September 20, 2024

“ಅಯ್ಯಾರೆ… ಅಯ್ಯಾರೆ…” ಬಹಳ ಖುಷಿಯಿಂದ ಕೂಗುತ್ತಾ ಬಂದ ಕ್ಷೌರಿಕ ಮುನಿಯಪ್ಪ. ಊರಲ್ಲಿ ಮಡಿ ಮೈಲಿಗೆ ಎಂದು ದೇವರಿಗೂ ಹೆಚ್ಚಾಗಿ ಹೊಗಳಿಕೆಗೆ ಪೂಜೆಗೆ ಒಳಗಾಗುತ್ತಿದ್ದ ಕಳಸಯ್ಯನವರ ಮನೆ ಬಾಗಿಲಿಗೆ ಬಹಳ ಹರ್ಷದಿಂದ ಓಡೋಡಿ ಬಂದ. ಆ ಹರ್ಷಕ್ಕೆ ಕಾರಣ ಅವನು ಹೊಸದಾಗಿ ಕೊಂಡಿದ್ದ ಕೂಪು, ಅದು ಮೊದಲಿಗೆ ಕಳಸಯ್ಯನವರಿಗೆ ಬಳಸಬೆಕೆಂಬುದು ಅವರ ಕಟ್ಟಪ್ಪಣೆ ಆಗಿತ್ತು. ಬಹಳ ದಿನಗಳ ನಂತರ ಹೊಸದಾಗಿ ಪೇಟೆಯಿಂದ ತಂದದ್ದು ಅಯ್ಯನವರಿಗೆ ಮೊದಲು ಬಳಸಿದರೆ ಖುಷಿಯಾಗಿ ಹೆಚ್ಚಿನ ಇನಾಮು ನೀಡಬಹುದು ಎಂಬುದು ಮುನಿಯಪ್ಪನ ಆಂತರ್ಯದ ಇಂಗಿತವೂ ಕೂಡ.

ಹಾಗೆಂದು ಎಲ್ಲರಿಗೂ ಬಳಸಿದ ಕೂಪು ಕಳಸಯ್ಯನವರಿಗೆ ಬಳಸುವಂತಿರಲಿಲ್ಲ. ಅವರಿಗಾಗಿಯೆ ವಿಶೇಷ ಕೂಪು ಇರಲೇಬೆಕಿತ್ತು. ಅವರಿಗೆ ಬಳಸಿ ಹಳತಾಯಿತು ಎನ್ನುವಾಗ ಅದನ್ನು ಊರಿನ ಕೆಳವರ್ಗದ ಜನರ ಮೇಲೆ ಪ್ರಯೋಗಿಸಲು ಹೇಳಿ ಕಳುಹಿಸುತಿದ್ದರು. ಊರಿನ ಜನರ ನಂಬಿಕೆಯೂ ಅಂತೆಯೂ ಇತ್ತು, ಕಳಸಯ್ಯನವರಿಗೆ ಬಳಸಿ ನಂತರ ಉಪಯೋಗಿಸುತ್ತಿದ್ದ ಕೂಪಿಗು ಬಹಳ ಬೇಡಿಕೆ ಇತ್ತು. ಯಾಕೆಂದರೆ ದೇವತಾ ಮನುಷ್ಯರಾಗಿದ್ದ ಅವರು ಬಳಸಿದ ಕೂಪು ತಾವು ಬಳಸಿದರೆ, ತಮ್ಮ ಪಾಪಗಳನೆಲ್ಲಾ ಕಳೆದುಬಿಡುವುದು ಎಂಬ ನಂಬಿಕೆಯೂ ಬಹಳ ಬೇರೂರಿರುವುದರಿಂದ ಜನರೂ ಮುಗಿಬೀಳುತ್ತಿದ್ದರು. ಇದು ಮುನಿಯಪ್ಪಗೆ ಇನ್ನೊಂದು ರೀತಿಯ ಖುಷಿಯ ವಿಚಾರ. ಯಾಕೆಂದರೆ ಅಯ್ಯನವರು ಬಳಸಿದ ಕೂಪು ಇತರರಿಗೆ ಬಳಸುವಾಗ ಇದು ಪಾಪಗಳನ್ನು ಕಳೆಯುವುದು ಎಂಬ ನಂಬಿಕೆಯೇ ಬಂಡವಾಳವಾಗಿ ಅದನ್ನು ಬಳಸಿಕೊಳ್ಳುವವರಿಗೆ ಹೆಚ್ಚಿನ ಮೊತ್ತವನ್ನು ಪಡೆಯುತಿದ್ದ. ಹೀಗಾಗಿ ಅಯ್ಯನವರ ಹೆಸರು ಊರಲ್ಲಿ ಹೆಚ್ಚಲು ಮುನಿಯಪ್ಪನ ಪಾತ್ರವೂ ಬಹಳ ಮುಖ್ಯವಾಗಿತ್ತು.

ಕೋಳಿ ಕೂಗುವ ಮೊದಲೇ ಮುನಿಯಪ್ಪ ಈ ರೀತಿ ಕೂಗಿಕೊಂಡು ಬರುತ್ತಿರುವುದು ನೋಡಿ ಅಯ್ಯನವರು ಹೊರಗೇ ಇದ್ದ ಒಣಹುಲ್ಲ ರಾಶಿಯ ಬಳಿಯಿಂದ ಮಬ್ಬುಗತ್ತಲಲ್ಲಿ ಸ್ವಲ್ಪ ಹುಲ್ಲನ್ನು ಎತ್ತಿಕೊಂಡು ಕೊಟ್ಟಿಗೆಯ ವಿರುದ್ದ ದಿಕ್ಕಿನಿಂದ ನೆಡೆದು ಬಂದರು.  “ಎನೋ ಇದು ನಿನ್ನ ರಾದ್ದಾಂತ ? ಇಷ್ಟು ಬೆಳಗಿನ ಜಾವ ಯಾಕಾಗಿ ಓಡಿ ಬಂದೆ, ನೀನೇನು ನಿಶಾಚರಿಯ ? ಎಂಬ ಮಾತಿನೊಂದಿಗೆ ಒಂದಿಷ್ಟು ಬೈಗುಳಗಳ ಸುರಿಮಳೆಯೂ ಆಯಿತು. ಆದರೆ ಮುನಿಯಪ್ಪನಿಗೆ ಅದಾವುದರ ಮೇಲೂ ಗಮನ ಇರಲಿಲ್ಲ. ಹುಲ್ಲಿನ ರಾಶಿಯ ಆಚೆ ನಿಂತಿದ್ದ ಹೆಣ್ಣಿನ ಆಕೃತಿಯ ಕಡೆಗೇ ಗಮನ ಹರಿದಿತ್ತು. ಅದು ಅಮ್ಮನವರಂತೂ ಅಲ್ಲ, ಅವರು ತುಸು ದಪ್ಪಗೆ ಇದ್ದಾರೆ, ಯಾರಿರಬಹುದು ? ಎಂಬ ಸಣ್ಣ ಅನುಮಾನ ಮೂಡಲು ಆರಂಭಿಸಿತು. ಅತ್ತಕಡೆ ಬೆರಳು ಮಾಡಿ ತೋರಿಸಿದ, ಅಯ್ಯನವರು ತಿರುಗುವುದರೊಳಗೆ ಆ ಆಕೃತಿ ಕಣ್ಮರೆಯಾಗಿತ್ತು. “ಎಲ್ಲೋ ನಿದ್ದೆಗಣ್ಣಿನ ಭ್ರಮೆ ಇರಬೇಕು ನಿನಗೆ” ಎಂದು ಅಯ್ಯನವರು ನಗುತ್ತಾ ಹುಲ್ಲು ಹಿಡಿದು ಹೋಗಿ ಹುಲ್ಲಿನ ರಾಶಿಯ ಬಳಿ ಎಸೆದು ಬಂದರು.

 “ಹೊಸ ಕೂಪು ತಂದರೂ ಅದನ್ನು ತೋರಿಸಲು ಇದು ಸಮಯವೇ ? ಬೆಳಕು ಮೂಡಿದ ಮೇಲೆ ಬಂದರೆ ಅಗುತ್ತಿರಲಿಲ್ಲವೇ, ಅದೇನು ಅಷ್ಟು ಅವಸರ ನಿನಗೆ ? ಬೆಳಕು ಮೂಡಿದ ಮೇಲೆ ಎಲ್ಲಾದರೂ ತಿರುಗಾಟ ಉಂಟೇ ?”  ಎಂದು ಅಯ್ಯನವರು ಕೇಳಿದಾಗ, ಮುನಿಯಪ್ಪ “ಅಯ್ಯನವರೇ ಇದು ಹೊಸ ತರಹದ ಕೂಪು, ಇದನ್ನು ಮಸೆಯುವ ಅಗತ್ಯ ಇಲ್ಲ. ಇದು ಎಂದಿಗೂ ತನ್ನ ಮೊನಚನ್ನ ಕಳೆದುಕೊಳ್ಳುವುದಿಲ್ಲ” ಎಂದು ಒಂದೇ ಉಸಿರಿನಲ್ಲಿ ಉಸುರಿಬಿಟ್ಟ. ಅಯ್ಯನವರು ಹೌದೇ ಎಂದು ಬಹಳ ಹರ್ಷದಿಂದ ಕೇಳಿದರು. ಮುನಿಯಪ್ಪ ಮುಖ ಸ್ವಲ್ಪ ಸಣ್ಣ ಮಾಡಿದ, ಮತ್ತೆ ಹೇಳಿದ “ ಆದರೆ ಅಯ್ಯನವರೇ, ಇದು  ನೀಡಿದ್ದು ಸಾಮಾನ್ಯ ವ್ಯೆಕ್ತಿಯಲ್ಲ, ಅಸಾಧಾರಣ ಪುರುಷ ಪವಾಡಗಳನ್ನು ಮಾಡುವ ಸಂನ್ಯಾಸಿ. ಇದನ್ನು ದೇವತಾ ಮನುಷ್ಯರೆಂದಿನಿಕೊಂಡವರಿಗೆ ಉಪಯೋಗಿಸಿದರೆ ಯಾವುದೇ ಕಾರಣಕ್ಕೂ ಇದರ ಮೊನಚು ಕಡಿಮೆ ಆಗುವುದಿಲ್ಲವಂತೆ. ಇದನ್ನ ಯಾರೂ ತೆಗೆದುಕೊಳ್ಳಲು ಮುಂದೆ ಹೋಗದಾಗ ನನಗೆ ನಿಮ್ಮ ನೆನಪಾಗಿ ತೆಗೆದುಕೊಂಡು ಬಂದೆ. ನೀವು ಒಪ್ಪಿಗೆ ಸೂಚಿಸಿದರೆ….” ಎಂದು ರಾಗ ಎಳೆದ.  ತಕ್ಷಣವೇ ಕೋಪಗೊಂಡ ಅಯ್ಯನವರು “ನಿನಗೇನು ಬುದ್ದಿ ಹಾಳಾಗಿದೆಯೇ, ಸನ್ಯಾಸಿಯಂತೆ, ಕೂಪಂತೆ ಈ ಕಾಲದಲ್ಲಿ ಅಂತಹ ಪವಾಡಗಳನ್ನು ಮಾಡುವ ಪುರುಷರು ಇರಲು ಸಾಧ್ಯವೇ ಇಲ್ಲ” ಎಂದು ಕೂಗಾಡಿಬಿಟ್ಟರು. ತಕ್ಷಣವೇ ಮುನಿಯಪ್ಪ “ ಹೌದು ಅಯ್ಯನವರೆ, ಹುಲ್ಲಿನ ಮರೆಯಲ್ಲಿ ಮಲ್ಲಿಯನ್ನು ನೋಡಿದಾಗಲೇ ಗೊತ್ತಾಗಿಬಿಟ್ಟಿತು ಈ ಪ್ರಪಂಚದಲ್ಲಿ ಪವಾಡಪುರುಷರು, ದೇವತಾ ಮನುಷ್ಯರು ಯಾರೂ ಇಲ್ಲವೆಂದು, ಮಡಿ ಮೈಲಿಗೆ ಎಲ್ಲಾ ನಮ್ಮ ಕಣ್ಣಿಗೆ ಪರದೆ ಎಳೆಯಲು ಮತ್ತು ನಮ್ಮಂತಹ ಅರಿಯದ ಮುಗ್ಧ ಜನರ ಬಲಿಪಶು ಮಾಡಲು.” ಎಂದು ಕೋಪದಿಂದ ಹೇಳಿದ.

 ಅಷ್ಟು ಹೊತ್ತಿಗೆ ಸರಿಯಾಗಿ ಮಲ್ಲಿಯೂ ಹೆಸರು ಕೇಳಿದೊಡನೆ ಇನ್ನೂ ಅವಿತುಕೊಂಡರೆ ತೊಂದರೆ ಎಂದು ಭಾವಿಸಿ ಹುಲ್ಲಿನ ಮರೆಯಿಂದ ಸರಿದು ಬಂದಳು. ಬಂದವಳೇ “ಅಯ್ಯಾರ ಬಗ್ಗೆ ಯಾಕೆ ಹೀಗೆ ಹೇಳುತ್ತೀ, ತಪ್ಪಾಯಿತು ಎಂದು ಹೇಳು. ಅವರು ದೇವರಿಗೆ ಸಮಾನ ಅವರು ನನ್ನನ್ನು ಕೂಡಿ ನಮ್ಮ ಕುಟುಂಬದ ಪಾಪವನ್ನು ತೊಳೆದು ಹಾಕುತ್ತಾರೆ, ಇದರಲ್ಲಿ ಯಾವುದೇ ದೋಷವಿಲ್ಲ. ನನ್ನಗಂಡನ ಆಯುಷ್ಯ ಹೆಚ್ಚಾಗುತ್ತೆ, ನಾನು ಸುಮಂಗಲಿಯಾಗಿ ಸಾಯ್ತೀನಿ, ನಿಂಗೆ ಗೊತ್ತಾಗಕಿಲ್ಲ.  ಅವರು ಸಿಟ್ಟಾದರೆ ಶಾಪ ಕೊಟ್ಟುಬಿಟ್ಟಾರು ಆಮೇಲೇ ನಿನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯಬೇಕಾದೀತು” ಎಂದು ಗಾಬರಿಯಿಂದ ಹೇಳಿದಳು.

 ಮುನಿಯಪ್ಪ “ ಇದೇ ನಾವು ಮಾಡುವ ಮೊದಲ ತಪ್ಪು, ಈ ಮಬ್ಬುಗತ್ತಲಲ್ಲಿ ನಿನ್ನ ಹಿಡಿದುಕೊಂಡರೆ ಮಡಿ ಮೈಲಿಗೆ ಯಾವುದೂ ಇರುವುದಿಲ್ಲವಂತಾ ? ಅದೇ ಬೆಳಕು ಹರಿದಮೇಲೆ ನಿನ್ನ ನೆರಳು ಬಿದ್ದರೂ ಮಡಿ ಮೈಲಿಗೆ ಎಲ್ಲವೂ ಒಟ್ಟಿಗೆ ಬಂದು ಬಿಡುವುದಂತಾ ? ಅವರೇ ಹೇಳಿರುವುದು ಕೇಳಿಸಿಕೊಂಡೆಯಲ್ಲ,  ಪವಾಡಪುರುಷರು ಯಾರೂ ಇರಲು ಸಾಧ್ಯ ಇಲ್ಲವೆಂದು ಮತ್ತೆ ಹೇಗೆ ಅವರು ಪಾಪವನ್ನು ಕಳೆಯಲು ಸಾಧ್ಯ,  ಶಾಪವನ್ನು ನೀಡಲು ಸಾಧ್ಯ ?” ಎಂದು ಪ್ರಶ್ನೆಯನ್ನು ಹಾಕಿದ.

 ಮಲ್ಲಿಯಲ್ಲಿ ಉತ್ತರ ಇರಲಿಲ್ಲ. ಅಯ್ಯನವರು ಉಪಾಯವಿಲ್ಲದೇ ತಲೆ ತಗ್ಗಿಸಿ ನಿಂತಿದ್ದರು.  ಮಲ್ಲಿ ಮನೆಯತ್ತ ನೆಡೆದಳು. ನಿಧಾನವಾಗಿ ಬೆಳಕು ಹರಡಿತ್ತು, ಅಯ್ಯನವರ ಮನೆಗೆ ಕೆಲಸದಾಳುಗಳು ಬಂದಿದ್ದರು, ಅವರಿಗೆಲ್ಲಾ ಆಶ್ಚರ್ಯ ಕಾದಿತ್ತು. ಅಯ್ಯನವರ ಮನೆಯ ಹೊರಗಿನ ಸೂರಿನಡಿಯಲ್ಲಿ ಅವರಿಗೆ ನೀರು, ಚಾ ಕುಡಿಯಲು ಇದ್ದ ಗರಟೆಗಳು ಮಾಯವಾಗಿದ್ದವು.  ತಿಂಡಿಗೆಂದು ಕುಳಿತುಕೊಳ್ಳಲು ಚಾಪೆ ,  ತಿಂಡಿ ನೀಡಲುಬಾಳೆ ಎಲೆ, ನೀರಿಗಾಗಿ ಲೋಟ ಎಲ್ಲವೂ ಸಿದ್ಧವಾಗಿತ್ತು.  ಕೆಲಸದಾಳುಗಳು ಅಯ್ಯನವರ ಮುಂದೆ ಬಂದು  ಕೈ ಕಟ್ಟಿ ನಿಂತು “ಇವತ್ತೇನಾದರೂ ವಿಶೇಷವುಂಟೆ ? ಸಂಬಂಧಿಕರು ಬರುವವರಿದ್ದಾರೆಯೆ ? “ ಎಂದು ಕೇಳಿದರು. ಅಯ್ಯನವರು “ಇಲ್ಲ, ಅವರಾರು ಬರುವವರಿಲ್ಲ, ಇದು ನಿಮಗೆಂದೇ ಮಾಡಿರುವುದು. ಇನ್ನು ದಿನವೂ ಇದು ಹೀಗೆಯೇ ಮುಂದುವರೆಯುವುದು” ಎಂದು ಹೇಳಿದರು. ಎಲ್ಲದಕ್ಕಿಂತ ಮಿಗಿಲಾಗಿ ಅಯ್ಯನವರ ಮಾತಿನ ದಾಟಿಯಲ್ಲಿ ಎಂದಿನಂತೆ ಒರಟುತನ, ಹೀನಭಾವ,  ಏಕವಚನ ಇರಲಿಲ್ಲ ಬದಲಾಗಿ ಗೌರವ ಮತ್ತು ಸೌಜನ್ಯ ಇತ್ತು. ಕೆಲಸದಾಳುಗಳ ಸಂತಸ ಹೇಳತೀರದು ಒಂದೇ ಸಮನೆ ಕೂಗಿಬಿಟ್ಟರು “ದೇವರು ಬಂದುಬಿಟ್ಟರೆಂದು “.

Muni Muni Muneshwara | Maheshwara Song | 2018 Latest Telugu Movies ...

 ದೇವಸ್ಥಾನದ ಆವರಣದೊಳಗೂ ಹೀನರೆನಿಸಿಕೊಂಡವರಿಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಎಂದೂ ಇಲ್ಲದ ಒಳಾಂಗಣದ ಪ್ರವೇಶ ಅವರಿಗಾಗಿ ಕಾದಿತ್ತು. ಊರಿನ ಹೀನರೆನಿಸಿಕೊಂಡವರೆಲ್ಲಾ ಒಮ್ಮೆಲೆ ಘೋಷ ಮೊಳಗಿಸಿದರು “ಅಂತೂ ಒಳಗಿನ ದೇವರು ಕಣ್ಣು ಬಿಟ್ಟನೆಂದು.

 ಇಡಿಯ ಊರಿನ ಮಂದಿಗೆಲ್ಲಾ ಆಶ್ಚರ್ಯ ಇದ್ದಕ್ಕಿದ್ದಂತೆ ಅಯ್ಯನವರು ಇಷ್ಟು ಬದಲಾಗುತ್ತಾರೆ ಎಂದರೆ ಏನು ಕಾರಣ ಇರಬಹುದು ಎಂದು ಗುಸು ಗುಸು ಆರಂಭವಾಗುತ್ತದೆ. ಅದೇ  ಗುಸುಗುಸುವಿನ ನಡುವೆ ಇನ್ನೊಂದು ಗುಸುಗುಸುವೂ  ಶುರುವಾಗುತ್ತದೆ. “ಅಯ್ಯನವರಿಗೆ ಮುನಿಕೂಪೇಶ್ವರ  ದೇವರ ನುಡಿಯಂತೆ ನಡೆದುಕೊಳ್ಳುತ್ತಿದ್ದಾರಂತೆ. ಇಲ್ಲವೆಂದಾದಲ್ಲಿ ಗುಡಿಯಲ್ಲಿ ಉದ್ಭವವಾಗಿರುವ ಮುನಿಕೂಪೇಶ್ವರನ  ಸವಾಲು ಗೆಲ್ಲಬೇಕಂತೆ. ದೇವರ ವಿರುದ್ದ ಗೆಲ್ಲಲು ಸಾಧ್ಯವೇ ? ಹಾಗಾಗಿ ದೇವರಿಗೆ ಶರಣಾಗಿ ಎಲ್ಲರನ್ನು ಸಮಾನವಾಗಿ ಗೌರವದಿಂದ ನೋಡುತ್ತಿದ್ದಾರಂತೆ” ಎಂದು ಊರೆಲ್ಲಾ ಸುದ್ದಿ ಹರಡಿಕೊಂಡಿತು.

 

ಕಾಲಶಿವ

Leave a Reply

Your email address will not be published. Required fields are marked *