ಬೆಳ್ತಂಗಡಿ ತಾಲೂಕು ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಇದರ ಅಧ್ಯಕ್ಷರಾಗಿ ಮಾರೂರು ದಿವಂಗತ ಶ್ರೀ ಈಶ್ವರ ಭಂಡಾರಿ ನಾರಾವಿ ಮತ್ತು ದಿವಂಗತ ಶ್ರೀಮತಿ ಸುಶೀಲ ಭಂಡಾರಿ ನೆಲ್ಲಿಂಗೇರಿ ದಂಪತಿಯ ಪುತ್ರ ಶ್ರೀ ಸುಧಾಕರ ಭಂಡಾರಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರ್ದೇಶಕರಾಗಿ ಮತ್ತು ಒಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೂರನೇ ಬಾರಿಗೆ ಸಹಕಾರಿ ಭಾರತಿ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿ ಪ್ರಸ್ತುತ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಹಕಾರಿ ಧುರೀಣರಾಗಿದ್ದು ,ಸಾಮಾಜಿಕ ,ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಶ್ರೀ ಸುಧಾಕರ ಭಂಡಾರಿ ಯವರು ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಸದಸ್ಯರಾಗಿಯೂ , ನಾರಾವಿ ಜೇಸಿಸ್ ಸದಸ್ಯರಾಗಿಯೂ , ನಾರಾವಿ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ , ನಾರಾವಿ ಸೂರ್ಯ ನಾರಾಯಣ ಯುವಕ ಮಂಡಲದ ಅಧ್ಯಕ್ಷರಾಗಿಯೂ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ .
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆರಂಭದ 1992 ನೇ ಇಸವಿಯಲ್ಲಿ ಭಂಡಾರಿ ಸ್ವಯಂ ಸೇವಕರ ತಂಡದೊದಿಗೆ ಮನೆ ಮನೆಗೆ ದೇಣಿಗೆ ಸಂಗ್ರಹದ ಡಬ್ಬಿಯನ್ನು ಬೆಳ್ತಂಗಡಿ ತಾಲೂಕಿನ ನಾರಾವಿ ,ವೇಣೂರು , ನೆಲ್ಲಿಂಗೇರಿ, ಅಂಡಿಂಜೆ , ಅಳದಂಗಡಿ ,ಪೆರಾಡಿ , ಪುಲ್ಕೇರಿ , ಮರೋಡಿಯಂತಹ ಗ್ರಾಮೀಣ ಪ್ರದೇಶದ ನೂರಾರು ಮನೆಗಳಿಗೆ ತೆರಳಿ ಧನ ಸಂಗ್ರಹದ ಡಬ್ಬಿಯನ್ನು ನೀಡಿ ಶ್ರೀ ನಾಗೇಶ್ವರನ ಕೃಪಾಕಟಾಕ್ಷಗೆ ಪಾತ್ರರಾಗಿರುತ್ತಾರೆ .
ಕುಲ ಕಸುಬಿನ ವ್ಯಾಮೋಹದಿಂದಾಗಿ ನಾರಾವಿಯಲ್ಲಿ ಕಳೆದ 35 ವರ್ಷಗಳಿಂದ ನೂತನ ಮೆನ್ಸ್ ಪಾರ್ಲರ್ ನ್ನು ನಡೆಸುತ್ತಿದ್ದಾರೆ .ಒಬ್ಬರಿಗೆ ಒಂದೇ ಹುದ್ದೆಯಲ್ಲಿ ಇರಬೇಕು ಎಂಬ ನಿಲುವನ್ನು ಹೊಂದಿರುವ ಶ್ರೀ ಸುಧಾಕರ ಭಂಡಾರಿ ಅವಕಾಶ ಒತ್ತಡ ಇದ್ದರೂ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಎಂಬ ಮನದಾಳದ ಮಾತನ್ನು ಭಂಡಾರಿ ವಾರ್ತೆಯ ಜೊತೆ ಸಂತಸದಿಂದ ಹಂಚಿಕೊಂಡರು .
ಪುತ್ರರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಹಿರಿಯ ಪುತ್ರ ಸಂಪತ್ ಎಸ್ . ಭಂಡಾರಿ ಯವರು ಬೆಂಗಳೂರಿನ ಸಹಕಾರಿ ಮರಾಟ ಮಹಾಮಂಡಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕಿರಿಯ ಪುತ್ರ ಸಂಚಿತ್ ಎಸ್ . ಭಂಡಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಡುಬಿದ್ರೆ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತ ಸುಧಾಕರ ಭಂಡಾರಿಯವರು ಪತ್ನಿ ಶ್ರೀಮತಿ ಶ್ಯಾಮಲಾ ಎಸ್ . ಭಂಡಾರಿಯವರ ಜೊತೆ ನಾರಾವಿ ಪಾಣಲ್ ರಸ್ತೆಯ ದರ್ಕಾಸು ಎಂಬಲ್ಲಿ ತಮ್ಮ ಸ್ವಗೃಹದಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಶ್ರೀ ಸುಧಾಕರ ಭಂಡಾರಿಯವರಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶ ಒದಗಿಬರಲಿ ಹಾಗೂ ತಮ್ಮ ಅಧಿಕಾರ ಅವಧಿಯಲ್ಲಿ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆ ಉತ್ತುಂಗಕ್ಕೆ ಏರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಅಭಿನಂದನೆ ಸಲ್ಲಿಸುತ್ತಾ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ