ನಾಗರ ಪಂಚಮಿ ಇದು ಹಿಂದೂಗಳ ವರ್ಷದ ಮೊದಲ ಹಬ್ಬ.ನೋಡಿದರೆ ಪ್ರಕೃತಿಯ ಆರಾಧನೆಯ ಮುಖಾಂತರವೇ ವರ್ಷಾರಂಭದ ಮೊದಲ ಹಬ್ಬವನ್ನು ಮಾಡಿದಂತಿದೆ. ನಾಗ ಪೂಜೆ ಭಾರತದಲ್ಲಿ ನಡೆಯುವ ವಿಶೇಷತೆಗಳಲ್ಲಿ ಒಂದು.ಕಲಿಯುಗದ ಪ್ರತ್ಯಕ್ಷ ದೇವರು ನಾಗ.ಇಂದಿಗೂ ಯಾವ ದೇವರಿಗೂ ಅಂಜದವನು ಅಂಜಿದರೆ ಅದು ಇವನಿಗೆ.ಅದು ಇವನ ಮಹಾಶಕ್ತಿ.ನಾಗಬನಗಳು, ಗುಡಿಗಳು ಭಾರತದಲ್ಲಿ ಸಾಮಾನ್ಯ.ಇವುಗಳಲ್ಲಿ ಸುಬ್ರಹ್ಮಣ್ಯ ಮತ್ತು ಕಾಳಹಸ್ತಿ ದೇವಾಲಯ ನಾಗದೇವಾಲಯಗಳಲ್ಲಿಯೇ ಹೆಸರುವಾಸಿ,ನಾಗದೋಷಗಳ ಪರಿಹಾರ ಏನಿದ್ದರೂ ಇಲ್ಲಿಯೇ. ಸಂತಾನ ಪ್ರಾಪ್ತಿಗಾಗಿ ಈತನನ್ನು ಪೂಜಿಸಿದರೆ ಫಲ ದೊರೆಯುವುದು ಎನ್ನುವುದು ನಂಬಿಕೆ.ನಾಗನಿಗೆ ನಾಗಪ್ರತಿಷ್ಠೆ, ಸರ್ಪಸಂಸ್ಕಾರ,ನಾಗಮಂಡಲವು ಬಹು ವಿಶೇಷವಾದ ಪೂಜೆಯಾಗಿದೆ.ಇಂತಹ ಪವಿತ್ರ ನಾಗಾರಾಧನೆಯೂ ಆಷಾಢ ಮಾಸ ಮುಗಿದು ಶ್ರಾವಣಕ್ಕೆ ಕಾಲಿಡುತಿದ್ದಂತೆ ಬರುತ್ತದೆ. ಮಳೆಗಾಲದ ಹಬ್ಬಗಳಲ್ಲಿ ಮಹಿಳೆಯರಿಗೆ ಇದು ವಿಶೇಷ ಹಬ್ಬ ‘ನಾಗರ ಪಂಚಮಿ’ ಎಂದು ಕರೆಯುತ್ತಾರೆ. ಭಾದ್ರಪದ, ಅಶ್ವೀಜ, ಶುದ್ದ ಪಂಚಮಿಗಳಲ್ಲಿ ನಾಗರಾಜನನ್ನು ಪೂಜಿಸಿದರೆ ಸರ್ಪ ದೋಷ ನಿವಾರಣೆ ಎಂಬುದು ಹಿರಿಯರ ನಂಬಿಕೆ.
ಇನ್ನು ಪುರಾಣಗಳ ಪ್ರಕಾರ ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ.ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ.ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಶ್ರೀಕೃಷ್ಣನು ಯಮುನಾ ನದಿಯಲ್ಲಿ ಅಡಗಿದ್ದು ಜನರಿಗೆ ತೊಂದರೆಯಾಗಿದ್ದ ಕಾಳೀಯನೆಂಬ ಸರ್ಪವನ್ನು ಮರ್ದನ ಮಾಡಿ ಜನರಿಗೆ ಅಭಯ ನೀಡಿದ್ದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಹಾವಿನ ಕಡಿತದಿಂದ ಕಳೆದುಕೊಂಡ ಅಣ್ಣಂದಿರನ್ನು ಸಹೋದರಿಯೊಬ್ಬಳು ನಾಗನ ಪ್ರಾರ್ಥನೆ ಮಾಡಿ ಬದುಕಿಸಿಕೊಂಡ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು, ಹೀಗಾಗಿ ಅಂದಿನ ದಿನದ ಸ್ಮರಣೆಗಾಗಿ ನಾಗರಪಂಚಮಿ ಆಚರಣೆ ಮಾಡಲಾಗುತ್ತದೆ ಎಂಬ ಪ್ರತೀತಿ ಇದೆ.
ಇನ್ನು ವೈಜ್ಞಾನಿಕ,ಅವೈಜ್ಞಾನಿಕಕ್ಕೆ ಬಂದರೆ ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹಾವು ವಾಸಿಸುತ್ತದೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ನಿರ್ಮಿಸುತ್ತವೆ.ಬಹು ನವಿರಾದ, ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತ, ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಇದನ್ನು ಎಲ್ಲಾದರೂ ಹುತ್ತ ಅಗೆದಾಗ ನೀವೂ ಕಾಣಬಹುದು.ಹುತ್ತದೊಳಗೆ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ.ಅಲ್ಲಿ ಒಂದು ಚಿಕ್ಕ ಕಲ್ಲು ಕೂಡ ಇರುವುದಿಲ್ಲ.ಇಂತಹ ನವಿರಾದ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರಮನ ರಶ್ಮಿಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ಈ ಕಾಲದಲ್ಲೆ. ಹಾವುಗಳು ಲೈಂಗಿಕ ಕ್ರಿಯೆಗೆ ಕೂಡುವ ಸಮಯಕ್ಕೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ.ಈ ಸಮಯದಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬರುವಾಗ ಇಲ್ಲವೆ ಹುತ್ತ ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ.ಅದೇ ರೀತಿ ಈ ಸಮಯದಲ್ಲಿ ಸ್ಖಲನವಾಗುವ ಗಂಡು ಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದೆ.ಈ ರೀತಿಯಾಗಿ ವೀರ್ಯ ಮತ್ತು ರಜಸ್ಸು ಲೇಪಿತ ಹುತ್ತದ ಮಣ್ಣಿಗೆ ನೀರಾಗಲಿ ಹಾಲಾಗಲಿ ಬಿದ್ದಾಗ ಒಂದು ಸುಮಧುರವಾದ ವಾಯು ಉತ್ಪತ್ತಿಯಾಗುತ್ತದೆ. ಹೆಂಗಸರು ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದಾಗ ಅಂದರೆ ತನಿ ಎರೆದಾಗಲೂ ಈ ಪ್ರಕ್ರಿಯೆ ನಡೆಯುತ್ತದೆ.ಈ ಸುಗಂಧಯುಕ್ತವಾದ ವಾಯು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರಿಪ್ರೊಡಕ್ಟಿವ್ ಆರ್ಗನ್ಸ್‌ಗಳ ಮೇಲೂ ನೇರ ಪರಿಣಾಮ ಉಂಟು ಮಾಡುತ್ತವಂತೆ.ಈ ಮಾಸದಲ್ಲಿ ಚಂದ್ರ ಪ್ರಭಾವವೂ ಇರುವ ಕಾರಣ, ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ ಎನ್ನುವುದು ಪಂಡಿತರ ವಾದವಾಗಿದೆ.
ಇನ್ನು ಇದು ರೈತರು ಬೆಳೆ ಬೆಳೆಯುವ ಸಮಯವಾಗಿದ್ದು, ಈ ಸಂದರ್ಭದಲ್ಲಿ ಬೆಳೆನಾಶಕವಾದ ಇಲಿ,ಹೆಗ್ಗಣ ಹುಳು ಹುಪ್ಪಟೆಗಳ ಹಾವಳಿ ಅಧಿಕವಾಗಿದ್ದು ಹಾವಿನಿಂದ ಇವುಗಳಿಗೆ ಮುಕ್ತಿ ಉಂಟಾಗುವ ಕಾರಣ ರೈತಸ್ನೇಹಿಯಾಗಿ ಪರಿಣಮಿಸುವ ನಾಗನಿಗೆ ರೈತನ ಕೃತಜ್ಞತೆಯ ಪೂಜೆ ಎಂದೂ ಹೇಳಲಾಗುತ್ತದೆ.ಇನ್ನು ಹುತ್ತಕ್ಕೆ ಹಾಲೆರೆಯುವುದು ಹಾಲು ಹಾವಿಗೆ ವಿಷವಾಗಿ ಪರಿಣಮಿಸಿ ಅಂಟಿದ ಹಾಲಿನ ಸಿಹಿಯ ಹಾದಿ ಹಿಡಿದು ಬಂದ ಇರುವೆಗಳು ಹಾವಿಗೆ ಮೃತ್ಯುವನ್ನು ಕರುಣಿಸುತ್ತದೆ. ಹೀಗೆ ಆದಾಗ ಸಹಜವಾಗಿ ರೈತನಿಗೆ ಬೆಳೆದ ಪೈರಿನ ಮಧ್ಯೆ ವಿಷಪೂರಿತ ಹಾವಿನ ಕಡಿತದ ಭಯ ಇರುವುದಿಲ್ಲ ಹಾಗಾಗಿಯೇ ಹುತ್ತಕ್ಕೆ ಹಾಲೆರೆಯುವುದು ಎನ್ನುವ ವಾದವೂ ಕೂಡ ಇದೆ. ವೈಜ್ಞಾನಿಕವಾಗಿ ಹಾವು ಹಾಲು ಸೇವಿಸುವುದಿಲ್ಲ ಎಂದಿದೆ. ಅದಕ್ಕಾಗಿಯೇ ಬುದ್ದಿಜೀವಿಗಳು ಹಾಲನ್ನೆರದು ಹಾವಿಗೆ ಸಾವುಂಟಾಗುವ ಸಂಭವ ಇರುವುದರಿಂದ ಹಾಲನ್ನು ವ್ಯರ್ಥ ಮಾಡದೇ ಅನಾಥಾಶ್ರಮ ಅಥವಾ ವೃದ್ದಾಶ್ರಮಗಳಿಗೆ ನೀಡಿ ಎಂದು ಸದ್ದು ಮಾಡುವುದು ಸಹಜವಾಗಿದೆ.
ಶಿಲೆಯ ಬದಲಿಗೆ ನಿಜ ನಾಗರಗಳಿಗೆ, ಹುತ್ತಕ್ಕೆ ಹಾಲನೆರದು ಅವುಗಳಿಗೆ ಹಾನಿಯುಂಟು ಮಾಡಿ ಸಂಭ್ರಮದಲ್ಲಿ ಅರಿವಿದ್ದೂ ಭಕ್ತಿಯ ತೋರ್ಪಡಿಸುವಿಕೆಗೆ ಹಾವಿಗೆ ಸಾವನ್ನು ನೀಡುವುದು ಸರಿಯಲ್ಲ ಸಂಭ್ರಮದ ದಿನವೇ ದೋಷವನ್ನು ಪಡೆದಂತಾಗುತ್ತದೆ.ಭಕ್ತರು ಹಬ್ಬದ ದಿನ ನಿಜನಾಗರಕೆ ಮತ್ತು ಹುತ್ತದೊಳಗೆ ಹಾಲನೆರೆಯದೇ ಕಲ್ಲೊಳಗಿರುವ ನಾಗದೇವರಿಗೆ ಹಾಲನೆರೆಯುವುದು ಒಳಿತು. ಇದನ್ನು ಪ್ರತಿ ಬಾರಿಯೂ ಗುರುಗಳಾದಿಯಾಗಿ ಹೇಳಿದರೂ ಭಕ್ತರು ತಮ್ಮ ಕಾಯಕ ಬಿಡದಿರುವುದು ವಿಪರ್ಯಾಸ.
ಇಷ್ಟೆಲ್ಲವುದರ ಮಧ್ಯೆ ಒಂದು ನಾಗರ ಪ್ರಾಣಿಯಾಗಿ ಮತ್ತು ದೇವರಾಗಿ ಜನಗಳಲ್ಲಿ ಇಂದಿಗೂ ತನ್ನದೇ ಆದ ವಿಶೇಷ ಪ್ರಭಾವವನ್ನು ಬೀರುತ್ತ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿ ತರ್ಕಿಸುವ ಮನಗಳಲ್ಲಿ ಜಿಜ್ಞಾಸೆಯಾಗಿಯೇ ಉಳಿದಿರುವುದು ಮಾತ್ರ ಬಿಡಿಸಲಾಗದ ಗಂಟು. ನಾಗದರ್ಶನ ಇಂದಿಗೂ ನಾಸ್ತಿಕ ಮನಗಳಲ್ಲಿ ಆಸ್ತಿಕತೆಯನ್ನು ಕೆಲಕ್ಷಣಗಳಿಗಾದರೂ ತಂದುಬಿಡುವ ರೋಚಕತೆ ಇದೆ. ಸೃಷ್ಠಿಯ ವೈಚಿತ್ರ್ಯವೇ ಇದಲ್ಲವೇ? ಬಿಡಿಸುತ್ತೇನೆಂದು ಹೋದ ಗಂಟನ್ನು ಬಿಡಿಸಲಾಗದೆ ಮತ್ತಷ್ಟು ಗಂಟುಗಳನ್ನು ಮುಂದಿಟ್ಟು ಮನುಷ್ಯನ ಮಂಗನಾಟವನ್ನು ನೋಡಿ ನಗುವುದು. ??
✍ ವಿಜಯ್ ಭಂಡಾರಿ ನಿಟ್ಟೂರು.