
ಭಂಡಾರಿ ಸಮಾಜ ಸಂಘ ಶಿರಾಳಕೊಪ್ಪ ಮತ್ತು ಸೊರಬ ವಲಯದ ಮಾಸಿಕ ಸಭೆ ಶಿರಾಳಕೊಪ್ಪದ ರತ್ನಾಕರ ಭಂಡಾರಿಯವರ ಪುಷ್ಪಕ್ ಆರ್ಟ್ಸ್ ಸ್ಟುಡಿಯೋದಲ್ಲಿ ಜನವರಿ 1, 2018 ರ ಮಂಗಳವಾರ ಸಂಜೆ 7 ಗಂಟೆಗೆ ಏರ್ಪಡಿಸಲಾಗಿತ್ತು.
ಶಿರಾಳಕೊಪ್ಪ ಮತ್ತು ಸೊರಬ ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು.ಶ್ರೀ ರಮೇಶ್ ಭಂಡಾರಿಯವರು ಸ್ವಾಗತಿಸಿದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜ ಶಿರಾಳಕೊಪ್ಪದ ಗೌರವಾಧ್ಯಕ್ಷರಾದ ಶ್ರೀಯುತ ಜೋಗು ಭಂಡಾರಿಯವರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ವಾಸಂತಿ ಜೋಗು ಭಂಡಾರಿಯವರು ಉಪಸ್ಥಿತರಿದ್ದರು.
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಶಿರಾಳಕೊಪ್ಪದ ಶ್ರೀ ಸುಧಾಕರ ಭಂಡಾರಿಯವರನ್ನು ಅಭಿನಂದಿಸಲಾಯಿತು.ಅವರು ಮಾತನಾಡುತ್ತಾ “ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಸಿಕ ಸಭೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ, ಅವರ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನ್ನನ್ನು ಗುರುತಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಪ್ರತಿಯೊಬ್ಬರನ್ನೂ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ.ಸಮಾಜಕ್ಕೆ ಈ ಮೂಲಕ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಅವಕಾಶ ಮಾಡಿಕೊಟ್ಟ ಭಂಡಾರಿ ಸಮಾಜದ ನಂಬಿಕೆಯನ್ನು ಉಳಿಸಿಕೊಂಡು ಅದರಂತೆ ನಡೆಯುತ್ತೇನೆ. ಮಾಧವ ಭಂಡಾರಿಯವರು ಭಂಡಾರಿ ಸಮಾಜದ ಬೆಂಗಳೂರು ವಲಯದ ಅಧ್ಯಕ್ಷರಾಗಿರುವುದು ನಮಗೆಲ್ಲಾ ಸಂತಸ ನೀಡಿದೆ.ಅವರು ನಮ್ಮ ಜಿಲ್ಲೆಯವರು, ನಮ್ಮ ಊರಿನ ಅಳಿಯ. ಈ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಅವರ ಕೈ ಬಲಪಡಿಸಲು ಒಗ್ಗಟ್ಟಾಗಿ ದುಡಿಯೋಣ” ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು.
ನಂತರ ಮಾತನಾಡಿದ ಗೌರವಾಧ್ಯಕ್ಷರಾದ ಶ್ರೀ ಜೋಗು ಭಂಡಾರಿಯವರು “ಹಲವಾರು ಸಮಾಜ ಸಂಘ ಸಂಸ್ಥೆಗಳು ಹುಟ್ಟಿಕೊಂಡಷ್ಟೇ ಶೀಘ್ರಗತಿಯಲ್ಲಿ ಕಣ್ಮರೆಯಾಗಿದ್ದನ್ನು ನಾನು ಕಂಡಿದ್ದೇನೆ.ಆದರೆ ಭಂಡಾರಿ ಸಮಾಜ ಸಂಘ ಅಥವಾ ಸವಿತಾ ಸಮಾಜ ಇಷ್ಟೊಂದು ಗಟ್ಟಿಯಾಗಿ ನೆಲೆ ನಿಲ್ಲಲು ನಮ್ಮಲ್ಲಿರುವ ಸಂಘಟನಾ ಗುಣವೇ ಕಾರಣ. ಆದ್ದರಿಂದ ನಾನೊಬ್ಬ ಭಂಡಾರಿ ಸಮಾಜದ ಸಾಮಾನ್ಯ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ” ಎಂದು ನುಡಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ವಾಸಂತಿ ಜೋಗು ಭಂಡಾರಿಯವರು “ಭಂಡಾರಿ ಸಮಾಜದ ಮಹಿಳೆಯರು ಸಂಘಟಿತರಾಗಬೇಕು, ಆರ್ಥಿಕವಾಗಿ ಸಬಲರಾಗಬೇಕು ಆ ನಿಟ್ಟಿನಲ್ಲಿ ನಾವೆಲ್ಲ ಸೇರಿ ಕಾರ್ಯೋನ್ಮುಖರಾಗೋಣ” ಎಂದು ಕರೆ ನೀಡಿದರು.

ಸಭೆಯಲ್ಲಿ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುವ ವಿದ್ಯಾನಿಧಿಯ ಚೆಕ್ ಗಳನ್ನು ಅತಿಥಿಗಳ ಮುಖಾಂತರ ವಿತರಿಸಲಾಯಿತು. ಶಿರಾಳಕೊಪ್ಪದ ಶ್ರೀ ಗೋಪಾಲ ಭಂಡಾರಿ ಮತ್ತು ಶ್ರೀಮತಿ ಶಾರದಾ ಗೋಪಾಲ ಭಂಡಾರಿಯವರ ಪುತ್ರಿ ಕುಮಾರಿ ತನುಶ್ರೀ ಹಾಗೂ ಸೊರಬದ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಶಶಿಕಲಾ ಬಾಬು ಭಂಡಾರಿ ದಂಪತಿಗಳ ಪುತ್ರಿ ಕುಮಾರಿ ತೇಜಸ್ವಿನಿಯವರಿಗೆ ಚೆಕ್ ಗಳನ್ನು ನೀಡಲಾಯಿತು.
ಕುಮಾರಿ ತೇಜಸ್ವಿನಿಯವರ ವಂದನಾರ್ಪಣಾ ಭಾಷಣದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.