲಿಯವರೆಗೆ ನೋಡಿ ಇವನ ಬುದ್ದಿ ತನ್ನ ತಪ್ಪಿಗೆ ಪರಿತಪಿಸದೆ ತನ್ನಷ್ಟಕ್ಕೆ ತಾನು ಸ್ವಾಭಾವಿಕವಾಗಿ ಉರಿದು ಇವನಿಗೆ ಬೆಳಕನ್ನು ನೀಡುವ ಸೂರ್ಯನಮೇಲೆ ದಾವೆಯನ್ನು ಹೂಡುತ್ತಾನೆ.. ಬುದ್ದಿವಂತನಾದ ಇವನು ಬುದ್ದಿ ಬೆಳಸಿ ಮರಗಿಡಗಳನ್ನು ನನ್ನೊಳಗೆ ಬೆಳೆಯಲು ಬಿಟ್ಟಿದ್ದರೆ ಬರುತಿತ್ತಾ ಇಂತಹ ಪರಿಸ್ಥಿತಿ..  ?? 
ಇವನಿಗೆ ಕಾಡಿನಲ್ಲಿ ಬದುಕಲು ಇಷ್ಟವಿಲ್ಲ ಎಂದಾದರೆ ಅವನಿಗೆ ನಾಡನ್ನಾಗಿ ಮಾಡಿಕೊಳ್ಳಲಿ ಆದರೆ ಅದಕ್ಕೊಂದು ಮಿತಿಯಿರಬೇಕಲ್ಲವೇ ಇಡೀ ಭುವಿಯನ್ನೇ ಬೋಳಿಸಲು ಹೊರಟಿದ್ದಾನೆ ಹಾಗಾದರೆ ನನ್ನ ಇನ್ನುಳಿದ ಮಕ್ಕಳೆಲ್ಲಾ ಎಲ್ಲಿಗೆ ಹೋಗಬೇಕು ??? ಅವರುಗಳು ವಾಸಸ್ಥಳವಿಲ್ಲದೆ ಬಂದರೆ ಬಡಿದು ಸಾಯಿಸುತ್ತಿದ್ದಾನೆ… ಏನು ನಾನೇನು ಅವನ ಸ್ವತ್ತೆ ?? ತಂದೆ ತಾಯಿಯ ಆಸ್ತಿಯಲ್ಲಿ ಸಮಾನ ಪಾಲೆಂಬ ಕಾನೂನು ಬೇರೆ, ಆದರೆ ಇಲ್ಲೆಲ್ಲಿ ಅದರ ಪ್ರಸ್ತಾಪ ? ನನ್ನೆಲ್ಲ ಮಕ್ಕಳಿಗೆ ಕೊಡಲೇ ಇಲ್ಲವಲ್ಲ.. ಅಮೃತವನ್ನಿತ್ತ ನನಗೆ ಕಾರ್ಖಾನೆಗಳ ವಿಷವನ್ನು ಉಣ್ಣಿಸಿದ ಜೀರ್ಣಿಸಲಾಗದ ಪ್ಲಾಸ್ಟಿಕ್ ತಿನ್ನಿಸಿದ.. ತಾಯಿಗೆ ಕಷ್ಟ ನೀಡಿದರೆ ಬಿಡಬೇಕಲ್ಲ ಪಾಪ ನೋಡಿ ಹೇಗೆ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾನೆ ದಿನೇ ದಿನೇ ಹೆಚ್ಚುತ್ತಿದೆಯೆ ಹೊರತು ಕಡಿಮೆಯೇನು ಕಾಣಿಸುತ್ತಿಲ್ಲ…
ಚಿಂತೆ ಅದಲ್ಲ ಇವನ ಆಸೆ ಹೀಗೆ ಮಿತಿಮೀರುತ್ತಾ ಹೋದರೆ ನಾನುಟ್ಟ ಹಸಿರು ಸೀರೆಯ ಬಿಚ್ಚುತ್ತಾ ಹೋಗುತ್ತಾನೆ ಜಗತ್ತಿನ ಮುಂದೆ ನನ್ನ ಬೆತ್ತಲಾಗಿಸುತ್ತಾನೆ… ಸುಂದರ ಹಸಿರ ಹೊದಿಕೆಯಡಿ ಬೆಚ್ಚಗೆ ಇರುವ ನನ್ನೆಲ್ಲಾ ಉಳಿದ ಮಕ್ಕಳನ್ನು ಅಳಿಸುತ್ತಾನೆ… ಕೊನೆಗೆ ಇವನು ಆಹಾರವಿಲ್ಲದೆ ಕುಡಿಯಲು ನೀರಿಲ್ಲದೆ ಬಿಸಿಲ ಬೇಗೆಯಲ್ಲಿ ಎದೆಬಡಿದು ಸಾಯುತ್ತಿರುತ್ತಾನೆ ಅಯ್ಯೋ ಇಡಿಯ ಜಗತ್ತು ನನ್ನ  ಈ ಸ್ಥಿತಿಯ ನೋಡಿ ಮಕ್ಕಳನ್ನು ತಿಂದ ಮಹಾಪಾಪಿ ಎಂದು ಅಪಹಾಸ್ಯ ಮಾಡುತ್ತದೆ, ಒಬ್ಬ ತಾಯಿಗೆ ಇದಕ್ಕಿಂತಾ ದೊಡ್ಡ ಅಪವಾದ ಬೇಕೇ ?? ಇದರಿಂದ  ನೊಂದ ನನ್ನ ಒಡಲು ಬೆಂದು ಒಡೆದು ನುಚ್ಚು ನೂರಾಗಿ ಹೋಗುತ್ತದೆ ಈ ತಾಯಿಯ ಅಂತ್ಯವಾಗುತ್ತದೆ … ಓ ಮುದ್ದು ಮನುಷ್ಯ  ಏನಾದರೂ ಸರಿಯೇ ನೀ ಮೊದಲು ಮಾನವನಾಗು  …..
advt.
-ವಿಜಯ್ ಭಂಡಾರಿ ನಿಟ್ಟೂರು , ಹೊಸನಗರ

4 thoughts on “ಮೊದಲು ಮಾನವನಾಗು…..-ವಿಜಯ್ ಭಂಡಾರಿ ನಿಟ್ಟೂರು , ಹೊಸನಗರ

  1. Really impressive wordings and truth of the world we should change for our mother … Nice article Vijay

  2. -ವಿಜಯ್ ಭಂಡಾರಿ ನಿಟ್ಟೂರು , ಹೊಸನಗರ.

    You are loud and clear. Thank you so much, keep going. We need thoughts similar and its need of the hour.

Leave a Reply

Your email address will not be published. Required fields are marked *