January 18, 2025
inugration

ಮನೆ ಮನೆಯ ಮಾತಾಯಿತು ‌’ಭಂಡಾರಿ ವಾರ್ತೆ’

        ಸಾಮಾಜಿಕ ಜಾಲತಾಣಗಳು ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದು, ಎಲ್ಲರೂ ಕೈಯಲ್ಲೇ ಜಗತ್ತನ್ನು ಕಾಣುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಂಡಾರಿ ಸಮುದಾಯದ ಸುದ್ದಿ ಗಳು ಯಾಕೆ ಕ್ಷಣಾರ್ಧದಲ್ಲಿ ಮನೆ ಮನೆಯನ್ನು ತಲುಪಬಾರದು ಎಂಬ ನಿಟ್ಟಿನಲ್ಲಿ ಆರಂಭಗೊಂಡ ಭಂಡಾರಿ ವಾರ್ತೆ ಇಂದು ಅತ್ಯಲ್ಪ ಅವಧಿಯಲ್ಲೇ ಅದ್ಬುತ ಯಶಸ್ಸನ್ನು ಸಾಧಿಸಿದೆ.

       ಭಂಡಾರಿ ವಾರ್ತೆಯ ಆರಂಭದಲ್ಲಿ ಸಹಜವಾಗಿಯೇ ಆತಂಕಗಳಿದ್ದವು‌. ಇದನ್ನು ಭಂಡಾರಿ ಬಂಧುಗಳು ಹೇಗೆ ಸ್ವೀಕರಿಸುತ್ತಾರೆ, ಇದು ಎಲ್ಲರನ್ನು ತಲುಪಬಹುದೇ ಎಂಬ ಪ್ರಶ್ನೆಗಳು ಮೂಡಿದ್ದವು. ಅದರೆ ಈ ಎಲ್ಲಾ ಆತಂಕಗಳನ್ನು ಮೀರಿ ನಿಂತ ಭಂಡಾರಿ ವಾರ್ತೆಯು ನಾಲ್ಕು ತಿಂಗಳ ಅತ್ಯಲ್ಪ ಅವಧಿಯಲ್ಲಿ ಮನೆ ಮನದ ಮಾತಾಗಿದೆ.

       ಆರಂಭದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಆರಂಭಗೊಂಡ ವೆಬ್ಸೈಟ್ ಬಳಿಕ ಆಗಸ್ಟ್ 27 ರಂದು ಮಂಗಳೂರಿನಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಮುಂದೆ ಸಾಮಾಜಿಕ ಜಾಲತಾಣಗಳ ಮೂಲಕವೇ ಪ್ರಚಾರವನ್ನು ಪಡೆದು, ಪ್ರಸ್ತುತ ಓದುಗರ ನೆಚ್ಚಿನ ಸುದ್ದಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಲಭ್ಯವಾಗುತ್ತಿರುವುದು ಭಂಡಾರಿ ವಾರ್ತೆಯ ಹೆಮ್ಮೆಯಾಗಿದೆ. 

ಮನೆ ಮನೆಯ ಸುದ್ದಿಗಳು

        ಭಂಡಾರಿ ಬಂಧುಗಳ ಎಲ್ಲಾ ರೀತಿಯ ಸುದ್ದಿಗಳಿಗೂ ವೇದಿಕೆ ಕಲ್ಪಿಸುವ ಕಾರ್ಯವನ್ನು ಭಂಡಾರಿ ವಾರ್ತೆ ಮಾಡಿದೆ. ಅವರ ಸಾಧನೆಗಳು, ಮನೆಯ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರಶಸ್ತಿಗಳು ಹೀಗೆ ಎಲ್ಲವೂ ಬಿತ್ತಾರಗೊಂಡಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಬಂಧುಗಳು ಅದನ್ನು ನೋಡಿ ಸಂತಸ ಪಟ್ಟಿದ್ದಾರೆ.ಕೆಲವು ಸುದ್ದಿಗಳನ್ನು ತ್ವರಿತಗತಿಯಲ್ಲಿ ನೋಡಿದ ಬಂಧುಗಳು “ಹೌದು…ನಮ್ಮ ಸಮುದಾಯಕ್ಕೆ ಈ ರೀತಿಯ ಒಂದು ಪತ್ರಿಕೆಯ ಅವಶ್ಯಕತೆ ಇತ್ತು” ಎಂಬುದನ್ನು ಮನಗಂಡಿದ್ದಾರೆ.

       ಮಹಿಳಾ ವಿಭಾಗದಲ್ಲಿ ಭಂಡಾರಿ ಪಾಕಶಾಲೆ, ಬ್ಯೂಟಿಬಾಕ್ಸ್, ಅನಾವರಣ ವಿಭಾಗದಲ್ಲಿ ಸಾಧಿತ ಭಂಡಾರಿ, ಚಿಪ್ಪಿನೊಳಗಿನ ಭಂಡಾರಿ ಮುತ್ತು, ಭಂಡಾರಿ ಸ್ವಯಂಸೇವಕ, ಹಾಗೂ ಅಧ್ಯಾತ್ಮ ಹೀಗೆ ಬೇರೆ ಬೇರೆ ಅಂಕಣಗಳ ಮೂಲಕ ಸುದ್ದಿ ಬಿತ್ತರಿಸುವ ಕಾರ್ಯ ನಡೆದಿದೆ. ಇದರ ಜತೆಗೆ ಭಂಡಾರಿ ಲೇಖಕರಿಗೆ ವೇದಿಕೆ ಕಲ್ಪಿಸುವ ಕಾರ್ಯವನ್ನೂ ಮಾಡಿದ ಹೆಮ್ಮೆ ಭಂಡಾರಿ ವಾರ್ತೆಗಿದೆ.

       ಪ್ರಸ್ತುತ ಭಂಡಾರಿ ಉದ್ಯೋಗವೂ ಆರಂಭಗೊಂಡಿದ್ದು, ಉದ್ಯೋಗದ ಮಾಹಿತಿ ನೀಡುವ ಕಾರ್ಯ ಆರಂಭವಾಗಿದೆ. ವದು-ವರರ ಹುಡುಕಾಟದಲ್ಲಿರುವ ಭಂಡಾರಿ ಬಂಧುಗಳ ಅನುಕೂಲಕ್ಕಾಗಿ “ಭಂಡಾರಿ ವಿವಾಹ ವೇದಿಕೆ” ಎಂಬ ಅಂಕಣ ಶೀಘ್ರದಲ್ಲಿ ಆರಂಭಗೊಳ್ಳಲಿದೆ.ಮುಂದಿನ ದಿನಗಳಲ್ಲಿ ಭಂಡಾರಿ ವಾರ್ತೆಯ ಮೂಲಕ ಸಮುದಾಯದ ಬಂಧುಗಳಿಗೆ ಇನ್ನಷ್ಟು ಅವಕಾಶಗಳನ್ನು ತೆರೆದಿಡುವ ಪ್ರಯತ್ನ ನೆಡೆಯಲಿದೆ. ತಮ್ಮ ಬಂಧು ಬಳಗಕ್ಕೆ ಶುಭಾಶಯ ಕೋರಲು, ಉದ್ಯಮ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಜಾಹೀರಾತು ನೀಡಲು ಕೂಡ ಭಂಡಾರಿ ವಾರ್ತೆಯಲ್ಲಿ ಅವಕಾಶವಿದೆ.

ಮಕ್ಕಳಿಗೆ ಸ್ಪರ್ಧೆಗಳು

      ಭಂಡಾರಿ ವಾರ್ತೆಯು ಲೋಕಾರ್ಪಣೆಗೊಳ್ಳುವ ಮೊದಲೇ ಮಕ್ಕಳ ಸೆಲ್ಪಿ ಸ್ಪರ್ಧೆಯನ್ನು ಅಯೋಜಿಸಿ ಯಶಸ್ವಿಯಾಗಿತ್ತು. ಅಂದು ಮಕ್ಕಳ ಪೋಷಕರು ತೋರಿದ ಅಭೂತಪೂರ್ವ ಬೆಂಬಲವೇ ಭಂಡಾರಿ ವಾರ್ತೆಗೆ ಶ್ರೀರಕ್ಷೆಯಾಯಿತು.ಭಂಡಾರಿವಾರ್ತೆ ಈ ಬಾರಿಯ ದೀಪಾವಳಿಯನ್ನು ಭಂಡಾರಿ ಬಂಧುಗಳೊಂದಿಗೆ ಸೇರಿ ಆಚರಿಸಿದ್ದು ವಿಶೇಷ. ಪತ್ರಿಕೆಯ ಕರೆಗೆ ಓಗೊಟ್ಟು ಬಂಧುಗಳು ಬಾಲ್ಯದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನೆಡೆದ ಸ್ವಾರಸ್ಯಕರ ಘಟನೆಗಳನ್ನು ಬರೆದು ಕಳಿಸಿದ್ದು, ಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದು ಅವಿಸ್ಮರಣೀಯ.ಹಾಗೆಯೇ ದೀಪಾವಳಿಯ ಸಂದರ್ಭದಲ್ಲಿ ಭಂಡಾರಿ ಯೂತ್ ವಾರಿಯರ್ಸ್ ಸಹಯೋಗದೊಂದಿಗೆ ಗೂಡುದೀಪ ಸ್ಪರ್ಧೆಯನ್ನೂ ಸಂಘಟಿಸಿತು.

      ಇದೀಗ ಮಕ್ಕಳ ದಿನಾಚರಣೆಯ ಅಂಗವಾಗಿ ಭಂಡಾರಿ ಚಿತ್ತಾರ ಎಂಬ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ನಡೆಸುತ್ತಿದ್ದು, ಇದಕ್ಕೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಭಂಡಾರಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ಇದರ ಮೂಲ ಉದ್ದೇಶವಾಗಿದ್ದು, ಇತರ ಸಮಾಜದ ಮಕ್ಕಳಂತೆ ನಮ್ಮ ಮಕ್ಕಳು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಿದೆ.

      ಮುಂದೆಯೂ ಇಂತಹ ಹಲವು ಸ್ಪರ್ಧೆಗಳನ್ನು ಸಂಘಟಿಸುವ ಗುರಿ ಭಂಡಾರಿ ವಾರ್ತೆಯ ಮುಂದಿದೆ. ಇದಕ್ಕೆ ನಮ್ಮ ಪ್ರತಿಭೆಗಳು ಸಹಕಾರ ನೀಡಿದಾಗಲೇ ಇದರ ಹಿಂದಿರುವ ಉದ್ದೇಶಕ್ಕೆ ಅರ್ಥ ಬರುತ್ತದೆ. ಸ್ಪರ್ಧೆಯ ಜತೆಗೆ ತಮ್ಮ ಬರವಣಿಗೆಗಳಿಗೂ ಇಲ್ಲಿ ವೇದಿಕೆ ಸಿಗಲಿದೆ.

      ಒಟ್ಟಿನಲ್ಲಿ ಭಂಡಾರಿ ವಾರ್ತೆಯ ನಾಲ್ಕು ತಿಂಗಳ ಪಯಣದ ಯಶಸ್ಸಿನ ಶಕ್ತಿಗಳು ತಾವು. ಓದುಗರ ಬೆಂಬಲ ಇದ್ದಾಗಲೇ ನಾವು ಇನ್ನಷ್ಟು ಚುರುಕಿನಿಂದ ಕಾರ್ಯ ನಿರ್ವಹಿಸಲು ಸಾಧ್ಯ. ಹಿರಿಯರ ಮಾರ್ಗದರ್ಶನದೊಂದಿಗೆ ಭಂಡಾರಿ ವಾರ್ತೆಯ ಯುವಪಡೆ ಕಾರ್ಯ ನಿರ್ವಹಿಸುತ್ತಿದೆ. ನಿಮ್ಮ  ಇನ್ನಷ್ಟು ಸಹಕಾರದ ನಿರೀಕ್ಷೆಯಲ್ಲಿದೆ. ಓದುಗರೇ ನಮಗೆ ಶ್ರೀರಕ್ಷೆ.

 – ಭಂಡಾರಿ ವಾರ್ತೆ

Leave a Reply

Your email address will not be published. Required fields are marked *