
ವಿಶ್ವ ಅಪ್ಪಂದಿರ ದಿನ.
ನನ್ನ ತಂದೆ ದಿನಾ ನನ್ನ ಜೊತೆಯೇ ಇರುತ್ತಾರೆ. ಅವರು ಕಲಿಸಿದ ಪರೋಪಕಾರ, ತ್ಯಾಗ, ಸಹಕಾರ, ಜಾತ್ಯತೀತ ಮನೋಭಾವ, ಇಂದು ನನ್ನಲ್ಲಿ ಉಳಿದಿರೋದು. ನನ್ನದು ಅಂತ ಏನಿಲ್ಲ. ಎಲ್ಲಾ ನನ್ನ ತಂದೆ ಕೊಟ್ಟಿದ್ದು. ಅವರು ಒಂದು ದಿನವೂ ನನಗೆ ಹೊಡೆದಿದ್ದು ನೆನಪಿಲ್ಲ. ನನ್ನ ಸಹಿಸಲು ಅಸಾಧ್ಯವಾದ ನಡವಳಿಕೆ ಯಿಂದ ನೊಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಆಸೆ. ನಾನು ಯಕ್ಷಗಾನ ನಾಟಕ ಅಂತ ತಿರುಗಾಡುತ್ತಿದ್ದ ರೀತಿ ಅವರಿಗೆ ಸರಿ ಕಾಣಲಿಲ್ಲ. ಅವರ ಬುದ್ಧಿ ಮಾತು ಕೇಳುವ ಮನಸ್ಸು ನನ್ನದಾಗಲಿಲ್ಲ.. ಮುಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ಹೇಳಿ ವಿಜಯಾ ಬ್ಯಾಂಕ್ ಗೆ ಸೇರಿಸಬೇಕು ಎಂದು ಕೊಂಡಿದ್ದರು. ನಾನು ನಾಟಕದ ಮುಖಾಂತರ ಸುಂದರರಾಮ ಶೆಟ್ಟಿ ಅವರ ಮನಗೆದ್ದಿರುವ , ಅವರಿಂದ ಬ್ಯಾಂಕ್ ಸೇರಲು ಬಂದ ಕರೆ ತಿರಸ್ಕರಿಸಿದ ವಿಚಾರ ತಿಳಿದು ತುಂಬಾ ಕುಗ್ಗಿ ಹೋಗಿದ್ದರು. ನನ್ನನ್ನು ಸರಿ ಮಾಡಲು ಅಸಾಧ್ಯ ಎಂದು ತಿಳಿದು ಮೌನವಾದರು. ಅವರೆಂದೂ ಹೆಚ್ಚು ಮಾತನಾಡುತ್ತಿರಲಿಲ್ಲ.. ಇನ್ನೊಬ್ಬರ ಅವಹೇಳನ ಮಾಡುತ್ತಿರಲಿಲ್ಲ. ಅವರು ಬಾಲ್ಯದಲ್ಲಿಯೇ ಶಿಕ್ಷಕ ರಾಗಿದ್ದ ಅವರ ತಂದೆ ಯವರ ಕಳಕೊಂಡು ಎಂಟನೇ ತರಗತಿಗೆ ಶಾಲೆ ಬಿಟ್ಟಿದ್ದರು.. ಗಾಂಧೀಜಿಯವರ ನೋಡಿದ್ದರು. ಸ್ವಾತಂತ್ಯ ಹೋರಾಟದಲ್ಲಿ ಕೆಲವು ದಿನಗಳು ಪಾಲುಗೊಂಡಿದ್ದರಂತೆ. ಸರಕಾರದಿಂದ ಮಾಸಾಶನ ಪಡೆಯಲು ಅರ್ಜಿ ಕೊಡಲಿಲ್ಲ. ಅವರಿಗೆ ತನ್ನ ತಾಯಿ ತಂಗಿ ತಮ್ಮ ಅಂದರೆ ತುಂಬಾ ಪ್ರೀತಿ.
ಗುತ್ತಿನ ಮನೆಯ ಗತ್ತು ಅವರಿಗೆ ಇರಲಿಲ್ಲ. ಬೆಳಗ್ಗಿನಿಂದ ಮಧ್ಯಾಹ್ನ ತನಕ ಗದ್ದೆಯಲ್ಲಿ ದುಡಿದರೂ ಖುಷಿಯಲ್ಲೇ ಇರುತ್ತಿದ್ದರು. ತುಂಬಾ ಖುಷಿ ಆದಾಗ ಯಕ್ಷಗಾನ ಹಾಡು ಹಾಡುತ್ತಿದ್ದರು. ಯಕ್ಷಗಾನ ಕಲಾವಿದರು ಇಷ್ಟ. ಆದರೆ ನಾನು ಯಕ್ಷಗಾನ ಕಲಾವಿದ ಆಗೋದು ಅವರಿಗೆ ಇಷ್ಟ ಇರಲಿಲ್ಲ . ನಾನು ಬರೆದ ನಾಟಕಗಳು ಯಶಸ್ಸು ಕಂಡಾಗ ಗುಟ್ಟಾಗಿ ಕುಶಿ ಪಡುತಿದ್ದರು.. ನಾನು ಪತ್ರಕರ್ತನಾಗಿ ನನ್ನ ಲೇಖನ ವರದಿ ಬಂದಾಗ ನನ್ನ ಮಗ ಅಂತ ಅವರಿವರ ಬಳಿ ಹೇಳಿ ಹೆಮ್ಮೆ ಪಡುತ್ತಿದ್ದರು. ಸಿನಿಮಿ ರಂಗದ ನನ್ನ ತೊಳಲಾಟ ಏರಿಳಿತ ಕಂಡು ಭಯ ಅಚ್ಚರಿ ಮೆಚ್ಚುಗೆ ಎಲ್ಲಾ ಏಕಕಾಲಕ್ಕೆ ಅನುಭವಿಸಿದ್ದರು. ಅಮ್ಮ ತೀರಿಹೋದ ಮೇಲೆ ಅಪ್ಪ ಮೆತ್ತಗಾದರು. ದೇವರ ಬಗ್ಗೆ ಉದಾಸೀನತೆ ಇಂದ ಇದ್ದರು. ಕೊನೆಯ ಒಂದೆರಡು ವರ್ಷ ನೆನಪಿನ ಶಕ್ತಿ ಕಳಕೊಂಡರು..90 ವರ್ಷದ ಜೀವನ ನಡೆಸಿದರು . ಅವರ ಬದುಕಿನ ಅನುಭವದ ಪಾಠ ಗಳು ನನ್ನ ಬದುಕಿಗೆ ಪ್ರೇರಕ ಶಕ್ತಿ.
