
ಮೂಡನಂಬಿಕೆಗಳ ಬಲೆಯಲ್ಲಿ, ಸಂಪ್ರದಾಯವೆಂಬ ಸರಪಳಿಯಲ್ಲಿ ಬಂಧಿಸಿ ಹೆಣ್ಣನ್ನು ಶೋಷಿಸುವ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಮೂಡಿಬಂದ ಕನ್ನಡ ಭಾಷೆಯ ಚಲನಚಿತ್ರ “ಅಮ್ಮಚ್ಚಿಯೆಂಬ ನೆನಪು” ನವೆಂಬರ್ ಒಂದರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ ಅರಳಲಿದೆ.
ಖ್ಯಾತ ಲೇಖಕಿ ಡಾಕ್ಟರ್ ವೈದೇಹಿಯವರ “ಅಕ್ಕು” “ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು” ಹಾಗೂ “ಅಮ್ಮಚ್ಚಿಯೆಂಬ ನೆನಪು” ಈ ಮೂರೂ ಸಣ್ಣ ಕಥೆಗಳನ್ನು ಹದವಾಗಿ ಹೊಸೆದು ಚಿತ್ರಕಥೆ ರಚಿಸಿ,ನಿರ್ದೇಶನ ಮಾಡಿರುವುದು ಖ್ಯಾತ ರಂಗ ನಿರ್ದೇಶಕಿ,ಕಂಠದಾನ ಕಲಾವಿದೆ ಶ್ರೀಮತಿ ಚಂಪಾ.ಪಿ.ಶೆಟ್ಟಿಯವರು.ಈ ಚಿತ್ರಕ್ಕೆ ಅಪ್ಪಟ ದಕ್ಷಿಣ ಕನ್ನಡ ಶೈಲಿಯ ಕನ್ನಡದಲ್ಲಿ ಸಂಭಾಷಣೆ ಬರೆದುಕೊಟ್ಟವರು ಸ್ವತಃ ಲೇಖಕಿ ಡಾಕ್ಟರ್ ವೈದೇಹಿಯವರು.
ವೈದೇಹಿಯವರ ಈ ಮೂರು ಕಥೆಗಳ ಸಂಗಮದಿಂದ ರೂಪುಗೊಂಡ ನಾಟಕ “ಅಕ್ಕು” ಈಗಾಗಲೇ ನಲವತ್ತೊಂಬತ್ತು ಪ್ರದರ್ಶನ ಕಂಡು ಯಶಸ್ಸು ಗಳಿಸಿದ್ದು ಮಾತ್ರವಲ್ಲದೇ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ್ದು ಸುಳ್ಳಲ್ಲ.ನಾಟಕ ನೋಡಿದ ಬಹುತೇಕರು ಹೆಣ್ಣನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡ ಅನೇಕ ನಿದರ್ಶನಗಳುಂಟು.
ನಾಟಕವಾಗಿ ಸೀಮಿತ ಪ್ರೇಕ್ಷಕರನ್ನು ತಲುಪಿಯೇ ಸಾಮಾಜಿಕ ಪ್ರಜ್ಞೆ ಮೂಡಿಸಿರುವ ಕಥೆಗಳು ಜನಸಾಮಾನ್ಯರಿಗೆ ತಲುಪಬೇಕು, ಕೇವಲ ಆಂಗಿಕ ಅಭಿನಯದಿಂದ ಜನಮನಗೆದ್ದ ಕಥೆಗಳು ಭಾವಾಭಿನಯದಿಂದ, ಮುಖದ ಮತ್ತು ಕಣ್ಣಿನ ಮೂಲಕ ಅಭಿವ್ಯಕ್ತಿಸಲ್ಪಟ್ಟ ಭಾವನೆಗಳು ನೋಡುಗರಿಗೆ ಸ್ಫುಟವಾಗಿ ಅರ್ಥವಾಗುವಂತೆ ತೋರಿಸಲು ಸಿನಿಮಾ ಒಂದು ಉತ್ತಮ ಮಾಧ್ಯಮ ಎಂಬುದನ್ನರಿತು ಆ ನಿಟ್ಟಿನಲ್ಲಿ ಆಲೋಚಿಸಿದ ನಿರ್ದೇಶಕಿ ಚಂಪಾರವರಿಗೆ ನಿರ್ಮಾಪಕರಾಗಿ ಜೊತೆಯಾದವರು ಪ್ರಕಾಶ್.ಪಿ.ಶೆಟ್ಟಿ, ಗೀತಾ ಸುರತ್ಕಲ್, ವಂದನಾ ಇನಾಂದಾರ್,ಗೌರಮ್ಮ ಮತ್ತು ಕಲಾಕದಂಬ ಆರ್ಟ್ ಸೆಂಟರ್.
ಈ ಚಿತ್ರಕ್ಕೆ ಪಾತ್ರಗಳಾಗಿ ಜೀವ ತುಂಬಿದವರು ರಂಗಮಂಟಪ ತಂಡದ, “ಅಕ್ಕು” ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು.ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕನಟ ಮತ್ತು ನಿರ್ದೇಶಕರಾದ ರಾಜ್.ಬಿ.ಶೆಟ್ಟಿಯವರು ಯೆಂಕಪ್ಪಯ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೊಟ್ಟಿದಾರೆ.ಅಡಿಗಾಸ್ ಸಮೂಹ ಸಂಸ್ಥೆಯ ವಾಸುದೇವ ಅಡಿಗರ ಮಗಳು ವೈಜಯಂತಿ ಅಡಿಗ ಅಮ್ಮಚ್ಚಿಯಾಗಿ,ದೀಪಿಕಾ ಆರಾಧ್ಯ ಅಕ್ಕುವಾಗಿ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ.ಜೊತೆಯಲ್ಲಿ ಚಂದ್ರಹಾಸ ಉಳ್ಳಾಲ್, ದಿಯಾ ಪಾಲಕ್ಕರ್, ಗೀತಾ ಸುರತ್ಕಲ್, ಕಲಾಕದಂಬ ಆರ್ಟ್ ಸೆಂಟರ್ ನ ಡಾಕ್ಟರ್ ರಾಧಾಕೃಷ್ಣ ಉರಾಳ ಮತ್ತು ವಿಶ್ವನಾಥ್ ಉರಾಳ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರದಲ್ಲಿ ಬರುವ ಹಾಡುಗಳಂತೂ ಭಾವಗೀತೆಯ ಭಾವಾನುಭವವನ್ನು ನೀಡುವಂತಿವೆ. ಹಿಂದೂಸ್ಥಾನಿ ಸಂಗೀತದ ಗುರುಗಳಾದ ಪಂಡಿತ್ ಕಾಶೀನಾಥ್ ಪತ್ತಾರ್ ಸಿನಿಮಾ ಸಂಗೀತ ಸಂಯೋಜನೆಯ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ. ಸಂಗೀತಾ ಕಟ್ಟಿ, ಅನುರಾಧಾ ಭಟ್, ಮಾನಸ ಹೊಳ್ಳ, ಮಂಗಳಾ ರವಿ, ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಮೂಡಿಬಂದ ಹಾಡುಗಳು ನೋಡುಗರನ್ನು ಗಂಧರ್ವ ಲೋಕದಲ್ಲಿ ತೇಲಿಸುವಷ್ಟು ಸುಶ್ರಾವ್ಯವಾಗಿವೆ.
ಮಫ್ತಿ ಖ್ಯಾತಿಯ ಛಾಯಾಗ್ರಾಹಕ ನವೀನ್ ಕುಮಾರ್ ಕ್ಯಾಮರಾ ಕೈಚಳಕದಲ್ಲಿ ದಕ್ಷಿಣ ಕನ್ನಡದ ಪ್ರಕೃತಿಯ ಸೊಬಗು ಮತ್ತು ಪಡುಬಿದ್ರಿ, ಸುರತ್ಕಲ್ ನ ಸುಂದರ ಕಡಲತೀರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಹರೀಶ್ ಕೊಮೆಯವರ ಸಂಕಲನ ಚಿತ್ರಕ್ಕಿದೆ.
ಉತ್ತಮ ಕಥೆ,ಹದವರಿತ ಅಭಿನಯ, ಸುಂದರ ಛಾಯಾಗ್ರಹಣ, ಹೃನ್ಮನ ತಣಿಸುವ ಸಂಗೀತ, ದಕ್ಷಿಣ ಕನ್ನಡದ ಆಡುಭಾಷೆಯ ಸೊಗಡು ಎಲ್ಲವೂ ಒಂದಾಗಿ “ಅಮ್ಮಚ್ಚಿಯೆಂಬ ನೆನಪು” ಒಂದು ದೃಶ್ಯ ಕಾವ್ಯವಾಗಿ ಪ್ರೇಕ್ಷಕರನ್ನು ಹಿಡಿದಿಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಸ್ರೀ ಸಮಾನತಾವಾದಿಗಳಂತೆ,ಮಹಿಳೆಯರಿಗೂ ಸ್ವಾತಂತ್ರ್ಯ ನೀಡಿದ್ದೇವೆ ಎಂಬಂತೆ ವರ್ತಿಸುವ ನಾವುಗಳು ಎಡುವುವುದು ಎಲ್ಲಿ? ದೈಹಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳು ಮಾತ್ರ ಸ್ರೀ ಶೋಷಣೆಯಲ್ಲ,ಸ್ರೀಯರ ಬಗ್ಗೆ ನಾವಾಡುವ ಹಗುರವಾದ ಮಾತುಗಳು,ಮೂದಲಿಕೆಯ ನೋಟ ಕೂಡ ಸ್ರೀ ಶೋಷಣೆಯೆ? ಪುರುಷರ ಸಣ್ಣ ಸಣ್ಣ ಕ್ರಿಯೆ,ಪ್ರತಿಕ್ರಿಯೆಗಳು ಮಹಿಳೆಯರ ಸೂಕ್ಷ್ಮ ಮನಸುಗಳನ್ನು ಎಷ್ಟು ಘಾಸಿಗೊಳಿಸಬಲ್ಲವು? ಹೀಗೆ ಅತೀ ಸೂಕ್ಷ್ಮ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಚಿತ್ರ ಅಮ್ಮಚ್ಚಿ.ಪ್ರತಿಯೊಬ್ಬರನ್ನೂ ಆ ನಿಟ್ಟಿನಲ್ಲಿ ಜಾಗೃತಗೊಳಿಸುವ ಚಿತ್ರ ಅಮ್ಮಚ್ಚಿ.ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ “ಅಮ್ಮಚ್ಚಿಯೆಂಬ ನೆನಪು.”
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.