September 20, 2024
ಶೀನಪ್ಪ ಭಟ್ಟರೆಂದರೆ ಜನಪುರದ ಊರಿನ ಜನರಿಗೆ ಬಹಳ ಹೆಮ್ಮೆ. ಕಾರಣ ಅವರು ಅತ್ಯಂತ ಮಡಿವಂತರು, ಶಾಸ್ತ್ರಬದ್ಧರು, ವೇದ,ಉಪನಿಷತ್ತು, ಪುರಾಣಗಳ ಆಗರದ ಭಂಡಾರವಾಗಿದ್ದರು. ಜೊತೆಗೆ ಆಧ್ಯಾತ್ಮಿಕವಾಗಿ ಒಂದಷ್ಟು ಸಾಧನೆ ಮಾಡಿ ಎದುರಿಗೆ ಬರುವ ವ್ಯಕ್ತಿಯ ಜಾತಕವನ್ನೇ ಹೇಳಬಲ್ಲವರಾಗಿದ್ದರು. ಇದರಿಂದಾಗಿ ಶೀನಪ್ಪ ಭಟ್ಟರ ಮನೆ ಎಂದಿಗೂ ಜನಜಂಗುಳಿಯಿಂದ ತುಂಬಿರುತಿತ್ತು. ಜನರು ತಮ್ಮ ಕಷ್ಟ ನಷ್ಟಗಳನ್ನು, ಮಾಡಿರುವ ಆಚಾರ ಅನಾಚಾರಗಳನ್ನು ಚೂರೂ ಮರೆಮಾಡದೆ ಅವರಿಗೆ ಒಪ್ಪಿಸಿ ಭಟ್ಟರಿಂದ ಬಂದ ಪರಿಹಾರೋಪಾಯಗಳನ್ನು ಕಣ್ಣಿಗೊತ್ತಿಕೊಂಡು ಮಾಡಿಸಿಕೊಳ್ಳುತ್ತಿದ್ದರು. ಊರಿನಲ್ಲಿನ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿದ್ದರು. ಜೊತೆಗೆ ಸುತ್ತಲಿನ ಹತ್ತು ಹಲವು ಊರುಗಳಲ್ಲಿಯೂ ತನ್ನ ಪ್ರಭಾವ ಬೀರಿದ್ದರು. ಶೀನಪ್ಪ ಭಟ್ಟರೆಂದರೆ ದೇವರ ಮತ್ತೊಂದು ಪ್ರತಿರೂಪವೇ ಅವರು ತಿಳಿಯದ ವಿಚಾರಗಳಿಲ್ಲ ಎಂದು ಮತ್ತು ಯಾವುದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದರು.
ಊರಿನ ಮಾಳಮ್ಮ ದೇವಿಯ ಜಾತ್ರೆ ಅಂದು ನಡೆಯುತ್ತಿತ್ತು. ಬಹಳಷ್ಟು ಸಂಖ್ಯೆಯ ಜನರೂ ಕೂಡ ಅಲ್ಲಿ ಸೇರಿದ್ದರು. ಜನ ಸಂದಣಿ, ವಿವಿಧ ಆಕರ್ಷಕ ಅಂಗಡಿಮುಂಗಟ್ಟುಗಳು ಜನರ ಮನಸ್ಸನ್ನು ಸೆಳೆಯುತ್ತಿತ್ತು. ಆದರೆ ಅಂದು ಎಲ್ಲದಕ್ಕಿಂತ ಮುಖ್ಯವಾಗಿ ಅಲ್ಲಿನ ದೇವಿಗೆ ಬಲಿನೀಡಬೇಕಿದ್ದ ಕೋಣನ ಬಲಿಯನ್ನು ನೋಡಲು ಜನಸಾಗರವೇ ಸೇರಿತ್ತು ಜೊತೆಗೆ ಕೋಳಿ-ಕುರಿಗಳ ಬಲಿಯೂ ಇತ್ತು. ದೇವಿಗೆ ಮೊದಲು ಕೋಣನ ಬಲಿ ನಂತರದಲ್ಲಿ ಉಳಿದವುಗಳ ಬಲಿ ಅಲ್ಲಿನ ಸಂಪ್ರದಾಯ. ದೇವಿಯು ವ್ಯಕ್ತಿಯೊಬ್ಬನ ಮೇಲೆ ಆಕರ್ಷಣೆಗೊಂಡು ಆಳುತಿತ್ತು. ಎಲ್ಲಾ ವಿಧಿ ವಿಧಾನಗಳು ನೆರವೇರಿ ಇನ್ನೇನು ಕೋಣನ ಬಲಿ ನೀಡಬೇಕು ಎನ್ನುವಲ್ಲಿ ಶೀನಪ್ಪ ಭಟ್ಟರು ಅದನ್ನು ತಡೆದುಬಿಟ್ಟರು. ಊರಿನ ಎಲ್ಲರೂ ಧಿಗ್ಭ್ರಾಂತರಾಗಿ ಮುಖ-ಮುಖ ನೋಡಿಕೊಳ್ಳಲು ಆರಂಭಿಸಿದರು. “ಇನ್ನು ಮುಂದೆ ಮಾಳಮ್ಮ ದೇವಿಗೆ ಕೋಣನ ಬಲಿಯ ಅವಶ್ಯಕತೆ ಇಲ್ಲ ಕೇವಲ ಕುರಿ ಕೋಳಿಯ ಬಲಿ ನೀಡಿದರೆ ಸಾಕು. ಇದು ಹಿಂದಿನ ದಿನದ ರಾತ್ರಿ ಮಾಳಮ್ಮ ದೇವಿಯಿಂದ ನನಗೆ ಆಜ್ಞೆಯಾಗಿದೆ” ಎಂದು ಆಕರ್ಷಣೆಗೊಂಡು ಆಳಲ್ಪಡುತ್ತಿದ್ದ ವ್ಯಕ್ತಿಯೆಡೆಗೆ ತಿರುಗಿ “ಏನಮ್ಮಾ ! ಹೌದಲ್ಲವೇ ?” ಎಂದು ಕೇಳಿದರು. ತಕ್ಷಣವೇ ಆ ವ್ಯಕ್ತಿ “ಹಾ… ನಾನೆ ಬಂದು ಹೇಳಿದ್ದು, ಇನ್ನು ಮುಂದೆ ಕುರಿ ಕೋಳಿಯ ಬಲಿ ಮಾತ್ರ ನಾನು ಸ್ವೀಕರಿಸುವೆ” ಎಂದು ಹೇಳಿದನು. ಅಲ್ಲಿಂದ ನಂತರದಲ್ಲಿ ಆ ಊರಿನಲ್ಲಿ ಕೋಳಿ ಕುರಿಗಳ ಬಲಿ ಮಾತ್ರ ಚಾಲ್ತಿಯಾಯಿತು. ಈ ವಿಶೇಷ ವಿಷಯ ಊರಿನ ಎಲ್ಲೆಡೆ ಹಬ್ಬಿತು. ಕೆಲವು ಸಂಪ್ರದಾಯಕ್ಕೆ ಜೋತುಬಿದ್ದ ಮನಸ್ಸುಗಳು ಇದು ಭಟ್ಟರ ಮತ್ತು ಪಾತ್ರಿಯ ಒಳಸಂಚು ನಮ್ಮ ದೇವಿಯ ಶಕ್ತಿ ಕುಂದಿಸಲು ಇಂತಹ ಕುತಂತ್ರ ರೂಪಿಸಿದ್ದಾರೆ ಮತ್ತು ಇದರಿಂದ ಇಡೀ ಊರಿಗೆ ಕೆಡುಕಾಗಲಿದೆ ಎಂದು ಸುದ್ದಿ ಹಬ್ಬಿಸಿದರು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲವರು ಭಟ್ಟರ ಡೋಂಗಿತನವನ್ನು ತೋರಿಸಿಕೊಡುತ್ತೇನೆ ಎಂದು ಪವಾಡ ಬಯಲು ಮಾಡುವ ವ್ಯಕ್ತಿಯೊಬ್ಬರನ್ನು ಕರೆಸಿದರು. 
ಪವಾಡ ಬಯಲು ಮಾಡುವವರು ಜನಪುರಕ್ಕೆ ಬಂದರು ಊರಿನ ಸಾಕಷ್ಟು ಜನರಿಂದ ಶೀನಪ್ಪ ಭಟ್ಟರ ಬಗೆಗಿನ ಮಾಹಿತಿ ಕಲೆಹಾಕಿದರು. ಅದರಲ್ಲಿ ಒಳಿತನ್ನ ಕಂಡವರು ಕಾಣದವರೂ ಇದ್ದರು. ನಂತರದಲ್ಲಿ ಶೀನಪ್ಪ ಭಟ್ಟರ ಮನೆಗೆ ಭೇಟಿ ನೀಡಿದರು. ಅವರ ಬಳಿಯೂ ಸಾಕಷ್ಟು ಘಟನೆಗಳ ಬಗೆಗಿನ ಮಾಹಿತಿ ಪಡೆದರು. ನಂತರದಲ್ಲಿ ಶೀನಪ್ಪ ಭಟ್ಟರ ಬಳಿ ವೈಯಕ್ತಿಕವಾಗಿ ವಿಚಾರ ಕಲೆಹಾಕಲು ಒಬ್ಬರನ್ನೇ ಕರೆದುಕೊಂಡು ಕೋಣೆಯೆಡೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಕೋಣೆಯಿಂದ ಹೊರಬರುವಾಗ ಶೀನಪ್ಪ ಭಟ್ಟರ ಮುಖ ಬೆವತಿತ್ತು, ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು, ಇನ್ನೇನು ಇಷ್ಟು ವರ್ಷದ ಹೆಸರು ಕೀರ್ತಿ ಎಲ್ಲಾ ಮಣ್ಣುಪಾಲಾಯಿತು ಎನ್ನುವ ಖಿನ್ನತೆಗೆ ಒಳಗಾದಂತೆ ಕಾಣುತ್ತಿತ್ತು. ಮಾಧ್ಯಮದವರು ಪವಾಡ ಬಯಲು ಮಾಡುವವರನ್ನು ಪ್ರಶ್ನಿಸಿದರು “ಸರ್ ನಿಮ್ಮ ಮುಖದಲ್ಲಿ ಗೆಲುವು ಕಾಣುತ್ತಿದೆ, ಇವರ ಬೂಟಾಟಿಕೆಯ ಪವಾಡವನ್ನು ಬಯಲು ಮಾಡಿದ್ದೀರಿ, ಪವಾಡದ ರಹಸ್ಯವನ್ನು ಜನರ ಮುಂದಿಡಿ” ಎಂದು. ಆಗ ಪವಾಡ ಬಯಲು ತಜ್ಜರು “ಇವರಿಗೆ ವಿಶೇಷ ಶಕ್ತಿ ಇದೆ ಎಂದು ನಾನು ಒಪ್ಪಲಾರೆ, ಆದರೆ ಅದನ್ನು ಸಾಧಿಸುವ ಯಾವ ಆಧಾರಗಳು ನನಗೆ ದೊರಕಿಲ್ಲ” ಎನ್ನುವ ಒಂದೇ ಉತ್ತರದೊಂದಿಗೆ ಹೊರನೆಡೆದರು. ಶೀನಪ್ಪ ಭಟ್ಟರು ದಿಗ್ಭ್ರಾಂತರಾಗಿ ಪವಾಡಬಯಲು ತಜ್ಞರನ್ನು ನೋಡಿದರು. ಅವರು ಶೀನಪ್ಪ ಭಟ್ಟರ ಕಡೆಗೆ ಸಣ್ಣ ನಗುವೊಂದನ್ನು ಬೀರಿ ನೆಡೆದರು.
ಶೀನಪ್ಪ ಭಟ್ಟರಿಗೆ ನನ್ನದೆಲ್ಲವೂ ಸುಳ್ಳಿನ ಕಂತೆ, ಬರುವ ಜನರೆ ಕೊಟ್ಟ ಮಾಹಿತಿ ಆಧಾರದ ಮೇಲೆ ಅದಕ್ಕೆ ಒಂದಿಷ್ಟು ಹೌದೆನ್ನುವಂತೆ ಭ್ರಮೆ ಹುಟ್ಟಿಸಿ ಮಾತನಾಡಿ ನಂಬಿಕೆ ಗಳಿಸಿದ್ದು, ಸುತ್ತಲಿನ ಊರಿನ ಜನರು ಬರಲು ಆರಂಭಿಸಿದ ಮೇಲೆ ಅವರೇ ಹೇಳುತ್ತಿದ್ದ ಇತರ ವ್ಯಕ್ತಿಗಳ ಕುರಿತಾದ ಘಟನೆಗಳು ಇವರಿಗೆ ವರವಾಗಿ ಪರಿಣಮಿಸಿ ಎಲ್ಲರ ಬದುಕಿನ ಜಾತಕ ಇವರ ಕೈ ಸೇರಿದ್ದು ಮತ್ತು ದೇವಿಯು ಭಟ್ಟರಿಗೆ ಹೇಳಿದ್ದರನ್ನೆಲ್ಲಾದ ಕೋಣನ ಬಲಿ ನಿಷೇಧದ ಕತೆ ಸುಳ್ಳು ಎಂಬುದು ಎಲ್ಲವೂ ತಿಳಿದಮೇಲೂ ಪವಾಡಬಯಲು ಮಾಡುವವರು ಯಾತಕ್ಕಾಗಿ ಹೇಳದೇ ನನ್ನನ್ನು ಉಳಿಸಿದರು ಎನ್ನುವ ಪ್ರಶ್ನೆ ಕಾಡಲಾರಂಭಿಸಿತು. ಪ್ರಯತ್ನಿಸಿ ಪವಾಡ ಬಯಲು ಮಾಡುವವರ ಪೋನ್ ನಂಬರ್ ಪಡೆದು ಡಯಲ್ ಮಾಡಿ “ಯಾಕೆ ಹೀಗೆ ಮಾಡಿದಿರಿ ?” ಎಂದರು.
“ನೀವು ಮಾಡುತ್ತಿರುವುದು ಡೋಂಗಿತನ ಮತ್ತು ಸುಳ್ಳುಗಳ ಕಂತೆ ಎನ್ನುವುದು ನೂರಕ್ಕೆ ನೂರು ನಿಜ ಆದರೆ ನಿಮ್ಮ ಈ ಡೋಂಗಿತನದಿಂದ ಸಮಾಜಕ್ಕೆ ಒಳ್ಳೆಯದಾಗಿದೆಯೇ ಹೊರತು ಹಾನಿಯಾದದ್ದು ಎಲ್ಲೂ ಪತ್ತೆಯಾಗಲಿಲ್ಲ. ಸುಳ್ಳು ಸುಳ್ಳೇ ಇಲ್ಲದ ಭಯವನ್ನು ಹುಟ್ಟಿಸಿ ಹಣವನ್ನು ಲೂಟಿ ಮಾಡುವವರ ಮಧ್ಯೆ ಹಣವನ್ನೇ ಪಡೆಯದೆ ಕುಗ್ಗಿ ಬಂದ ಜನರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದೀರಿ. ಗಂಡನ ಹಿಂಸೆ ತಾಳಲಾಗದೆ ಮಾನಸಿಕತೆಗೆ ಒಳಗಾಗಿದ್ದ ಸಂಸಾರವನ್ನು ಗಂಡನ ಪ್ರೀತಿ ಕೊಡಿಸುವುದರ ಮೂಲಕ ಸರಿ ಮಾಡಿದಿರಿ, ಕುಡಿದು ಮಕ್ಕಳ ಜೀವನಕ್ಕೆ ಕೆಡುಕಾಗುತ್ತಿದ್ದ ಅಪ್ಪನ ಕುಡಿತ ಬಿಡಿಸಿ ಮಕ್ಕಳ ಭವಿಷ್ಯಕ್ಕೆ ದಾರಿಯಾದಿರಿ. ಮದುವೆಯಾಗಿಯೂ ಪರಪುರುಷರ/ ಮಹಿಳೆ ಸಂಗ ಮಾಡಿ ಕುಟುಂಬದ ಮರ್ಯಾದೆ ಕಳೆಯುವಂತಾಗಿದ್ದ ಸ್ತ್ರೀ/ ಪುರುಷರ ಅದೆಷ್ಟು ಕುಟುಂಬವನ್ನು ಸರಿಪಡಿಸಿದ್ದೀರಿ. ಅದೆಷ್ಟು ವಿಷಮ ಸ್ಥಿತಿಗೆ ಹೋಗಿದ್ದ ಸಹೋದರ-ಸಹೋದರಿಯರ, ಸಂಬಂಧಿಕರ, ಊರವರ ಜಗಳವನ್ನು ನಿಲ್ಲಿಸಿ ಸಹಬಾಳ್ವೆ ನಡೆಸುವಂತೆ ಮಾಡಿದ್ದೀರಿ. ತಂದೆ ತಾಯಿಯ ಆಸೆಗಳ ಪೂರೈಸಲು ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾದ ಅದೆಷ್ಟು ಮಕ್ಕಳ ಭವಿಷ್ಯವನ್ನು ಬೆಳಗಿಸಿದ್ದೀರಿ. ವೃದ್ದಾಪ್ಯದಲ್ಲಿ ಬೀದಿಪಾಲಾದ ಅದೆಷ್ಟು ಹಿರಿಯ ಜೀವಗಳನ್ನು ಮತ್ತೆ ಮನೆಗೆ ಬರುವಂತೆ ಮಾಡಿ ಅವರಿಗೆ ಮಕ್ಕಳ ಪ್ರೀತಿ ಒದಗಿಸಿದ್ದೀರಿ. ಇನ್ನೇನು ಜೀವನವೇ ಮುಗಿದು ಹೋಯ್ತು ಎಂದುಕೊಂಡು ಬಂದವರಿಗೆ ಹೊಸಬದುಕಿನ ದಾರಿ ತೋರಿ ಧೈರ್ಯ ತುಂಬಿದ್ದೀರಿ. ಇನ್ನೂ ಅನೇಕ ಸಮಾಜಮುಖಿ ಕೆಲಸಕ್ಕೆ, ಅದಕ್ಕೆಲ್ಲಾ ನೀವು ಬಳಸಿದ್ದು ದೇವರು ಎನ್ನುವ ಗಟ್ಟಿನಂಬಿಕೆಯ ದಿವ್ಯ ಔಷಧ. ಪರಿಹಾರಕ್ಕಾಗಿ ಲಕ್ಷಗಟ್ಟಲೆ ಕೀಳುವವರ ನಡುವೆ ನೀವು ಕೇವಲ ನಂಬಿಕೆಗಾಗಿ ಭಕ್ತಿಗಾಗಿ ಹೇಳುವ ಅತೀ ಅಂದರೆ ಅತೀ ಸಣ್ಣ ಪೂಜೆ ಪರಿಹಾರಗಳು ಅದ್ಭುತ ಅನ್ನಿಸಿದವು. ಆಹಾರವೇ ಆಗದೆ ಕೇವಲ ಬಲಿಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಒಂದು ಮೂಕಪ್ರಾಣಿಯ ಜೀವ ಉಳಿಸಲು ನೀವು ಮಾಡಿದ ತಂತ್ರ ಮತ್ತು ಇದಾವುದರ ಅರಿವೇ ಇಲ್ಲದ ಪಾತ್ರಿ ನಿಮ್ಮ ಮೇಲಿನ ನಂಬಿಕೆಗೆ ಆ ಕ್ಷಣದಲ್ಲಿಯೇ ಸುಳ್ಳು ನುಡಿದದ್ದು. ಹೀಗೆ ಇದರಲ್ಲಿ ಯಾವುದಾದರೂ ನೀವು ನಿಮ್ಮ ಸ್ವಹಿತಕ್ಕಾಗಿ, ಹಣ ಮಾಡಲೋ ಆಸ್ತಿ ಮಾಡಲೋ, ಇಲ್ಲ ಜನರ ಜೀವನದ ಜೊತೆ ಚೆಲ್ಲಾಟ ಆಡಲೋ ಬಳಸಿದ್ದರೆ ಖಂಡಿತಾ ನಿಮ್ಮ ಗುಟ್ಟುಗಳನ್ನು ಬಯಲಿಗೆಳೆದುಬಿಡುತ್ತಿದ್ದೆ. ಆದರೆ ಯಾವುದೋ ಒಂದು ನಂಬಿಕೆ ಸಮಾಜಕ್ಕೆ ಕಂಟಕವಾಗದೆ ಜನರ ಜೀವನಕ್ಕೆ ಮುಳ್ಳಾಗದೆ ಒಳ್ಳೆಯದನ್ನೇ ಮಾಡುತ್ತಿದೆ ಎಂದರೆ ಅಂತಹದು ಡೋಂಗಿತನವಾದರೂ ನಾನು ಅದನ್ನು ಕೆಡಿಸುವುದಿಲ್ಲ” ಎಂದು ಹೇಳಿ ಕರೆ ಕತ್ತರಿಸಿದರು.
ಶೀನಪ್ಪ ಭಟ್ಟರ ಕಂಗಳಲ್ಲಿ ಆನಂದ ಭಾಷ್ಪ ತಂಬಿತ್ತು ಬದುಕಿನ ಸಾರ್ಥಕತೆಯ ನಗು ಎದ್ದು ಕಾಣುತ್ತಿತ್ತು. 
(ಇದು ಕೇವಲ ಕಾಲ್ಪನಿಕ ಕತೆಯಾಗಿದ್ದು ಯಾವುದೇ ವ್ಯೆಕ್ತಿಯ ಜೀವನಕ್ಕೂ, ನಂಬಿಕೆಗೂ ಮತ್ತು ಸಮಾಜಕ್ಕೂ ಸಂಬಂಧಿಸಿರುವುದಿಲ್ಲ)
✍️ವಿಜಯ್ ನಿಟ್ಟೂರು.

Leave a Reply

Your email address will not be published. Required fields are marked *