ನನ್ನ ಬಾಲ್ಯದ ದೀಪಾವಳಿ
ನನ್ನ ಬಾಲ್ಯ ಚಿಕ್ಕಮಗಳೂರಿನಲ್ಲಿ ಕಳೆಯಿತು…. ಆಹಾ ದೀಪಾವಳಿ ಹಬ್ಬ ಎಂದರೆ ನಮಗೆ ಏನು ಸಡಗರ…ಸಂಭ್ರಮ ಆನಂದಾತೀತ. ವರ್ಣಿಸಲು ಸಾಧ್ಯವಿಲ್ಲ……ನನಗೆ ಮೂರು ಜನ ಸಹೋದರರು….ನನ್ನ ತಂದೆಗೆ ಮೂರು ದಿನಸಿ ಅಂಗಡಿಗಳಿದ್ದವು…..ದೀಪಾವಳಿಯ ದಿನದಂದು ಅಮ್ಮ ನಮ್ಮೆಲ್ಲರನ್ನೂ ಬೆಳಗ್ಗಿನ ಜಾವ ಬೇಗನೇ ಎಬ್ಬಿಸಿ ಎಣ್ಣೆಹಚ್ಚಿ ಸ್ನಾನ ಮಾಡಿಸುತ್ತಿದ್ದರು……ನಂತರ ಎಲ್ಲರಿಗೂ ಹೊಸಬಟ್ಟೆ ಹಾಕಿಸುತಿದ್ದರು ..ನಮ್ಮ ಖುಷಿಗೆ ಪಾರವೇ ಇರುತ್ತಿರಲಿಲ್ಲ….ಮನೆಯ ಬಾಗಿಲನ್ನು ತಳಿರು ತೋರಣ ಗೊಂಡೆ ಹೂ(ಚೆಂಡು ಹೂವು) ಗಳಿಂದ ಅಲಂಕರಿಸುತ್ತಿದ್ದರು….. ದೀಪಾವಳಿಗೆ ಅಂಗಡಿಯಲ್ಲಿ ಲಕ್ಷ್ಮೀ ಪೂಜೆಮಾಡಿ ಬಂದ ಅತಿಥಿಗಳಿಗೆ ಸಿಹಿ ಹಂಚುತ್ತಿದ್ದರು …ನಾವೆಲ್ಲ ಪಟಾಕಿ ಸಿಡಿಸಿ ಸಂಭ್ರಮಸುತ್ತಿದ್ದೇವು….ದೊಡ್ಡವರು ಲಕ್ಷ್ಮೀ ಪಟಾಕಿ …ನಾವೆಲ್ಲ ಸುರ್ ಸುರ್ ಕಡ್ಡಿ ಹಚ್ಚುತ್ತಿದ್ದೆವು. ನಂತರ ಏಳನೇ ತರಗತಿ ಪಾಸಾಗಿ ಹೈಸ್ಕೂಲ್ ಓದಲೂ ಊರಿಗೆ ಅಂದರೆ ಅಜ್ಜಿ ಮನೆ ಉಡುಪಿಯಲ್ಲಿ ವಿದ್ಯಾಭ್ಯಾಸ….ಊರಿನಲ್ಲಿ ಕೇಳಬೇಕೆ….ನರಕ ಚತುರ್ದಶಿಯ ದಿನ ಗುಡಾಣ (ಹಂಡೆ, ಗುರ್ಕೆ…ಮಂಡೆ) ಕ್ಕೆ ಜೇಡಿ ಮಣ್ಣಿನಿಂದ ಚಿತ್ರ ಬಿಡಿಸಿ …ಚೆಂಡು ಹೂವಿನಿಂದ ಅಲಂಕರಿಸಿ ನೀರು ಕಾಯಿಸುತ್ತಾರೆ….ನಂತರ ಎಣ್ಣೆ ಹಚ್ಚಿಅಭ್ಯಂಜನ ಸ್ನಾನ….ಎರಡನೇ ದಿನ ಗದ್ದೆಗಳಿಗೆ ತುಡಾರ್ ತೋಜಾವುನು ಅಂತ ತುಳುವಿನಲ್ಲಿ ಹೇಳುತ್ತಾರೆ… ಓ ಬಲೀಂದ್ರ ಓ ಬಲೀಂದ್ರ ಬೊಂತೆಲ್ ಮೂಜಿ ದಿನತ ಬಲಿ ಕೊನೋಲ…ಅಂತ ಹೇಳಿ ಗದ್ದೆ ಬದಿಯ ಹುಣಿಯಲ್ಲಿ ಜೀಟಿಕೆಯನ್ನು ಊರುತ್ತಿದ್ದರು ..ಎಲೆ ಅಡಿಕೆ ಅವಲಕ್ಕಿ ಇತ್ಯಾದಿಯನ್ನು ಬಾಳೆ ಎಲೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದರು…ಉಡುಪಿ ಕಡೆಯಲ್ಲಿ ದೀಪಾವಳಿಗೆ ಹರಸಿನದ ಎಲೆಯ ಕಡುಬನ್ನು ಮಾಡುತ್ತಾರೆ …ಕೊಟ್ಟಿಗೆ ಯಲ್ಲಿ ಕಟ್ಟಿದ ದನ ಕರು..ಎಮ್ಮೆ ಕೋಣಗಳನ್ನು ಸ್ನಾನ ಮಾಡಿಸಿ ಹೂವಿನಿಂದ ಅಲಂಕರಿಸಿ ದೀಪ ತೋರಿಸಿ ಕಡುಬನ್ನು ಕೊಡುತ್ತಿದ್ದೇವು….. ಬಾಲ್ಯದ ದೀಪಾವಳಿಯನ್ನು ಅನುಭವಿಸಿದವರಿಗೆ ಗೊತ್ತು ಅದರ ಸಂಭ್ರಮ, ಸಂತೋಷ ಆನಂದಾತೀತ…………. ಈಗ ಎಲ್ಲಾ ಬದಲಾವಣೆಯಾಗಿದೆ….
ಮೊದಲು ಅಂದರೆ ನನ್ನ ಬಾಲ್ಯದ ದಿನಗಳಲ್ಲಿ ಹೆಚ್ಚಾಗಿ ದೀಪಾವಳಿಗೆ ವರುಣರಾಯನ ಆರ್ಭಟವಿರುತ್ತಿತ್ತು. ಗುಡುಗು..ಸಿಡಿಲು ಸಹಿತ ಮಳೆ…ಆಗ ನಾವು ಹೆದರಿ ಹೋಗುತ್ತಿದ್ದೆವು….ಅಮ್ಮಹೇಳುತ್ತಿದ್ದರು ಹೆದರಬೇಡಿ ಮಕ್ಕಳೇ ಅದು ರಾಮ ದೇವರು ಬಾಣ ಬಿಡುವುದು ರಾಕ್ಷಸರನ್ನು ಓಡಿಸಲು ಎಂದು..,ನನ್ನ ಬಾಲ್ಯದಲ್ಲಿ ಈಗಿನ ತರಹ ಪರಿಸರ ಕಲುಷಿತ ವಾಗಿರಲಿಲ್ಲ…ಸ್ವಚ್ಚ ಪರಿಸರ…ಎಲ್ಲೆಂದರಲ್ಲಿ ಹಚ್ಚ ಹಸುರು ಗಿಡ ಮರ ತೊರೆ ಹಳ್ಳ ಕೊಳ್ಳ ಗಳಿಂದ ತುಂಬಿ ತುಳುಕುತ್ತಿದ್ದವು….ಈಗಿನ ಹಾಗೆ ವಾಹನದ ದಟ್ಟಣೆಯೂ ಇರಲಿಲ್ಲ….ಶಾಲೆಗೆ ಹೋಗುವಾಗ ಎಷ್ಟೇ ದೂರವಾದರೂ ಸರಿ ನಡೆದುಕೊಂಡೇ ಸಹಪಾಠಿ ಗಳೊಂದಿಗೆ ಹೋಗುತ್ತಿದ್ದೆವು…..ಎಷ್ಟೇ ಪಟಾಕಿ ಸಿಡಿಸಿದರು ಕೇಳುವವರಿಲ್ಲ…ಆದರೆ ಆಗ ಜನರ ಬಳಿ ಹಣದ ಕೊರತೆ ಇತ್ತು….. *ಈಗ ಜನರಲ್ಲಿ ಹಣದ ಕೊರತೆ ಆಗಿನಷ್ಟು ಇಲ್ಲ ಆದರೆ ಮನೆ ಮಂದಿಯೆಲ್ಲ ಬೆರೆತು ಆಚರಿಸುವ ಪದ್ಧತಿ ಕಾಣೆಯಾಗಿದೆ.. ಒಟ್ಟಿನಲ್ಲಿ ಈ ಬಾರಿಯ ದೀಪಾವಳಿ ಎಲ್ಲರ ಜೀವನದಲ್ಲಿ ಹೊಸ ಬೆಳಕನ್ನು ತರಲಿ ಎಂದು ಹಾರೈಸೋಣ…..
✍️ ಶ್ರೀ ದೇವಿ ಭಂಡಾರಿ ಕೊಂಚಾಡಿ.
ನಿಮ್ಮ ಬಾಲ್ಯದ ದೀಪಾವಳಿ ಬಗ್ಗೆ ಬರೆದ ಲೇಖನ ತುಂಬಾ ಮುದ್ದಾಗಿ ಮೂಡಿ ಬಂದಿದೆ. ಅಭಿನಂದನೆಗಳು ಶ್ರೀದೇವಿಯವರೆ 😊👍