ಸುರತ್ಕಲ್ ಸಮೀಪದ ಸೂರಿಂಜೆ ಗ್ರಾಮದ ದಿವಂಗತ ಸಿದ್ದು ಭಂಡಾರಿ ಮತ್ತು ದಿವಂಗತ ಶಂಕರಿ ಭಂಡಾರಿಯವರ ಪುತ್ರ ಶ್ರೀ ವಾಮನ ಭಂಡಾರಿ ಸೂರಿಂಜೆ (59 ವರ್ಷ) ಅವರು ದಿನಾಂಕ 07-12-2019 ರಂದು ಶನಿವಾರ ಮುಂಜಾನೆ 6.00 ಗಂಟೆಗೆ ತೀವ್ರ ಉಸಿರಾಟ ತೊಂದರೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇಂದು ಸ್ವ ಗೃಹದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಬಡ ಕುಟುಂಬದಲ್ಲಿ ಜನಿಸಿದ ಶ್ರೀಯುತ ವಾಮನ ಭಂಡಾರಿಯವರು ವಿದ್ಯಾಭ್ಯಾಸದ ನಂತರ ಕ್ಷೌರಿಕ ವೃತ್ತಿಯಲ್ಲಿ ತೊಡಗಿ ಬಿಡುವಿನ ವೇಳೆಯಲ್ಲಿ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮತ್ತು ಭಜನಾ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಇವರು ಅನೇಕ ಭಜನೆಗಳನ್ನು ಸ್ವತಃ ರಚಿಸಿ ಹಾಡಿದ್ದರು. ಯಕ್ಷಗಾನ ಕಲೆಯಲ್ಲಿ ಬಹುಮುಖ ಪ್ರತಿಭೆಯಾಗಿದ್ದ ಇವರು ರಾಜ , ಮಂತ್ರಿ , ರಕ್ಕಸ ಪಾತ್ರದಾರಿಗಳಾಗಿ ಅಭಿನಯಿಸಿದ್ದರು. ಭಾಗವತಿಕೆ , ಚೆಂಡೆ , ತಾಳ- ಮದ್ದಲೆಗಳಲ್ಲೂ ಪರಿಣತಿ ಹೊಂದಿದ್ದರು. ಪ್ರಸಿದ್ದ ಪ್ರಸಂಗಗಳಾದ ‘ದಳವಾಯಿ ಕಾಂತಣ್ಣೆ ‘ಮತ್ತು ‘ತಂಗಡಿ ತಾರಾಮತಿ’ ಎಂಬ ತುಳು ಯಕ್ಷಗಾನ ಪ್ರಸಂಗಕ್ಕೆ ಪದ್ಯರಚನೆ ಮಾಡಿದ್ದಾರೆ. ‘ತಂಗಡಿ ತಾರಾಮತಿ’ ಎಂಬ ಪ್ರಸಂಗವು ಶ್ರೀ ಕಟೀಲು ಮತ್ತು ಶ್ರೀ ಧರ್ಮಸ್ಥಳ ಮೇಳದವರಿಂದ ತುಳುನಾಡು ಮತ್ತು ಮುಂಬಯಿಯಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿತ್ತು. ವಾಮನ ಭಂಡಾರಿಯವರ ಪದ್ಯಕ್ಕೆ ಬಲಿಪ ನಾರಾಯಣ ಭಾಗವತರಾಗಿದ್ದರು. ಇಷ್ಟೇ ಅಲ್ಲದೇ ‘ಶಾಪದ ಪೊಣ್ಣು ಶಾಂತಲೆ’ ಎಂಬ ತುಳು ಯಕ್ಷಗಾನವೊಂದನ್ನು ರಚಿಸಿ ಜನಮೆಚ್ಚುಗೆ ಗಳಿಸಿದ್ದರು. ಎಲೆಮರೆ ಕಾಯಿಯಂತೆ ಕಲಾ ಸಾಧನೆ ಮಾಡಿ, ತನ್ನನ್ನು ತಾನು ಗುರುತಿಸಿಕೊಳ್ಳದೇ ಅರಸಿ ಬಂದ ಸನ್ಮಾನಗಳನ್ನು ನಿರಾಕರಿಸಿ ಕಲೆಯನ್ನು ದೇವರ ಸೇವೆಯೆಂದು ಪರಿಗಣಿಸಿ ಪ್ರಚಾರ ಬಯಸದೇ ಹವ್ಯಾಸಿ ಕಲಾವಿದರಾಗಿ ಕಲಾಸೇವೆಯೊಂದಿಗೆ ಸರಳ ಜೀವನ ನಡೆಸಿದ್ದರು.
ಇವರು ತಮ್ಮ ಪತ್ನಿ ಪುಷ್ಪಾ ಭಂಡಾರಿ , ಮಗ ಅಶೋಕ ಭಂಡಾರಿ , ಮಗಳು ಸುಪ್ರೀತಾ ಭಂಡಾರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಮೃತರಿಗೆ ಸದ್ಗತಿ ದೊರೆತು, ಕುಟುಂಬಕ್ಕೆ ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ