ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಸೇವಂತಿ ಎದೆಗುಂದದೆ ತನ್ನಿಬ್ಬರು ಮಕ್ಕಳಿಗೂ ತಂದೆಯ ಕೊರತೆಯಾಗದಂತೆ ಜತನದಿಂದ ಕಾಪಾಡಿಕೊಂಡು ಬಂದಿದ್ದಳು. ಮಕ್ಕಳ ಬಾಳು ನನ್ನಂತಾಗಬಾರದೆಂದು ಅವರ ಓದಿನ ಕಡೆಗೆ ಹೆಚ್ಚಿನ ಗಮನ ಕೊಟ್ಟು ಶಿಸ್ತಿನಿಂದ ಸಾಕಿದ್ದಳು.ಮಗ ಮಾಧವ ಹತ್ತನೇ ತರಗತಿಯಲ್ಲಿ ಓದುತ್ತಿದ್ದರೆ,ಮಗಳು ಮಲ್ಲಿಕ ಹನ್ನೆರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಮಕ್ಕಳ ವಿದ್ಯಾಭ್ಯಾಸ ಒಂದು ಹಂತಕ್ಕೆ ಬರುವರೆಗೆ ಮನೆಗೆ ಟಿವಿ ಮತ್ತು ಮೊಬೈಲ್ ತರುವುದು ಬೇಡವೆಂದು ಮೊದಲೇ ನಿರ್ಧಾರ ಮಾಡಿದ್ದಳು ಸೇವಂತಿ. ಇದುವರೆಗೂ ಎಲ್ಲಾ ಅವಳಿಚ್ಚೆಯಂತೆಯೇ ನಡೆದಿತ್ತು,ಆದರೆ ಯಾವಾಗ ಈ ಕೊರೋನ ಹಾವಳಿ ಆರಂಭವಾಯ್ತೋ ಅವಳ ಲೆಕ್ಕಾಚಾರವೆಲ್ಲ ತಲೆಕೆಳಗಾಯ್ತು.ಲಾಕ್ ಡೌನ್ ನೆಪದಲ್ಲಿ ಶಾಲೆಗೆ ರಜೆ ಘೋಷಣೆ ಮಾಡಿದ ನಂತರ ಮಕ್ಕಳಿಬ್ಬರೂ ಮನೆಯಲ್ಲಿ ಕೂರುವಂತಾಯ್ತು.ಮಕ್ಕಳಿಗೆ ಹೊತ್ತು ಕಳೆಯಲೆಂದು ಮನೆಗೊಂದು ಟಿವಿ ತರಬೇಕಾಯ್ತು.ಟಿವಿ ಬಂದ ಮೇಲೆ ಮಕ್ಕಳ ಗೌಜಿ ಕಮ್ಮಿಯಾಯ್ತು ಬಿಡು ಎಂದು ಸೇವಂತಿ ನಿಟ್ಟುಸಿರು ಬಿಡುವಷ್ಟು ಹೊತ್ತಿಗೆ ಮಕ್ಕಳಿಬ್ಬರಿಗೂ ಅದೆಂತದೋ ಆನ್ಲೈನ್ ಕ್ಲಾಸ್ ಶುರುವಾಯ್ತು.ಪಾಪ ಸೇವಂತಿ ತಾನು ಬೀಡಿ ಕಟ್ಟಿ ಉಳಿಸಿದ್ದ ಒಂದಷ್ಟು ಹಣದಲ್ಲಿ ಒಂದು ದೊಡ್ಡ ಸ್ಕ್ರೀನಿನ ಮೊಬೈಲ್ ಫೋನ್ ತಂದು ಕೊಟ್ಟಿದ್ದೂ ಆಯ್ತು.ಸಮಸ್ಯೆ ಪರಿಹಾರ ಆಯಿತು ಎನ್ನುವ ಸಮಾಧಾನ ಉಳಿದದ್ದು ಕೇವಲ ನಾಲ್ಕೇ ದಿನ.ಇಬ್ಬರಿಗೂ ಒಂದೇ ಸಮಯಕ್ಕೆ ಕ್ಲಾಸ್ ಆರಂಭವಾಗತೊಡಗಿತು. ಮಕ್ಕಳಿಬ್ಬರಲ್ಲಿ ಮೊಬೈಲ್ ವಿಷಯಕ್ಕೆ ಕಿತ್ತಾಟ,ಜಗಳ ಶುರುವಾಯಿತು. ಸೇವಂತಿ ತಾನು ಮನೆಗೆಲಸ ಮಾಡುವ ಒಡೆಯರ ಮನೆಯಲ್ಲಿ ಸ್ವಲ್ಪ ಹಣ ಮುಂಗಡವಾಗಿ ಸಾಲ ಪಡೆದು ಇನ್ನೊಂದು ಮೊಬೈಲ್ ತಂದು ಕೊಟ್ಟಿದ್ದೂ ಆಯ್ತು.
ಮೊದಲೆಲ್ಲ ಮಕ್ಕಳು ಯಾರದ್ದಾದರು ಮೊಬೈಲ್ ಇಣುಕಿ ನೋಡಿದರೂ ಅಬ್ಬರಿಸುತ್ತಿದ್ದ ಸೇವಂತಿ ಮಕ್ಕಳಿಗೆ ಮೊಬೈಲ್ ಹಿಡಿದುಕೊಂಡು ಕೂರಲು ತಾಕೀತು ಮಾಡಲಾರಂಭಿಸಿದಳು.ಮಕ್ಕಳು ಯಾವುದೇ ಕ್ಲಾಸ್ ಗಳನ್ನು ತಪ್ಪಿಸಿಕೊಳ್ಳದಿರಲೆಂಬುದು ಅವಳ ಆಶಯವಾಗಿತ್ತು. ಆದರೆ ಇತ್ತೀಚಿಗೆ ಅವಳಿಗೆ ಇನ್ನೊಂದು ತಲೆಬಿಸಿ ಶುರುವಾಗಿದೆ. ಮಗ ಎಷ್ಟೊತ್ತಿಗೂ ಮೊಬೈಲ್ ನಲ್ಲಿ ಜೋರಾಗಿ ಸೌಂಡ್ ಇಟ್ಟುಕೊಂಡು ಗೇಮ್ ಆಡ್ತಾ ಕೂತಿರ್ತಾನೆ. ಮಗಳು ಕಿವಿಗೆ ವೈರ್ ಸಿಕ್ಕಿಸಿಕೊಂಡು ಅದೇನೋ ಮಣಮಣ ಮಾತಾಡ್ತಾ ಮನೆಯ ಮೂಲೆಯಲ್ಲಿ ಕೂತಿರ್ತಾಳೆ. ಮುಸಿಮುಸಿ ನಗು,ಪಿಸುಪಿಸು ಮಾತು,ಅರ್ಥವಾಗದ ಹಾವಭಾವ.ಇದೆಲ್ಲವನ್ನು ನೋಡಿ ಅವಳ ತಲೆ ಮೊಸರುಗಡಿಗೆಯಾಗಿದೆ. ಮಹಾಮಾರಿ ಕೊರೋನ ತನ್ನ ಕುಟುಂಬದ ಮೇಲೆ ಮಾಡಿದ ಮೌನ ದಾಳಿ ಹೇಗೆ ಮಕ್ಕಳಿಬ್ಬರ ದಾರಿ ತಪ್ಪಿಸಿತಲ್ಲ ಎಂಬ ಕೊರಗು ಅವಳ ಕಂಗೆಡಿಸಿದೆ. ಯಾರಲ್ಲೂ ಹೇಳಲಾಗದೇ,ಹೇಳಿದರೆ ಯಾರಿಗೂ ಅರ್ಥವಾಗದ ಈ ಸಮಸ್ಯೆಯನ್ನು ತಾನೇ ನುಂಗಿಕೊಳ್ಳುತ್ತ ಮೂಕವೇದನೆಯನ್ನು ಅನುಭವಿಸುತ್ತಿದ್ದಾಳೆ ಸೇವಂತಿ.
ಕೊರೋನ ಬಂದ ಮೇಲೆ ಹಲವಾರು ದೊಡ್ಡಮಟ್ಟದ ಪರಿಣಾಮಗಳು ಉಂಟಾಗಿರುವುದು ಗೋಚರಿಸುತ್ತಿರಬಹುದು.ಆದರೆ ಕಣ್ಣಿಗೆ ಕಾಣದ ಇಂತಹ ಅನಾಹುತಗಳು ಹಲವಾರು. ನೆಮ್ಮದಿಯಾಗಿದ್ದ ಸಂಸಾರ, ಶಿಸ್ತುಬದ್ಧವಾಗಿದ್ದ ಮಕ್ಕಳು, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದ ತಾಯಿ, ಮಿತವಾದ ಗಳಿಕೆಯಲಿ ಹಿತವಾಗಿ ಬದುಕುತ್ತಿದ್ದ ಒಂದು ಸಣ್ಣ ಕುಟುಂಬ ಹೇಗೆ ಸುಳಿಗೆ ಸಿಲುಕಿದ ಹಾಯಿದೋಣಿಯಂತಾಯ್ತಲ್ಲ ಎಂದು ನಿಟ್ಟುಸಿರು ಬಿಡುತ್ತ, ಚಂಡಿಯಾಗಿದ್ದ ತನ್ನ ಕೈಯನ್ನು ಅಂಡಿನ ಮೇಲಿನ ಸೀರೆಗೆ ವರೆಸಿಕೊಳ್ಳುತ್ತ ಬೀಡಿ ಕಟ್ಟಲು ಅಣಿಯಾದಳು ಸೇವಂತಿ.
✍️:- ಭಾಸ್ಕರ ಭಂಡಾರಿ ಶಿರಾಳಕೊಪ್ಪ