January 18, 2025
10
ಣ್ಣಳತೆಗೆ ನಿಲುಕದಷ್ಟು ಚಾಚಿರುವ ಬೆಂಗಳೂರಿನ ಗಾಂಧಿನಗರದಲ್ಲಿ ನಮ್ಮದೂ ಒಂದು ಕಿರುದಾರಿ ಇರಬೇಕು ಅನ್ನೋದು ಅದೆಷ್ಟೋ ಜನರ ಕನಸು.. ಆ ಕನಸಿನ ದಾರಿಯನ್ನ ಹಿಡಿಯೋದಕ್ಕಾಗಿ ಹಗಲಿರುಳೂ ತುಡಿಯುವ ಸಾವಿರಾರು ಮನಸ್ಸು.. ಹಲವರಿಗೆ ಇಟ್ಟ ಒಂದು ಹೆಜ್ಜೆಯೇ ಅಚ್ಚಳಿಯದೇ ಇರಬೇಕು ಅನ್ನೋ ಆಸೆ.. ಇನ್ನು ಕೆಲವರಿಗೆ ಸವೆಸಿದ ಹಲವು ಹೆಜ್ಜೆಗಳಲ್ಲಿ ಒಂದಾದ್ರೂ ಶಾಶ್ವತವಾಗಿರುತ್ತೆ  ಅನ್ನೋದು  ಕನಸಿನೂರು ಗಾಂಧೀನಗರದಲ್ಲಿ ಕಣ್ಣರಳಿಸುವ ಪ್ರತೀ ಕಲಾವಿದನ  ನಂಬಿಕೆ. ಆದ್ರೆ ಈ ನಂಬಿಕೆ, ಪ್ರತಿಭೆ ಮತ್ತು ವಿಶ್ವಾಸದ ರೇಖೆಗಳಲ್ಲಿ ಅರಳಿ ನಿರಂತರ ಪ್ರಭೆಯಾಗಿ ಬೆಳಗೋದಕ್ಕೆ ಕೆಲವು ಚಿತ್ರಗಳಿಗೆ, ನಟರಿಗೆ ಹಾಗೂ ನಿರ್ದೇಶಕರಿಗೆ ಸಾಧ್ಯವಾಗಿದೆ.  
ಒಂದು ಉತ್ತಮ ಚಲನಚಿತ್ರ ನಿರ್ಮಾಣವಾಗಬೇಕು ಬೇಕಾಗಿರೋದು ಕೇವಲ 3 ಅಂಶಗಳು. ಅದು ಒಂದೊಳ್ಳೆ ಸ್ಕ್ರಿಪ್ಟ್, ಸ್ಕ್ರಿಪ್ಟ್ ಮತ್ತು ಸ್ಕ್ರಿಪ್ಟ್..!  ಪ್ರಯೋಗ ಹಾಗೂ ಪ್ರತಿಭೆಯ ಸಮ್ಮಿಳತಗಳೊಂದಿಗೆ ಬರುತ್ತಿರುವ ಹೊಸ ಚಿತ್ರಗಳ ಯಶಸ್ಸಿನ ಸೂತ್ರವೂ ಇದೇ ಆಗಿದೆ. ಇದಕ್ಕೆ ಸಾಕ್ಷಿಯಾಗಿ ಕನ್ನಡ ಚಿತ್ರರಂಗಕ್ಕೆ  ಸಾಕಷ್ಟು ಹೊಸ ಮುಖಗಳು, ಪ್ರತಿಭೆಗಳ ಪರಿಚಯವಾಗ್ತಿವೆ.. ಭರ್ಜರಿ ಯಶಸ್ಸು ಕಂಡು ಸಿನಿರಸಿಕರ ಮನಸ್ಸನ್ನೂ ಗೆಲ್ಲುತ್ತಿವೆ. ಈ ಯಶಸ್ಸಿನ ಸಾಲಿಗೆ ಮತ್ತೊಂದು ಸೇರ್ಪಡೆ ಒಂದು ಮೊಟ್ಟೆಯ ಕಥೆ..
ಪ್ರಕಾಶ್ ಭಂಡಾರಿ ತೂಮಿನಾಡು

ಒಂದು ಮೊಟ್ಟೆಯ ಕಥೆ ಸಿನಿಮಾ, ಅದರ ಕಥೆ, ಯಶಸ್ಸಿನ ಬಗ್ಗೆ ಇಡೀ ಗಾಂಧೀನಗರವೇ ಮಾತನಾಡುತ್ತಿದೆ. ಅದರಲ್ಲೂ ಈ  ಒಂದು ಮೊಟ್ಟೆಯೊಳಗೆ ಇನ್ನೂ ಮೂರುಭಂಡಾರಿ ಮುತ್ತುಗಳಿವೆ ಅನ್ನೋದು ನಮಗಿರುವ ಹೆಮ್ಮೆ.. ಈ ಚಿತ್ರಕ್ಕಾಗಿ ಒಂದಿಲ್ಲೊಂದು ರೀತಿಯಲ್ಲಿ ದುಡಿದಿರುವ ಈ ಮೂರು ಮುತ್ತುಗಳ ಪರಿಚಯ ಇಲ್ಲಿದೆ..

ಪ್ರಕಾಶ್ ಭಂಡಾರಿ ತೂಮಿನಾಡು – ಹುಟ್ಟುತ್ತಾ ಯಾರೂ ಶ್ರೇಷ್ಠರಲ್ಲ.. ಅವರು ಶ್ರೇಷ್ಠರಾಗುತ್ತಾ  ಬೆಳೆಯುತ್ತಾರೆ ಅಷ್ಟೇ ಅನ್ನೋ ಮಾತನ್ನ ನಂಬಿರುವ ಪ್ರಕಾಶ್ ಭಂಡಾರಿ ತೂಮಿನಾಡು ಅವರ ಪ್ರತಿಭೆಗೆ ಅವರ ಸಾಧನೆಗಳೇ ಸಾಕ್ಷಿ.. ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಕಾಲೇಜು ಪಿಯೊನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಕಾಶ್ ಹುಟ್ಟು ಕಲಾವಿದ.  ಶ್ರೀಯುತ ಕೃಷ್ಣಪ್ಪ ಭಂಡಾರಿ ಮತ್ತು ಗಿರಿಜಾ ಭಂಡಾರಿ ದಂಪತಿಗಳ ಪುತ್ರ  ಪ್ರಕಾಶ್ ಭಂಡಾರಿ ಮೂಲತಃ ಬರಹಗಾರರೂ ಹೌದು. ಬಾಲ್ಯದಲ್ಲಿ ಕಷ್ಟದ ಬದುಕು ಸಾಗಿಸಿದ ಪ್ರಕಾಶ್ ಬಡತನದ ನಡುವೆಯೇ ವಿದ್ಯಾಭ್ಯಾಸ ಮುಗಿಸಿದ್ರು. ಬಹುಮುಖ ಪ್ರತಿಭಾವಂತ ಪ್ರಕಾಶ್ ಶಿಕ್ಷಣದ ನಂತ್ರ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾಕಾಳಿ ಭಜನಾ ಮಂದಿರದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಮೂಲಕ ಅಲ್ಲಿನ ಖಾಯಂ ಸದಸ್ಯತ್ವವನ್ನೂ ಪಡೆದುಕೊಂಡಿದ್ದಾರೆ. ಜ್ವಾಲಾಮುಖಿ, ದೇವುಪೂಂಜ, ಮಲೆತ ಬೊಲ್ಪು ಎಂಬ ಪೌರಾಣಿಕ ನಾಟಕಗಳಲ್ಲಿ ಆನಂದ ಮಾಸ್ಟರ್ ರವರೊಂದಿಗೆ ನಟಿಸಿ ಅವರಿಂದಲೂ ಸೈ ಅನಿಸಿಕೊಂಡರು. ವಿಶೇಷ ಎಂದರೆ ಕಲರ್ ಸೂಪರ್ ವಾಹಿನಿಯಲ್ಲಿ  ಮೂಡಿ ಬರುತ್ತಿರುವ ಜನಪ್ರಿಯ ಮಜಾ ಭಾರತದ ಮಸ್ಕಿರಿ ತಂಡದಲ್ಲೂ ಅಭಿನಯಿಸಿ ಮನೆಮಾತಾದವರು ಇವರು. ಹೀಗೆ ನಟಿಸುವ ಗೀಳನ್ನೇ ಬೆನ್ನತ್ತಿರುವ ಪ್ರಕಾಶ್ ಭಂಡಾರಿ ತೂಮಿನಾಡು ಇದೀಗ ಒಂದು ಮೊಟ್ಟೆಯ ಕಥೆ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಈ ಸಿನಿ ಪಯಣ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ನಮ್ಮೆಲ್ಲರ ಹಾರೈಕೆ.
ಶ್ರವಣಕುಮಾರ್ ಕಟ್ಲ
ಶ್ರವಣ್ ಕುಮಾರ್ ಕಟ್ಲ –  ಒಂದು ಚಿತ್ರಮನಸ್ಸಿನಲ್ಲಿಉಳಿಯಲು ಹಲವು ವಿಷಯಗಳು ಕಾರಣವಾಗುತ್ತವೆ. ಕಥೆ, ಹಾಡು, ಸಂಗೀತ, ಅಭಿನಯ ಹೀಗೆ ಪಟ್ಟಿ ಸಾಗುತ್ತೆ. ಆದರೆ ಚಿತ್ರದಲ್ಲರಳುವ ಕಲೆ ( ಆರ್ಟ್ ) ಗೂ ಇನ್ನಿಲ್ಲದ ಮಹತ್ವವಿರುತ್ತೆ. ಯಶಸ್ಸಿನ ಹಾದಿಯಲ್ಲಿರುವ ಒಂದು ಮೊಟ್ಟೆಯ ಕಥೆಯಲ್ಲಿರುವ ಆರ್ಟ್ ವರ್ಕ್ ಗಳೂ  ಅದ್ಭುತವಾಗಿ ಮೂಡಿಬಂದಿದೆ. ಈ ಅದ್ಭುತ ಮ್ಯಾಜಿಕ್ ನ ಹಿಂದಿರೋದು ನಮ್ಮವರೇ ಆಗಿರುವ ಶ್ರವಣ್ ಕುಮಾರ್ ಕಟ್ಲ.. ಸುರತ್ಕಲ್ ಮೂಲದ ಶ್ರವಣ್ ಚಂದ್ರಮೋಹನ್ ಹಾಗೂ ಸುಜಾತ  ದಂಪತಿಯ ಪುತ್ರ. ಮಂಗಳೂರಿನ ಸ್ಪರ್ಶ್ ಕಂಪನಿಯನ್ನ ಮುನ್ನಡೆಸುತ್ತಿರುವ ಶ್ರವಣ್ ಮಲ್ಟಿ ಮೀಡಿಯಾ ಡಿಸೈನರ್ ಕೂಡ ಹೌದು..  ಇವರ ಕಲಾಕಲ್ಪನೆಯಲ್ಲಿ ಅರಳಿರುವ ಒಂದು ಮೊಟ್ಟೆಯ ಕಥೆ ಜನ ಮೆಚ್ಚುಗೆಗೆ ಪಾತ್ರವಾಗಿದ್ದು ಶ್ರವಣ್ ಕುಮಾರ್ ಕಟ್ಲ ಅವರ ಶ್ರಮಕ್ಕೆ ನಮ್ಮ ಅಭಿನಂದನೆಗಳು.
ಕೀರ್ತನ್ ಭಂಡಾರಿ

ಕೀರ್ತನ್ ಭಂಡಾರಿ – ಒಂದು ಮೊಟ್ಟೆಯ ಕಥೆ ಚಿತ್ರದ ಹಾಡುಗಳೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ’ ಹೆಣ್ಣೆ ಯಾರೇ ಕೇಳಲಿ ನಿನ್ನೆ ‘  ಎಂಬ ಹಾಡು ವಿಶೇಷವಾಗಿ ಆಕರ್ಷಿಸಿದೆ. ಇದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರೋದು ನಮ್ಮ ಕೀರ್ತನ್ ಭಂಡಾರಿ ಅವರಿಗೆ. ಕೇವಲ 20 ವರ್ಷದ ಕೀರ್ತನ್ ಈಗಾಗಲೇ ಸಂಗೀತ ಲೋಕದಲ್ಲಿ ಅರಳುತ್ತಿರುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.ಕುಳಾಯಿ ಮಾಧವ ಭಂಡಾರಿ ಹಾಗೂ ವತ್ಸಲಾ ದಂಪತಿಯ ಪುತ್ರರಾಗಿರುವ ಕೀರ್ತನ್ ಓದುತ್ತಾ ಇರೋದು ರಾಮಕೃಷ್ಣಾ ಡಿಗ್ರಿ ಕಾಲೇಜಿನಲ್ಲಿ. ಓದಿನ ಜೊತೆಗೆ ಸಂಗೀತದ ನಂಟು ಬೆಳೆಸಿಕೊಂಡಿರುವ ಕೀರ್ತನ್ ಈಗಾಗಲೇ 19 ಕಿರುನಾಟಕ, 6 ನಾಟಕಗಳನ್ನ ರಚಿಸಿದ್ದಾರೆ. ಕಿರು ನಾಟಕಗಳ ಸರಣಿಗೆ 160ಕ್ಕೂ ಹೆಚ್ಚು ಹಾಡುಗಳು, 6 ತುಳು ಚಿತ್ರಗಳಿಗೆ ಸಾಹಿತ್ಯ, 11 ರಿಯಾಲಿಟಿ ಶೋಗಳಿಗೆ ಟೈಟಲ್ ಸಾಂಗ್ ಬರೆದುಕೊಟ್ಟ ಹಿರಿಮೆ ಕೀರ್ತನ್ ಭಂಡಾರಿಯವರದ್ದು. ಹೀಗೆ ಪ್ರತಿಭೆ ಹಾಗೂ ಸ್ಪೂರ್ತಿಯ ಚಿಲುಮೆಯಂತಿರುವ ಕೀರ್ತನ್ ಭಂಡಾರಿಯವರು ಬರೆದಿರುವ ಹಾಡು ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಸೂಪರ್ ಹಿಟ್ ಆಗಿದೆ ಅನ್ನೋದು ನಮ್ಮೆಲ್ಲರ ಹೆಮ್ಮೆ.

ಹೀಗೆ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ನಮ್ಮ ಮೂರು ಮುತ್ತುಗಳು ದುಡಿದಿದ್ದು ಇಲ್ಲಿ ಸಿಕ್ಕಿರುವ ಯಶಸ್ಸು ಅವರ ಬದುಕಿಗೆ ದಾರಿದೀಪವಾಗಲಿ ಅನ್ನೋದು ನಮ್ಮ ಹಾರೈಕೆ..
………………………………….
ಬರಹ:ಪ್ರಶಾಂತ್.ಬಿ.ಆರ್,  
ಸಂಪಾದಕರು ಭಂಡಾರಿವಾರ್ತೆ.

0 thoughts on “‘ಮೊಟ್ಟೆ’ಯೊಳಗಿರುವ ‘ಮೂರು’ ಭಂಡಾರಿ ಮುತ್ತುಗಳು..!

Leave a Reply

Your email address will not be published. Required fields are marked *