November 21, 2024
depawali-2-500x500-1

ನನ್ನ ಬಾಲ್ಯದ ದೀಪಾವಳಿ

ಬಾಲ್ಯದ ಅಂದಿನ ಆ ದಿನಗಳೆ ಒಂದು ಸೊಬಗು. ಇನ್ನು ಬಾಲ್ಯದಲ್ಲಿದ್ದಾಗ ದೀಪಾವಳಿ ಬಂತೆಂದರೆ ಅವರ್ಣನೀಯ ಆನಂದ. ಎಲ್ಲರೂ ಹೊಸಬಟ್ಟೆ, ಬಗೆ-ಬಗೆಯ ತಿಂಡಿ-ತಿನಸುಗಳಿಗಾಗಿ ದೀಪಾವಳಿ ಬರುವುದನ್ನು ಕಾಯುತ್ತಿದ್ದರೆ, ಹಳ್ಳಿಯ ಬಡತನದ ಜೀವನದಲ್ಲಿ ಬದುಕುತ್ತಿದ್ದ ನಮಗೆ ಆಡಂಬರವಿಲ್ಲದ ದೀಪಾವಳಿಯ ನೈಜ ಆಚರಣೆಗಳೇ ಸಂತಸ ಕೊಡುತ್ತಿತ್ತು.


ಸೂರ್ಯೋದಯದ ಮೊದಲೇ ಎದ್ದು, ಬಿಸಿ-ಬಿಸಿ ಉದ್ದಿನ ದೋಸೆಗಾಗಿ ಒಲೆಯ ಬದಿಯಲಿ ಕಾದು ಕುಳಿತು ತಿನ್ನುವುದೇ ಖುಷಿ. ಸಾವಯವ ರೀತಿಯಲ್ಲಿ ಮನೆ ಮಂದಿಯೇ ಬೆಳೆಸಿದ ಭತ್ತದಿಂದ ಮಾಡಿದ ಬೆಳ್ತಿಗೆ, ಅರೆಬೆಳ್ತಿಗೆ ಅಕ್ಕಿಗಳಿಂದ ತಯಾರಿಸುವ ದೋಸೆ ಕಾವಳಿಯಲ್ಲಿ ಕಾಯುತ್ತಿದ್ದರೆ ಅದರ ಪರಿಮಳ ಮನೆಯೆಲ್ಲಾ ಹಬ್ಬುತ್ತಿತ್ತು. ಬಿಸಿ-ಬಿಸಿ ದೋಸೆಗೆ ತುಪ್ಪ ಸವರಿಕೊಂಡು ತಿನ್ನುವುದಕ್ಕಾಗಿಯೇ ದೀಪಾವಳಿ ಬರುವುದನ್ನು ಕಾಯುತ್ತಿದ್ದವರು ನಾವು. ಉದ್ದಿನ ದೋಸೆಗೆ ಮನೆಯಲ್ಲೇ ಬೆಳೆದ ರಾಸಾಯನಿಕವಿಲ್ಲದ ತರಕಾರಿ ಸಾಂಬಾರು ಹಳ್ಳಿ ದೋಸೆಯ ರುಚಿ ಇನ್ನಷ್ಟು ಹೆಚ್ಚಿಸುತ್ತಿತ್ತು. ಬೇಕರಿಯ ಬಗೆ-ಬಗೆಯ ತಿಂಡಿಗಳನ್ನು ನೋಡಿಯೂ ಗೊತ್ತಿರದ ನಮಗೆ ದೀಪಾವಳಿಯ ಉದ್ದಿನ ದೋಸೆ, ಹೊನ್ನೆ ಎಳೆಯ ಗಟ್ಟಿ, ಅವಲಕ್ಕಿಗಳೇ ಅಂದಿನ ದಿನಗಳಲ್ಲಿ ವೈವಿಧ್ಯ ತಿಂಡಿಗಳು.


ಬಲಿಯೇಂದ್ರ ಕಂಬದ ತಯಾರಿ, ಗೋಪೂಜೆಗೆ ಚೆಂಡು ಹೂಗಳನ್ನು ಕಿತ್ತು ತಂದು ಮಾಲೆ ಮಾಡಿ ದನಗಳ ಕೊರಳಿಗೆ ಹಾಕಿ ಚಂದ ನೋಡುವುದೇ ಒಂದು ಆನಂದ. ಆಯುಧ ಪೂಜೆಗಾಗಿ ಮನೆ ಬಳಕೆಯ, ಕೃಷಿ ಸಲಕರಣೆಗಳನ್ನು ತೊಳೆದು ಒಪ್ಪ-ಓರಣವಾಗಿ ಜೋಡಿಸಿ ಹಳ್ಳಿಯಲ್ಲಿಯೇ ಸಿಗುವ ಚೆಂಡು ಹೂ, ಕಾಡಿನ ಕೊರಗ ಹೂವುಗಳಿಂದ ಅಲಂಕರಿಸಿ, ರಾತ್ರಿ ಕೊಳ್ತಿರಿ ದೀಪ, ಹಣತೆ ಇಟ್ಟು ಅದರ ಸೊಬಗು ನೋಡುತ್ತಿದ್ದ ನಮಗೆ ಅಂದಿನ ದಿನಗಳಲ್ಲಿ ದೀಪಾವಳಿ ಹಬ್ಬವೇ ಒಂದು ವಿಶೇಷ ಅನಿಸುತ್ತಿತ್ತು.
ಮನೆಯಲ್ಲಿ ಅಕ್ಕನೋ, ಅಣ್ಣನೋ ಪಟಾಕಿಗೆ ಬೆಂಕಿ ಹಚ್ಚಿ ಬಿಡುತ್ತಿದ್ದರೆ ದೊಡ್ಡ ಶಬ್ಧಕ್ಕೆ ಭಯ ಪಡುತ್ತಿದ್ದ ನಮಗೆ ಸುರ್-ಸುರ್ ಬತ್ತಿ, ಕಲ್ಲಿನಲ್ಲಿ ಜಜ್ಜುವ ಸಣ್ಣ ಪಟಾಕಿಗಳ ಶಬ್ಧವೇ ಆನಂದ ಕೊಡುತ್ತಿತ್ತು. ಬೆಳೆದು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಪಟಾಕಿ ಸಿಡಿಸುವುದೇ ಒಂದು ಸಾಹಸ ಮತ್ತು ಸಂತಸ.
ವಿದ್ಯುತ್ ದೀಪಗಳಿಲ್ಲದ ಅಂದಿನ ದಿನಗಳಲ್ಲಿ ಹಣತೆಯ ಬೆಳಕೇ ದೀಪಾವಳಿಗೆ ಮೆರಗು ಕೊಡುತ್ತಿತ್ತು. ಸಾಲು-ಸಾಲಾಗಿ ಜೋಡಿಸಿ, ದೀಪ ಗಾಳಿಗೆ ಆರದಂತೆ ಕಾಯುತ್ತಿದ್ದ ನಮಗೆ ದೀಪಾವಳಿ ಹಬ್ಬ ಕೊಡುತ್ತಿದ್ದ ಆನಂದ ಅಪರಿಮಿತವಾದದ್ದು.


ಇಂದಿನ ಯಾಂತ್ರಿಕ ಬದುಕಿನ ಜಂಜಾಟದ ಮಧ್ಯೆ ಸ್ವಲ್ಪ ಬಾಲ್ಯದ ದೀಪಾವಳಿ ದಿನಗಳ ಬಗ್ಗೆ ಯೋಚಿಸಿದಾಗ ಸೌಲಭ್ಯಗಳು ಸಾವಿರವಿದ್ದರೂ ಇಂದಿನ ದೀಪಾವಳಿ ನೀರಸವೆನಿಸುತ್ತದೆ. ಕೃತಕ ಅಲಂಕಾರಗಳಿಂದ ಜಗಮಗಿಸುವ ಇಂದಿನ ದೀಪಾವಳಿ ಕೇವಲ ಆಡಂಬರವಾಗಿ ಕಾಣುತ್ತದೆ. ನಿತ್ಯವೂ ಹಬ್ಬದಂತಿರುವ ಇಂದಿನ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳದೆ, ಶ್ರಮಪಡದೆ, ಎಲ್ಲವನ್ನೂ ದುಡ್ಡು ಕೊಟ್ಟು ತಂದು ಆಚರಿಸುವ ಹಬ್ಬ ಆಚರಣೆಗಷ್ಟೆ ಹೊರತು ಅಂತರಂಗದ ಆನಂದಕಲ್ಲ.

ಏನೇ ಇರಲಿ ಬದುಕನ್ನು ಆಸಕ್ತಿದಾಯಕವಾಗಿ ಮಾಡಲು, ತನ್ನ ಕಷ್ಟ-ದುಃಖಗಳನ್ನು ಮರೆತು ತನ್ನ ಕುಟುಂಬದೊಂದಿಗೆ ಬೆರೆತು ಸಂಭ್ರಮಿಸಲು ನಮ್ಮ ಪೂರ್ವಜರು ಹಾಕಿಕೊಟ್ಟ ಹಬ್ಬದ ಆಚರಣೆಯ ಪರಂಪರೆ ಕೇವಲ ಯಾಂತ್ರಿಕ ಆಚರಣೆಯಾಗದಿರಲಿ.

 

✍️ ನಾರಾಯಣ. ಬಿ, ಕುಂಡದಬೆಟ್ಟು

 

 

Leave a Reply

Your email address will not be published. Required fields are marked *