ಕಥೆ -7
“ನವ ಪಲ್ಲವಿ”
ಪ್ರೀತಿ ಎಂದರೆ ಅದೊಂದು ನವಿರು ಭಾವ. ಹೃದಯಬಡಿತ.ಮನಸಿನ ಆಹ್ಲಾದ. ಕಣ್ಣಲ್ಲಿ ಎದ್ದೆದ್ದು ತೋರುವ ಪ್ರಶಾಂತ ಕುತೂಹಲ. ಹೀಗೆ ಪ್ರೀತಿಯೆಂದರೆ ನನ್ನದೇ ವ್ಯಾಖ್ಯಾನ ಕೊಡುವ ನಾನು ಪಕ್ಕಾ ಹಳ್ಳಿ ಹುಡುಗ. ನನಗೋ ಮದುವೆಯ ವಯಸ್ಸೇ. ಪ್ರೀತಿಸಿ ಮದುವೆಯಾಗುವ ನನ್ನ ಕನಸು ಎಂದೂ ಈಡೇರದು. ಅದಕ್ಕಾಗಿಯೇ ಮನೆಯವರು ತೋರಿಸಿದ ಕಡೆ ‘ವಧು ಪರೀಕ್ಷೆ’ಗೆ ಹೊರಡುತ್ತೇನೆ.ನನ್ನಲ್ಲಿರುವ ‘ನ್ಯೂನತೆ’ಯೂ ಎಂದೂ ಸರಿ ಹೋಗಲಾರದು. ವಿದ್ಯೆಯು ಅಷ್ಟಕಷ್ಟೆ. ನನ್ನ ಕಂಡ ಹುಡುಗಿಯರು ತಿರಸ್ಕರಿಸಿದ್ದೇ ಜಾಸ್ತಿ. ಆಸ್ತಿಗಾಗಿ ಒಪ್ಪಿಗೆ ಕೊಟ್ಟವರನ್ನು ನಯವಾಗಿ ನಾನೇ ತಿರಸ್ಕರಿಸಿದ್ದೇನೆ.
ಬಹಳ ದಿನಗಳ ನಂತರ ಪಕ್ಕದೂರಿನ ಬಂಧುಗಳ ಮದುವೆಗೆ ಅಮ್ಮನ ಒತ್ತಾಯದ ಮೇರೆಗೆ ಇಂದು ಹೊರಟಿದ್ದೇನೆ. ನಿರೀಕ್ಷೆಗಳು ನಿರಾಸೆಯನ್ನುಂಟು ಮಾಡುತ್ತದೆ ಎಂದರಿವಿರುವ ಸ್ಥಿತಪ್ರಜ್ಞ ನಾನು. ಆದ ಕಾರಣ ಪ್ರಯಾಣ ಪ್ರಯಾಸವಿಲ್ಲದೆ ಸಾಗುತಿದೆ.
ಎರಡು ಗಂಟೆಗಳ ದಾರಿ ಸವೆಸಿ ಮದುವೆ ಮನೆ ತಲುಪಿಯಾಯ್ತು. ಎಂದಿನಂತೆ ಸ್ವಲ್ಪ ದೂರದಲ್ಲೇ ಕುಳಿತುಕೊಂಡಿದ್ದೆ. ಅಷ್ಟೊತ್ತಿನಲ್ಲಿ ಅಮ್ಮ ನಮ್ಮ ದೂರದ ಸಂಬಂಧಿ ‘ಶೇಖರ ಮಾವ’ನನ್ನು ಕರೆದು ಮಾತನಾಡ ತೊಡಗಿದರು. ಅದೇ ವೇಳೆ ‘ಅವಳ’ ಆಗಮನವೂ ಆಯಿತು. “ನನ್ನ ತಂಗಿ ಮಗಳು .ಎಂ.ಎಸ್ಸಿ ಬಿ.ಎಡ್ .ಮುಗಿಸಿ ಲೆಕ್ಚರರ್ ಆಗಿದ್ದಾಳೆ ಹೆಸರು ಪಲ್ಲವಿ “ ಎಂದವರತ್ತ ದಿಟ್ಟಿಸಿದೆ.
” ಒಬ್ಬಳೇ ಮಗಳು. ಆಕಾಶವಾಣಿಯಲ್ಲಿ ಇವಳ ಕಾರ್ಯಕ್ರಮ ಪ್ರಸಾರ ಆಗ್ತಾ ಇರುತ್ತದೆ. ಸಂಗೀತ ಅವಳ ಉಸಿರು “ ಎಂದು ಸೊಸೆಯ ಗುಣಗಾನದಲ್ಲಿ ತೊಡಗಿದ್ದರು ಶೇಖರ ಮಾವ.ನನ್ನೆದೆಯಲ್ಲಿ ಏನೋ ಕಂಪನ. ಆದರೆ ನನ್ನ ಪಾಲಿಗೆ “ನಿಲುಕದ ನಕ್ಷತ್ರ “ ಅವಳು ಎಂದು ಅರಿವಿರುವುದರಿಂದ ಸುಮ್ಮನಾದೆ . ಅವಳದಾಗಲೇ ಮುಗುಳ್ನಕ್ಕು ಗೆಳತಿಯರ ದಂಡು ಸೇರಿಕೊಂಡಾಗಿತ್ತು. ನಾನು ಅಲ್ಲೇ ಪಕ್ಕದಲ್ಲಿ ಇದ್ದ ದೇವಸ್ಥಾನದ ಕಡೆ ನಡೆದೆ. ಅಲ್ಲೆ ಹೊರಗಡೆ ಕುಳಿತಿದ್ದ ವೃದ್ಧ ದಂಪತಿಗಳನ್ನು ಮಾತನಾಡಿಸುತ್ತ ಕುಳಿತೆ. ಅದೇ ವೇಳೆ ಆಕೆಯು ಇಬ್ಬರು ಗೆಳತಿಯರೊಂದಿಗೆ ದೇವಸ್ಥಾನದ ಅಂಗಳದೊಳಗೆ ಬಂದಳು. ಅದೇ ವೇಳೆ ಅವಳ ಅರಿವಿಲ್ಲದೆಯೇ ಆಕೆಯ ಮೊಬೈಲ್ ನನ್ನ ಬಳಿಯೇ ಬಿದ್ದಾಗಿತ್ತು. ಆಕೆಯನ್ನು ಹಿಂಬಾಲಿಸಿ ಮೊಬೈಲ್ ಹಿಂದುರಿಗಿಸಿದಾಗ ಪರಿಚಯದ ನಗೆ ನಕ್ಕಳು.ನನ್ನೊಂದಿಗೆ ಮಾತನಾಡುತ್ತಾ ದೇವಾಲಯದ ಪ್ರಾಂಗಣಕ್ಕೂ ಮೂರು ಸುತ್ತು ಬಂದಿದ್ದೂ ಆಯಿತು. ಬಳಿಕ ಎರಡು ದಿವಸದ ಮದುವೆಯಲ್ಲಿ ಅವಳು ಆತ್ಮೀಯ ಗೆಳತಿಯಂತಾದಳು. ಹಮ್ಮುಬಿಮ್ಮಿಲ್ಲದ ಆಕೆಯ ನಡವಳಿಕೆ ನನ್ನನ್ನು ಮತ್ತಷ್ಟು ಆಕೆಗೆ ಹತ್ತಿರವಾಗುವಂತೆ ಮಾಡಿತು. ಮದುವೆ ಮುಗಿಸಿ ಹಿಂದಿರುಗುವಾಗ ಅವಳ ಮೊಬೈಲ್ ಒಳಗೆ ನನ್ನ ನಂಬರ್ ಸೇವ್ ಆಗಿತ್ತು. ಊರಿಗೆ ಹಿಂದುರಿಗಿದ ನಾನು ಆಕೆಗಾಗಿ ಆಂಡ್ರಾಯ್ಡ್ ಫೋನ್ ತೆಗೆದುಕೊಂಡಾಗಿತ್ತು. ಮೆಸೇಜ್ ನಿಂದ ಆರಂಭವಾಗಿ ದಿನಕ್ಕೆರಡು ಬಾರಿ ಕಾಲ್ ಮಾಡಿ ಮಾತನಾಡುವಷ್ಟು ಆತ್ಮೀಯತೆ ನಿಧಾನವಾಗಿ ಬೆಳಗಾದಾಗಿತ್ತು. ಆದರೆ ನನ್ನ ಮನದ ಮಾತು ಮನದಲ್ಲಿ ಉಳಿದು ಸತಾಯಿಸ ತೊಡಗಿತು.
ಅದೊಂದು ದಿನ ಬೆಳಿಗ್ಗೆ ಎಂಟರ ಸಮಯ .ನಾನು ತೆಂಗಿನಕಾಯಿ ಸುಲಿಯುವುದರಲ್ಲಿ ಮಗ್ನನಾಗಿದ್ದೆ. ಅದೇ ವೇಳೆ ಓರ್ವ ಹಿರಿಯ ವ್ಯಕ್ತಿ ನಮ್ಮ ಮನೆ ಕಡೆ ಬಂದು ತಂದೆಯ ಬಳಿ ಮಾತನಾಡ ತೊಡಗಿದರು.ಅವರ ಮಗಳಿಗೆ ನನ್ನ ಸಂಬಂಧದ ಬಗ್ಗೆ ಮಾತು ಬೆಳೆಸಲು ಅವರಾಗಿಯೇ ಬಂದಿದ್ದರು. ನನಗರಿವಿಲ್ಲದೆ ‘ವರ ಪರೀಕ್ಷೆ’ಯನ್ನು ಎದುರಿಸಿದ್ದೂ ಆಯಿತು. ಅಮ್ಮನಂತೂ ನನ್ನ ಸಮಸ್ಯೆಯನ್ನು ತಿಳಿಸದೆ ಮದುವೆ ಮಾಡುವ ಯೋಚನೆಯಲ್ಲಿದ್ದರು ನಾನದಕ್ಕೆ ಒಪ್ಪಲಿಲ್ಲ. ನನ್ನ ಬಗ್ಗೆ ತಿಳಿದುಕೊಂಡು ಬರುವ ಸಂಗಾತಿಯೇ ನನಗೆ ಬೇಕಾಗಿದ್ದಾಳು.’ಪಲ್ಲವಿ’ಯ ಮೊಗ ಕಣ್ಣೆದುರು ನಗುತಿತ್ತು. ಎದೆಯ ಬಡಿತವೂ ಅವಳದ್ದೇ ಆಗಿತ್ತು.
ಆದರೊಂದು ಶುಭದಿನ ನೋಡಿ ನಾವು ‘ಆ ಹುಡುಗಿ’ಯ ಮನೆಗೆ ಹೊರಟಾಯ್ತು. ಮುಂದೆ ನಡೆದದ್ದು ವಿಸ್ಮಯ.ನಾನು ಅಲ್ಲಿ ಕಂಡದ್ದು ನನ್ನ ‘ಅಭಿಸಾರಿಕೆ’ ‘ಪಲ್ಲವಿ’ಯನ್ನು ಆಗಿತ್ತು.ಆದರೆ ನನ್ನ ಬಗ್ಗೆ ನಾನು ತಿಳಿಸಲೇ ಬೇಕಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಪಲ್ಲವಿಯ ಬಳಿ ಮಾತನಾಡಲು ಮಹಡಿಯ ಮೇಲೆರಿದೆ. “ನಿಜವಾಗಿಯೂ ನಾನು ನಿನಗೆ ಸರಿಯಾದ ಜೋಡಿ ಎಂದು ಯೋಚಿಸಿರುವೆಯಾ ಪಲ್ಲವಿ” ಎಂದು ಕೇಳಿದೆ. ‘ಹೌದು’ ಎಂಬ ಉತ್ತರ ಆಕೆಯದಾಗಿತ್ತು. ‘ನಿನಗೆ ನನ್ನ ಬಗ್ಗೆ ಇನ್ನು ತಿಳಿದಿಲ್ಲ. ನಾನು ಒಂದು ಕಿವಿ ಕೇಳದ ಅರೆ ಕಿವುಡ’ ಎಂದು ಉಸುರುವಾಗ ದನಿ ನಡುಗಿತು.ಅಷ್ಟರಲ್ಲಿ ‘ಅದು ನನಗೆ ಗೊತ್ತು’ ಎಂದಳು. ‘ನನ್ನ ಮನೆಯವರಿಗೆ ಮಾತ್ರ ಗೊತ್ತಿರುವ ರಹಸ್ಯ ಅದು. ನಿನಗೆ ಹೇಗೆ ಗೊತ್ತಾಯ್ತು?’ ಎಂದು ಕೇಳಿದೆ. ‘ಪ್ರೀತಿಸೋರಿಗೆ ಅದೆಲ್ಲ ತಿಳಿಯುತ್ತೆ’ ಎಂದು ನಕ್ಕಳು.
ಅಷ್ಟೊತ್ತಿಗೆ ನನ್ನ ಅಮ್ಮ ಹಾಗೂ ಅವಳ ಮನೆಯವರು ಅಲ್ಲಿ ಬಂದಾಗಿತ್ತು. ‘ಹೌದು ನವನೀತ್, ಈ ವಿಷಯ ಮೊದಲೇ ಗೊತ್ತಿತ್ತು. ವಿದ್ಯೆಯೆಂಬುದು ನಮ್ಮನ್ನು ಅರಿಯಲು ಸಹಾಯ ಮಾಡುತ್ತದೆ. ನೀವು ದೇಶಕ್ಕಾಗಿ ದುಡಿದವರು. ನಿಮ್ಮೂರನ್ನು ನಕ್ಸಲರ ಕಪಿ ಮುಷ್ಟಿಯಿಂದ ಬಿಡಿಸಿಕ್ಕೊಳ್ಳಲು ಪೋಲೀಸ್ ಇಲಾಖೆಗೆ ಗುಪ್ತಚಾರರಾಗಿ ಕಾರ್ಯ ಗೈದವರು.ಅದೇ ಕಾಳಗದಲ್ಲಿ ಗುಂಡೊಂದು ನಿಮ್ಮ ಕಿವಿಯ ಪಕ್ಕದಲ್ಲಿ ಹಾದು ಹೋಯಿತು.ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದಿರಿ.ಆದರೆ ಶಾಶ್ವತ ವಾಗಿ ಒಂದು ಕಿವಿಯನ್ನೇ ಕಳೆದು ಕೊಂಡಿರಿ.ಆ ಕಿವಿ ಶಾಶ್ವತವಾದ ಕಿವುಡುತನಕ್ಕೆ ಒಳಗಾಯಿತು.ಮುಖದ ಅಂದಗೆಡವ ಬಾರದೆಂದು ಕೃತಕವಾದ ಕಿವಿಯ ರಚನೆಯನ್ನು ನಿಮ್ಮ ಮುಖಕ್ಕೆ ಜೋಡಿಸಿದ್ದಾರೆಂದು ನಾನು ಬಲ್ಲೆ.ಆದರೆ ನೀವು ಒಂದು ಕಿವಿಯಿಂದ ಮಾತ್ರ ಕೇಳಿಸಿಕ್ಕೊಳ್ಳ ಬಲ್ಲಿರಿ.ಅದರೆ ಅದೆಷ್ಟು ದಿನವೆಂದೂ ವೈದ್ಯರಿಗೂ ಭರವಸೆ ಇಲ್ಲ.ಜತೆಗೆ ಇದರಿಂದ ನಿಮ್ಮ ಧ್ವನಿಪೆಟ್ಟಿಗೆಗೂ ಹಾನಿಯುಂಟಾಗ ಬಹುದು ಅಲ್ಲವೇ? ಈಗಂತೂ ನೀವು ಮಣ್ಣಿನ ಮಗ .ರೈತ ನಮ್ಮ ದೇಶದ ಬೆನ್ನೆಲುಬು.ನಿಮ್ಮದಲ್ಲ ತಪ್ಪಿಗೆ ಕೊರಗುವುದ್ಯಾಕೆ? ಅಂಗ ಊನತೆ ಶಾಪವಲ್ಲ.ನೀವೊಬ್ಬ ಉತ್ತಮ ಬರಹಗಾರರು ಅಲ್ಲವೆ? ದೇವರು ಒಂದನ್ನು ಕಿತ್ತು ಕೊಂಡರೂ ಇನ್ನೊಂದನ್ನು ಕೊಟ್ಟೇ ಕೊಡುತ್ತಾನೆ.ನಿಮ್ಮ ಊರಿನವರಿಗಾಗಿ ನೀವು ಮಾಡಿದ ತ್ಯಾಗಕ್ಕೆ ಯಾವುದು ಸರಿ ಸಮ ಇದೆ ಹೇಳಿ? ಮತ್ಯಾಕೆ ಹಿಂಜರಿಕೆ? ನಮಗೆ ನಮ್ಮ ಮಗಳನ್ನು ನಮ್ಮಂತೆ ನೋಡಿಕೊಳ್ಳುವ ಅಳಿಯ ಬೇಕಾಗಿರುವುದು.ಆ ಅರ್ಹತೆ ನಿನ್ನಲ್ಲಿದೆ.ಇನ್ನು ನಿನ್ನ ಬಗ್ಗೆ ನಮಗೆ ಹಾಗೂ ಪಲ್ಲವಿಗೆ ಎಲ್ಲಾ ತಿಳಿದಿದೆ. ಆ ಬಗ್ಗೆ ಹೇಳಿರುವುದು ಅಂದು ನಿನ್ನ ಜತೆ ಇದ್ದಂತಹ ಪೋಲೀಸ್ ಅಧಿಕಾರಿ ಪ್ರಣವ್ ಭಾರಧ್ವಾಜ್.ನನ್ನ ಸೋದರಿಯ ಪತಿ ಆತ.ಒಂದು ವೇಳೆ ಎಲ್ಲಾ ರೀತಿಯಿಂದ ಪರಿಪೂರ್ಣ ವಾಗಿ ಇರುವ ಹುಡುಗ ದೊರೆತ ಎಂದಿಟ್ಟುಕೋ ಆದರೆ ಮದುವೆ ಆದ ಬಳಿಕ ಆ ಸಮಸ್ಯೆ ಬಂದರೆ ನಾವೇ ಎದುರಿಸಬೇಕು ಅಲ್ಲವೇ?”ಎಂಬ ಮಾತು ಅವರಿಂದ ಸರಾಗವಾಗಿ ಹರಿದು ಬಂತು. ಒಂದು ಕ್ಷಣ ದಿಗ್ಬ್ರಮೆಗೆ ಒಳಗಾದೆ.”ಪಲ್ಲವಿ”ಗೆ ನಿನ್ನ ಗುಣ ಮುಖ್ಯವೇ ಹೊರತು ಆಸ್ತಿ ಅಂತಸ್ತು ರೂಪ ಅಲ್ಲ” ಎಂದ ಆಕೆಯ ತಂದೆಯ ಮಾತಿಗೆ ತಲೆ ತಗ್ಗಿಸಿದೆ.’ಅಂತೂ ನನ್ನ ಮಗನ ಜೀವನದಲ್ಲಿ ನವ ಪಲ್ಲವಿ ಚಿಗುರೊಡೆಯಿತು. ಅವನ “ಅಭಿಸಾರಿಕೆ”ಬಂದಳು’ ಎಂದು ಅಮ್ಮ ಖುಷಿಯಾದಳು. ನನ್ನ ಪ್ರೀತಿ ಗೆದ್ದಿತ್ತು. ಹೀಗೆ ….. ‘ಒಲವಿನರಮನೆ’ಯಲ್ಲಿ ‘ಪ್ರೀತಿ ಬೆಳಕ’ ಹಚ್ಚಿ ‘ಪಲ್ಲವಿ’ ದಾಂಪತ್ಯ ಗೀತೆ ಹಾಡತೊಡಗಿದಳು.
✍🏻 ಎ.ಆರ್.ಭಂಡಾರಿ ವಿಟ್ಲ.