December 3, 2024
20220702_104816-375x500

ತುಲುನಾಡಲ್ಲಿ ಅಂದು ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು “ಕೊರಂಬು“ಎಂಬ ಸಾಧನವನ್ನು ಕೊರಗರು ಬಳಸುತ್ತಿದ್ದರು. ಇದರ ಆನ್ವೇಷಣಕಾರರು ಮತ್ತು ಆವಿಷ್ಕಾರರು ಕೊರಗರೇ ಆಗಿದ್ದರು. “ಕೊರಂಬು” ಎಂಬ ಹೆಸರನ್ನು ಕೊಟ್ಟು ಸೂದ್ರ ದ್ರಾವಿಡರು ನಾಮಕರಣ ಮಾಡಿದ್ದರು. ಜೈನರು ತುಲುನಾಡಿಗೆ ಬಂದ ಬಳಿಕ ಇಲ್ಲಿ ಈ ಕೊರಂಬು ಸಾಧನಕ್ಕೆ ಹೆಚ್ಚಿನ ಬೇಡಿಕೆ ಬಂತು. ಕಾರಣ ಇಲ್ಲಿ ಹೊಲ ಗದ್ದೆಗಳ ನಿರ್ಮಾಣವಾಗಿ ಮೂರು ಭತ್ತದ ಬೆಳೆ ಬೆಳೆಯಲು ಆರಂಭವಾಗುತ್ತದೆ. ಕೃಷಿ ಮಹಿಳಾ ಕಾರ್ಮಿಕರಿಗೆ ಇದು ಅಗತ್ಯದ ಸಾಧನವಾಗುತ್ತದೆ.

ಕೊರ ಜನಾಂಗದ ಕೊರಗರು ಆ ಕಾಲದಲ್ಲೇ ಮಳೆಗಾಲಕ್ಕೆ ಕೊರಂಬು ಬಳಸುವುದರೊಡನೆ ಸೆಕೆಗಾಲದಲ್ಲಿ ಬಿಸಿಲಿನ ದಾಹವನ್ನು ಕಳೆಯಲು “ಮುಟ್ಟು ಪಾಲೆ” ಯನ್ನು ತಮ್ಮ ತಲೆಯಲ್ಲಿಟ್ಟು ಬಳಸುತ್ತಿದ್ದರು. ಈ ಮುಟ್ಟು ಪಾಲೆ ಕೊರಗರದ್ದೇ ಅನ್ವೇಷಣೆ ಮತ್ತು ಆವಿಷ್ಕಾರ ಆಗಿತ್ತು. ಇಲ್ಲಿ ಪಾಲೆ ಎಂದರೆ ಅಡಿಕೆ ಮರದ ಹಾಳೆ. ಮತ್ತು ತುಲು ಭಾಷೆಯಲ್ಲಿ “ಮುಟ್ಟು“ಎಂದರೆ ಬೇರೆ ಬೇರೆ ಅರ್ಥಗಳು ಇವೆ. ಇಲ್ಲಿ ಬಳಸಿದ ಅರ್ಥ ಎಂದರೆ ಅದು ಪಾದ ಆಗಿದೆ. ಎಂದರೆ ಹಿಮ್ಮಡಿಯಿಂದ ಹೆಬ್ಬೆರಳಿನವರೆಗೆ ಇರುವ ಭಾಗ(ಕಣಕಾಲು|ಪಾದದ Heel bone to big Toe).

ಕೊರಗರು ಮುಟ್ಟು ಪಾಲೆಯನ್ನು ತಯಾರಿಸುವ ವಿಧಾನ ದಲ್ಲಿ ಅಳತೆಯನ್ನು ತೆಗೆದು ನಂತರದಲ್ಲಿ ಇದನ್ನು ರೆಡಿ ಮಾಡುತ್ತಿದ್ದರು. ಅಂದಿನ ಕಾಲದಲ್ಲಿ ಅಳತೆಯ ಯಾವುದೇ ಉಪಕರಣಗಳು ಇರಲಿಲ್ಲ. ಅದಕ್ಕಾಗಿ ಅವರು ಆರಿಸಿದ ಉಪಕರಣ ಎಂದರೆ ಅವರವರ ಹಿಮ್ಮಡಿಯಿಂದ ಹೆಬ್ಬೆರಳಿನವರೆಗೆ ಇರುವ ಉದ್ದವನ್ನು. ಅದೇ “ಮುಟ್ಟು” ಆಗಿತ್ತು. ಅಡಿಕೆ ಮರದ ಹಾಳೆಯನ್ನು ಆರಿಸಿ ಮುಟ್ಟು ಪಾಲೆಯ ಒಳ ವ್ಯಾಸವು ಅವರವರ ಪಾದದ(ಮುಟ್ಟು) ಉದ್ದಕ್ಕೆ ಸರಿಯಾಗಿ ಇರುವಂತೆ ಮಾಡಿ ಇಟ್ಟು ಎರಡೂ ಬದಿಯಲ್ಲಿ ಎಷ್ಟು ಬೇಕೋ ಅಷ್ಟು ಉದ್ದದ ಜುಟ್ಟು ಇಟ್ಟು ಬಿಟ್ಟು ಬಿಗಿಯಾಗಿ ಹಾಳೆಯ ಹಗ್ಗದಿಂದಲೇ ಕಟ್ಟುವುದು. ಇದರ ಅಗಲವನ್ನು ಅಳತೆ ಮಾಡುವ ಅಗತ್ಯವಿಲ್ಲ. ಅವರವರ ಮುಟ್ಟು ಉದ್ದದಿಂದ ತಯಾರಿ ಮಾಡಿದ ಮುಟ್ಟು ಪಾಲೆಯು ಅವರವರ ತಲೆಗೆ ಸರಿಯಾಗಿ ಬರುತ್ತದೆ.ಕೊರಗರ ಈ “ಮುಟ್ಟು ಪಾಲೆ”ಯು ಮುಂದೆ ಕ್ರಮೇಣವಾಗಿ “ಮುಟ್ಟಾಲೆ“ಎಂಬ ಹೆಸರನ್ನು ಪಡೆಯುವುದು. ಮುಟ್ಟು ಉದ್ದದ ಪಾಲೆಯೇ ಮುಟ್ಟಾಲೆ.

ಕೊರಗರು ಪ್ರಪ್ರಥಮವಾಗಿ ತಯಾರಿಸಿದ ಮುಟ್ಟಾಲೆಯೇ ಎರಡು ದಿಕ್ಕುಗಳಲ್ಲಿ ಜುಟ್ಟು ಇರುವ ಮುಟ್ಟಾಲೆ. ನಂತರದ ಕಾಲ ವರ್ಷಗಳಲ್ಲಿ ಇದರ ವಿನ್ಯಾಸ ಡಿಸೈನ್ ಬದಲಾಗುತ್ತಾ ಹೋಗುತ್ತದೆ. ಮುಟ್ಟು ಅಳತೆಯ ಬದಲು ಕೈ ಬೆರಳುಗಳ ಗೇಣು ಉದ್ದದ ಲೆಕ್ಕದಲ್ಲಿ ಅಳತೆಯ ಪದ್ಧತಿ ಹುಟ್ಟುತ್ತದೆ. ನಂತರದ ಕಾಲದಲ್ಲಿ ಮುಟ್ಟಾಲೆ ಬೇಡಿಕೆ ಹೆಚ್ಚಾದಾಗ ಇತರ ಜಾತಿಯ ಜನರೂ ತುಲುನಾಡಲ್ಲಿ ಮುಟ್ಟಾಲೆ ತಯಾರಿಸುವರು.

ಅಡಿಕೆ ಮರದ ಹಾಳೆಯಿಂದ ತಯಾರಿಸಿದ ಮುಟ್ಟಾಲೆಯ ಜನನವಾಗಿರುವುದು ಮಳೆಗಾಲಕ್ಕಲ್ಲ. ಬದಲಾಗಿ ಸೆಕೆಗಾಲಕ್ಕಾಗಿ ಹುಟ್ಟಿದೆ. ಮಳೆಗಾಲದಲ್ಲಿ ಕೊರಂಬು ಮತ್ತು ಸೆಕೆ ಗಾಲಕ್ಕೆ ಮುಟ್ಟಾಲೆ. ಮುಟ್ಟಾಲೆಯು ಬೇಗನೇ ಕೊಳೆತು ಹೋಗುವ ವಸ್ತು ಆಗಿದೆ.ಇದಕ್ಕೆ ನೀರು ತಾಗದಂತೆ ಜಾಗ್ರತೆ ವಹಿಸಬೇಕು. ಅಡಿಕೆ ಮರದ ಹಾಳೆಯಲ್ಲಿ ಹೆಣ್ಣು ಗಂಡು ಎಂಬ ಭೇದ ಇರುತ್ತದೆ. ಹೆಣ್ಣು ಹಾಳೆಯು ಆಳವಾಗಿ ಗುಂಡಿಯಾಗಿ ಅಗಲವಾಗಿ ಇರುತ್ತದೆ. ಇದು ಮುಟ್ಟಾಲೆಗೆ ಸೂಕ್ತವಾಗಿದೆ. ಮುಟ್ಟಾಲೆ ತಯಾರಿಗೆ ಮೊಟ್ಟ ಮೊದಲಿಗೆ ಹಾಳೆಯ ಒಳಗಿನ ಬೆಳ್ಳಗಿನ ಪೊರೆಯಂತಿರುವ ಕವಚವನ್ನು ತೆಗೆಯಬೇಕು. ನೀರು ಬಿದ್ದರೆ ಇದು ಬೇಗನೇ ಕೊಳೆತು ಹೋಗುವ ವಸ್ತು. ಒಣಗುವುದು ಕೂಡಾ ಇಲ್ಲ. ಈ ಹೆಣ್ಣು ಹಾಳೆಯ ಒಳಗೆ ಹಿಂಗಾರ ಇರುವುದರಿಂದ ಈ ಪೊರೆ ಬೇಗನೇ ಬರುತ್ತದೆ. ಹಾಳೆ ಒಣಗಿದ್ದರೆ ತುಸು ಹೊತ್ತು ನೀರಲ್ಲಿಟ್ಟು ಮೃದುವಾದ ಬಳಿಕ ಬಿಳಿ ಪೊರೆ ತೆಗೆಯಲು ಬರುತ್ತದೆ. ಬಳಿಕ ಮುಟ್ಟಾಲೆ ತಯಾರಿ.

 

ಕೊರಗರು ಆರಂಭದಲ್ಲಿ ಬಳಸುತ್ತಿದ್ದ ಜುಟ್ಟು ಮುಟ್ಟಾಲೆ ಯನ್ನು ಸೆಕೆಗಾಲದಲ್ಲಿ ನೀರು ಕುಡಿಯಲು ಮತ್ತು ಊಟ ಮಾಡಲೂ ಬಳಸುತ್ತಿದ್ದರು. ನಂತರ ಒಣಗಿಸಿ ಬಿಡುತ್ತಿದ್ದರು. ಬಿಸಿಲಿಗೆ ನಡೆದು ಹೋಗುವಾಗ ಈ ಜುಟ್ಟು ಹೊಂದಿರುವ ಮುಟ್ಟು ಅಳತೆಯ ಮುಟ್ಟಾಲೆಯ ಎರಡೂ ತುದಿಗಳಲ್ಲಿ ಮರಗಿಡದ ಸೊಪ್ಪುಗೆಲ್ಲುಗಳನ್ನು ಇಡುತ್ತಿದ್ದರು. ಆ ಕಾಲದಲ್ಲಿ ದೇಹಕ್ಕೆ ಬೇಕಾದ ವಸ್ತ್ರಗಳೇ ಇರಲಿಲ್ಲ. ಅದರಲ್ಲೂ ಕೊರಗರಿಗೆ ಅದು ತೀರ ಕಷ್ಟವೆನಿಸುವ ಕಾಲವಾಗಿತ್ತು. ಈ ಸೊಪ್ಪುಗಳನ್ನು ನೇತು ಹಾಕುವುದರಿಂದ ಮುಖಕ್ಕೆ ಮತ್ತು ಬೆನ್ನಿಗೆ ಬಿಸಿಲಿನ ನೇರವಾದ ತಾಪವನ್ನು ಕಡಿಮೆಮಾಡಲು ಆಗುತ್ತಿತ್ತು. ಅಲ್ಲದೆ ನಡೆದು ಹೋಗುತ್ತಿದ್ದರೆ ಗಾಳಿಗೆ ಆ ಸೊಪ್ಪುಗಳು ಅಲುಗಾಡುತ್ತಾ ಮರು ಗಾಳಿ ಬೀಸುತ್ತಿತ್ತು. ಇದು ದೇಹಕ್ಕೆ ತಂಪುಣಿಸುತ್ತಿತ್ತು.

ಆ ಕಾಲದಲ್ಲಿ ತುಲುನಾಡಲ್ಲಿ ತಾರಿ,ಈಂದ್ ಮರಗಳು ಬೆಳೆದ ರೀತಿಯಲ್ಲೇ ಅಡಿಕೆ ಮರಗಳು ಕಾಡಲ್ಲಿ ತಂತಾನೆ ಬೆಳೆಯುತ್ತಿತ್ತು. ತಮಗೆ ಬೇಕಾದ ಜುಟ್ಟು ಇರುವ ಮುಟ್ಟು ಮುಟ್ಟಾಲೆಯನ್ನು ಕೊರಗರು ತಯಾರಿಸಿ ಬಳಸುತ್ತಿದ್ದರು. ಮನುಷ್ಯನ ದೇಹದಲ್ಲಿರುವ ಭಾಗಗಳಲ್ಲಿ ತಲೆಯೇ ಅತೀ ಮುಖ್ಯವಾದುದು. ಅದನ್ನು ಜಾಗ್ರತೆಯಿಂದ ರಕ್ಷಣೆ ಮಾಡಿ ಕೊಂಡರೆ ಇಡೀ ಶರೀರವನ್ನೇ ರಕ್ಷಣೆ ಮಾಡಿದಂತೆ ಎಂದು ಅರಿತ ಕೊರಗರು ಮಳೆಗಾಲದಲ್ಲಿ ಕೊರಂಬು ಬಳಸಿದರು. ಸೆಕೆಗಾಲದಲ್ಲಿ ಮುಟ್ಟು ಪಾಲೆ ಮುಟ್ಟಾಲೆಯನ್ನು ಬಳಸುತ್ತಾ ಬಂದರು. 

ತುಲುನಾಡಲ್ಲಿ ಹೊಲಗದ್ದೆಗಳ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗುತ್ತದೆ. ಬಿಸಿಲು ಮಳೆಯನ್ನು ಲೆಕ್ಕಿಸದೆ ವರ್ಷಕ್ಕೆ ಮೂರು ಬಾರಿ ಭತ್ತದಂತಹ ಬೆಳೆಯನ್ನು ಬೆಳೆಯುವ ಪರಿಶ್ರಮದ ಕೆಲಸಗಳು. ಅಂದು ತುಲುನಾಡಲ್ಲಿ ಭತ್ತದ ನಾಟಿ ಮತ್ತು ಕಟಾವು ಕೆಲಸಗಳು ಮಹಿಳೆಯರಿಗೆ ಮೀಸಲಾಗಿತ್ತು. ಬಿಸಿಲಿಗೆ ಅಳುಕದೆ ಕೆಲಸ ಸಾಗಬೇಕು. ಇಲ್ಲಿ ಈ ಕಾಲದಲ್ಲೇ ಕೊರಗರು ಮಹಿಳೆಯರಿಗೆಂದೇ ಹೊಸ ಹಾಳೆಯ ಮುಟ್ಟಾಲೆಯನ್ನು ಗೇಣು ಅಳತೆಯ ಲೆಕ್ಕದಲ್ಲಿ ಆವಿಷ್ಕಾರ ಗೊಳಿಸುವರು.ಬೇಸಿಗೆಯ ಉಷ್ಣತೆಯನ್ನು ತಡೆಗಟ್ಟಲು ಮುಟ್ಟಾಲೆಯನ್ನು ಹೊರಜಗತ್ತಿಗೆ ಪರಿಚಯಿಸುವರು. ಇದೊಂದು ಹೊಸ ಆವಿಷ್ಕಾರವಾಗಿದ್ದರೂ ಮುಟ್ಟಾಲೆ ಎಂಬ ಹೆಸರಿನಿಂದಲೇ ಮುಂದುವರಿಯಿತು. ಮಹಿಳೆಯರು ತಮ್ಮ ಸೆರಗಿನ ತುದಿಯನ್ನು ಮುಟ್ಟಾಲೆಯ ಒಳಗೆ ಹಾಕಿ ಮುಟ್ಟಾಲೆ ಧರಿಸಿದರು. ಅದು ಮೃದುವಾಗಿ ಹಿತವಾಗಿ ಆರಾಮವಾಗಿ ಕಂಡಿತ್ತು. ಮುಟ್ಟಾಲೆ ತಲೆಯಿಂದ ಜಾರದಂತೆ ದಾರದ ಸಹಾಯದಿಂದ ತಲೆಕೂದಲಿನ ಗೊಂಡೆಗೆ ಬಿಗಿದರು. ಮುಟ್ಟಾಲೆಯಿಂದ ಹೊರ ಬಂದ ಸೆರಗು ಮುಖವನ್ನು ಆವರಿಸುವ ರೀತಿಯಲ್ಲಿ ಇರುತ್ತದೆ. ಇದರಿಂದ ಮುಖಕ್ಕೆ ಬಿಸಿಲು ಬೀಳುವುದಿಲ್ಲ. ಒಟ್ಟಾರೆ ಮುಟ್ಟಾಲೆಯು ಜನಿಸಿರುವುದು ಬಿಸಿಲಿಗೆ ಮತ್ತು ಬಿಸಿಲಿನ ಉಷ್ಣತೆಯನ್ನು ಶಮನಗೊಳಿಸಲು. ಇಲ್ಲಿ ಆದಿ ಆರಂಭದ ಮುಟ್ಟಾಲೆಯ ಎರಡು ಜುಟ್ಟುಗಳಿಂದ ಒಂದು ಜುಟ್ಟನ್ನು ವಾಪಸ್ ಒಳಗೆ ಮಡಚುತ್ತದೆ ಮತ್ತು ಇನ್ನೊಂದು ಜುಟ್ಟಿನ ಉದ್ದವನ್ನೂ ಕಡಿತಗೊಳಿಸಲಾಗುತ್ತದೆ.

ಅಂದು ಉತ್ತು ಬಿತ್ತುವ ಕೆಲಸ ಪುರುಷರದ್ದಾಗಿತ್ತು. ನಾಟಿಮತ್ತು ಕಟಾವು ಕೆಲಸವು ಮಹಿಳೆಯರದ್ದಾಗಿತ್ತು. ಹೆಚ್ಚಾಗಿಮಹಿಳೆಯರೇ ಕೊರಂಬು ಮತ್ತು ಮುಟ್ಟಾಲೆ ಬಳಸುತ್ತಿದ್ದಕಾಲವದು. ಆದಿ ಆರಂಭದಲ್ಲಿ ಮಳೆಗಾಲದಲ್ಲಿ ಕೊರಂಬು ಧರಿಸಿ ಮಹಿಳೆಯರಿಗೆ ನಾಟಿ ಮಾಡಲು ಒಂದು ರೀತಿಯ ಹಿಂಸೆ ಆಗುತ್ತಿತ್ತು. ಅಹಿತಕರ ಆಗುತ್ತಿತ್ತು. ಕೊರಂಬು ಒಳಗಿನ ಸಣ್ಣಗಿನ ಬಿದಿರು ಸಲಾಕೆಗಳು ತಲೆಗೆ ಚುಚ್ಚುವು ದು ಇತ್ತು. ಮುಟ್ಟಾಲೆಯ ಜನನ ಆದ ಮೇಲೆ ಈ ನೋವು ನಿವಾರಣೆ ಆಗುತ್ತದೆ. ಕೊರಂಬು ಸೆಕೆಗಾಲದಲ್ಲಿ ಬಳಸುವಸಾಧನವಾಗಿದ್ದರೂ ಮಳೆಗಾಲದಲ್ಲೂ ಬಳಸಿಕೊಂಡು ಬಂದರು. ಮುಖ್ಯ ಉದ್ದೇಶ ಕೊರಂಬು ತಲೆಗೆ ಚುಚ್ಚಿ ಆಗುವ ನೋವಿನಿಂದ ಹೊರಬರಲು. ಮುಟ್ಟಾಲೆ ಇಟ್ಟು ಕೊರಂಬು ಧರಿಸಿದರೆ ಆ ಹಿಂಸೆ ಇರುವುದಿಲ್ಲ. ಇಲ್ಲೂ ಮುಟ್ಟಾಲೆಯನ್ನು ಮಳೆಗೆ ನೆನೆಯದಂತೆ ಸದಾ ಜಾಗ್ರತೆ ವಹಿಸಿದ್ದರು. ಕೆಲಸ ಮುಗಿದ ಬಳಿಕ ಮುಟ್ಟಾಲೆಯನ್ನು ಒಲೆಯ ಪಕ್ಕದಲ್ಲಿಟ್ಟು ಒಣಗಿಸುವುದು ಇತ್ತು. ಮಳೆಗಾಲ ದಲ್ಲಿ ಬಿಸಿಲು ಇರುತ್ತಿರಲಿಲ್ಲ. ಮಳೆಗಾಲದಲ್ಲಿ ಮುಟ್ಟಾಲೆ ಧರಿಸುವಾಗ ಮಹಿಳಾ ಕೃಷಿ ಕಾರ್ಮಿಕರು ಸೆರಗನ್ನು ಮುಟ್ಟಾಲೆಯ ಒಳಗೆ ಹಾಕಿರುವುದಿಲ್ಲ. ಕಾರಣ ಬಿಸಿಲಿನಕಿರಣಗಳು ಇರುವುದಿಲ್ಲ. 

ಕಾಲಗಳು ಕಳೆದಂತೆ ಪುರುಷರಿಗಾಗಿ ದೊಡ್ಡ ಮುಟ್ಟಾಲೆ ಗಳು ಬರುತ್ತದೆ. ಬೇಡಿಕೆ ಹೆಚ್ಚಿದಂತೆ ಇತರ ಜಾತಿಯ ಜನರೂ ಕೊರಗರಿಂದ ಮುಟ್ಟಾಲೆ ತಯಾರಿಸುವ ವಿಧಾನವನ್ನು ಕಲಿಯುವರು. ಇಲ್ಲೂ ಈ ಸಾಧನವು ಮಳೆಗಾಲದ ಬಳಕೆಗೆಂದು ಬಂದಿಲ್ಲ. ಬದಲಾಗಿ ಸೆಕೆಗಾಲದಲ್ಲಿ ಬಳಸಲೆಂದು ಬರುವುದು. ಬರೇ ಮುಟ್ಟಾಲೆಯನ್ನು ತಲೆಯಲ್ಲಿಡಲುಬರುವುದಿಲ್ಲ. ಮುಟ್ಟಾಲೆಯ ಒಳಗೆ ಬಟ್ಟೆಯ ಮುಂಡಾಸುಇರಬೇಕು. ಈ ಮುಂಡಾಸು ಪದೇ ಪದೇ ಜಾರುವುದನ್ನುತಡೆಯಲು ಮುಟ್ಟಾಲೆ ಬಳಸಿದರು. ಇದರಿಂದ ಮುಂಡಾಸುಬಿಗಿಯಾಗಿ ಇರುತ್ತದೆ. ಹಿತವಾದ ಹಿಡಿತದಲ್ಲಿ ಇರುತ್ತದೆ. ಮುಂಡಾಸು ಬಟ್ಟೆಯಲ್ಲಿ ಕೊಳೆ ಆಗುವುದಿಲ್ಲ. ಮಣ್ಣು,ಗೊಬ್ಬರ ಇತರೆ ಹೊರೆಯನ್ನು ಹೊರಲು ದೊಡ್ಡ ಮುಟ್ಟಾಲೆಯನ್ನು ಪುರುಷರು ಬಳಸಿದರು. ಒದ್ದೆಯಾದ ಮುಟ್ಟಾಲೆಯನ್ನು ಮಳೆಗಾಲದಲ್ಲಿ ಒಲೆಯ ಪಕ್ಕದಲ್ಲಿ ಇಟ್ಟು ಒಣಗಿಸಿದರು. ಬೇಸಿಗೆಯಲ್ಲಿ ಬಿಸಿಲಿನಲ್ಲಿ ಒಣಗಿಸಿದರು. ಕಾಲಗಳು ಉರುಳಿದಂತೆ ವಿವಿಧ ವಿನ್ಯಾಸಗಳ ಮುಟ್ಟಾಲೆಗಳುಹುಟ್ಟಿ ಕೊಳ್ಳುವುದು. ತುಲುನಾಡಲ್ಲಿ ಮುಟ್ಟಾಲೆ ಬೇಡಿಕೆಯನ್ನು ಪೂರೈಸಲು ಅಡಿಕೆ ಹಾಳೆಯನ್ನು ಕೊರಗರು ಘಟ್ಟದ ಮೇಲಿನ ಊರುಗಳಿಂದ ತರಬೇಕಾಗಿತ್ತು. ಅಲ್ಲಿ ಅಡಿಕೆಯನ್ನು ಆಗಲೇ ಬೆಳೆಸುತ್ತಿದ್ದರು. ತುಲುನಾಡಲ್ಲಿ ಅಡಿಕೆ ತೋಟ ಇರಲಿಲ್ಲ. ಗದ್ದೆಗಳ ಪುನಿದಂಡೆಗಳ ಬದಿಯಲ್ಲಿ ಮಾತ್ರ ಅಡಿಕೆ ಮರಗಳು ಇದ್ದವು.

ಅಂದು ತುಲುನಾಡಲ್ಲಿ ಹೊಲಗದ್ದೆಗಳನ್ನು ನಿರ್ಮಾಣ ಮಾಡಿ ತುಲುನಾಡು ಕಟ್ಟಿದ್ದರು. ಕೊರಂಬು,ಮುಟ್ಟಾಲೆಗಳ ಬೇಡಿಕೆಗಳು ಇದ್ದವು. ಈಗ ಹೊಲಗದ್ದೆಗಳನ್ನು ನಾಶ ಮಾಡಿ ಅಡಿಕೆ ಕಾಡು ಬೆಳೆದಿದೆ. ಇನ್ನು ಕೆಲವೆಡೆಗಳಲ್ಲಿ ಹಡೀಲು ಬಿಟ್ಟು ಜಮೀನು ನಾಶವಾಗಿ ಕಾಡಿನಂತೆ ಕಾಣುತ್ತದೆ. ಭತ್ತ ಬೆಳೆಯುವುದು ನಿಂತು ಬಿಟ್ಟಿದೆ. ಕೊರಂಬು,ಮುಟ್ಟಾಲೆಯ ಅವಶ್ಯಕತೆ ಇಲ್ಲದಂತಾಗಿದೆ.ಪ್ಲಾಸ್ಟಿಕ್ ಸಲಕರಣೆಗಳು ಬಂದು ಇವುಗಳತ್ತ ನೋಡುವವರು ಇಲ್ಲ.

ಗೋಂಪರ್: ಮುಟ್ಟಾಲೆಯ ಇನ್ನೊಂದು ವಿನ್ಯಾಸ. ತುಂಬಾ ದಿನ ಬಾಳ್ವಿಕೆ ಇದಕ್ಕೆ ಇರುವುದಿಲ್ಲ. ಹಸಿ ಹಸಿಯಾದ ಅಡಿಕೆ ಹೆಣ್ಣು ಹಾಳೆಯಿಂದ ತಾತ್ಕಾಲಿಕವಾಗಿ ಬಳಸುವ ಸಾಧನ ಇದು. ಮೃದುವಾದ ಗುಂಡಿಯ ಹಾಳೆಯಿಂದ ತಯಾರಿಸುವರು. ಇದು ಪುರುಷರು ಬಳಸುವ ಸಾಧನ. ಇದನ್ನು ಬೇಗನೆ ತಯಾರಿಸಲು ಬರುತ್ತದೆ. ಇದರ ತಯಾರಿಗೆ ಹಾಳೆಯ ಒಳ ಪೊರೆಯನ್ನು ತೆಗೆಯುವುದಿಲ್ಲ. ಇದರಿಂದ ಇದು ತಲೆಗೆ ಮೃದುವಾಗಿ ಆರಾಮವಾಗಿ ಇರುತ್ತದೆ. ಇದನ್ನು ಬಿಸಿಲಿಗೂ ಮಳೆಗೂ ಬಳಸುವರು. ಹಾರೆ,ಪಿಕ್ಕಾಸು ಕೆಲಸವನ್ನು ಮಾಡುವಾಗ ಉಪಯೋಗಿಸುವರು. ಗೊಬ್ಬರ,ನೇಜಿ ಹೊರುವಾಗ ಬಳಸುತ್ತಾರೆ. ಇದರ ನೀರು ಮುಖಕ್ಕೆ ಬೀಳದಂತೆ ಗೋಂಪರ್ ರಕ್ಷಿಸುವ ಕೆಲಸ ಮಾಡುತ್ತದೆ.  ನೀರು ಬಿದ್ದು ಗೋಂಪರ್ ಬೇಗನೆ ಕೊಳೆತು ಹೋಗುತ್ತದೆ. ಆಗ ಇದನ್ನು ಎಸೆದು ಪುನಃ ಹೊಸ ಗೋಂಪರ್ ಮಾಡುವ ಕ್ರಮ. ಇದೊಂದು ಯೂಸ್ ಆಂಡ್ ತ್ರೋ ಸಾಧನ ಆಗಿದೆ. ಇದನ್ನು ತುಲುನಾಡಿನ ಎಲ್ಲಾ ಕೃಷಿ ಕಾರ್ಮಿಕರು ಅಗತ್ಯ ಬಂದಾಗ ಅವರವರೇ ತಯಾರಿಸುವ ಮುಟ್ಟಾಲೆಯ ವಿನ್ಯಾಸ ಇದು.

(ತುಲುವರು ಗೋಂಪರಿನಂತೆ ಕಾಣುವ ಕಪ್ಪೆಯನ್ನು ಗೋಂಪರ್ ಕಪ್ಪೆ ಎಂದು ಕರೆಯುತ್ತಾರೆ)

 

 

ಕೊರಗರ ನೃತ್ಯದಲ್ಲಿ ಅವರು ಧರಿಸುವ ಮುಟ್ಟಾಲೆಯಲ್ಲಿ ಸೊಪ್ಪನ್ನು ಧರಿಸುತ್ತಾರೆ. ಇದು ಆದಿ ಮೂಲದಲ್ಲಿ ಮುಟ್ಟಾಲೆಯ ವಿನ್ಯಾಸವು ಈ ರೀತಿಯಲ್ಲಿ ಇತ್ತು ಎಂಬುವುದಕ್ಕೆ ಸಾಕ್ಷಿ ಆಗಿದೆ.

 

Leave a Reply

Your email address will not be published. Required fields are marked *