ಜಾಗತಿಕವಾಗಿ ಮನುಕುಲಕ್ಕೆ ಸವಾಲಾಗಿರುವ ಕ್ಯಾನ್ಸರ್ ಕಾಯಿಲೆಯ ಸುತ್ತ ಬಹಳಷ್ಟು ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿದೆ ಕೂಡಾ. ಇಂತಹ ಸಂಶೋಧನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಪಶ್ಚಿಮ ಘಟ್ಟ ಸಾಲಿನಲ್ಲಿ ಸಿಗುವ ಔಷಧೀಯ ಗಿಡಳನ್ನು ಬಳಸಿ ಕ್ಯಾನ್ಸರ್ ಕಾಯಿಲೆಗೆ ಔಷಧಿಯನ್ನು ಸಿದ್ಧಪಡಿಸಲು ಸಂಶೋಧನೆಯನ್ನು ನಡೆಸುತ್ತಿರುವ ಪ್ರಿಯದರ್ಶಿನಿ ಆನಂದ ಭಂಡಾರಿಯವರು ಮೂಲತಃ ಕೊಲ್ಲೂರಿನವರು.
ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ವಿಶಾಲಾಕ್ಷಿ ಭಂಡಾರಿಯವರ ಇಬ್ಬರು ಮಕ್ಕಳಲ್ಲಿ ಪ್ರಿಯದರ್ಶಿನಿ ಹಿರಿಯವರು. ಎಳವೆಯಿಂದಲೇ ಓದಿನಲ್ಲಿ ಮುಂದಿದ್ದ ಇವರು ಮೂಕಾಂಬಿಕಾ ಟೆಂಪಲ್ ಹೈ ಸ್ಕೂಲ್ ಕೊಲ್ಲೂರಿನಲ್ಲಿ ಎಸ್.ಎಸ್.ಎಲ್.ಸಿ, ವಿವೇಕ ಕಾಲೇಜ್ ಕೋಟಾದಲ್ಲಿ ಪಿಯುಸಿ ಮತ್ತು ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕುಂದಾಪುರದಲ್ಲಿ ವಿಜ್ಞಾನ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮುಂದೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತರ ಪದವಿಯಾದ MSc ಯನ್ನು ಮೈಕ್ರೋ ಬಯಾಲಜಿ (Microbiology) ವಿಷಯದಲ್ಲಿ ರಾಂಕ್ ಪಡೆಯುವ ಮೂಲಕ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಇವರು ಮಂಗಳೂರಿನ ಫಳ್ನೀರಿನಲ್ಲಿರುವ ಇಂದಿರಾ ಕಾಲೇಜ್ ಆಫ್ ಅಲ್ಲೈಡ್ ಅಂಡ್ ಹೆಲ್ತ್ ಸೈನ್ಸ್ ನಲ್ಲಿ ಹಂಗಾಮಿ ಪ್ರಾಂಶಪಾಲರಾಗಿರುವ ಜೊತೆಗೆ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಕ್ಯಾನ್ಸರ್ ಕಾಯಿಲೆಗೆ ಔಷಧಿಯ ಸಂಶೋಧನೆಯನ್ನು ತನ್ನ ಪಿ.ಎಚ್.ಡಿ ಯ ವಿಷಯ (Antimicrobial Activity of Memecylon Malabaricum Research) ವನ್ನಾಗಿ ಮಂಡಿಸಲು ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಜೊತೆಗೆ ಬಹಳಷ್ಟು ಸನ್ಮಾನಗಳಿಗೆ ಮತ್ತು ಪ್ರಶಸ್ತಿಗಳಿಗೆ ಈಗಾಗಲೇ ಭಾಜನರಾಗಿರುವ ಪ್ರಿಯದರ್ಶಿನಿಯವರು,
ತನ್ನ ಕಲಿಕೆಯ ಮೂಲಕ ಸಮಾಜಕ್ಕೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂದು ಗುರಿಯಾಗಿಸಿಕೊಂಡಿದ್ದಾರೆ. ಇವರ ಮಂದಿನ ಬದುಕು ಹಸನಾಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಬಯಸುತ್ತದೆ..
-ಭಂಡಾರಿ ವಾರ್ತೆ