January 18, 2025
vishwaroopa1

ದಟ್ಟಕಾನನದ ಮಧ್ಯೆ ಇರುವ ಒಂದಿಷ್ಟು ಮಂದಿಯ ಗುಂಪು ಒಬ್ಬನಿಗೆ ಬೇಡವೆನಿಸಿತೇನೋ….. ಹೊರಟೇಬಿಟ್ಟ! ಗುಂಪನ್ನು ಬಿಟ್ಟು. ಸಾಗುತಾ ಸಾಗುತಾ ಇನ್ನೊಂದು ಗುಂಪಿನ ಪರಿಚಯವಾಯಿತು, ಅರೇ..!!! ಇದೇನು ಇವರ ಬಳಿ ಮರದ ರೆಂಬೆಯ ಕೋಲು ಅದಕ್ಕೆ ಕಟ್ಟಿದ ಬೀಳು ಇದರ ಜೊತೆಗೆ ಒಂದಿಷ್ಟು ಉದ್ದದ ಚೂಪಾದ ಕೋಲು, ಅದೇ ತರಹದ ಕೋಲಿಗೆ ಬಿಗಿದ ಚೂಪಾದ ಕಲ್ಲುಗಳು ಮತ್ತು ಉಳಿದವು ಉದ್ದದ ಕೋಲುಗಳು. ಇವುಗಳು ಬಿಲ್ಲು ಬಾಣಗಳು ಮತ್ತು ಈಟಿ. ಆಹಾರ ಪಡೆಯಲು ಮತ್ತು ರಕ್ಷಣೆಯ ಸಾಧನ. ಅಲ್ಲೇ ಪಕ್ಕದಲ್ಲಿ ಜೋತುಬಿದ್ದ ಆಹಾರದ ಕೆಳಗೆ ಕೋಲಿನ ರಾಶಿಯಮೇಲೆ ಕೆಂಪನೆಯದೊಂದು ಕುಣಿಯುತ್ತಿದೆ. ಇದು ಆಹಾರ ಕಂಡು ಅದನ್ನು ಹಿಡಿಯಲು ಪ್ರಯತ್ನಿಸುತ್ತಿದೆಯೋ ನೋಡಿಯೇಬಿಡೋಣ ಎಂದು ಹಿಡಿಯಲು ಹೋದರೆ ಅಬ್ಬಾ ಅದೆಂತಹ ಅನುಭವ ಜೀವಮಾನದಲ್ಲಿ ಎಂದು ಕಂಡಿಲ್ಲ ಕೈ ಉರಿಹತ್ತಿ ಸುಟ್ಟುಹೋಗಿದೆ…! ಹೇಳಿದರವರು ಇದು ಬೆಂಕಿ ಸುಡುತ್ತದೆ. ಹಳೆಯ ಗುಂಪಿನಲ್ಲಿ ಕೋಲಿನಿಂದ ಇಲ್ಲ ಬಾಹುಬಲದಿಂದ ಆಹಾರ ಪಡೆಯುತ್ತಿದ್ದ ಆತನಿಗೆ ಕೋಲಿನಿಂದ ಇದೆಲ್ಲವೂ ಸಾಧ್ಯ ಎಂದು ತಿಳಿದಾಗ ಬೆಕ್ಕಸ ಬೆರಗಾಯಿತು.

ಕಾಲಕಳೆಯಿತು ಅಲೆಮಾರಿ ಮನಸ್ಸು ಹೊರಟಿತು ಮುಂದೆ. ಇನ್ನೊಂದು ಗುಂಪು ತಲುಪಿದಾಗ ಆದೇ ಮರದ ರೆಂಬೆಕೊಂಬೆಗಳಿಂದ ಕಟ್ಟಿ ಜೋಡಿಸಿದ ಸಾಲು ಮೇಲೆ ಎಲೆಗಳಿಂದ ಮುಚ್ಚಿದ ಚಪ್ಪರ ಬಳಿಬಂದು ಗುಹೆಯ ಬಾಗಿಲಂತೆ ಇರುವುದರೊಳಗೆ ಬಂದು ನೋಡಿದರೆ ಅದರೊಳಗೆ ಆಹಾರನ್ನು ಅಚ್ಚುಕಟ್ಟಾಗಿ ಇಡಲು ಅದೇ ಮರದಿಂದ ತಯಾರಿಸಿದ ವಿವಿಧ ಸಲಕರಣೆಗಳು . ಹಿಂದೆ ಸಿಕ್ಕ ಸಿಕ್ಕಲೆಲ್ಲಾ ಮಲಗಿ ನಿದ್ರೆಯ ಮಂಪರಿನಲ್ಲಿ ಅರಿಯದೇ ಪ್ರಾಣಿಗಳಿಗೆ ಆಹುತಿಯಾದವರು, ಮಳೆಗೆ ಗುಹೆಯೇ ಆಲಯವಾಗಿ, ದೊರಕಿದ ಆಹಾರ ಅಂದಿನ ದಿನಕ್ಕೆ ಆ ಕ್ಷಣಕ್ಕೆ ಹೆಚ್ಚಾದರೆ ಸಿಕ್ಕಲ್ಲಿಯೇ ಬಿಟ್ಟು ಮುಂದಿನ ದಿನ ಮತ್ತೆ ಆಹಾರ ಹುಡುಕುತ್ತಾ ಸಾಗಿದವನಿಗೆ ಮನೆಯ ಕಲ್ಪನೆಯೇ ಇರದವಗೆ ಮರದಿಂದ ಮನೆ ಸಾಧ್ಯ, ಪರಿಕರಗಳ ಹುಟ್ಟು ಸಾಧ್ಯ ಎಂದು ತಿಳಿದು ದಿಗ್ಭ್ರಮೆಯಾಯಿತು.

ಹೊಸದು ಸಿಗಬಹುದೇನೋ ಎಂದು ಹೊರಟ ಮನಸ್ಸಿಗೆ ಮುಂದೆ ದೊಕಿದ್ದು ಮರದ ದಿಮ್ಮಿ, ಏನೆಂದು ತಿಳಿಯದ ಕೆತ್ತನೆ, ಹತ್ತಿರ ಬಂದು ನೋಡಿದರೂ ಅರ್ಥವಾಗದು ! ದಣಿದು ಆಯಾಸವಾಗಿ ಅದರ ಮೇಲೆ ಕುಳಿತ . ಹೊತ್ತುಕಳೆಯಿತು ಒಂದಿಬ್ಬರು ಬಂದರು ಒಂದೇಸಮನೆ ಒದ್ದುಬಿಟ್ಟರು! ಅಪಚಾರವಾಗಿತ್ತು. ಹಿಂದೆ ಗುಂಪುತಪ್ಪಿ ಬಂದ ಅವರಿಗೆ ದಿನವಿಡೀ ಹುಡುಕಿದರೂ ಸಿಗದ ಆಹಾರ ಮಧ್ಯೆ ದುಷ್ಟಪ್ರಾಣಿಗಳ ಹಾವಳಿ. ಬಳಲಿ ಬೆಂಡಾಗಿ ಜೀವ ಹೋಗುವ ಸಮಯ ಅವನು ಎಲ್ಲಿಂದಲೋ ಬಂದು ಆಹಾರವಿತ್ತು ಕಾಣದಾದ! ಮತ್ತೊಂದಿಷ್ಟು ಬಾರಿ ಕಷ್ಟಕಾಲದಲ್ಲಿ ಹೇಗೊ ಕಣ್ಣಿಗೆ ಕಾಣದೇ ನೆರವಾದ ಅವನೇ ಇವರ ಪಾಲಿನ ದೇವರು.. ನಿತ್ಯ ನಮಿಸಿ ನೆಡೆವರು. ಇವನಿಗೂ ಅನ್ನಿಸಿಬಿಟ್ಟಿತು ಒಂಟಿಜೀವ ಅಲೆಯುವಾಗ ಹಲವುಬಾರಿ ಸಹಾಯಕ್ಕಾಗಿ ಮೊರೆಯಿತ್ತಾಗ ವಿಚಿತ್ರವಾಗಿ ಕಾಪಾಡಿದವನೂ ಇವನೇ ಇರಬೇಕು..! ಹಾಗೆಯೇ ನೆನೆದ ಗುಂಪಿನ ಕಷ್ಟಕ್ಕೆ ಕಾಣದೇ ನೆರವಾದವನ ಆಹಾರ ಸಿಕ್ಕಿದೊಡನೆ ಕೈಮುಗಿದು ನಮಿಸುವುದನು ಅವನು ಇವನೇ ಇರಬೇಕು. ಮರದಿಂದ ಕೈಹಿಡಿದ ದೇವರನು ನಿರ್ಮಿಸಬಹುದು ಎಂದು ತಿಳಿಯಿತು .

ಎಲ್ಲಬಿಟ್ಟು ಹೊರಟು ಸುಮ್ಮನೇ ಕುಳಿತಿದ್ದ ಅವನ ಮನಸ್ಸಿಗೆ ಸುಮ್ಮನೆ ಹೊಳೆಯಿತು ಬಿಲ್ಲುಬಾಣ, ಈಟಿ ಇತ್ಯಾದಿ ಆಯುಧ, ನಿವಾಸ ಜೊತೆಗಿಷ್ಟು ಸಂಗ್ರಹಣೆಯ ಪರಿಕರ ಜೊತೆಗೆ ಇವೆಲ್ಲವನ್ನೂ ಕಂಡೂ ಕಾಣದೇ ನೀಡಿದ ದೇವರ ಮೂರ್ತಿ ಇವೆಲ್ಲವೂ ಒಟ್ಟಿಗೆ ಇದ್ದರೇ ಎಷ್ಟು ಚೆನ್ನ ತಕ್ಷಣ ಗೋಚರಿಸಿದ್ದೇ ಇದಾವುದೂ ಇಲ್ಲದ ತನ್ನ ಮೂಲಗುಂಪು. ಹೊರಟೇಬಿಟ್ಟ ಹೊಸ ಆಶಾವಾದದೊಂದಿಗೆ ಮೂಲಹಾದಿಯ ಹುಡುಕಿ ಯಾವುದಾದರೂ ಬದಲಾವಣೆಗಳಿವೆಯೇ? ಇಲ್ಲವಲ್ಲ !! ಇದ್ದದ್ದು ಒಂದೇ ಬದಲಾವಣೆ ಕೆಲವು ವರ್ಷದೊಳಗೆ ಗುಂಪಿನ ಮಂದಿ ಐವತ್ತರಿಂದ ನೂರೈವತ್ತಕ್ಕೇರಿದ್ದು. ಕಲ್ಪನೆಯ ಗೂಡುಕಟ್ಟಲು ಶುರುವಿಟ್ಟುಕೊಂಡ ಮರದ ಹಲವು ಉಪಯೋಗವನ್ನು ಹೇಳತೊಡಗಿದ. ಕೆಲವರು ಕೆಲವೊಂದನ್ನ ಕಲಿತರು . ಇನ್ನುಳಿದವರು ಹೇಳಿದ ಕೆಲವನ್ನು ಮಾಡಿ ತೋರಿಸಲಾಗದಿದ್ದಾಗ ಆಡಿಕೊಂಡು ನಕ್ಕರು. ಇವನಿಗೆ ಸರಿಯಿಲ್ಲವೆಂದು ಹೊಡೆದು ಕೊಂದರು. ಕಾಲಕ್ರಮಿಸಿತು ಅವನು ಹೇಳಿದ್ದು ನಿಜವೆನಿಸತೊಡಗಿತು ಹುಡುಕಿ ಹೊರಟರು ಹಲವರು, ಒಂದು ಸೇರಿದರು ಎಲ್ಲರೂ.

ಒಂದುಗೂಡಿದ ಎಲ್ಲರೂ ಸೇರಿ ಮನೆಗೆ ಉಪದ್ರವ ಪ್ರಾಣಿಗಳ ಹಾವಳಿ ತಪ್ಪಿಸಲು ಒಬ್ಬ. ಸರಕು ಸಾಮಗ್ರಿಗಳ ಸರಿದೂಗಿಸಲು ಕೆಲವರು. ಆಹಾರ ಹುಡುಕಲು ಹಲವರು. ಇವೆಲ್ಲವನ್ನೂ ಕಂಡುಕಾಣದಂತೆ ನೀಡಿ ಕಾಪಾಡುವವನ ನಿತ್ಯ ಪೂಜಿಸಲಿಬ್ಬರು. ಸಾಕಾರಗೊಂಡಿತು ಸತ್ತವನ ಕನಸು! ಅಲೆಮಾರಿಯಾಗಿ ಮೂರು ಮತ್ತೊಬ್ಬರ ಜೊತೆ ಸೇರಿದ ಮನಸು! ಈಗ ಹುಟ್ಟಿರಬಹುದು ಮತ್ತೂಂದು ಪ್ರಶ್ನೆ !! ಇದು ಅವನೇ ಇರಬಹುದಲ್ಲವೇ ? 

– ✍️ ವಿಜಯ್ ಭಂಡಾರಿ ನಿಟ್ಟೂರು

Leave a Reply

Your email address will not be published. Required fields are marked *