
ಮಗ ತಂದೆಯನ್ನು ಮೀರಿಸಬೇಕು, ಶಿಷ್ಯ ಗುರುವನ್ನು ಮೀರಿಸಬೇಕು ಆಗಲೇ ತಂದೆಗೆ ಭೂಷಣ,ಗುರುವಿಗೆ ಗೌರವ. ತಂದೆಯಿಂದಲೇ ಬೇಷ್ ಎನ್ನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಹಾಗೆಯೇ ವಿದ್ಯೆ ಕಲಿಸಿದ ಗುರುಗಳಿಂದ ಬೆನ್ನು ತಟ್ಟಿಸಿಕೊಳ್ಳುವುದೂ ಕಡಿಮೆ ಸಾಧನೆಯೇನಲ್ಲ. ಸಂಗ ಮಾಡಿರುವುದು ಕಠಿಣವಾದ ಕಬ್ಬಿಣ ಮತ್ತು ಉಕ್ಕುಗಳದು, ಆದರೆ ಜೀವನದ ಸೂಕ್ಷ್ಮತೆ,ಆರ್ದ್ರತೆಯನ್ನು ಮೈಗೂಡಿಸಿಕೊಂಡು, ಶಿಕ್ಷಣದ ಆಕಾಂಕ್ಷಿಗಳಾದ ಅಶಕ್ತ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟಿ, ಅವರು ಸ್ವತಂತ್ರವಾಗಿ, ಸ್ವಚ್ಛಂದವಾಗಿ ವಿಹರಿಸುವುದನ್ನು ಕಂಡು ಖುಷಿ ಪಡುವ ಜಾಯಮಾನದ ವ್ಯಕ್ತಿಯೊಬ್ಬರು ಈ ರೀತಿಯ ಅಪರೂಪದ ಗೌರವಾಧರಗಳಿಗೆ ಪಾತ್ರರಾಗಿದ್ದಾರೆ. ಅವರೇ ನಮ್ಮ ಭಂಡಾರಿ ಸಮಾಜದಲ್ಲಿ ಶಿಕ್ಷಣಪ್ರೇಮಿಯೆಂದು ಹೆಸರಾಗಿರುವ ಪೂನಾದ ಉದ್ಯಮಿ ಶ್ರೀ ಬಾಲಕೃಷ್ಣ ಭಂಡಾರಿ ಪುತ್ತೂರು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್ (NITK) ಸಂಸ್ಥೆಯು ಈ ವರ್ಷ ತನ್ನ ವಜ್ರಮಹೋತ್ಸವ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ತನ್ನ ವಿದ್ಯಾಸಂಸ್ಥೆಯಲ್ಲಿ ಕಲಿತು ಜೀವಮಾನದಲ್ಲಿ ವಿಶೇಷ ಸಾಧನೆ ಮಾಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲು ಸಂಸ್ಥೆಯು ಮುಂದಾಗಿದೆ.ಈ ವಿಶೇಷ ಗೌರವಕ್ಕೆ ನಮ್ಮ ಭಂಡಾರಿ ಕುಟುಂಬದ ಪೂನಾದ ಕ್ಯಾಬಿನೆಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್ ನ ಶ್ರೀ ಬಾಲಕೃಷ್ಣ ಭಂಡಾರಿ ಪುತ್ತೂರುರವರು ಆಯ್ಕೆಯಾಗಿದ್ದಾರೆ.
ಚಿಕ್ಕ ಪುತ್ತೂರು ಮಹಾಲಿಂಗ ಭಂಡಾರಿ ಮತ್ತು ಕರಿಂಕ ಶೀಲಾವತಿ ಭಂಡಾರಿಯವರ ಪುತ್ರರಾದ ಶ್ರೀ ಬಾಲಕೃಷ್ಣ ಭಂಡಾರಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾರಾಡಿಯ ಸರಕಾರಿ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕೊಂಬೊಟ್ಟು ವಿನ “ಬೋರ್ಡ್ ಹೈಸ್ಕೂಲ್” ನಲ್ಲಿ ಪೂರೈಸಿದರು. ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಇವರು 1982 ರಲ್ಲಿ ಅಂದಿನ “ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್, ಸುರತ್ಕಲ್ (KREC) ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಬಿ-ಟೆಕ್ ಪದವಿಯನ್ನು ಅತ್ಯುತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ಪೂರೈಸಿದರು.

ಬಾಲಕೃಷ್ಣ ಭಂಡಾರಿ ಪುತ್ತೂರು ರವರು ವಿದ್ಯಾಭ್ಯಾಸ ಪೂರೈಸಿ ಕಾಗದ ಉತ್ಪಾದನಾ ಉದ್ಯಮದಲ್ಲಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಕಬ್ಬಿಣ ಮತ್ತು ಉಕ್ಕು ಉದ್ಯಮದಲ್ಲಿ ಹದಿನೈದು ವರ್ಷಗಳ ಕಾಲ ಅನುಭವ ಪಡೆದು, 1997 ರಲ್ಲಿ ಪೂನಾದಲ್ಲಿ ಇವರು ಸ್ಥಾಪಿಸಿದ ಉದ್ಯಮವೇ “ಕ್ಯಾಬಿನೆಟ್ ಸಿಸ್ಟಮ್ಸ್ ಅ್ಯಂಡ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್” ಇವರು ತಮ್ಮ ಸಂಸ್ಥೆಯಲ್ಲಿ ಈಗ ನೂರಾರು ಕಾರ್ಮಿಕರಿಗೆ ಉದ್ಯೋಗ ನೀಡಿ ಆಶ್ರಯದಾತರಾಗಿದ್ದಾರೆ. ಇವರ ಕಾರ್ಖಾನೆಯ ಉತ್ಪನ್ನಗಳು ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತವೆ ಎನ್ನುವುದು ಹೆಮ್ಮೆಯ ವಿಷಯ.
ಶ್ರೀಯುತ ಬಾಲಕೃಷ್ಣ ಭಂಡಾರಿಯವರು ಕಳೆದ ಹದಿನೈದು ವರ್ಷಗಳಿಂದ ಪುತ್ತೂರಿನಲ್ಲಿ “ಮಹಾಲಿಂಗ ಭಂಡಾರಿ ಚಾರಿಟೇಬಲ್ ಸೇವಾ ಟ್ರಸ್ಟ್” ಎಂಬ ಸಂಸ್ಥೆಯನ್ನು ತಮ್ಮ ತಂದೆಯ ನೆನಪಿಗಾಗಿ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸೇವಾ ಟ್ರಸ್ಟ್ ನ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಭಂಡಾರಿ ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ,ನಮ್ಮ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಂಡಿದ್ದಾರೆ.
ಮುಂಬಯಿಯಲ್ಲಿ ಕಳೆದ ಹತ್ತು ವರ್ಷಗಳಿಂದ ತಂದೆ ದಿವಂಗತ ಮಹಾಲಿಂಗ ಭಂಡಾರಿಯವರು ಮತ್ತು ಅತ್ತೆ ದಿವಂಗತ ಬನ್ನಂಜೆ ಸುಶೀಲಾ ಭಂಡಾರಿಯವರ ಸವಿನೆನಪಿನಲ್ಲಿ 2,50,000/- (ಎರಡೂವರೆ ಲಕ್ಷ) ರೂಪಾಯಿಗಳನ್ನು ಠೇವಣಿ ಇಟ್ಟು ಮುಂಬಯಿ ಸೇವಾ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಾ ಬಂದಿದ್ದಾರೆ.

ಭಂಡಾರಿ ಸಮಾಜದ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಪ್ರೇಮಿಯಾಗಿರುವ,ಕೊಡುಗೈ ದಾನಿಗಳಾಗಿರುವ ಉದ್ಯಮಿ ಶ್ರೀ ಬಾಲಕೃಷ್ಣ ಭಂಡಾರಿಯವರಿಗೆ “ಭಂಡಾರಿವಾರ್ತೆ” ಯ ಮೇಲೆ ವಿಶೇಷ ಪ್ರೀತಿಯಿದೆ.ನಾವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮನವಿ ಮಾಡಿಕೊಂಡಾಗಲೆಲ್ಲ ನಮ್ಮ ಮನವಿಗೆ ಸ್ಪಂದಿಸಿ, ನಮ್ಮ ನಿಸ್ವಾರ್ಥ ಕಾಯಕವನ್ನು ಪ್ರಶಂಸಿಸಿ ಬೆನ್ನು ತಟ್ಟಿದ್ದಾರೆ.ಇವರ ಪತ್ನಿ ಶ್ರೀಮತಿ ಸುಲೋಚನಾ ಬಾಲಕೃಷ್ಣ ಭಂಡಾರಿಯವರು ಪತಿಯ ಸಮಾಜಸೇವೆಗಳಿಗೆ ಒತ್ತಾಸೆಯಾಗಿದ್ದಾರೆ.ಇವರ ಪ್ರಥಮ ಪುತ್ರಿ ಹರ್ಷಿತಾ ಬಿ.ಇ. ಪದವಿ ಮತ್ತು ಎಂಬಿಎ ಪದವಿ ಪಡೆದು ಕುವೈತ್ ನಲ್ಲಿ ನೆಲೆಸಿದ್ದಾರೆ. ಎರಡನೇ ಪುತ್ರಿ ಕು.ನಮೃತ ಮಂಗಳೂರಿನ ಎ.ಜೆ. ಶೆಟ್ಟಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಕರ್ನಾಟಕ. ಸುರತ್ಕಲ್ (NITK) ಈ ವಿದ್ಯಾಸಂಸ್ಥೆಯಲ್ಲಿ 1980 ರಿಂದ ಇಲ್ಲಿಯವರೆಗೆ ಸುಮಾರು 25,000 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿದ್ದರೂ,ಸಂಸ್ಥೆಯಲ್ಲಿ ಗೌರವಪ್ರಧಾನ ಪಡೆದವರು ಕೇವಲ 38 ಜನ ಪ್ರತಿಭಾವಂತರು ಮಾತ್ರ.ಇಂತಹ ವಿಶೇಷವಾದ ಗೌರವಕ್ಕೆ ಪಾತ್ರರಾಗಲು ಶಿಕ್ಷಣಪ್ರೇಮಿ ಶ್ರೀ ಬಾಲಕೃಷ್ಣ ಭಂಡಾರಿಯವರು ಅರ್ಹರು.ಅವರಿಗೆ ಮುಂದಿನ ದಿನಗಳಲ್ಲಿ ಇಂತಹ ಹಲವಾರು ಪ್ರಶಸ್ತಿ, ಗೌರವಾಧರಗಳು ಒಲಿದು ಬರಲಿ,ಸಮಾಜಸೇವೆ ಮಾಡಲು ಶ್ರೀಯುತರಿಗೆ ಶ್ರೀದೇವರು ಇನ್ನಷ್ಟು ಶಕ್ತಿ, ಸಾಮರ್ಥ್ಯ, ಆರೋಗ್ಯ, ಆಯುಷ್ಯ,ಐಶ್ವರ್ಯಗಳನ್ನು ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿ ವಾರ್ತೆ” ಹೃದಯಪೂರ್ವಕವಾಗಿ ಹಾರೈಸುತ್ತದೆ.
“ಭಂಡಾರಿ ವಾರ್ತೆ.”