ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ಈಗ ಎಲ್ಲಾ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರ ಓದು ಮುಂದುವರಿಯುತ್ತಿದೆ ನಿಜ. ಆದರೆ ಹೊಸದೊಂದು ಸಮಸ್ಯೆಯನ್ನು ಇದು ತಂದೊಡ್ಡಿದೆ.
ಕೊರೊನಾ ಸಾಂಕ್ರಾಮಿಕ ಈಗ ಮಕ್ಕಳಿಗೆ ಬೇರೆ ತೆರನಾದ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಮಕ್ಕಳು ಹೆಚ್ಚು ಹೊತ್ತು ಮೊಬೈಲ್ ಪರದೆ ದಿಟ್ಟಿಸುವುದರಿಂದ ಅವರಲ್ಲಿ ಮಯೋಪಿಯ ಅಂದರೆ ಸಮೀಪದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ನೂತನ ಸಂಶೋಧನೆ ತಿಳಿಸಿದೆ. ಕಳೆದೊಂದು ವರ್ಷದಲ್ಲಿ ಮಯೋಪಿಯ ಸಮಸ್ಯೆಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹೆಚ್ಚಾಗಿ 8- 16 ವರ್ಷದೊಳಗಿನ ಮಕ್ಕಳು ಈ ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿರುವುದಾಗಿ ಸಂಶೋಧನೆಯಿಂದ ತಿಳಿದುಬಂದಿದೆ. ಈ ಹಿಂದೆ 10- 15 ಪ್ರತಿಶತ ಮಕ್ಕಳು ಕಣ್ಣಿನ ಸಮಸ್ಯೆ ಹೇಳಿಕೊಂಡು ವೈದ್ಯರ ಬಳಿಗೆ ಬರುತ್ತಿದ್ದರು. ಈಗ ಆ ಸಂಖ್ಯೆ ಶೇ. 30- 40 ಪ್ರತಿಶತಕ್ಕೆ ಏರಿಕೆಯಾಗಿದೆ.
ದೀರ್ಘ ಕಾಲ ಡಿಜಿಟಲ್ ಪರದೆಯನ್ನು ದಿಟ್ಟಿಸುವುದರಿಂದ ಕಣ್ನಲ್ಲಿನ ನೀರಿನಂಶ ಬೇಗನೆ ಒಣಗಿ ಹೋಗುತ್ತದೆ. ಇದರಿಂದ ತುರಿಕೆ ಕಂಡುಬರುತ್ತದೆ. ಆಗ ಮಕ್ಕಳು ಕಣ್ಣನ್ನು ಪದೇ ಪದೇ ಉಜ್ಜಿಕೊಳ್ಳುತ್ತಾರೆ. ಇದರಿಂದ ಒಳಪದರಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ಈಗ ಎಲ್ಲಾ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರ ಓದು ಮುಂದುವರಿಯುತ್ತಿದೆ ನಿಜ. ಆದರೆ ಹೊಸದೊಂದು ಸಮಸ್ಯೆಯನ್ನು ಇದು ತಂದೊಡ್ಡಿದೆ. ಈ ಬಗ್ಗೆ ಪಾಲಕರು ಗಮನ ಹರಿಸಬೇಕು. ಕಂಪ್ಯೂಟರ್ ಲ್ಯಾಪ್ ಟಾಪ್ ಆದರೆ ಅದರಿಂದ ದೂರ ಕುಳಿತುಕೊಳ್ಲಬಹುದು ಆದರೆ ಮೊಬೈಲ್ ಅನ್ನು ಕಣ್ನ ಹತ್ತಿರದಲ್ಲೇ ಇಡಬೇಕಾಗಿರುವುದೇ ಸಮಸ್ಯೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ಇದಕ್ಕೆ ಪರಿಹಾರ
ಮಕ್ಕಳು ಪದೇ ಪದೆ ಕಣ್ಣುಜ್ಜದಂತೆ ಎಚ್ಚರ ವಹಿಸಿ. ಪ್ರತಿ 20 ನಿಮಿಷಗಳಿಗೊಮ್ಮೆ ಮಕ್ಕಳ ಕಣ್ಣುಗಳಿಗೆ ವಿರಾಮ ನೀಡುವಂತೆ ಮಾಡಿ. ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟಿವಿ ಬಳಸುತ್ತಿದ್ದರೆ ಪರದೆಯಿಂದ ಮಕ್ಕಳು ಕನಿಷ್ಟ 33 ಸೆ.ಮೀ ದೂರ ಕುಳಿತುಕೊಳ್ಳುವಂತೆ ಮಾಡಿ. ತೊಂದರೆ ಇದೆ ಎಂದು ಅನ್ನಿಸಿದಲ್ಲಿ ಮಕ್ಕಳನ್ನು ನೇತ್ರ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡಿಸಿ.
ಮೂಲ ಕನ್ನಡ ಪ್ರಭ
ಸಂಗ್ರಹ: ಕುಶಲ್ ಭಂಡಾರಿ , ಬೆಂಗಳೂರು