“ನನ್ನ ಅಪ್ಪ.”
ಅಪ್ಪ ಎನ್ನುವ ಪದ ಕೇಳುವಾಗ ಮನಸ್ಸಿಗೆ ಏನೋ ಖುಷಿ ಅನುಭವ. ಅಪ್ಪ ಕುಟುಂಬದ ಆಧಾರ ಸ್ತಂಭ. ಬಹಳ ಜವಾಬ್ದಾರಿಯುತ ಮನುಷ್ಯ. ಹಗಲಿರುಳು ದುಡಿದು ತನ್ನ ಆಸೆ ಸುಖ ದುಃಖವನ್ನೆಲ್ಲಾ ಬದಿಗಿಟ್ಟು ತನ್ನ ಕುಟುಂಬದ ಕನಸನ್ನು ನೆರವೇರಿಸುವ ಕುಟುಂಬದ ಯಜಮಾನ. ಇದು ಸಾಮಾನ್ಯವಾಗಿ ಅಪ್ಪ ಎಂದರೆ ನಮಗೆ ಬರುವ ಯೋಚನೆ. ಹಾಗೆಯೇ ನನ್ನ ಅಪ್ಪ ಕೂಡ ಒಬ್ಬ ಉತ್ತಮ ಆದರ್ಶ ವ್ಯಕ್ತಿ.
ಎಲ್ಲರಂತೆ ಅಲ್ಲ ನನ್ನ ಅಪ್ಪ.
ನನ್ನ ಬದುಕಿಗೆ ದಾರಿ ದೀಪವಾದ
ನಮ್ಮ ಮನೆಗೆ ಆಧಾರ ಸ್ತಂಭವಾಗಿರುವ
ಮಗುವಿನಂತೆ ಮುದ್ದು ಸ್ವಭಾವ ಹೊಂದಿರುವ
ನನ್ನ ಅಪ್ಪ…ನನ್ನ ಅಪ್ಪ.
ನಾನು ಮತ್ತು ನನ್ನ ಅಕ್ಕ ಇಬ್ಬರು ಮಕ್ಕಳು. ಅಪ್ಪನಿಗೆ ನಾವಿಬ್ಬರು ಪ್ರೀತಿಯ ಆರಗಿಣಿಗಳು, ತುಂಬಾ ಪ್ರೀತಿ… ಪ್ರೀತಿಯ ಜೊತೆ ಕೋಪವನ್ನೂ ಮಾಡಿಕೊಳ್ಳುತ್ತಿದ್ದರು. ನನ್ನ ಅಪ್ಪನಿಗೆ ತುಂಬಾ ಕೋಪ, ಅವರ ಕೋಪದ ಮುಂದೆ ಯಾರೂ ನಿಲ್ಲುವಂತಿಲ್ಲ. ಕೋಪ ಮಾತ್ರ ಒಂದು ಗಳಿಗೆ,ಅಪ್ಪನ ಆ ಕೋಪಕ್ಕೆ ನಾನು ಮಾತ್ರ ಮುದುರಿ ಹೋಗುತ್ತಿದ್ದೆ. ಅಮ್ಮನ ಸೆರಗು ಸೇರುತ್ತಿದ್ದೆ. ಸಣ್ಣ ವಯಸ್ಸಿನಲ್ಲಿ ಅಪ್ಪ ನನ್ನನ್ನು ಸುಮ್ಮನೆ ಸುಮ್ಮನೆ ಗದರಿಸುತ್ತಿದ್ದರು. ನಾನು ಹೆದರುತ್ತೇನೆ ಎಂದು ಅವರು ಹಾಗೆ ಮಾಡುತ್ತಿದ್ದರು. ಅಪ್ಪನ ಕೋಪ ಒಂದು ಮುಖವಾದರೆ ಪ್ರೀತಿ ಕರುಣೆ ಅನುಕಂಪ ಅದು ಇನ್ನೊಂದು ಮುಖ. ಇದರಲ್ಲಿ ಅಪ್ಪನನ್ನು ಯಾರೂ ಮೀರಿಸುವಂತಿಲ್ಲ. ಎಲ್ಲರನ್ನೂ ಪ್ರೀತಿಸುವ, ಯಾರು ಮನೆಗೆ ಬಂದರೂ ಅವರನ್ನು ಆತ್ಮೀಯರಂತೆ ಉಪಚರಿಸುವ ಗುಣ ನನಗೆ ನನ್ನ ಅಪ್ಪನಲ್ಲಿ ಇಷ್ಟವಾದ ಗುಣ. ನನಗೆ ಮಾದರಿ ನನ್ನ ಅಪ್ಪ, ಅಪ್ಪನೆಂದರೆ ಹೆಮ್ಮೆ.
ಅಪ್ಪನೆಂದರೆ ನನಗೆ ಇಷ್ಟ,
ಅಪ್ಪ ಮುನಿದರೆ ನನಗೆ ಕಷ್ಟ,
ಅಪ್ಪನೆಂದರೆ ನನಗೆ ಭಯ ಜಾಸ್ತಿ, ಆದರೆ ಈ ಪ್ರಪಂಚದ ಕೆಲವು ಆಗು ಹೋಗುಗಳನ್ನು ನೋಡುವಾಗ ನನಗೆ ನನ್ನ ಅಪ್ಪನೇ ಹೀರೋ. ತುಂಬಾ ಮುದ್ದು ಮಾಡುವ, ಬದುಕಿನಲ್ಲಿ ಒಳ್ಳೆಯ ದಾರಿ ತೋರಿಸಿದ ಸಲಹೆಗಾರ ನನ್ನ ಅಪ್ಪ. ಎಲ್ಲ ಸ್ವಾತಂತ್ರ್ಯವನ್ನು ನಮಗೆ ಕೊಟ್ಟಿದ್ದರು ಅಪ್ಪ. ಅಪ್ಪನ ಒಂದೇ ಮಾತು “ನೀವು ಏನು ಬೇಕಾದರೂ ಮಾಡಿ ನಿಮ್ಮ ಜಾಗ್ರತೆಯಲ್ಲಿ ನೀವು ಇರಿ” ಎಂದು. ಅದೇ ನನ್ನ ಪಾಲಿಗೆ ವೇದ ವಾಕ್ಯವಾಗಿತ್ತು. ಅಪ್ಪನ ಮಾತಿನಂತೆ ನಡೆದುಕೊಂಡೆ, ಅಪ್ಪ ತಮ್ಮ ಹೆದರಿಕೆಯನ್ನು ನಮ್ಮ ಮೇಲೆ ತೋರಿಸಿಕೊಳ್ಳುತ್ತಿರಲಿಲ್ಲ. ನಮಗೆ ಧೈರ್ಯ ತುಂಬುತ್ತಿದ್ದರು.
ಬಡತನವಿದ್ದರೂ ಅಪ್ಪ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು. ನನ್ನ ಅಪ್ಪ ಖರ್ಚಿನಲ್ಲಿ ಬಿಂದಾಸ್. ನಾನು ಐದನೇ ತರಗತಿಯಲ್ಲಿರುವಾಗ ನನ್ನ ಅಪ್ಪ ವಿದೇಶಕ್ಕೆ ಹೋದರೂ ನಮಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟರು. ಕೆಲಸ, ಮದುವೆ ಎಲ್ಲವೂ ಆಯಿತು. ಅಪ್ಪ ತನ್ನೆಲ್ಲ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಒಬ್ಬ ಆದರ್ಶ ತಂದೆ ಎನಿಸಿಕೊಂಡರು. ಈಗ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೇ. ಇಬ್ಬರು ಮಕ್ಕಳು ದೂರ. ಅಪ್ಪ ಅಮ್ಮನ ಮೇಲೆ ದೇವರ ಸಂಪೂರ್ಣ ಅನುಗ್ರಹವಿರಲಿ ಎಂದು ಪ್ರಾರ್ಥಿಸುತ್ತೇನೆ.
✍🏻: ಸ್ಮಿತಾ ಹರಿಪ್ರಸಾದ್
ಕಾಸರಗೋಡು ಜಿಲ್ಲೆ