
ಎಲ್ಲರಿಗೂ ಶಾಸಕರಾಗಬೇಕು, ಸಂಸದರಾಗಬೇಕು, ಸಚಿವರಾಗಬೇಕು. ಎಂಬ ಆಸೆ ಇರುತ್ತದೆ. ಇದೇ ರೀತಿ ನನಗೂ ಪ್ರಧಾನಿಯಾಗಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿತು. ಅದು ಹೇಗೆ ಸಿಕ್ಕಿತು ಎನ್ನುವುದಕ್ಕಿಂತಲೂ ಮುಖ್ಯವಾಗಿ ನನ್ನ ಆಡಳಿತಕ್ಕೆ ಎಲ್ಲಾ ಕಡೆಯಿಂದಲೂ ಪ್ರಶಂಸೆಯ ಮಾತುಗಳು ಕೇಳಿಬಂದವು. ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ನಿಶ್ಚಿಂತೆಯಿಂದ ಬದುಕುವ ವಾತಾವರಣ ಸೃಷ್ಟಿಯಾಗಿತ್ತು.
ಎಲ್ಲರೂ ಗುಣಮಟ್ಟದ ಜೀವನ ನಡೆಸಲು ಸೂಕ್ತ ಉದ್ಯೋಗ, ಗಡಿ ಭಾಗಗಳಲ್ಲಿ ಬಲಿಷ್ಠ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ತೀರಾ ಗ್ರಾಮೀಣ ಭಾಗಕ್ಕೂ ರಸ್ತೆ ವ್ಯವಸ್ಥೆ, ದಿನದ ಎಲ್ಲಾ ಹೊತ್ತು ಕುಡಿಯುವ ನೀರಿನ ಸೌಲಭ್ಯವೂ ಲಭ್ಯವಿತ್ತು. ವಿದ್ಯುತ್ ಸಂಪರ್ಕವೂ ಎಲ್ಲಾ ಮನೆಗಳನ್ನೂ ತಲುಪಿದ್ದವು. ಹೀಗಾಗಿ ಜನರ ಜೀವನ ಮಟ್ಟವೂ ಸುಧಾರಿಸಿತ್ತು.
ದೇಶದ ಕೃಷಿ ವ್ಯವಸ್ಥೆ ಯೂ ಸುಧಾರಣೆಗೊಂಡು ಕೃಷಿಕರಿಗೂ ತಮ್ಮ ಬೆಳೆಗೆ ಉತ್ತಮ ಬೆಲೆಯೂ ಲಭಿಸಿತ್ತು. ಅಲ್ಲಲ್ಲಿ ಕೈಗಾರಿಕೆಗಳು ಸ್ಥಾಪನೆಗೊಂಡು ವಿಫುಲ ಸಂಪನ್ಮೂಲ ಕ್ರೋಢೀಕರಣಗೊಂಡು ದೇಶದಲ್ಲಿ ಸುಭೀಕ್ಷೆ ನೆಲೆಸಿತ್ತು. ಹೀಗಾಗಿ ವಿರೋಧ ಪಕ್ಷದವರಿಗೆ ನನ್ನ ಆಡಳಿತವನ್ನು ಟೀಕಿಸಲು ಎಲ್ಲೂ ಅವಕಾಶಗಳೇ ಇರಲಿಲ್ಲ.
ಎಲ್ಲರಿಗೂ ಎಲ್ಲವೂ ಲಭ್ಯವಾಗುತ್ತಿದ್ದ ಕಾರಣ ಭ್ರಷ್ಟಾಚಾರ, ಭಯೋತ್ಪಾದನೆ ಎಂಬ ಮಾತುಗಳೇ ಇರಲಿಲ್ಲ. ನನ್ನ ಆಡಳಿತದ ಮಹತ್ವಪೂರ್ಣ ಯೋಜನೆಯಾದ ಏಕರೂಪದ ಶಿಕ್ಷಣ ವ್ಯವಸ್ಥೆಯೂ ಜಾರಿಯಲ್ಲಿತ್ತು. ಮಾಹಿತಿ ತಂತ್ರಜ್ಞಾನ, ಮೊಬೈಲ್ ಸೌಕರ್ಯದಲ್ಲೂ ದೇಶದ ಎಲ್ಲಾ ಗ್ರಾಮಗಳು ಸ್ವಾವಲಂಬನೆಯನ್ನು ಸಾಧಿಸಿದ್ದವು. ಹೀಗಾಗಿ ನಿಶ್ಚಿಂತೆಯ ಜೀವನ ದೇಶವಾಸಿಗಳದ್ದಾಗಿತ್ತು.
ಅಗತ್ಯ ವಸ್ತುಗಳ ಬೆಲೆಯೂ ಇಳಿಕೆಯಾಗಿ ಜನರಿಗೆ ಯಾವುದೂ ಕಷ್ಟವಾಗುತ್ತಿರಲಿಲ್ಲ.ವಿದೇಶಿ ಕಂಪೆನಿಗಳು ಕೂಡ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿತ್ತು. ಜತೆಗೆ ನನ್ನ ಆಡಳಿತಕ್ಕೆ ವಿದೇಶಗಳಲ್ಲೂ ಪ್ರಶಂಸೆ ವ್ಯಕ್ತವಾಗಿತ್ತು.ದೇಶದ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದ್ದ ಕಾರಣ ವಿದೇಶಿಗರು ನಮ್ಮ ತಂಟೆಗೆ ಬರುತ್ತಿರಲಿಲ್ಲ.
ಅಭಿವೃದ್ಧಿಯ ಪರ್ವ ಕಾಲದಲ್ಲಿ ಬೆಳಗುತ್ತಿದ್ದ ಭಾರತಕ್ಕೆ ಏನಾಯಿತೋ ಗೊತ್ತಿಲ್ಲ. ಪ್ರತಿಪಕ್ಷದ ಪಿತೂರಿಗೆ ತುತ್ತಾಗಿ ನನ್ನ ಅಧಿಕಾರ ಬಿದ್ದು ಹೋಯಿತು. ಅದರೆ ಬಿದ್ದದ್ದು ನಾನು ಅಧಿಕಾರದಿಂದಲ್ಲ, ಮಲಗಿದ್ದ ಮಂಚದಿಂದ.. ಎದ್ದು ನೋಡಬೇಕಾದರೆ ಗಂಟೆ ಮಧ್ಯರಾತ್ರಿ ಮೂರಾಗಿತ್ತು. ಬೆಳಗುತ್ತಿದ್ದ ಭಾರತ ಕತ್ತಲೆಯಲ್ಲಿ ಮಲಗಿತ್ತು. ಪ್ರಧಾನಿಯಾದ ಕನಸು ನನ್ನದ್ದಾಗಿತ್ತು.

😃😃😃😃😃🙌🙌🙌
Nice
jai