
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಕೂಗಳತೆಯ ದೂರದಲ್ಲಿರುವ “ಬಳ್ಳಿಗಾವಿ” ಎಂಬ ಗ್ರಾಮದ ಕೆರೆದಂಡೆಯ ಮೇಲಿರುವ ಅದ್ಭುತ ವಾಸ್ತುಶಿಲ್ಪದ ಕಲಾವೈಭವದ ದೇವಾಲಯವೇ “ಶ್ರೀ ಕೇದಾರೇಶ್ವರ ದೇವಾಲಯ.”
ಬಳ್ಳಿಗಾವಿ ಶೈವರ ಧಾರ್ಮಿಕ ಕ್ಷೇತ್ರ.ದಕ್ಷಿಣ ಕೇದಾರವೆಂದೇ ಪ್ರಸಿದ್ಧಿ ಪಡೆದಿರುವ ಬಳ್ಳಿಗಾವಿ ಶ್ರೇಷ್ಠ ವಚನಕಾರ ಶರಣ “ಶ್ರೀ ಅಲ್ಲಮಪ್ರಭು ” ಗಳ ಹುಟ್ಟೂರು.ನಾಟ್ಯರಾಣಿ ಶಾಂತಲೆಯ ತವರೂರು.ಪಾಂಡವರು ಇಲ್ಲಿಗೆ ಬಂದು ಪಂಚಲಿಂಗವನ್ನು ಸ್ಥಾಪಿಸಿ ಶಿವಾರಾಧನೆಯನ್ನು ಮಾಡಿಹೋಗಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖ ಇರುವುದು ಈ ಗ್ರಾಮದ ಬಗ್ಗೆ ಇನ್ನಷ್ಟು ಪೂಜ್ಯ ಭಾವನೆ ಮೂಡಿಸುತ್ತದೆ.ಇಂತಹ ಪವಿತ್ರ ಭೂಮಿಯಲ್ಲಿ ನಿರ್ಮಾಣಗೊಂಡಿರುವುದೇ ಶ್ರೀ ಕೇದಾರೇಶ್ವರ ದೇವಾಲಯ.ಈ ದೇವಾಲಯದ ನಿರ್ಮಾಣ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಆರಂಭಗೊಂಡು ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು.
ತ್ರಿಕೂಟ (ಮೂರು ಗೋಪುರ) ಶೈಲಿಯಲ್ಲಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲ್ಪಡುವ ದೇವರು ಶ್ರೀ ಕೇದಾರೇಶ್ವರನೇ ಆದರೂ ಈ ದೇವಾಲಯದ ಪ್ರಮುಖ ಆಕರ್ಷಣೆ ಸುಮಾರು ಎಂಟು ಅಡಿ ಎತ್ತರದ ನಂದಿ ವಿಗ್ರಹ.ಇಲ್ಲಿನ ಇನ್ನೊಂದು ಆಕರ್ಷಣೆ ಗೋಪುರದಲ್ಲಿ ಹೊಯ್ಸಳರ ರಾಷ್ಟ್ರ ಲಾಂಛನವಾಗಿದ್ದ ಸಳ ಮಹಾರಾಜ ಹುಲಿಯೊಂದಿಗೆ ಸೆಣಸುತ್ತಿರುವ ಪ್ರತಿಕೃತಿ ಕೆತ್ತಿರುವುದು ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ.ಆಕರ್ಷಕವಾಗಿ ನವಿರಾಗಿ ಕೆತ್ತಿದ ನಲವತ್ತಕ್ಕಿಂತಲೂ ಹೆಚ್ಚು ಕಲ್ಲಿನ ಕಂಬಗಳಿಂದ ಕೂಡಿದ ದೇವಾಲಯದ ಸಭಾಂಗಣವಂತೂ ರಮಣೀಯ.
ಶೈವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಶಿವರಾತ್ರಿಯ ದಿನ ಈ ದೇವಾಲಯದಲ್ಲಿ ವಿಶೇಷ ಪೂಜೆ,ಅಭಿಷೇಕ ಇರುತ್ತದೆ.ಭಕ್ತಾದಿಗಳು ರಾತ್ರಿಯಿಡೀ ಇಲ್ಲಿಯೇ ತಂಗಿದ್ದು ಪೂಜೆಯಲ್ಲಿ ಪಾಲ್ಗೊಂಡು ಅಹೋರಾತ್ರಿ ಜಾಗರಣೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ಸಮೀಪದ ಊರುಗಳ ಭಕ್ತರು ಬರಿಗಾಲಲ್ಲಿ ಕಾಲ್ನಡಿಗೆಯಲ್ಲಿ ಬಂದು ಕೇದಾರೇಶ್ವರನಿಗೆ ಹಣ್ಣುಕಾಯಿಯ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
