ನನ್ನ ಬಾಲ್ಯದ ದೀಪಾವಳಿ
ಪ್ರತೀ ವರ್ಷ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ,ಅದನ್ನು ಸಂಭ್ರಮಿಸಲು ಮನೆ ಮನಗಳು ಸಿದ್ಧಾವಾಗಿದೆ.
ದೀಪಾವಳಿ ಎಂದಾಕ್ಷಣ ನೆನಪಾಗುವುದು ಎಣ್ಣೆ ಸ್ನಾನ, ಹೊಸಬಟ್ಟೆ, ಪಟಾಕಿ, ತುಳಸಿ ಪೂಜೆ, ಗೋವುಗಳ ಪೂಜೆ, ಭೂಮಿಗೆ ದೀಪ ಇಡುವುದು ಹೀಗೆ ಹತ್ತು ಹಲವು ವಿಚಾರಗಳು.ನಾನು ಬಾಲ್ಯದಲ್ಲಿ ಆಚರಿಸುತ್ತಿದ್ದ ದೀಪಾವಳಿ ಹಬ್ಬವು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಎಣ್ಣೆ ಸ್ನಾನ ಮಾಡುವ ಹಿಂದಿನ ದಿನ ನೀರು ಕಾಯಿಸುವ ಹಂಡೆಗೆ ಗೊಂಡೆ ಹೂಗಳು ಹಾರ ಮಾಡಿ ಹಂಡೆಯ ಕೊರಳಿಗೆ ಕಟ್ಟಿ, ಘಂಟೆ ಬಾರಿಸುತ್ತ ನೀರು ತುಂಬಿಸುತ್ತಿದ್ದ ಆ ದಿನಗಳು, ಮಾರನೇ ದಿನ ಅಮ್ಮ ಅಪ್ಪ ನಮ್ಮನ್ನು ಬೇಗ ಏಳಿಸಿ ತಲೆಗೆ ಮೈಗೆ ಎಣ್ಣೆ ಹಚ್ಚಿ ಕಿವಿಯೊಳಗೂ ಎಣ್ಣೆ ಬಿಡುತ್ತಿದ ಆ ದಿನಗಳು, ಬಹಳ ಅಪರೂಪವೆಂಬಂತೆ ಬರೀ ದೀಪಾವಳಿ ಹಬ್ಬಕ್ಕೆ ಮಾತ್ರ ಅಪ್ಪ ತರುತಿದ್ದ ಸುಗಂಧ ಬೀರುವ ಮೈಸೂರ್ ಸ್ಯಾಂಡಲ್ ಸಾಬೂನಿನಿಂದ ಸ್ನಾನ ಮಾಡುತ್ತಿದ್ದ ಆ ದಿನಗಳು, ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಮಾತ್ರ ತೆಗೆಸಿಕೊಡುತ್ತಿದ್ದ ಹೊಸ ಬಟ್ಟೆಯನ್ನು ಧರಿಸಲು ಕಾಯುತ್ತಿದ್ದ ಆ ದಿನಗಳು, ಆ ಬಟ್ಟೆಯನ್ನು ಧರಿಸಿ ಅಂಗಳದಲ್ಲಿ ನಿಂತು ಆಚೆ ಈಚೆ ಓಡಾಡುವ ನೆರೆಕರೆಯವರಿಗೆ ತೋರಿಸುತ್ತಾ ಸಂಭ್ರಮಿಸಿದ ಆ ದಿನಗಳು,ಅಜ್ಜಿ ಮನೆಯಲ್ಲಿ ಗೋವುಗಳ ಪೂಜೆಗೆ ಗೋವುಗಳನ್ನು ಅಲಂಕರಿಸಲು ನಾ ಮುಂದು ತಾ ಮುಂದು ಎಂಬಂತೆ ಇತರೆ ಮಕ್ಕಳೊಂದಿಗೆ ಜಗಳವಾಡುತ್ತಿದ್ದ ಆ ದಿನಗಳು.. ಒಂದೇ ಎರಡೇ? ಹೀಗೆ ಹತ್ತು ಹಲವು ನೆನಪುಗಳು.
ಆಗ ವರ್ಷಕ್ಕೊಮ್ಮೆ ಬಟ್ಟೆ ತೆಗೆದುಕೊಂಡರೆ ಆಗುತ್ತಿದ್ದ ಸಂತೋಷ ಈಗ ತಿಂಗಳಿಗೆರಡು ಬಟ್ಟೆ ತೆಗೆದುಕೊಂಡರೂ ಸಿಗಲಾರದು, ಈಗ ವಿಧ ವಿಧ ಸುಗಂಧ ಭರಿತ ಸಾಬೂನುಗಳನ್ನು ಬಳಸಿದರೂ ಆ ಮೈಸೂರ್ ಸ್ಯಾಂಡಲ್ ಸಾಬೂನಿನ ಸುವಾಸನೆ ಕೊಡುತ್ತಿದ್ದ ಮುದ ಮರೆಯಲಾಗದು.
ಕಾಲ ಬದಲಾದಂತೆ ಹಬ್ಬಗಳ ಆಚರಣೆಗಳಲ್ಲಿ ಬದಲಾವಣೆ ಆಗಿವೆ.ಓಲ್ಡ್ ಈಸ್ ಗೋಲ್ಡ್ ಎಂಬಂತೆ ನಮ್ಮ ಬಾಲ್ಯದಲ್ಲಿ ನಾವು ಆಚರಿಸಿದ ಹಬ್ಬಗಳ ರೀತಿಯನ್ನು ನಮ್ಮ ಮಕ್ಕಳಿಗೂ ಅದರಂತೇ ಆಚರಿಸಲು ಅನುಕೂಲ ಮಾಡಿಕೊಟ್ಟಲ್ಲಿ ಅವರ ಬಾಲ್ಯದ ದಿನಗಳನ್ನೂ ಸವಿಯಾಗಿರಿಸಬೇಕು.
✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ