September 20, 2024

ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ಆರೋಗ್ಯ ಸುರಕ್ಷೆ ನೀಡುವ ಮೊತ್ತ ಮೊದಲ ಯೋಜನೆ: 10 ಕೋಟಿಗೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ; RSBY ಮತ್ತು SCHIS ಯೋಜನೆಗಳು ಆಯುಷ್ಮಾನ್ ಭಾರತ್ – NHPM ಯೋಜನೆಯಲ್ಲಿ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್ ಭಾರತಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 10 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿರುವ ಈ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬ ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ಪಡೆಯಲಿದೆ.

ಆಯುಷ್ಮಾನ್ ಭಾರತ್ : ಈ ಯೋಜನೆಯು ದೇಶಾದ್ಯಂತ ಅನ್ವಯವಾಗಲಿದ್ದು ಯಾವುದೇ ಸಾರ್ವಜನಿಕ / ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕ್ಯಾಬಿನೆಟ್ ಕೇಂದ್ರ ಪ್ರಾಯೋಜಿತ ಆಯುಷ್ಮಾನ್ ಭಾರತ್ -ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಕೌನ್ಸಿಲ್ ಅನ್ನು ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ಸ್ಥಾಪಿಸಲು ಅನುಮೋದಿಸಿದೆ. ಈ ಯೋಜನೆಯಿಂದ ದೇಶದಲ್ಲಿರುವ ಬಡ ವರ್ಗಕ್ಕೆ ಸೇರಿದ 10 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಈ ಯೋಜನೆ ಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ಕೂಡಾ ವಿಲೀನಗೊಳಿಸಲಾಗುತ್ತದೆ.

ಪ್ರಮುಖ ಅಂಶಗಳು:

AB-NHPM ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ನೀಡಲಿದೆ 
ಇದರಡಿ ಬಹುತೇಕ ಎಲ್ಲ ವಿಧವಾದ ದ್ವಿತೀಯ ಆರೋಗ್ಯ ಚಿಕಿತ್ಸೆ ಮತ್ತು ಎಲ್ಲ ತೃತೀಯ ಆರೋಗ್ಯ ಸುರಕ್ಷಾ ಚಿಕಿತ್ಸೆಗಳನ್ನು ನೀಡಲಾಗುವುದು. ಈ ಯೋಜನೆಯಿಂದ ಯಾರೊಬ್ಬರು (ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು) ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ, ಈ ಯೋಜನೆಯಡಿ ಆಸ್ಪತ್ರೆ ಸೇರುವ ಮುನ್ನ ಮತ್ತು ಆನಂತರ ವೆಚ್ಚಗಳನ್ನೂ ಸಹ ಭರಿಸಲಾಗುವುದು. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಬಹುದಾಗಿದೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯನ್ನೂ ಸಹ ನೀಡಲಾಗುವುದು.

ಈ ಯೋಜನೆಯನ್ವಯ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿರುವ ನಿಯೋಜಿತ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆಯನ್ನು ಪಡೆಯಬಹುದು. ಇದನ್ನ SECC ಯ ಮಾಹಿತಿ ಆಧರಿಸಿದ ಅರ್ಹತೆಯ ಮಾನದಂಡದ ಆಧಾರದ ಮೇಲೆ ಕುಟುಂಬಗಳಿಗೆ ನೀಡಲು ನಿರ್ಧರಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕಚ್ಚಾ ಗೋಡೆ, ಛಾವಣಿ ಹೊಂದಿರುವ ಒಂದೇ ಕೋಣೆಯಲ್ಲಿ ವಾಸಿಸುವವರು, 16 ರಿಂದ 59 ವರ್ಷದೊಳಗಿನ ವಯಸ್ಕ ಸದಸ್ಯರನ್ನು ಹೊಂದಿರದ ಕುಟುಂಬಗಳು,  16 ರಿಂದ 59 ವರ್ಷದೊಳಗಿನ ಯಾವುದೇ ವಯಸ್ಕ ಗಂಡು ಸದಸ್ಯರಿಲ್ಲದೆ ಹೆಣ್ಣು ಮಕ್ಕಳೇ ಇರುವ ಕುಟುಂಬಗಳು, ವಿಕಲಾಂಗ ಸದಸ್ಯರಿರುವ ಕುಟುಂಬಗಳು, ಎಸ್ಸಿ / ಎಸ್ಟಿ ಕುಟುಂಬಗಳು,  ಭೂಮಿ ರಹಿತ ಕುಟುಂಬಗಳು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ನಿರಾಶ್ರಿತ ಕುಟುಂಬಗಳು, ನಿರ್ಗತಿಕರು, ಭಿಕ್ಷುಕರು, ಪ್ರಾಚೀನ ಬುಡಕಟ್ಟು ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ 11 ಯೋಜಿತ ಔದ್ಯೋಗಿಕ ವರ್ಗಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸ್ವಯಂಚಾಲಿತವಾಗಿ ನಿಯೋಜನೆ ಮಾಡಲಾಗಿರುತ್ತದೆ

ರಾಜ್ಯಗಳಲ್ಲಿ AB-NHPM ಜಾರಿಗೊಳಿಸುತ್ತಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಈ ಯೋಜನೆಯಡಿ ಮಾನ್ಯತೆ ಪಡೆದಿರುತ್ತವೆ. ನೌಕರರ ರಾಜ್ಯ ವಿಮಾ ನಿಗಮ (ESIC) ಗೆ ಸೇರಿದ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಲಭ್ಯತೆ ಆಧಾರದ ಮೇಲೆ ಚಿಕಿತ್ಸೆ ಪಡೆಯಬಹುದು. ನಿಗದಿತ ಮಾನದಂಡವನ್ನು ಆಧರಿಸಿ, ಖಾಸಗಿ ಆಸ್ಪತ್ರೆಗಳೂ ಕೂಡ ಆನ್ ಲೈನ್ ಮೂಲಕ ಇದರಡಿ ನೋಂದಣಿ ಮಾಡಿಕೊಳ್ಳಬಹುದು.

 

ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಚಿಕಿತ್ಸೆಗಳಿಗೆ ಪ್ಯಾಕೇಜ್ ದರ ಆಧರಿಸಿ (ಸರ್ಕಾರ ಮುಂಚಿತವಾಗಿಯೇ ಅದನ್ನು ನಿಗದಿಪಡಿಸಲಿದೆ) ಪಾವತಿ ಮಾಡಲಿದೆ.  ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ವೆಚ್ಚವೂ ಈ ಪ್ಯಾಕೇಜ್ ದರಗಳಲ್ಲಿ ಸೇರಿರುತ್ತದೆ. ಫಲಾನುಭವಿಗಳಿಗೆ ಅದು ನಗದುರಹಿತ ಮತ್ತು ಕಾಗದರಹಿತ ಸೇವೆಯಾಗಿದೆ. ರಾಜ್ಯಗಳ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಅನುಕೂಲಕ್ಕೆ ತಕ್ಕಂತೆ ಸೀಮಿತವಾಗಿ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ಅವಕಾಶವಿದೆ.

AB- NHPM ಯ ಒಂದು ಪ್ರಮುಖ ತತ್ವವೆಂದರೆ ಅದು ಸಹಕಾರ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಸರಳತೆ ಇದರಲ್ಲಿ ರಾಜ್ಯಗಳೂ ಕೂಡ ಸಹ ಒಪ್ಪಂದ ಮಾಡಿಕೊಂಡು ಪಾಲುದಾರಿಕೆ ಸಾಧಿಸಲು ಅವಕಾಶವಿದೆ. ಇದರಿಂದಾಗಿ ಈಗಾಗಲೇ ಜಾರಿಯಲ್ಲಿರುವ ಆರೋಗ್ಯ ವಿಮಾ ಯೋಜನೆಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೊಳಿಸಿರುವ ಆರೋಗ್ಯ ರಕ್ಷಣಾ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ( ಸ್ವಂತ ವೆಚ್ಚ ಭರಿಸುತ್ತಿರುವ), ಈ AB- NHPMಯಡಿ ವಿಸ್ತರಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ ಮತ್ತು ಇದರ ಅನುಷ್ಠಾನದ ಮಾರ್ಗಸೂಚಿಗಳನ್ನು ಆಯ್ಕೆ ಮಾಡಿಕೊಳ್ಳಲೂ ಸಹ ರಾಜ್ಯಗಳಿಗೆ ಮುಕ್ತ ಅವಕಾಶವಿದೆ. ಅವುಗಳು ವಿಮಾ ಕಂಪನಿ ಅಥವಾ ನೇರವಾಗಿ ಅಥವಾ ಟ್ರಸ್ಟ್/ಸೊಸೈಟಿ ಇಲ್ಲವೇ ಎಲ್ಲವನ್ನೂ ಸೇರಿಸಿ ಅನುಷ್ಠಾನಗೊಳಿಸಬಹುದು.

 

ಕೇಂದ್ರ ಮತ್ತು ರಾಜ್ಯಗಳ ನಡುವೆ ನೀತಿ ನಿರ್ದೇಶನ ನೀಡಲು ಮತ್ತು ಸಮನ್ವಯವನ್ನು ಸಾಧಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದಲ್ಲಿ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಮಂಡಳಿ (AB-NHPMC) ರಚಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನಾ ನಿರ್ವಹಣ ಮಂಡಳಿ (AB-NHPMGB) ರಚಿಸಲಾಗುವುದು. ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದರ್ಶಿ ಮತ್ತು ನೀತಿ ಆಯೋಗದ ಸದಸ್ಯರು(ಆರೋಗ್ಯ) ಇವರು ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಲಾಯದ ಹಣಕಾಸು ಸಲಹೆಗಾರರು ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಯೋಜನಾ ನಿರ್ದೇಶಕರು ಮತ್ತು ಹೆಚ್ಚುವರಿ ಕಾರ್ಯದರ್ಶಿ (AB- NHPM) ಮತ್ತು ಜಂಟಿ ಕಾರ್ಯದರ್ಶಿ (AB-NHPM) ಅವರು ಸದಸ್ಯರಾಗಿರುತ್ತಾರೆ. ಆಯುಷ್ಮಾನ್ ಭಾರತ -ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಅಗತ್ಯಕ್ಕೆ ತಕ್ಕಂತೆ ರಾಜ್ಯಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಇದರ ಸದಸ್ಯರಾಗಿರುತ್ತಾರೆ.

ಇದಲ್ಲದೆ ಒಟ್ಟಾರೆ ಕಾರ್ಯಚಟುವಟಿಕೆಯನ್ನ ನೋಡಿಕೊಳ್ಳಲು ಆಯುಷ್ಮಾನ್ ಭಾರತ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (AB-NHPM) ಏಜೆನ್ಸಿಯನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ. ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಮಟ್ಟದ ಪೂರ್ಣ ಪ್ರಮಾಣದ ಸಿಇಒ ಈ ಏಜೆನ್ಸಿಯ ಮುಖ್ಯಸ್ಥರಾಗಿರುತ್ತಾರೆ.

ಈ ಯೋಜನೆಯನ್ನು ಜಾರಿಗೊಳಿಸಲು ರಾಜ್ಯಗಳು ರಾಜ್ಯ ಆರೋಗ್ಯ ಏಜೆನ್ಸಿ (SHA) ಗಳನ್ನು ಹೊಂದಬೇಕಾಗುತ್ತದೆ. ಅವುಗಳಿಗೆ ಹಾಲಿ ಇರುವ ಟ್ರಸ್ಟ್ /ಸೊಸೈಟಿ /ಲಾಭದ ಉದ್ದೇಶವಿಲ್ಲದ /ರಾಜ್ಯದ ನೋಡೆಲ್ ಏಜೆನ್ಸಿ ಅಥವಾ ಹೊಸದಾಗಿ ಟ್ರಸ್ಟ್ ರಚನೆ /ಸೊಸೈಟಿ ಅಥವಾ ಲಾಭದ ಉದ್ದೇಶವಿಲ್ಲದ ಕಂಪನಿ ಅಥವಾ ರಾಜ್ಯ ಆರೋಗ್ಯ ಏಜೆನ್ಸಿ ರಚನೆ ಮಾಡಬಹುದು. ಜಿಲ್ಲಾಮಟ್ಟದಲ್ಲೂ ಸಹ ಯೋಜನೆ ಜಾರಿಗೆ ಒಂದು ವ್ಯವಸ್ಥೆಯನ್ನು ಸ್ಥಾಪಿಸಬೇಕಾಗುತ್ತದೆ.

ಸಕಾಲದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳ ಆರೋಗ್ಯ ಏಜೆನ್ಸಿಗಳಿಗೆ AB-NHPMA ಯೋಜನೆಯಡಿ ಸಕಾಲದಲ್ಲಿ ಹಣ ವರ್ಗಾವಣೆಯನ್ನು ನೇರವಾಗಿ ಮಾಡಲು ಎಸ್ಕ್ರೂ ಪದ್ಧತಿ ಅನುಸರಿಸಲಾಗುವುದು. ಕಾಲಕಾಲಕ್ಕೆ ರಾಜ್ಯಗಳು ತಮ್ಮ ಪಾಲಿನ ಅನುದಾನದ ಪ್ರಮಾಣವನ್ನು ನೀಡಬೇಕು.

ನೀತಿ ಆಯೋಗದ ಸಹಭಾಗಿತ್ವದಲ್ಲಿ ಅತ್ಯುತ್ತಮ ಮಾದರಿಯಾದ ಮಾಹಿತಿ ತಂತ್ರಜ್ಞಾನ ವೇದಿಕೆಯನ್ನು ಕಾರ್ಯಾಚರಣೆ ಮಾಡಲಾಗುವುದು. ಇದು ಕಾಗದರಹಿತ ಮತ್ತು ನಗದುರಹಿತವಾಗಿರುತ್ತದೆ. ಇದು ಯಾವುದೇ ರೀತಿಯ ಸಂಭಾವ್ಯ ಹಣ ದುರ್ಬಳಕೆ, ವಂಚನೆಗೆ ಅವಕಾಶವಿಲ್ಲದೆ ನಿಯಂತ್ರಣವನ್ನು ಹೊಂದಿರುತ್ತದೆ. ಇದರಡಿ ದೂರು ಇತ್ಯರ್ಥ ಕಾರ್ಯತಂತ್ರ ವ್ಯವಸ್ಥೆಯೂ ಇರಲಿದೆ. ಇದಲ್ಲದೆ ಸಂಭಾವ್ಯ ದುರ್ಬಳಕೆಯನ್ನು ತಡೆಯಲು ಹಲವು ಚಿಕಿತ್ಸೆಗಳಿಗೆ ಮೊದಲೇ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ನಿಗದಿತ ಫಲಾನುಭವಿಗಳಿಗೆ ಮತ್ತು ತಲುಪಬೇಕಾದವರಿಗೆ ಯೋಜನೆಯನ್ನು ತಲುಪಿಸಲು ಸಂಬಂಧಿಸಿದವರ ಜೊತೆ ಸೇರಿ ಸಮಗ್ರ ಮಾಧ್ಯಮ ಮತ್ತು ಜನರನ್ನು ತಲುಪುವ ಕಾರ್ಯತಂತ್ರವನ್ನು ಅಭಿವೃದ್ಧಿಗೊಳಿಸಲಾಗುವುದು. ಇದರಲ್ಲಿ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸಾಂಪ್ರದಾಯಿಕ ಮಾಧ್ಯಮಗಳು, ಐಇಸಿ ಮತ್ತು ಹೊರಾಂಗಣ ಚಟುವಟಿಕೆಗಳು ಹಾಗೂ ಮತ್ತಿತರವುಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುವುದು.

ಜಾರಿ ವಿಧಾನ :

ರಾಷ್ಟ್ರಮಟ್ಟದಲ್ಲಿ ಆಯುಷ್ಮಾನ್ ಭಾರತ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಏಜೆನ್ಸಿ (AB-NHPMA) ಕಾರ್ಯನಿರ್ವಹಿಸಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಗದಿತ ರಾಜ್ಯ ಆರೋಗ್ಯ ಏಜೆನ್ಸಿ (SHA)ಗಳ ಮೂಲಕ ಯೋಜನೆ ಜಾರಿಗೊಳಿಸಲು ಸೂಚಿಸಲಾಗುವುದು. ಅವು ಹಾಲಿ ಇರುವ ಟ್ರಸ್ಟ್ /ಸೊಸೈಟಿ /ಲಾಭದ ಉದ್ದೇಶವಿಲ್ಲದ ಕಂಪನಿ /ರಾಜ್ಯದ ನೋಡೆಲ್ ಏಜೆನ್ಸಿಗಳು ಅಥವಾ ಹೊಸ ಪ್ರತ್ಯೇಕ ಸಂಸ್ಥೆಯನ್ನು ಹುಟ್ಟುಹಾಕಿ ಯೋಜನೆಯನ್ನು ಜಾರಿಗೊಳಿಸಬಹುದು, ಇಲ್ಲವೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿಮಾ ಕಂಪನಿ ಅಥವಾ ನೇರವಾಗಿ, ಟ್ರಸ್ಟ್ ಅಥವಾ ಸೊಸೈಟಿ ಅಥವಾ ಏಕೀಕೃತ ಮಾದರಿಯನ್ನು ಬಳಕೆ ಮಾಡಬಹುದು.

ಪ್ರಮುಖ ಪರಿಣಾಮ:

ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶದ ಆಸ್ಪತ್ರೆಗಳಲ್ಲಿನ ಒಳರೋಗಿಗಳ ಚಿಕಿತ್ಸಾ ವೆಚ್ಚ ಶೇ.300ರಷ್ಟು ಹೆಚ್ಚಾಗಿದೆ.(NSSO-2015) ಶೇ.80ಕ್ಕೂ ಅಧಿಕ ವೆಚ್ಚವನ್ನು ಜೇಬಿನಿಂದ ಖರ್ಚು ಮಾಡಲಾಗುತ್ತಿದೆ, ಗ್ರಾಮೀಣ ಕುಟುಂಬಗಳು ಪ್ರಮುಖವಾಗಿ ಆಸ್ಪತ್ರೆ ವೆಚ್ಚಕ್ಕೆ ಕೌಟುಂಬಿಕ ಆದಾಯ ಮತ್ತು ಉಳಿತಾಯದಿಂದ ಶೇ.68ರಷ್ಟು ಮತ್ತು ಸಾಲದಿಂದ ಶೇ.25ರಷ್ಟು ಅವಲಂಬಿತರಾಗಿದ್ದಾರೆ. ನಗರ ಪ್ರದೇಶಗಳ ಜನತೆ ಚಿಕಿತ್ಸಾ ವೆಚ್ಚಕ್ಕೆ ಆದಾಯ ಮತ್ತು ಉಳಿತಾಯದ ಮೇಲೆ ಶೇ.75ರಷ್ಟು ಅವಲಂಬಿತವಾಗಿದ್ದು, ಶೇ.18ರಷ್ಟು ಸಾಲವನ್ನು ಅವಲಂಬಿಸಿರುತ್ತಾರೆ(NSSO-2015). ಜೇಬಿನಿಂದ ಖರ್ಚು ಮಾಡುವುದು ಭಾರತದಲ್ಲಿ ಶೇ.60ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ಸುಮಾರು 6 ಮಿಲಿಯನ್ ಕುಟುಂಬಗಳು ಬಡತನಕ್ಕೆ ದೂಡಲ್ಪಡುತ್ತಿವೆ. ಅವರು ಆರೋಗ್ಯಕ್ಕಾಗಿ ಅಧಿಕ ಹಣ ಖರ್ಚು ಮಾಡುತ್ತಿದ್ದಾರೆ. AB- NHPM ಯೋಜನೆ ಅತ್ಯಂತ ಪ್ರಮುಖ ಪರಿಣಾಮ ಬೀರಲಿದ್ದು, ಇದು ಜೇಬಿನಿಂದ ಖರ್ಚುಮಾಡುವ ವೆಚ್ಚವನ್ನು ತಗ್ಗಿಸಲಿದೆ. ಅದು ಹೇಗೆಂದರೆ

1. ಆರೋಗ್ಯ ರಕ್ಷಣಾ ವ್ಯಾಪ್ತಿ ಶೇ.40ರಷ್ಟು ಜನಸಂಖ್ಯೆಗೆ ಸಿಗಲಿದೆ (ಬಡವರು ಮತ್ತು ದುರ್ಬಲ ವರ್ಗದವರು)

2. ದ್ವಿತೀಯ ಹಾಗೂ ತೃತೀಯ ಹಂತದ ಎಲ್ಲ ಬಗೆಯ ಕಾಯಿಲೆಗಳು ಇದರ ವ್ಯಾಪ್ತಿಗೆ ಬರುತ್ತವೆ (ನಕಾರಾತ್ಮಕ ಪಟ್ಟಿಯಲ್ಲಿರುವುದನ್ನು ಹೊರತುಪಡಿಸಿ)

3. ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಚಿಕಿತ್ಸೆ (ಕುಟುಂಬದ ಗಾತ್ರಕ್ಕೆ ಯಾವುದೇ ಮಿತಿ ಇಲ್ಲ).

ಇದರಿಂದಾಗಿ ಆರೋಗ್ಯ ರಕ್ಷಣಾ ಸೌಕರ್ಯಗಳು ಮತ್ತು ವೈದ್ಯಕೀಯ ಆರೈಕೆ ಹೆಚ್ಚಾಗಲಿದೆ. ಅಲ್ಲದೆ ಜನರು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಪಡೆಯಲಾಗದ ಕೆಲವು ಅಗತ್ಯತೆಗಳನ್ನು ಇದು ಪೂರೈಸಲಿದೆ. ಇದರಿಂದಾಗಿ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತದೆ, ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ, ರೋಗಿಗಳು ತೃಪ್ತರಾಗುತ್ತಾರೆ, ಉತ್ಪಾದನೆ ಹೆಚ್ಚಳವಾಗುತ್ತದೆ. ಉದ್ಯೋಗ ಸೃಷ್ಟಿಗಳು ಹೆಚ್ಚಾಗಲಿದ್ದು, ಇದರಿಂದ ಜೀವನಮಟ್ಟವೂ ಸುಧಾರಣೆಯಾಗಲಿದೆ.

ಒಳಗೊಂಡಿರುವ ವೆಚ್ಚ :

ಪ್ರೀಮಿಯಂ ಪಾವತಿಯ ವೆಚ್ಚ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ನಡುವೆ ಹಂಚಿಕೆಯಾಗಲಿದೆ. ಹಣಕಾಸು ಸಚಿವಾಲಯದ ಮಾರ್ಗಸೂಚಿ ಅನ್ವಯ ಹಂಚಿಕೆ ಪ್ರಮಾಣ ನಿಗದಿಯಾಗಲಿದೆ. ಒಟ್ಟಾರೆ ವೆಚ್ಚ AB-NHPM ಯೋಜನೆ ಅನುಷ್ಠಾನಗೊಳಿಸಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಮಾ ಕಂಪನಿಗಳಿಗೆ ಪಾವತಿಸುವ ವೆಚ್ಚದ ಒಟ್ಟಾರೆ ಮಾರುಕಟ್ಟೆ ದರ ಆಧರಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟ್ರಸ್ಟ್ ಅಥವಾ ಸೊಸೈಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಕೇಂದ್ರ ಸರ್ಕಾರ ಪೂರ್ವ ನಿಗದಿತ ಅನುಪಾತಕ್ಕೆ ಅನುಗುಣವಾಗಿ ಒಟ್ಟಾರೆ ವೆಚ್ಚದ ಪ್ರೀಮಿಯಂ (ಯಾವುದು ಕಡಿಮೆಯೋ ಅದು) ಭರಿಸಲಿದೆ.

ಫಲಾನುಭವಿಗಳ ಸಂಖ್ಯೆ:

AB-NHPM ಯೋಜನೆಯಡಿ 10.74 ಕೋಟಿ ಬಡ ಹಾಗೂ ದುರ್ಬಲವರ್ಗದ ಗ್ರಾಮೀಣ ಕುಟುಂಬಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಂತೆ ಇತ್ತೀಚಿನ ಸಾಮಾಜಿಕ ಆರ್ಥಿಕ ಜಾತಿಗಣತಿ (ಎಸ್‍ಇಸಿಸಿ) ಆಧರಿಸಿ ನಗರ ಪ್ರದೇಶಗಳ ನೌಕರರ ಕುಟುಂಬಗಳಿಗೆ ಕೆಲವೊಂದು ವೃತ್ತಿಗಳನ್ನು ಗುರುತಿಸಲಾಗುವುದು. ಯೋಜನೆಯನ್ನು ಅತ್ಯಂತ ಕ್ರಿಯಾಶೀಲವಾಗಿ ಮತ್ತು ಆಶಾದಾಯಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದು SECC ಅಂಕಿ-ಅಂಶಗಳಲ್ಲಿ ಭವಿಷ್ಯದಲ್ಲಿ ಆಗುವ ಸೇರ್ಪಡೆ, ಬೇರ್ಪಡೆ ಮತ್ತು ಮತ್ತಿತರ ಬದಲಾವಣೆಗಳನ್ನು ಪರಿಗಣಿಸಲಾಗುವುದು.

ರಾಜ್ಯಗಳು/ಜಿಲ್ಲೆಗಳ ವ್ಯಾಪ್ತಿ

AB-NHPM ಯೋಜನೆ ನಿಗದಿತ ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

Ayushman Bharat Yojana (National Health Protection Scheme)

ಹಿನ್ನೆಲೆ:

ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯ 2008ರಲ್ಲಿ ಆರ್ ಎಸ್ ಬಿ ವೈ ಯೋಜನೆಯನ್ನು ಆರಂಭಿಸಿತು. ಇದರಡಿ ಅಸಂಘಟಿತ ವಲಯದ 11 ನಿಗದಿತ ವರ್ಗಗಳಡಿ ದುಡಿಯುವ ಮತ್ತು ಬಡತನರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ (ಐವರು ಸದಸ್ಯರ) ವಾರ್ಷಿಕ 30 ಸಾವಿರ ರೂ.ವರೆಗೆ ನಗದುರಹಿತ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಈ ಆರ್ ಎಸ್ ಬಿ ವೈ ಯೋಜನೆಯನ್ನು ಆರೋಗ್ಯ ಸೇವೆಗಳ ಜತೆ ಸೇರಿಸಲು ಮತ್ತು ಭಾರತ ಸರ್ಕಾರದ ಆರೋಗ್ಯ ರಕ್ಷಣಾ ವ್ಯವಸ್ಥೆಯಡಿ ತರಲು ಆರ್ ಎಸ್ ಬಿ ವೈಯನ್ನು 2015ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರ್ಗಾಯಿಸಲಾಯಿತು.

2016-17ನೇ ಸಾಲಿನಲ್ಲಿ ದೇಶದ 278 ಜಿಲ್ಲೆಗಳಲ್ಲಿ ಆರ್ ಎಸ್ ಬಿ ವೈ ಯೋಜನೆ 3.63 ಕೋಟಿ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ. ಅವರು ಮಾನ್ಯತೆ ಪಡೆದ 8,697 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವು ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಆರೋಗ್ಯ ವಿಮಾ/ರಕ್ಷಣಾ ಯೋಜನೆಗಳನ್ನು ನಿಗದಿತ ಫಲಾನುಭವಿಗಳಿಗೆ ಆರಂಭಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಜಾರಿಗೆ ಬಂದಿತು. ಈ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಇನ್ನಷ್ಟು ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಲು ಈ ಎಲ್ಲ ಯೋಜನೆಗಳನ್ನು ಸೇರಿಸಿ ಹೊಸ ಯೋಜನೆ ರೂಪಿಸಲಾಗಿದೆ.

 

ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಯಂದು ಅಯುಷ್ಮಾನ್ ಭಾರತ್ ಯೋಜನೆ ಅಧಿಕೃತ ಘೋಷಣೆಯಾಗಲಿದೆ.

 

Translation : Shruthi Bhandary 

Source: NaMo App

2 thoughts on “ಆಯುಷ್ಮಾನ್ ಭಾರತ್ – ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

Leave a Reply

Your email address will not be published. Required fields are marked *