September 20, 2024

ಜೀವಜಲ ಜೀವನದಿಗಳ ಬರಿದಾಗಿಸಿ ದೇಶದ ಅಥವಾ ನಮ್ಮ ಮಕ್ಕಳ ಭವಿಷ್ಯತ್ತಿನ ಕನಸು ಕಾಣಲು ಸಾಧ್ಯವಿಲ್ಲ. ಜೀವ ಜಲವಿಲ್ಲದೆ ಜಗತ್ತು ಇಲ್ಲ. “ಮುಂದೊಂದು ದಿನ ಮಹಾಯುದ್ಧವಾದರೆ ಅದು ನೀರಿಗಾಗಿ”ಎಂಬ ಮಾತಿದೆ. ಈ ವಿಚಾರದಲ್ಲಿ ನಾವು ಗಂಭೀರವಾಗಿ ಅಲೋಚಿಸಬೇಕಾದ ಅನಿವಾರ್ಯತೆ ಇದೆ.

 

 

 

 

 

 

 

 

ನಮ್ಮ ಪೂರ್ವಜರು ಜೀವಜಲವನ್ನು ದೇವರೆಂದು ಪೂಜಿಸಿದರು. ಏಕೆಂದರೆ ಅವರಿಗೆ ನೀರಿನ ಮಹತ್ವದ ಅರಿವು ಇತ್ತು. ಸುಜಲಾಂ ಸುಫಲಂ ಎಂದು ಹೇಳುವ ದೇಶದಲ್ಲಿ ನಾವಿದ್ದೇವೆ. ಜೀವಜಲದ ಮಹತ್ವದ ಬಗ್ಗೆ ಮಳೆಯ ಮಹತ್ವದ ಬಗ್ಗೆ ಪುರಾಣ ಕತೆಗಳು ನಮ್ಮಲ್ಲಿವೆ. ಗಂಗಾ, ಯಮುನಾ,ಬ್ರಹ್ಮಪುತ್ರ,ತುಂಗಾ,ಭದ್ರಾ, ಕಾವೇರಿ, ಗೋದಾವರಿ ಕೃಷ್ಣಾ ಮುಂತಾದ ಜೀವನದಿಗಳು ದೇಶವನ್ನು ಪೋಷಿಸುತ್ತಿವೆ. ಈ ಪುಣ್ಯನದಿಗಳನ್ನು ಮಾತೆಯರೆಂದೆ ಪೂಜಿಸುತ್ತೇವೆ. ಕತೆ , ಹಾಡು, ಸಿನಿಮಾಗಳಲ್ಲಿ ನದಿ , ಮಳೆ, ಸರೋವರ, ಜಲಪಾತ ಮುಂತಾದುವುಗಳ ವರ್ಣಿಸುತ್ತೇವೆ. ನೀರಿನ ಸೌಂದರ್ಯಕ್ಕೆ ಮೈಮರೆಯುತ್ತೇವೆ. ಆದರೆ ಇಂದು ಪ್ರಕೃತಿಯ ಆರಾಧನೆ ನಡೆಯುವ ಬದಲಾಗಿ ನಗರೀಕರಣ ಕೈಗಾರಿಕರಣದ ಹೆಸರಲ್ಲಿ ಕಾಡಿನ ನಾಶ ನಡೆಯುತ್ತಿದೆ, ಮಳೆ ಕಡಿಮೆಯಾಗಿದೆ. ಮಳೆ ಬಂದರೂ ಭೂಮಿ ಅದನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ.

ದೇಶದಲ್ಲಿ ಈಗಾಗಲೇ ನೀರಿನ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಕೊಳವೆ ಬಾವಿ , ಅಣೆಕಟ್ಟುಗಳ ನಿರ್ಮಾಣವಾಗಿದೆ. ಆದರೆ ಅಂತರ್ಜಲವಿಲ್ಲದಿದ್ದರೆ ಅಣೆಕಟ್ಟು, ಕೊಳವೆ ಬಾವಿಯಿದ್ದು ಏನು ಪ್ರಯೋಜನವಾದೀತು?

ಈಗ ಇರುವ ನೀರು ಕೇವಲ 20 ವರ್ಷದಲ್ಲೆ 50% ಮುಗಿದು ಹೋಗಲಿದೆ. ಮತ್ತೆ 10 ವರ್ಷದಲ್ಲಿ ಜೀವಜಲವೇ ಇಲ್ಲವಾಗಬಹುದು.ನಮ್ಮ ಜೀವಿತಾವಧಿಯಲ್ಲೆ ಹೀಗಾದರೆ ಇನ್ನು ಭವಿಷ್ಯದ ನಮ್ಮ ಮಕ್ಕಳ ಕತೆಯೇನು? ಅವರಿಗಾಗಿ ಸುಂದರ ಭೂಮಿ ಉಳಿಯುವುದು ಬೇಡವೇ?  ಈ ಪ್ರಶ್ನೆಗಳು ನಿಜವಾಗಿಯೂ ಮುಂದೆ ಆಗಬಹುದಾದ ಅಪಾಯವನ್ನು ತಿಳಿಸುತ್ತದೆ. ದೇಶದ ಭವಿಷ್ಯದ ಜನತೆಗೆ ನಾವು ಬರಡುಭೂಮಿಯನ್ನು ಕೊಟ್ಟು ಹೋಗಲು ಯಾರಿಗೂ ಇಚ್ಚೆಯಿಲ್ಲ‌, ಆದರೆ ಯಾರಿಗೂ ಸರಿಯಾದ ದೃಷ್ಟಿಕೋನ ಮತ್ತು ನೀರಿನ ಮಹತ್ವದ ಅರಿವು ಇಲ್ಲ.

ನೀರಿಗಾಗಿ, ನದಿ ಉಳಿಸಲು ಅಭಿಯಾನವೊಂದರ ಅಗತ್ಯವಿದೆ. ನದಿಗಳು ನಾಗರಿಕತೆಯ ಸೃಷ್ಡಿಗೆ ಕಾರಣವಾದ ದೇವತೆಯೆಂದು ನಮ್ಮ ಪೂರ್ವಜರ ನಂಬಿಕೆ. ನಮ್ಮ ಪೂರ್ವಜರು ಆರಾಧಿಸಿ ಕೊಂಡು ಬರುತ್ತಿರುವ ದೇವತೆಗಳನ್ನು ರಕ್ಷಿಸಿ , ಪೂಜಿಸುವ ಕೆಲಸವಾಗಬೇಕಿದೆ.

ಪ್ರಸ್ತುತ್ತ ಈ ಶಾ ಪೌಂಡೇಶನ್ ಮತ್ತು ಇತರ ಸಂಘ ಸಂಸ್ಥೆಗಳು Rally for River ಎಂಬ ಬೃಹತ್ ಅಭಿಯಾನ ಕೈಗೊಂಡಿದೆ. ನೀರಿನ ಮಹತ್ವವನ್ನು ದೇಶದೆಲ್ಲೆಡೆ ಸಾರುವ ಕೆಲಸ ಮಾಡುತ್ತಿವೆ. ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ದೇಶದ ಪ್ರಜೆಗಳನ್ನು ಬಡಿದೆಬ್ಬಿಸಿ ನೀರಿನ ಮೂಲವಾದ ನದಿಗಳ ಉಳಿವಿಗೆ ಸರ್ಕಾರಕ್ಕೆ ಹೊಸ ನೀತಿಯೊಂದನ್ನು ರಚಿಸಬೇಕೆಂದು ಆಗ್ರಹಿಸುವುದಾಗಿದೆ. ಇಷ್ಟೇ ಅಲ್ಲದೆ ನದಿಯ ಎರಡು ದಂಡೆಗಳಲ್ಲಿ ಮರಗಳನ್ನು ಬೆಳೆಸಿ, ಹೆಚ್ಚಿನ ನೀರು ಇಂಗಿಸಲು ಕೊಳವೆ ಬಾವಿ ಮಾದರಿಯಲ್ಲಿ ಇಂಗುಗುಂಡಿಗಳನ್ನು ನದಿಯ ಪಕ್ಕದಲ್ಲಿ ನಿರ್ಮಿಸಬೇಕು ಎಂಬ ಎರಡು ಸಲಹೆಗಳನ್ನು ನೀಡಲಾಗಿದೆ. ಈ ಆಗ್ರಹಕ್ಕೆ ನೀರು ಕುಡಿಯುವವರೆಲ್ಲ ಬೆಂಬಲಿಸಬೇಕಾದುದು ನಮ್ಮ ಕರ್ತವ್ಯ.

ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಚ ಭಾರತ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಗಂಗಾ ನದಿ ಶುದ್ಧೀಕರಣ ಯೋಜನೆ ನೀರಿನ ಸಂರಕ್ಷಣೆಯಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದೆ. ಸರ್ಕಾರ ಜಲಜೀವನ್ ಮಿಷನ್ ಎಂಬ ಯೋಜನೆಯಡಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ಹಮ್ಮಿಕೊಂಡಿದೆ . ಸ್ವಚ್ಚ ಭಾರತ ಯೋಜನೆ ಮುಖೇನ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೇ ಇರುವುದರಿಂದ ನೀರು ಕಲುಷಿತಗೊಳ್ಳುವುದನ್ನು ಕಡಿಮೆ ಮಾಡುವುದೂ ಈ ಯೋಜನೆಯ ಹೈಲೈಟ್. ಆದರೆ ಎಲ್ಲಾ ಜವಾಬ್ದಾರಿ ಸರಕಾರದ ಮೇಲೆ ಹಾಕುವಂತಿಲ್ಲ. ಬರೀ ಸರಕಾರದಿಂದ ಮಾತ್ರ ಇದು ಸಾಧ್ಯವಾಗುವ ಮಾತಲ್ಲ. . ನೀರಿನ ಬಗ್ಗೆ ಬರೆಯುವುದು, ಮಾತಾಡುವುದು ನೀರು ಕುಡಿದಷ್ಟೇ ಸುಲಭ. ಆದರೆ ಸಾರ್ವಜನಿಕ ಸಹಭಾಗಿತ್ವವವಿಲ್ಲದಿದ್ದರೆ ಮುಂದೊಂದು ದಿನ ಪ್ರಕೃತಿಯೇ ನಮಗೆ ನೀರು ಕುಡಿಸುವುದರಲ್ಲಿ ಅನುಮಾನವಿಲ್ಲ.

ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುವವರು ನಾವು. ಜಲವಿದ್ದರೆ ಫಲವೂ ಇದೆ. ಅದಿಲ್ಲದಿದ್ದರೆ ಏನೇನೂ ಇಲ್ಲ ಎಂಬುದು ನಮಗೆಲ್ಲರಿಗೂ ಇನ್ನಾದರೂ ಅರ್ಥವಾಗಲಿ. ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲೂ ಹೇಗೂ ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆ(ನೀರು)ಯನ್ನು ಉಳಿಸಿಕೊಳ್ಳಲಂತೂ ಖಂಡಿತಾ ಸಾಧ್ಯವಿದೆ ಅಲ್ಲವೇ?

 

✍:ಪ್ರಶಾಂತ್ ಭಂಡಾರಿ ಕಾರ್ಕಳ, ಭಂಡಾರಿ ವಾರ್ತೆ

1 thought on “ಮಕ್ಕಳ ಭವಿಷ್ಯಕ್ಕಾಗಿ ಆಸ್ತಿಕೂಡಿಡುವ ನಾವು ಜೀವಜಲವನ್ನೇಕೆ ಬರಿದು ಮಾಡುತ್ತಿದ್ದೇವೆ?

Leave a Reply

Your email address will not be published. Required fields are marked *