January 18, 2025
nagabana (2)

ತುಲುನಾಡಿನಾದ್ಯಂತ ನಾಗಬನಗಳಲ್ಲಿ ವಿವಿಧ ವಿನ್ಯಾಸದ ಮುರಕಲ್ಲುಗಳಿಂದ ನಿರ್ಮಿತವಾದ ನಾಗನ ಸ್ಮಾರಕ ಗೋರಿಗಳು ತುಂಬಾ ಇದ್ದವು. ಈಗೆಲ್ಲಾ ಅವುಗಳು ಜೀರ್ಣೋದ್ಧಾರದ ಅಮಲಿನಲ್ಲಿ ದಿನದಿಂದ ದಿನಕ್ಕೆ ನಾಶವಾಗುತ್ತಲೇ ಇದೆ. ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಿ ನಾಗಬನಗಳಲ್ಲಿ ಕಾಂಕ್ರೀಟ್ ಕಟ್ಟೆಗಳನ್ನು ಕಟ್ಟಿ ಅದರ ಮೇಲೆ ಮಾಡು ನಿರ್ಮಾಣ ಮಾಡುವ ಕೆಲಸಗಳು ಬಹು ವೇಗವಾಗಿ ನಡೆಯುತ್ತಾ ಇದೆ.ಇನ್ನೇನು ಕೆಲವೇ ವರ್ಷಗಳಲ್ಲಿ ಇಂತಹ ಗೋರಿಗಳು ಅದೃಶ್ಯವಾಗುವುದು ಖಂಡಿತ.

 

ತುಲುನಾಡಲ್ಲಿ ಇಲ್ಲಿನ ಮೂಲನಿವಾಸಿಗಳೇ ನಾಗನ ಆರಾಧನೆಯನ್ನು ಸ್ಥಾಪನೆ ಮಾಡಿದ್ದಾರೆ. ನಂತರದ ಕಾಲದಲ್ಲಿ ಬೂತರಾಧನೆಯನ್ನೂ ಆರಂಭಿಸಿದ್ದಾರೆ. ಅವರು ಬರೇ ಮಾಮೂಲಿ ಪಾದೆಕಲ್ಲುಗಳಿಂದ ದೈವ (ನಾಗ ಮತ್ತು ಬೂತೊಲು)ಗಳನ್ನು ನಂಬಿದ್ದರು. ತುಲು ಮಣ್ಣಲ್ಲಿ ನಾಗಸರ್ಪ ಮರಿಉಚ್ಚುಗಳು ಸ್ವಭಾವಿಕವಾಗಿ ಅಥವಾ ಆಕಸ್ಮಿಕವಾಗಿ ಸತ್ತರೆ ಅವುಗಳನ್ನು ನಾಗಬನ ದಲ್ಲಿ ದಫನ ಮಾಡಿದ್ದಾರೆ. ನಾಗ ದಫನ ಸ್ಥಳವೇ ನಾಗಬನ ಎಂದಿದ್ದಾರೆ. ನಾಗ ದಫನ ಸ್ಥಳದಲ್ಲಿ ಪಾದೆ ಕಲ್ಲುಗಳ ಕಾಟ್ ತುಂಡುಗಳನ್ನು ಹಾಸಿ ಆರಾಧಿಸಿ ನಾಗ ದೋಷಗಳನ್ನು ಮನ್ನಿಸಲು ಕೋರಿದ್ದಾರೆ.

 

ತುಲುನಾಡಿಗೆ ಜೈನರು ಆಗಮಿಸುವರು.”ಕೊಳ” ಕ್ಕೆ ,ಮಜಲು,ಬೆಟ್ಟುಗಳೆಂಬ ಹೊಲ ಗದ್ದೆಗಳ ನಿರ್ಮಾಣ ಮಾಡಿ ತುಲುನಾಡು ಕಟ್ಟುತ್ತಾರೆ. ಇಲ್ಲಿನ ಮೂಲ ನಿವಾಸಿಗಳು ಸ್ಥಾಪಿಸಿದ ದೈವರಾಧನೆಯನ್ನು ಉತ್ತುಂಗಕ್ಕೆ ಒಯ್ಯುತ್ತಾರೆ. ನಾಗಬನಕ್ಕೆ ಎಂದೇ ಎಲ್ಲಡೆ ಜಮೀನುಗಳ ಮಧ್ಯೆ ಅಲ್ಲಲ್ಲಿ ಜಾಗವನ್ನು ಮೀಸಲು ಇಡುವರು. ಆ ಜಾಗದಲ್ಲಿ ನಾಗಸರ್ಪ ಮರಿಉಚ್ಚುಗಳ ಸಂತತಿ ಬೆಳೆಯಲೆಂಬ ಆದಿವಾಸಿಗಳ ನಿಲುವಿಗೆ ಪ್ರೋತ್ಸಾಹ ನೀಡುವರು. ಅದರಂತೆ ಅವುಗಳ ದಫನ ಸ್ಥಳವೂ ಈ ನಾಗಬನವೇ ಆಗಲೆಂದು ಹೇಳುವರು.

 

ನಾಗಬನಗಳಲ್ಲಿ ಇಲ್ಲಿನ ಮೂಲ ಆದಿವಾಸಿಗಳು ನಾಗನನ್ನು ಪಾದೆಕಲ್ಲುಗಳನ್ನು ಹಾಸಿ ನಾಗನನ್ನು ನಂಬಿದರೆ ಜೈನರು ಬೆದ್ರ (ಮೂಡಬಿದ್ರೆ)ದ ಮುರಕಲ್ಲು ಗಳಿಂದ ವಿವಿಧ ವಿನ್ಯಾಸಗಳಿಂದ ಗೋರಿಗಳನ್ನು ಬಳಸಿ ನಾಗನನ್ನು ಆರಾಧನೆ ಮಾಡಿದರು. ದೋಷಗಳನ್ನು ಪರಿಹರಿಸಿ ಕೊಂಡರು. ಆದಿವಾಸಿಗಳು ನಂಬಿದ ನಾಗನ ಬನಗಳಲ್ಲೂ ವಿವಿಧ ಗಾತ್ರದ ವಿನ್ಯಾಸಗಳಿಂದ ಗೋರಿಗಳನ್ನು ನಿರ್ಮಾಣ ಮಾಡಿದ್ದಾರೆ.ಮುರಕಲ್ಲು ಬಳಸಿದರೆ ತಳದಲ್ಲಿರುವ ನಾಗಗಳಿಗೆ ಗಾಳಿ ಪ್ರವೇಶಿಸಿ ಅವುಗಳು ಸಂತುಷ್ಟ ಗೊಳ್ಳುತ್ತವೆ ಎಂಬ ನಂಬಿಕೆಯನ್ನು ಉಳಿಸಿ ಕೊಂಡರು. ತುಲುನಾಡಿಗೆ ವೈಷ್ಣವರು ಬಂದ ಬಳಿಕ ಇಲ್ಲಿ ಮಾನವರನ್ನು ದಫನ ಮಾಡುವ ಪದ್ಧತಿ ರದ್ದಾಗುತ್ತದೆ. ಅದರಂತೆ ನಾಗಗಳಿಗೂ ದಫನ ಮಾಡುವ ಪದ್ಧತಿ ರದ್ಧಾಗುತ್ತದೆ. ತುಂಬಾ ಒಳ್ಳೆಯ ಭಸ್ಮ ಮಾಡುವ ಕ್ರಮ ಚಾಲ್ತಿಗೆ ಬರುತ್ತದೆ. ನಾಗನನ್ನು ಎಲ್ಲಾದರೂ ಭಸ್ಮ ಮಾಡಿ ದೋಷ ನಿವಾರಣೆಗೆ ನಾಗನ ಪ್ರತಿಮೆ ಮಾಡಿ ನಾಗಬನಗಳಲ್ಲಿ ಪ್ರತಿಷ್ಠೆ ಮಾಡುವ ಹೊಸ ಕ್ರಮ ಆರಂಭವಾಗುತ್ತದೆ.

 

ವೈಷ್ಣವರು ತುಲುನಾಡಿಗೆ ಪ್ರವೇಶಿಸಿದ ಬಳಿಕ ಯಾವುದೇ ಹೊಸ ನಾಗಬನಗಳ ನಿರ್ಮಾಣ ಮಾಡಲು ಇರಲಿಲ್ಲ. ಏಕೆಂದರೆ ಆದಿಮೂಲದಲ್ಲಿ ಆದಿವಾಸಿಗಳಿಂದ ಕೆಲವೆಡೆಗಳಲ್ಲಿ ನಾಗಬನದ ರಚನೆ ಆಗಿತ್ತು.ತುಲುನಾಡು ಕಟ್ಟಿದ ಹೊಲಗದ್ದೆಗಳನ್ನು ನಿರ್ಮಾಣ ಮಾಡುವ ಕಾಲದಲ್ಲಿ ತುಲುನಾಡಿನಾದ್ಯಂತ ಜೈನರು ಹೊಲ ಗದ್ದೆಗಳ ಅನುಪಾತಕ್ಕೆ ಸರಿಯಾಗಿ ನಾಗಬನಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಎಲ್ಲೆಲ್ಲಿ ಎಷ್ಟೆಷ್ಟು ವಿಸ್ತಾರವಾದ ಜಾಗ ಮೀಸಲು ಇಡಬೇಕು ಎಂಬ ಕಟ್ಟು ಕಟ್ಟಳೆಯಂತೆ ನಾಗಬನದ ರಚನೆ ಆಗಿದೆ. ನಾಗಬನ ಎಂದರೆ ಅಲ್ಲಿ ನಾಗಗಳ ದಫನ ಆಗಿದೆ. ಎಂದು ನಾಗ ದಫನ ರದ್ದಾಯಿತೋ ಅಲ್ಲಿಂದ ನಾಗ ಬನದ ರಚನೆ ಬಂದಾಗಿರುತ್ತದೆ.

 

ಈಗೀಗ ಕೆಲವೆಡೆ ನಕಲು ನಾಗಬನಗಳ ರಚನೆಯ ಮಾಡಿ ಅಲ್ಲಿ ನಾಗನ ಪ್ರತಿಮೆಗಳನ್ನು ಇಟ್ಟು ಜನರಿಗೆ ಮೋಸ ಮಾಡಿ ನಾಗ ದೋಷಗಳನ್ನು ಕಳೆಯುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿದೆ. ಜನರು ಭಕ್ತರು ಇವುಗಳಿಂದ ವಂಚಿತರಾಗಬಾರದು. ಇಂತಹ ನಕಲು ನಾಗಬನಗಳಲ್ಲಿ ನಾಗ ದೋಷಗಳು ಪರಿಹಾರ ಆಗುವುದಿಲ್ಲ. ಬದಲಾಗಿ ದೋಷಗಳು ಹೆಚ್ಚಾಗುತ್ತದೆ. ಅಂದು ಆದಿವಾಸಿಗಳಿಂದ ಮತ್ತು ಜೈನರಿಂದ ನಿರ್ಮಿತ ವಾದ ನಾಗಬನಗಳಲ್ಲಿ ಕೈ ಮುಗಿದು ಬೇಡಿದರೆ ಯಾವುದೇ ಖರ್ಚು ಇಲ್ಲದೆ ದೋಷ ಪರಿಹಾರ ಆಗುತ್ತದೆ. ನಾಗದೋಷಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಖಂಡಿತವಾಗಿಯೂ ಆಗುವುದಿಲ್ಲ.

 

ಈಗ ನಾಗ ಬನಗಳಲ್ಲಿ ಆದಿಮೂಲದಲ್ಲಿ ನಂಬಿದ್ದನಾಗ ಕಲ್ಲುಗಳು ಕಾಣವು. ಜೈನರು ತುಲುನಾಡಿನಾದ್ಯಂ ತ ನಿರ್ಮಾಣ ಮಾಡಿದ ನಾಗನ ಗೋರಿಗಳು ಒಂದೇ ಸಮನೆ ಧರೆಗೆ ಇಳಿದು ನೆಲಸಮ ಆಗಿದೆ. ಹಲವೆಡೆ ಈ ರೀತಿಯ ನಾಗನ ವಿವಿಧ ಶೈಲಿಯ ವಿನ್ಯಾಸದ ನಾಗ ಗೋರಿಗಳನ್ನು ಬೂತೊಗಳ ಗೋರಿ ಎಂದು ತಪ್ಪಾಗಿ ಆರಾಧನೆ ಮಾಡುವುದು ಕಾಣಬಹುದು. ಕೆಲವೆಡೆ ಇಂತಹ ಗೋರಿಗಳಲ್ಲಿ ವಿವಿಧ ದೇವರುಗಳ ಪೂಜೆ ಪುರಸ್ಕಾರ ನಡೆಯುತ್ತಿದೆ.ಈ ರೀತಿಯಾಗಿ ನಾಗ ಮತ್ತು ಬೂತೊಗಳ ಸನ್ನಿಧಿಗಳಲ್ಲಿ ದೇವರಾಧನೆ ನಡೆದರೆ ದೈವ(ನಾಗ ಮತ್ತು ಬೂತೊಲು)ಗಳಿಗೆ ಶಕ್ತಿ ಇರುವುದಿಲ್ಲ. ದೈವಗಳು ದೇವರ ಎದುರಲ್ಲಿ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರಧಾನಿಯ ಎದುರು ಶಾಸಕ ನಿಂತಂತೆ ಆಗುತ್ತದೆ.

 

ಇನ್ನು ಕೆಲವೆಡೆ ಈ ರೀತಿಯ ಗೋರಿಗಳನ್ನು ಮಾನವನ ಸ್ಮಾರಕ ಗೋರಿಗಳು ಎಂದು ತಪ್ಪಾಗಿಬರೆಯುತ್ತಾರೆ. ಅವುಗಳು ನಾಗಬನವಾಗಿದ್ದರೂ ಅಲ್ಲಿ ನಾಗ ಪ್ರತಿಮೆ ಇಲ್ಲದೆ ಇರುವುದರಿಂದ ಅವುಗಳ ನ್ನು ಅಪಾರ್ಥ ಮಾಡಿ ಮಾನವನ ಸ್ಮಾರಕ ಎನ್ನುವುದು ತಪ್ಪು. ನಾಗ ಬನದ ಪ್ರದೇಶದಲ್ಲಿ ಕಾಣುವ ಎಲ್ಲಾ ಮುರಕಲ್ಲು ಗೋರಿಗಳು ನಾಗನಿಗೆ ಸಂಬಂಧ ಪಟ್ಟಿರುತ್ತದೆ.ಅವುಗಳು ಚಿಕ್ಕವು ದೊಡ್ಡವು ಇದ್ದಿರಬಹುದು.

 

 

(ಕೊಳಕ್ಕೆ ಇರ್ವತ್ತೂರು ಗೋಲಿ(ಗೋರಿ)ದಿಂಡ್ ನಾಗಬನದಲ್ಲಿ ಶಿಥಿಲಾವಸ್ಥೆಯಲ್ಲಿ ಕಾಣುವ ನಾಗನ ಗೋರಿಗಳು.)

ಮೂಡಬಿದ್ರೆಯ ಬೆಟಗೇರಿಯಲ್ಲಿರುವ ಗೋರಿಗಳನ್ನು ಮಾನವನ ಸ್ಮಾರಕಗಳು ಎನ್ನುತ್ತಾರೆ. ಆದರೆ ಇಲ್ಲಿರುವ ಸ್ಮಾರಕಗಳ ಮಾದರಿ ಶೈಲಿ ವಿನ್ಯಾಸದ ಕೆಲ ವು ಗೋರಿಗಳು ನಾಗಬನಗಳಲ್ಲಿ ಇದೆ.ಇದರಿಂದ ಈ ಪ್ರದೇಶದ ಗೋರಿಗಳು ನಾಗನದ್ದೇ ಎಂದು ತಿಳಿಯುತ್ತ ದೆ.ತುಲುನಾಡಲ್ಲಿ ದೇವರಾಧನೆ ಆರಂಭವಾದ ಬಳಿಕ ಈ ಗೋರಿಗಳನ್ನು ಚಿತ್ರ ಕೂಟ,ಗುಂಡ ಇತ್ಯಾದಿ ಹೆಸರು ಗಳಲ್ಲಿ ಕರೆಯಲು ಆರಂಭಿಸಿದ್ದಾರೆ. ಆದರೆ ಇವುಗಳ ಮೂಲ ಹೆಸರು ಗೋರಿ ಆಗಿರುತ್ತದೆ. ಗೋರಿ ಎಂದರೆ ಗೋಲ|ಗೋಲಿ ಎಂದು ತಿಳಿಸುತ್ತದೆ. ನಾವು ಈ ಗೋರಿಗಳಿಗೆ ಪ್ರದಕ್ಷಿಣೆ ಬಂದರೆ ಅದರ ರೇಖೆಯು ಗೋಲಾಕಾರದಲ್ಲಿ ಬರುತ್ತದೆ.ಬೆಟ್ಟದ ಗೋರಿಗಳನ್ನು ಬೆಟಗೇರಿ ಎಂದಿದ್ದಾರೆ. ಕೊಳಕ್ಕೆ ಇರ್ವತ್ತೂರು ಇಲ್ಲಿ ಹೊಳೆಯ ದಂಡೆಯ ಮೇಲಿನ ನಾಗಬನದ ಗೋರಿ ಗಳಿಗೆ ದಂಡೆಯ ಗೋರಿ ಎಂದು ಕರೆದಿದ್ದಾರೆ. ಕ್ರಮೇಣ ದಂಡೆಯ ಗೋರಿಗಳನ್ನು ಗೋರಿ ದಂಡೆ ಎನ್ನುತ್ತಾ ನಂತರದ ಕಾಲಕ್ಕೆ “ಗೋಲಿ ದಿಂಡ್” ಎಂದು ಕರೆದರು. ಪಲ್ಲ(ಹಳ್ಳ)ದ ಪಕ್ಕದ ನಾಗನ ಗೋರಿಯನ್ನು ಪಲ್ಲದ ಗೋರಿ ಎಂದಿದ್ದಾರೆ.”ಪಲ್ಲದ ಗೋರಿ” ಯನ್ನು ಪುಲಗೋರಿ,ಪುಲಗೇರಿ ಎಂದು ಉಚ್ಛರಿಸಿ ಕೊನೆಗೆ “ಪುಲ್ಗೇರಿ” ಎಂದಿದ್ದಾರೆ.

(ಮೇಲಿನ ಇಮೇಜುಗಳು ಮೂಡಬಿದ್ರೆಯ ಬೆಟಗೇರಿ ಸ್ಮಾರಕ ಗಳು. ಇವು ಮಾನವನ ಸ್ಮಾರಕ ಎಂದು ಅಲ್ಲಿ ಬರೆದಿದ್ದಾರೆ. ಇಲ್ಲಿರುವ
ಸ್ಮಾರಕಗಳ ವಿನ್ಯಾಸದ ಗೋರಿಗಳು ನಾಗಬನಗಳಲ್ಲಿ ಕಾಣಬಹುದಾಗಿದೆ. ಇವುಗಳು ಮಾನವನ ಗೋರಿಗಳು ಅಲ್ಲ. ಈ ಪ್ರದೇಶ ನಾಗಬನವಾಗಿತ್ತು ಮತ್ತು ಈ ಗೋರಿಗಳು ನಾಗನಿಗೆ ಸಂಬಂಧ ಪಟ್ಟಿದೆ)

ತುಲುನಾಡಲ್ಲಿ ಇಲ್ಲಿನ ಆದಿವಾಸಿಗಳು ಎಂದೂ ಬೂತೊಗಳನ್ನು ನಾಗಬನದ ಪ್ರದೇಶಗಳಲ್ಲಿ ಸ್ಥಾಪನೆ ಮಾಡಿಲ್ಲ. ಅವರ ಆದಿ ಮೂಲದಲ್ಲಿ, ಕುಟುಂಬದ ಮನೆ ಯಲ್ಲಿ ಇಲವೇ ಅವರು ವಾಸ ಮಾಡುವ ಜಾಗದಲ್ಲಿ ನಂಬಿದ್ದಾರೆ. ನಾಗಬನದ ಪ್ರದೇಶಗಳಲ್ಲಿ ಬೂತೊಗಳ ನ್ನು ನಂಬಿದರೆ ಅವುಗಳಿಗೆ ಕೋಳಿ ಬಲಿ ಕೊಡಲು ಸಾಧ್ಯವಿಲ್ಲ. ಆದರೆ ಜೈನರು ಬೂತೊಗಳನ್ನು ನಾಗಬನ ಗಳ ಪ್ರದೇಶದಲ್ಲಿ ನಂಬಿದ್ದರೂ ನಾಗ ಮತ್ತು ಬೂತೊಗ ಳ ಮಧ್ಯೆ ಆಳವಾದ ಕಣಿವೆಯನ್ನು ನಿರ್ಮಿಸಿ ಇವೆರಡು ಬೇರೆ ಎಂದು ನಂಬಿದ್ದಾರೆ. ನಾಗಬನದಲ್ಲಿ ನಿರ್ಮಾಣ ಮಾಡಿದ ಮುರಕಲ್ಲುಗಳ ಗೋರಿಗಳು ನಾಗನಿಗೆ ಸಂಬಂಧ ಪಟ್ಟಿರುತ್ತದೆ. ಕೆಲವೆಡೆಗಳಲ್ಲಿ ಈ ನಾಗನ ಗೋರಿಗಳನ್ನು ಲೆಕ್ಕೆಸಿರಿ, ಬೊಬ್ಬರ್ಯ ಎಂದು ಹೆಸರಿಸಿ ನಾಗಬನದಲ್ಲಿ ಬೂತಾರಾಧನೆ ಜರಗುತ್ತಿದೆ. ಜೈನರೂ ಬೂತೊಗಳನ್ನು ನಂಬುವಾಗ ಪಾದೆಕಲ್ಲು ಬಳಸಿದ್ದಾರೆ.

 

(ಇತರ ನಾಗಬನಗಳಲ್ಲಿ ಕಂಡುಬರುವ ನಾಗನ ಗೋರಿಗಳು)

 

ನಾಗಬನಗಳಲ್ಲಿ ಇರುವ ಯಾವುದೇ ಮುರಕಲ್ಲುಗಳ ಗೋರಿಗಳನ್ನು ನಾಶಗೊಳಿಸದೆ ಉಳಿಸುವ ಕಾರ್ಯ ನಡೆಯ ಬೇಕಿದೆ. ನಾಗರಾಧಕರು ಖಂಡಿತವಾಗಿಯೂ ಈ ಗೋರಿಗಳ ಮಾಹಿತಿ ಮಹತ್ವವನ್ನು ಅರಿತು ತಮ್ಮ ಕಿರಿಯರಿಗೆ ಹೇಳ ಬೇಕಾಗುತ್ತದೆ. ಈ ಗೋರಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು. ಮಾಡದಿದ್ದರೆ ಮಾಹಿತಿ ತಿಳಿಸದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪವಿತ್ರ ನಾಗನ ಗೋರಿಗಳು ಮಾಯವಾಗುತ್ತದೆ. ನಾಗ ಬನಗಳಲ್ಲಿ ದೇವರ ಪೂಜೆ ಸಲೀಸಾಗಿ ನಡೆಯುತ್ತದೆ. ಭಕ್ತ ರು ಎಚ್ಚೆತ್ತು ತಮ್ಮ ನಾಗಬನಗಳಲ್ಲಿ ಇರುವ ವಿವಿಧ ಗಾತ್ರದ ವಿವಿಧ ವಿನ್ಯಾಸದ ನಾಗನ ಗೋರಿಗಳನ್ನು ಸಂರಕ್ಷಣೆ ಮಾಡಬೇಕು. ಗೋರಿಗಳು ಶಿಥಿಲ ಗೊಂಡಿದ್ದರೆ ಅವುಗಳನ್ನು ಸಿಮೆಂಟ್ ಇಲ್ಲದೆಯೇ ನಿರ್ಮಾಣ ಮಾಡಬಹುದು. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಗೋರಿಗಳು ಕೆಲವೆಡೆ ಇನ್ನೂ ಇದೆ. ಶಿತಿಲಗೊಂಡ ಗೋರಿಗಳ ಪಂಚಾಂಗ ಗಟ್ಟಿಮುಟ್ಟಾಗಿಯೇ ಇರುತ್ತದೆ. ಅವುಗಳನ್ನು ಬರೇ ಅಂಟು ಮಣ್ಣು ಮುರಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಇಂತಹ ಗೋರಿಗಳನ್ನು ಅದರ ಮೂಲದಂತೆ ನಿರ್ಮಾಣ ಮಾಡಲು ಎಂಜಿನಿ
ಯರುಗಳ ಸಲಹೆಯನ್ನು ಪಡೆದು ಅದೇ ಪಂಚಾಂಗ ದಲ್ಲಿ ನಿರ್ಮಾಣ ಮಾಡಲು ಬರಬಹುದು.

(ಮುರಕಲ್ಲುಗಳಿಂದ ರಚಿಸಿದ ನಾಗನ ಗೋರಿಗಳು ಇಲ್ಲಿದೆ.ನಾಗಬನದಲ್ಲಿ ಮುರಕಲ್ಲುಗಳಿಂದ ನಿರ್ಮಾಣವಾದ ಎಲ್ಲಾ ಗೋರಿಗಳು ಜೈನರ ಕಾಲದ್ದಾಗಿದೆ.ನಾಗ ಪ್ರತಿಮೆಯನ್ನು ವೈಷ್ಣವರು ಬಂದ ಮೇಲೆ ಪ್ರತಿಷ್ಠೆ ಮಾಡಲಾಗಿದೆ.ಎಡಬದಿಯ ಚಿತ್ರದಲ್ಲಿ ಆದಿವಾಸಿಗಳಿಂದ ನಂಬಿದ ನಾಗನ ಕಲ್ಲು ಇದೆ.ಈಗ ಈ ಬನವು ಜೀರ್ಣೋದ್ಧಾರ ಆಗಿದೆ. ಚಿತ್ರ ಬಲ ಭಾಗದಲ್ಲಿ ಕಾಣಬಹುದು.)

(ಈ ನಾಗಬನದಲ್ಲಿ ಇಲ್ಲಿನ ಆದಿವಾಸಿಗಳಿಂದ ಪಾದೆಕಲ್ಲನ್ನು ಹಾಸಿ ನಾಗನನ್ನು ನಂಬಿದ್ದಾರೆ. ಇಲ್ಲಿ ಜೈನರ ನಾಗನ ಗೋರಿ ಇಲ್ಲ.ಮೂಲ ನಾಗನ ಕಲ್ಲಿಗೆ ವೈಷ್ಣವರ ಶೈಲಿಯಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಲಾಗಿದೆ.)

ನಾಗಬನದಲ್ಲಿ ಮತ್ತು ಬೂತೊಗಳ ಸಾನಗಳಲ್ಲಿ ನಡೆಯುವ ದೇವರ ಭಜನೆ ,ಪೂಜಾದಿ ಕಾರ್ಯಕ್ರಮಗ ಳನ್ನು ಕೂಡಲೇ ನಿಲ್ಲಿಸದಿದ್ದರೆ ತುಲುನಾಡಲ್ಲಿ ದೈವ ಆರಾಧನೆಯು ನಿಂತು ಹೋಗಿ ತುಲುನಾಡು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದತ್ತ ವಾಲು ವುದು ಖಂಡಿತ. ಇಲ್ಲಿನ ಎಲ್ಲಾ ದೈವರಾಧಕರು ಕೂಡಾ ಎಚ್ಚೆತ್ತು ಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಬೂತಗಳಿಗೆ ಹೊಸ ಹೊಸ ಕತೆಗಳು ಸೃಷ್ಟಿ ಆಗಿದೆ. ಕತೆ ಗಳಲ್ಲಿ ದೇವರುಗಳನ್ನು ಪೋಣಿಸಿದ್ದಾರೆ. ಬೂತೊಗಳ ಭಕ್ತಿ ಗೀತೆಗಳು ದೇವರ ಗೀತೆಯಂತೆ ಕೇಳಿಸುತ್ತದೆ. ಬೂತೊಗಳಿಗೆ ಹೊಸ ಹೊಸ ರೂಪವನ್ನು ನೀಡಲಾ ಗುತ್ತಿದೆ. ಹೊಸ ಹೆಸರುಗಳನ್ನು ಈಗಾಗಲೇ ರಿಜಿಸ್ಟರ್ ಆಗಿದೆ. ತುಲುನಾಡು ಉದಯವಾದ ದಿನವೇ ಕೆಡ್ಡಸವಾಗಿತ್ತು. ನಾವೆಲ್ಲ ಅದನ್ನು ಮರೆತು ಬಿಟ್ಟಿದ್ದೇವೆ. ಅದರ ಪರಿಣಾಮವಾಗಿ ತುಲುನಾಡಿನ ಅಂದು ನಿರ್ಮಾಣ ಮಾಡಿದ್ದತುಲುನಾಡು ಕಟ್ಟಿದ್ದ ಎಲ್ಲಾ ಗದ್ದೆಗಳು ನಾಶವಾಗಿದೆ. ಇನ್ನು ಮುಂದಿನ ಕಾಲಕ್ಕೆ ಅವುಗಳ ಸ್ವರೂಪವು ಅಂದಿನ ಕಾಲದ ಪಟ್ಲವಾಗಿ ಪರಿವರ್ತನೆ ಆಗುವುದರಲ್ಲಿ ಸಂಶಯವಿಲ್ಲ. ಹೊಳೆಗಳು,ನಾಲೆ ಕಾಲುವೆಗಳು, ತೋಡುಗಳಲ್ಲಿ ನೀರು ಸರಾಗವಾಗಿ ಹರಿದು ಸಮುದ್ರ ಸೇರದಿದ್ದರೆ ಸ್ವಾಭಾವಿಕವಾಗಿ ಕೊಳ(ಪಟ್ಲ)ಗಳು ನಿರ್ಮಾಣ ಆಗುತ್ತದೆ.

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *