November 24, 2024
WhatsApp Image 2021-10-13 at 13.09.34

ಕಥೆ – 8

“ಮೌನದ ನಿಧಿ”

ನಗು ಎಂದರೆ ಅವಳು, ಅವಳೆಂದರೆ ನಗು. ಮುಂಜಾನೆಗೆ ಅರಳಿದ ಪುಷ್ಪದಂತೆ ಅವಳು ನಿತ್ಯವೂ ಹೊಚ್ಚಹೊಸ ಕನಸಿನೊಂದಿಗೆ ನನ್ನೆದುರಾಗುತ್ತಾಳೆ . ಎಂದೂ ಬಾಡದ ಮೊಗದಲ್ಲಿ ಹಚ್ಚ ಹಸಿರ ನಗು. ಕಣ್ಣಿಗೆ ಕಾಣದ ಕಂಗಳೊಳಗೆ ಏನೋ ಮುಗ್ಧತೆ, ಜೊತೆ ತುಸು ತುಂಟಾಟ.ತುಂಬು‌ಗೆನ್ನೆಯಲ್ಲಿ‌ ಗುಲಾಬಿ ರಂಗು. ತುಟಿ ತೆರೆದರೆ ಅರಳಿದ ತಾವರೆಯೇ ಸರಿ. ಆದರೆ ಆಕೆ ಮೌನದ ಮೊಗ್ಗು. ಮಾತೆತ್ತಿದರೆ ಮುತ್ತು ಉದುರಿತೋ ಎಂಬ ಭಯ. ಮೌನದಲ್ಲೂ ಆಕೆ ಸುಂದರಿ. ಬ್ರಹ್ಮನ ಅದ್ಭುತ ಸೃಷ್ಟಿಯ ಅಪೂರ್ವ ಕೊಡುಗೆ ಆಕೆ. ದಂತದ ಮೈಬಣ್ಣದ ಚೆಲುವೆಯ ಬೆಡಗನ್ನು ಮತ್ತಷ್ಟು ಹೆಚ್ಚುವುದು,ಬೆನ್ನ ಮೇಲೆ ಹರಡಿರುವ ಕಪ್ಪು ಮೋಡದಂತೆ ಇರುವ ಗುಂಗುರು ಕೂದಲು. ಹಣೆಯ ಮೇಲೆ ಲಾಸ್ಯವಾಡುತ್ತಾ ನೋಡುಗರಿಗೆ ಅಸೂಯೆ ಹುಟ್ಟಿಸುವ ಮುಂಗುರುಳು. ನಿರಾಸೆಯಿಂದರೆ ಇಂದಿಗೂ ಆಕೆಯ ಹೆಸರು ತಿಳಿದಿಲ್ಲ. ಒಂದೇ ಕ್ಯಾಂಪಸ್ಸಿನ ಒಳಗಿದ್ದರೂ ಮಾತನಾಡಲಾಗದ ಹಿಂಜರಿಕೆ.ಇಂದೇಕೋ ಭಿನ್ನವಾಗಿ ಕಂಡಳು ಚೆಲುವೆ. ಅಚ್ಚ ಬಿಳಿ ಚೂಡಿದಾರ ಆಕೆಯ ಮುಗ್ಧ ಮನಸ್ಸಿಗೆ ಕನ್ನಡಿ ಹಿಡಿದಂತಿತ್ತು.

ಎವೆಯಿಕ್ಕದೆ ಆಕೆಯನ್ನು ದಿಟ್ಟಿಸುತ್ತಿದ್ದ ನನ್ನನ್ನು ಗೆಳೆಯ ‘ಶ್ರೀಕಾಂತ’ ತಿಳಿದಾಗಲೇ ಅರಿವಿಗೆ ಬಂದದ್ದು ನಾನೆಲ್ಲೋ ಕಳೆದು ಹೋಗಿರುವೆ ಎಂದು‌.ಆ ಕ್ಷಣ ಆತ “ಬಾಲು ಆ ರೀತಿ ನೋಡ ಬೇಡ ಕಣೋ. ಅವಳು ನೋಡಿ ಹೆಸರಿನಂತೆಯೇ ಬಾಲ್ಯದಿಂದಲೂ ಮಾತನ್ನು ಕಳೆದುಕೊಂಡ ನತದೃಷ್ಟೆ. ಕೊಲ್ಲೂರಿನಲ್ಲಿ ನನ್ನ ಚಿಕ್ಕಮ್ಮನಿಗೆ ವರಪ್ರಸಾದವಾಗಿ ದೊರೆತವಳು’ ಎಂದಾಗ ಬೆಚ್ಚಿಬಿದ್ದಿದ್ದೆ. ‘ಕಾಲರಾಯನ ಬಿಸಿಲಿಗೆ ಸಿಲುಕಿ ನಲುಗಿದ ಹೂ’ಇವಳು ಎಂದರಿವಾಗುವುದರೊಳಗೆ ಆಕೆ ಮುಗುಳುನಗುತ್ತಾ, ನನ್ನನ್ನು ದಾಟಿ ಸಾಗಿದ್ದಳು. ನಡಿಗೆ ಯಲ್ಲಿದ್ದ ಆತ್ಮವಿಶ್ವಾಸ ಆಕೆಯ ಮೌನವನ್ನು ಗೆದ್ದಿತು.ಅದೇ ನಡಿಗೆ.ಅವರದ್ದೇ ಪಡಿಯಚ್ಚು. ನನ್ನಮ್ಮನದೇ ತದ್ರೂಪಿ ಇವಳು.ಅಂದರೆ ನಾನು ಎಳವೆಯಲ್ಲಿ ಕಳೆದುಕೊಂಡ ತಂಗಿ ‘ಸುನಿಧಿ’ಇವಳೆನಾ? ಇಷ್ಟು ದಿನ ನನ್ನ ಹೃದಯ ತೋರುತ್ತಿದ್ದ ಸೂಚನೆ ಇದೆಯಾ? ಅಂತ ಅನಿಸಿಬಿಟ್ಟಿತು. ಕಣ್ಣರಿಯದುದನ್ನು ಕರುಳರಿಯುತ್ತದೆ ಎಂಬ ಮಾತು ನಿಜವಾಗಿತ್ತು.


ನನಗೂ ಸುನಿಧಿಗೂ ಏಳು ವರುಷಗಳ ಅಂತರ.ಅಪ್ಪ ಹಾಗೂ ಅಮ್ಮ ಬಯಸಿ ಪಡೆದ ಮಗಳವಳು.ಆದರೆ ಅಂದು ಅಪ್ಪ ಹಾಗೂ ಅಮ್ಮನ ಜತೆ ನಾವು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೊರಟಿದ್ದೆವು.ಕೊಲ್ಲೂರು ಸಮೀಪಿಸ ಬೇಕೆನ್ನುವಷ್ಟರಲ್ಲಿ ನಮ್ಮ ಕಾರು ಅಪಘಾತಕ್ಕೆ ಒಳಗಾಗಿತ್ತು.ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿತ್ತು. ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ನಮ್ಮವರ ನಡುವೆ ‘ಸುನಿಧಿ‌’ ಕಾಣಿಸಲಿಲ್ಲ.ನಡೆದ ಅನಾಹುತದಲ್ಲಿ ಮೂರರ ಹರೆಯದ ಬಾಲೆ ‘ಸುನಿಧಿ’ ಕಳೆದುಹೋಗಿದ್ದಳು. ಎಷ್ಟು ಹುಡುಕಿದರೂ ಆಕೆಯ ಸುಳಿವು ದೊರೆಯಲಿಲ್ಲ. ಆ ಸ್ಥಳದಲ್ಲಂತೂ ಇಂಚಿಂಚೂ ಬಿಡದೆ ಹುಡುಕಾಡಿದ್ದೆವು,ತಡಕಾಡಿದ್ದೆವು.ಆಕೆಯ ಪತ್ತೆ ಮಾಡಲು ಮಾಡಿದ ಪ್ರಯತ್ನಗಳಾವುದೂ ಫಲಿಸಲೇ ಇಲ್ಲ.ಅಮ್ಮ ಅದೇ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ. ಜತೆಗೆ ನಮ್ಮೆಲ್ಲರ ಕಾಯುವಿಕೆ ನಿರಂತರ. ಆದರೆ ಮಾತಿನ ಮಲ್ಲಿ ಯಾಗಿದ್ದ ‘ನಿಧಿ’ ಮೌನಿ ಯಾಕಾದಳು ಎಂದರಿವಾಗಲಿಲ್ಲ .


ನಡೆದ ವೃತ್ತಾಂತವನ್ನು ‘ಶ್ರೀಕಾಂತ್’ ತಿಳಿಸಿದಾಗ ಆತನು ಅಚ್ಚರಿಗೊಳಗಾದ. ಯಾವುದೇ ಕಾರಣಕ್ಕೂ ಸತ್ಯಾಸತ್ಯತೆ ತಿಳಿಯಬೇಕೆಂದು ‘ಮೌನಿ’ಯ ರಕ್ತ ಪರೀಕ್ಷೆಯನ್ನು ಶ್ರೀಕಾಂತನ ಮೂಲಕ ಮಾಡಿಸಿದೆ. ಕೊನೆಗೂ ನಮ್ಮೆಲ್ಲರ ಕಾಯುವಿಕೆಯ ತಪಸ್ಸು ಗೆದ್ದಿತ್ತು. ಕರಾಳ ನೆನಪು ಕಾಲರಾಯನ ತೆಕ್ಕೆಯೊಳಗೆ ಅವಿತುಕ್ಕೊಳ್ಳುವ ಸಮಯ ಸನ್ನಿಹಿತವಾಗಿತ್ತು.ಆಕೆಯ ಮನೆಯವರಿಗೆ ವಿಷಯದರಿವು ಮಾಡಿಸಿ ಒಂದು ಶುಭಮುಹೂರ್ತದಲ್ಲಿ ‘ಮೌನಿ’ಯನ್ನು ನಮ್ಮರಮನೆಯೊಳಗೆ ‘ಶ್ರೀಕಾಂತ’ ಕರೆತಂದಿದ್ದ. ‘ಸುನಿಧಿ’ಅಮ್ಮನನ್ನು ನೋಡಿದ್ದೆ ತಡ ‘ಅಮ್ಮ’ ಅಂದಿದ್ದಳು.ಬಸಿರ ಉಸಿರು ಮಾತನಾಡಿತ್ತು. ಅಮ್ಮನ‌ ಮೊರೆ ಕೊನೆಗೂ ಭಗವಂತನಿಗೆ ಕೇಳಿಸಿತ್ತು.ಕರುಳ ನಂಟು ಬೆಸೆದಿತ್ತು.ಇಂದು ‘ಸುನಿಧಿ’ ಎರಡು ಮನೆಯ ಮಗಳಾಗಿ ಮನೆ-ಮನಗಳನ್ನು ಬೆಳಗುತ್ತಿದ್ದಾಳೆ.ಕಾನೂನು ಪ್ರಕಾರವಾಗಿ ಆಕೆ ನಮ್ಮ ಮನೆ ಮಗಳೆಂದು‌ ಸಾಬೀತಾಗಿದೆ.


ಅಂದು ನಡೆದ ಅಪಘಾತದಲ್ಲಿ ಒಬ್ಬಂಟಿಯಾಗಿ ಅಳುತಿದ್ದ ‘ಸುನಿಧಿ’ ಯನ್ನು ಯಾರೋ ಹೆಂಗಸು ಎತ್ತಿಕೊಂಡು ದೇವಸ್ಥಾನದ ಬಳಿ ಬಂದಿದ್ದಳು.ಅಲ್ಲೆ ಹೊಂಚು ಹಾಕುತ್ತಿದ್ದ ಕಳ್ಳರ ಗುಂಪೊಂದು ನಿಧಿಯನ್ನು ಅಪಹರಿಸಿ ಮಾರಟಕ್ಕಿಟ್ಟಿದ್ದರು.ಅದೇ ವೇಳೆ ಮಕ್ಕಳಿಲ್ಲದ ಶ್ರೀಕಾಂತ್ ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮಕೊಲ್ಲೂರು ದೇವಸ್ಥಾನ ನದಲ್ಲಿ ಪ್ರಾರ್ಥಿಸಿ ಬಂದಿದ್ದರು.ದೈವ ನಿರ್ಣಯ ಎಂಬಂತೆ ಮದ್ಯವರ್ತಿ ಓರ್ವನ ಸಹಾಯದಿಂದ ‘ಸುನಿಧಿ’ ಅವರ ಕೈ ಸೇರಿದ್ದಳು.ಅವರ ಮನೆ ಮಗಳಾಗಿದ್ದಳು.ಕಾನೂನಿನ ಅರಿವು ಇಲ್ಲದೆ , ಮಾಧ್ಯಮದ ಛಾಪು ಅಷ್ಟಾಗಿ ಇಲ್ಲದ ಕಾಲದಲ್ಲಿ ಇಷ್ಟೆಲ್ಲಾ ಘಟನೆ ನಡೆದು ಹೋಗಿತ್ತು.

✍🏻ಎ.ಆರ್.ಭಂಡಾರಿ.ವಿಟ್ಲ.

Leave a Reply

Your email address will not be published. Required fields are marked *