ಅಂದು ತುಲುನಾಡಿನಾದ್ಯಂತ ಆಚರಿಸುತ್ತಿದ್ದ ಎರಡು ದೊಡ್ಡ ಹಬ್ಬಗಳೆಂದರೆ ದೀಪಾವಳಿ ಮತ್ತು ಶ್ರೀ ಕೃಷ್ಣಾಷ್ಟಮಿ. ದೀಪಾವಳಿ ಹಬ್ಬ ನಾಲ್ಕು ದಿನ ಆಚರಣೆ ಇದ್ದರೆ ಶ್ರೀ ಕೃಷ್ಣಾಷ್ಟಮಿ ಮೂರು ದಿನ ಇರುತಿತ್ತು. ನಾಗ ರ ಪಂಚಮಿ ಕಳೆದ ಮೇಲೆ ಅಷ್ಟಮಿ ದಿನವನ್ನು ಎದುರು ನೋಡುವುದಿತ್ತು. ಐವತ್ತು ವರ್ಷಗಳ ಹಿಂದಕ್ಕೆ ಹೋಗಿ ಅಂದಿನ ಅಷ್ಟಮಿ ಹಬ್ಬವನ್ನು ನೆನೆದು ಕೊಂಡರೆ ಅಂದು ದೇವರ ಆರಾಧನೆಗಿಂತ ಆ ದಿನ ಮನೆಯ ಹೆಂಗಸರು ಬಗೆ ಬಗೆಯ ಅಕ್ಕಿ ತಿಂಡಿ ಮಾಡುವುದರಲ್ಲೇ ಬಿಜಿ ಆಗುತ್ತಿದ್ದರು.ಅದು ಈಗಿನಂತೆ ಒಂದೆರಡು ಸೇರು ಅಕ್ಕಿಯತಿಂಡಿ ಅಲ್ಲ. ಕೂಡು ಕುಟುಂಬದ ದಿನಗಳವು. ಮೂರು ದಿನಗಳಲ್ಲಿ ಅರ್ಧ ಮುಡಿ ಅಕ್ಕಿ ಮುಗಿಯುತಿತ್ತು. ಅದರೊಂದಿಗೆ ಮನೆಯಲ್ಲೇ ಬೆಳೆಸಿದ ಉದ್ದು ಖರ್ಚು ಆಗುತ್ತಿತ್ತು. ಆಂದು ನನ್ನ ತಂದೆ ಅಥವಾ ತಾಯಿಯವರು ನಮ್ಮಕೆಲಸಕ್ಕೆ ಬರುವವರಿಗೆ ಮತ್ತು ಒಕ್ಕಲಲ್ಲಿರುವವರಿಗೆ ಅಕ್ಕಿ, ಕಾಯಿ, ಕಾಯಿಪಲ್ಯೆ ಇತ್ಯಾದಿ ವಸ್ತುಗಳನ್ನು ಕೊಡುವ ಸಂಪ್ರದಾಯ ಇತ್ತು. ಕೊಯಿಲು ಕಟಾವುಮಾಡಲು ಕನ್ಯಾ ತಿಂಗಳನ್ನು ಕಾಯಬೇಕಿತ್ತು. ಉಣ್ಣಲುತಿನ್ನಲು ಕಷ್ಟ ಇತ್ತು. ಉಳ್ಳವರು ಇಲ್ಲದವರಿಗೆ ಕೊಟ್ಟುಅವರು ಕೂಡಾ ಮನೆಮಂದಿ ಸೇರಿ ಹಬ್ಬ ಆಚರಿಸಲೆಂಬ ಬಯಕೆ ಅದಾಗಿತ್ತು. ಬಡವ ಬಲ್ಲಿದ ಎಂಬ ಭಾವನೆಇಲ್ಲದೆ ಎಲ್ಲರೂ ಸೇರಿ ಅಷ್ಟಮಿ ಆಚರಿಸುವ ಕಾಲಅದಾಗಿತ್ತು.
ಸೋಣ ತಿಂಗಳಲ್ಲೇ ಶ್ರೀ ಕೃಷ್ಣಾಷ್ಟಮಿ ಬರುತ್ತದೆ. ತುಲುನಾಡಿನ ಒಂದೊಂದು ಊರಿನಲ್ಲಿ ಒಂದೊಂದುರೀತಿಯಲ್ಲಿ ಈ ಹಬ್ಬದ ಆಚರಣೆ ಇರುತ್ತದೆ. ನಮ್ಮಊರು ಕಾರ್ಕಳ. ಇಲ್ಲಿ ಅಂದು ಈ ಹಬ್ಬದ ಆಚರಣೆಹೇಗಿತ್ತು ಅಂದರೆ ಆ ದಿನ ಮನೆಯ ಹೆಂಗಸರು ನಸುಕಿನಲ್ಲಿ ಎದ್ದು ಮನೆ ಮತ್ತು ಮನೆ ಅಂಗಳಕ್ಕೆ ಸೆಗಣಿ ಸಾರುತ್ತಾರೆ. ಗಂಡಸರು ಮನೆ ಸುತ್ತ ಬೆಳೆದುನಿಂತ ಹುಲ್ಲು ಗಿಡ ಬಳ್ಳಿಗಳನ್ನು ಕಡಿದು ಸ್ವಚ್ಛಗೊಳಿಸುತ್ತಿದ್ದರು. ಮನೆಯ ಮಕ್ಕಳು ಎಲ್ಲಾ ಬೇಗನೆ ಎದ್ದುಹಬ್ಬ ಇದೆ ಎಂಬ ಖುಷಿಯಿಂದ ಇರುತ್ತಿದ್ದರು. ರಾತ್ರಿ ಊಟಕ್ಕೆ ಅಷ್ಟಮಿ ದಿನ ಸೇಮೆದಡ್ಡೆ/ಸೇವಿಗೆ ಮತ್ತು ಹೆಸರು ಬೇಳೆ ಪಾಯಸ ಇರುತ್ತಿತ್ತು.
ಸೇಮೆದಡ್ಯೆಗೆ ಕುಚ್ಚಲಕ್ಕಿಯನ್ನು ಸ್ವಲ್ಪ ಬಾಯಿಲ್ ಮಾಡಿಕಲ್ಲಿನಲ್ಲಿ ರುಬ್ಬುವ ಕೆಲಸ ನಡೆಯುತ್ತದೆ. ಕೆಲವರ ಮನೆಯಲ್ಲಿ ಅಂದು ಎರಡು ರುಬ್ಬುವ ಕಲ್ಲುಗಳು ಇರುತ್ತಿದ್ದವು. ಈ ಎರಡು ಕಲ್ಲುಗಳು ಬಿಜಿಯಾಗಿ ಇರುತ್ತಿದ್ದವು. ಸೇಮೆದಡ್ಯೆಗೆ ಕಡುಬು ಮಾಡಿ ನಂತರ ಸೇವಿಗೆ ಮಾಡುವ ವಿಧಾನ. ಕಡುಬನ್ನು ಗೋಲಿ ಸಂಪಾಯಿ, ಜಂಬು ನೇರಳೆ,ತಂದೇವು ಇತ್ಯಾದಿ ಎಲೆಗಳಿಂದ ತಯಾರಿಸುವುದಿತ್ತು. ಈ ಎಲೆಗಳ ಸಂಗ್ರಹಿಸುವ ಕೆಲಸ ನಮ್ಮದಾಗಿತ್ತು. ಮನೆಯ ಹಿರಿಯ ಗಂಡಸರು ಹಲಸಿನ ಎಲೆಗಳನ್ನು ತಂದು ಕೊಂಚ ಬಿಸಿಲಿನಲ್ಲಿ ಇಟ್ಟು ತುಸು ಬಾಡಿಸಿಗುಂಡ ಕಟ್ಟಿ ಮರುದಿನಕ್ಕೆ ತಯಾರಿ ಮಾಡುವರು.
ಸಾಯಂಕಾಲ ಆಯಿತೆಂದರೆ ಹೆಂಗಸರು ಮರುದಿನಕ್ಕೆಗುಂಡ/ದೋಸೆ/ಇಡ್ಲಿ/ಬಟ್ಟಲಡ್ಯೆ ಇತ್ಯಾದಿ ತಯಾರಿಸಲು ಅಕ್ಕಿ ರುಬ್ಬಲು ಶುರು ಮಾಡುವರು. ತಾಯಿಯವರುಪಾಯಸ ತಯಾರಿಯಲ್ಲಿ ಮಗ್ನರಾಗುತ್ತಿದ್ದರು .ಅಂದುಮೂಡೆ ಮಾಡುವ ಕ್ರಮ ನಮ್ಮ ಕಾರ್ಕಳದಲ್ಲಿ ಇರಲಿಲ್ಲ. ಏಕೆಂದರೆ ಇಲ್ಲಿ ಸಾಕಷ್ಟು ಹಲಸಿನ ಮರಗಳು ಅಂದು ಇದ್ದವು. ಆದುದರಿಂದ ಮುಂಡೇವು ಒಲಿಯನ್ನು ಬಳಸಿದ್ದಿಲ್ಲ. ಅದು ತುಂಬಾ ಕಿರಿ ಕಿರಿ ಕೆಲಸ. ತುಲುನಾಡಿನ ಕೆಲವೆಡೆ ಹಲಸು ಮರ ವಿರಳ.ಅಲ್ಲಿ ಮುಂಡೇವು ಒಲಿಯಿಂದ ಮೂಡೆ ತಯಾರಿಸುವುದು ಈಗಲೂ ಇದೆ.ನಮ್ಮಮನೆಯಲ್ಲಿ ಗುಂಡ ಮಾಡುತ್ತಿದ್ದೆವು. ಗುಂಡದ ಆಕೃತಿಯನ್ನುತಂದೆಯೇ ಮಾಡುತ್ತಿದ್ದರು. ಅದರ ಅಂದ ಚಂದದವಿನ್ಯಾಸ ಅದ್ಭುತವಾಗಿರುತ್ತಿತ್ತು. ಈ ಗುಂಡದಲ್ಲಿ ಅಕ್ಕಿಹಿಟ್ಟು ಹೊಯ್ದು ತಯಾರಿಸಿದ ತಿಂಡಿ 4-5 ದಿನವಾದರೂ ಹಾಳಾಗದೆ ಉಳಿಯುತ್ತಿತ್ತು.
ಸೋಣ ತಿಂಗಳು ಎಲ್ಲಾ ದಿನಗಳಲ್ಲಿ ಬೂತದ ಕೋಣೆಯಲ್ಲಿ ದೀಪ ಇಡುವ ಸಂಪ್ರದಾಯ ಇತ್ತು. ಅಷ್ಟಮಿದಿವಸದಲ್ಲಿ ತಂದೆಯವರು ದೀಪಗಳಿಗೆ ತುಂಬಾ ಎಣ್ಣೆಹಾಕುತ್ತಿದ್ದರು. ಆಗಾಗ್ಗೆ ದೀಪವನ್ನು ನೋಡುತ್ತಾ ಎಣ್ಣೆಹಾಕುವುದು ಇತ್ತು. ಕೃಷ್ಣ ಜನಿಸುವ ಸಮಯ ರಾತ್ರಿಹನ್ನೆರಡು ಗಂಟೆಯವರೆಗೂ ದೀಪ ಉರಿಯಬೇಕು ಎಂಬ ಉದ್ದೇಶ ಅದಾಗಿತ್ತು. ಮನೆಯ ಹೆಂಗಸರುಅಡಿಗೆ ಮನೆಯಲ್ಲಿ ಬಿಜಿಯಾಗಿದ್ದರೆ ಮನೆ ಮಕ್ಕಳುನಾವೆಲ್ಲ ಭಜನೆ ಮಾಡುತ್ತಿದ್ದೆವು. ಭಜನೆ ಮಾಡುತ್ತಿದ್ದಮಧ್ಯದಲ್ಲೇ ಎದ್ದು ಸೇವಿಗೆ ಪಾಯಸ ಹೊಟ್ಟೆಗೆ ಸೇರಿಸುತ್ತಿದ್ದೆವು. ತಂದೆಯವರು ಮತ್ತು ನೆರೆಹೊರೆಯ ಗಂಡಸರು ಹೊಟ್ಟೆ ತುಂಬಾ ಸೇವಿಗೆ ತಿಂದು ಹೊರ ಚಾವಡಿ
ಯಲ್ಲಿ ಇಸ್ಪೀಟ್(ಕೋಟು)ಆಡುತ್ತಿದ್ದರು. ಈ ಇಸ್ಪೀಟ್ಆಟ ಬೆಳಗಿನವರೆಗೂ ನಡೆಯುತ್ತಿತ್ತು.ಈ ಬಿಜಿ ಸಮಯದಲ್ಲೂ ಚಂದ್ರ ದರ್ಶನ ನೋಡಲು ಮರೆಯುತ್ತಿರಲಿಲ್ಲ. ಹೊರಗೆ ನಡೆದು ಆಕಾಶ ನೋಡುತ್ತಿದ್ದರು. ರಾತ್ರಿಹನ್ನೆರಡು ಗಂಟೆಗೆ ಚಂದ್ರ ಮೂಡುವ ಸಮಯದಲ್ಲಿಕೃಷ್ಣ ಪರಮಾತ್ಮ ಹುಟ್ಟಿದ ಎಂಬ ನಂಬಿಕೆ ಅದಾಗಿತ್ತು.
ಮೋಡಗಳ ಮರೆಯಲ್ಲಿ ಸ್ವಲ್ಪ ಬೆಳಕು ಕಂಡರೆ ಚಂದ್ರಮೂಡಿದ್ದಾನೆ ಎಂದು ಎಲ್ಲರೂ ಇನ್ನೊಮ್ಮೆ ಪಾಯಸಕುಡಿದು ಬಾಯಿ ಸಿಹಿ ಮಾಡುವ ಸಂಪ್ರದಾಯ ಅಂದುಇತ್ತು. ತಂದೆಯವರು ಇಸ್ಪೀಟ್ ಆಡುವ ಪಕ್ಕದಲ್ಲೇಅವರ ಎಲೆ ಅಡಿಕೆ ಹರಿಯಾಣ ಇರುತ್ತಿತ್ತು. ಇಸ್ಪೀಟ್ಆಡುವವರು ನಗುತ್ತಾ ಎಲೆ ಜಗಿಯುತ್ತಾ ಖುಷಿಯಿಂದ ಇರುತ್ತಿದ್ದರು. ನಮಗೆಲ್ಲಾ ಇಸ್ಪೀಟ್ ಆಡುವ ಜಾಗಕ್ಕೆಹೋಗುವ ಹಾಗೆ ಇರಲಿಲ್ಲ. ಅದು ಕೆಟ್ಟ ಹವ್ಯಾಸ ಎಂಬಪಟ್ಟಿ ಇಸ್ಪೀಟ್ ಗೆ ಇತ್ತು. ಕೃಷ್ಣ ಹುಟ್ಟಿದ ಮರುದಿನ ಮಧ್ಯಾಹ್ನ ಭರ್ಜರಿತರಕಾರಿ ಸಿಹಿ ಊಟ ಇತ್ತು. ಅಂದು ಬೇಗನೆ ಮಧ್ಯಾಹ್ನಊಟ ಮುಗಿಸಿ ಬೆದ್ರ(ಮೂಡಬಿದ್ರೆ)ದಲ್ಲಿ ನಡೆಯುವ
ಮೊಸರು ಕುಡಿಕೆ ಕಾರ್ಯಕ್ರಮ ನೋಡಲು ಹೋಗುತ್ತಿದ್ದೆವು. ಕಾಲು ನಡಿಗೆಯ ಪ್ರಯಾಣ ಬಲು ಜಾಲಿ ಇತ್ತು . ಅದು ಎಂಟು ಎಂಟು ಹದಿನಾರು ಕಿಲೋ ಮೀಟರ್ದೂರ ಇತ್ತು. ಬೆದ್ರದ ಮೊಸರು ಕುಡಿಕೆ ಅಂದು ಬಹಳಫೇಮಸ್ ಆಗಿತ್ತು. ವಿವಿಧ ವೇಷಗಳು ಇರುತ್ತಿದ್ದವು. ಕೈಯಲ್ಲಿ ಕಾಸು ಇಲ್ಲದಿದ್ದರೂ ವೇಷಧಾರಿಗಳಿಗೆ ಹಣಕೊಡುವುದು ಒಂದು ಹೆಮ್ಮೆ ಎನಿಸುತಿತ್ತು. ಮೊಸರುಕುಡಿಕೆ ಕಾರ್ಯಕ್ರಮ ಮುಗಿಸಿ ಮನೆ ಸೇರುವಾಗರಾತ್ರಿ ಆಗುತಿತ್ತು. ರಾತ್ರಿ ಎಲ್ಲಾ ಬೊಬ್ಬಿಡುತ್ತಾ ಕತ್ತಲೆಯಲ್ಲಿ ನಡೆಯುತ್ತಾ ಮನೆ ಸೇರುತಿದ್ದೆವು. ಮನೆಯಲ್ಲಿ ರಾತ್ರಿಪದೆಂಗಿ(ಹೆಸ್ರು)ಕಾಳು ಗಸಿ ಮತ್ತು ಬಿಸಿ ಬಿಸಿ ಉದ್ದಿನದೋಸೆ,ಗುಂಡ ಇರುತಿತ್ತು.
ಅಂದು ಅಷ್ಟಮಿಗೆ ಒಂದು ದಿನ ಮಾತ್ರ ಶಾಲೆಗೆ ರಜೆ ಇತ್ತು. ಮನೆಯಲ್ಲಿ ಎರಡು ದಿನ ರಜೆ ಎಂದು ಸುಳ್ಳು ಹೇಳುತ್ತಿದ್ದೆವು. ಶಾಲೆಯಲ್ಲಿ ಹೊಟ್ಟೆ ನೋವು ಇತ್ತು ಅದಕ್ಕೆ ಗೈರು ಹಾಜರಾಗಿದ್ದೆ ಎಂದು ಸುಳ್ಳುಹೇಳುತಿದ್ದೆವು. ಅಷ್ಟಮಿ ಹಬ್ಬದ ಬಂದದ ಕರವನ್ನು (ಅಕ್ಕಿ ಹಿಟ್ಟುಕಲಸಿಡುವ ಮಣ್ಣಿನ ಪಾತ್ರೆ) ಗಣೇಶ ಹಬ್ಬದವರೆಗೂ ತೊಳೆಯುವಂತೆ ಇರಲಿಲ್ಲ. ದಿನಾ ಅಕ್ಕಿ ರುಬ್ಬಿ ಅದೇಬಂದದ ಕರಕ್ಕೆ ಹಾಕುವ ಒಂದು ವಿಶೇಷ ಸಂಪ್ರದಾಯಅಂದಿತ್ತು. ಗಣೇಶನ ಹಬ್ಬ ಮುಗಿದ ನಂತರವಷ್ಟೇತೊಳೆದು ಇಡುವ ಶೈಲಿ ಅಂದಿತ್ತು. ಈ ಬಂದದ ಕರವನ್ನು ನಂತರದ ದಿನಗಳಲ್ಲಿ ಬರುವ ದೀಪಾವಳಿ ಹಬ್ಬಕ್ಕೆ ಬಳಸುವುದು. ಇಲ್ಲೂ ಅಷ್ಟೆ ದೀಪಾವಳಿಯ ಬಂದದ ಕರವನ್ನು ತುಲಸಿ ಹಬ್ಬದವರೆಗೂ ತೊಳೆಯಬಾರದು.ದಿನಾ ಅಕ್ಕಿ ರುಬ್ಬಿ ಹಾಕುವ ಸಂಪ್ರದಾಯ ಇತ್ತು.
ಇರ್ವತ್ತೂರು ಗೋವಿಂದ ಭಂಡಾರಿ.BA. LLB. CAIIB.
ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್
ಕಾರ್ಕಳ.