ಕರ್ನಾಟಕದಲ್ಲಿ ನವೆಂಬರ್ 1 ರಿಂದ ಸಾರ್ವತ್ರಿಕ ಉಚಿತ ಆರೋಗ್ಯ ಸೇವೆ ಜಾರಿ.
ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸರ್ಕಾರದ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ, ರಾಜೀವ ಆರೋಗ್ಯ ಭಾಗ್ಯ, ಯಶಸ್ವಿನಿ, ಜ್ಯೋತಿ ಸಂಜೀವಿನಿ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಮತ್ತು ರಾಷ್ಟ್ರೀಯ ಭೀಮಾ ಸಾಸ್ಥ್ಯ ಯೋಜನೆ ಮೊದಲಾದ ಯೋಜನೆಗಳು ಒಟ್ಟುಗೂಡಿಸಿ ಹೊಸ ಯೋಜನೆಯೊಂದನ್ನು ಒಟ್ಟು 869.4 ಕೋಟಿ ವೆಚ್ಚದಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ನೀಡಲು ಕರ್ನಾಟಕ ಸರ್ಕಾರ ತಯಾರಿ ನಡೆಸಿದೆ.
ಸಾರ್ವತ್ರಿಕ ಅಥವಾ ಸಂಪೂರ್ಣ ಆರೋಗ್ಯ ಕವಚ ಯೋಜನೆ ಎಂದರೇನು?
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಔಷದಿ ಮತ್ತು ಪ್ರಯೋಗಾಲಯಗಳು, ಪ್ರಾಥಮಿಕ, ಮಧ್ಯಮ ಮತ್ತು ಉನ್ನತ ಆರೋಗ್ಯ ವಿಧಾನ ಹೊಂದಿರುವ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆರೋಗ್ಯ ಕೇಂದ್ರಗಳು ಮತ್ತು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಆಯಾಯ ಚಿಕಿತ್ಸೆಗಳಿಗೆ ನಿರ್ಧರಿತ ದರದ ಪ್ಯಾಕೇಜುಗಳ ಪ್ರಕಾರ ಚಿಕಿತ್ಸಾ ವೆಚ್ಚ ನೀಡಿ ಉಚಿತವಾಗಿ ಆರೋಗ್ಯ– ಭಾಗ್ಯ ಒದಗಿಸುವ ಯೋಜನೆ.
ಈ ಯೋಜನೆಗೆ ಯಾವ ವರ್ಗದ ಜನರು ಫಲಾನುಭವಿಗಳಾಗಬಹುದು?
ಈ ಯೋಜನೆಗೆ ಫಲಾನುಭವಿಗಳಾಗಲು 2 ವರ್ಗಗಳಾಗಿ ವಿಂಗಡಿಸಿದ್ದು ಮೊದಲ ಪ್ರಾಶಸ್ತ್ಯದ ವರ್ಗವನ್ನು A ವರ್ಗವೆಂದು ಗುರುತಿಲಾಗುತ್ತದೆ.
A ವರ್ಗ: ರೈತರು, ಬಡ ಕುಟುಂಬಗಳು, ಅಸಂಘಟಿತ ಕಾರ್ಮಿಕರು, SC/ST ಸದಸ್ಯರು, ಸಹಕಾರಿ ಸಂಘದ ಎಲ್ಲ ಸದಸ್ಯರು, ಸರ್ಕಾರಿ ಉದ್ಯೋಗಿಗಳು, ಪತ್ರಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳು.
ಈ ಮೇಲಿನ A ವರ್ಗದಲ್ಲಿ ಬರುವ ಸದಸ್ಯರು ಯಾವುದೇ ಶುಲ್ಕ ಪಾವತಿಸದೇ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಸಾರ್ವತ್ರಿಕ ಆರೋಗ್ಯ ಕಾರ್ಡ್ ಪಡೆಯುತ್ತಾರೆ.
B ವರ್ಗ: A ವರ್ಗ ಹೊರತುಪಡಿಸಿ ಉಳಿದ ವ್ಯಕ್ತಿಗಳು B ವರ್ಗಕ್ಕೆ ಸೇರುತ್ತಾರೆ.
B ವರ್ಗದವರು ಯೋಜನೆಯ ಸದಸ್ಯರಾಗಲು ಬಯಸಿದರೆ online ಮೂಲಕ ತಮ್ಮ ಆಧಾರ್ ಕಾರ್ಡ್ ವಿವರ ನೀಡಿ ಸಾರ್ವತ್ರಿಕ ಆರೋಗ್ಯ ಕಾರ್ಡ್ ಪಡೆಯಬಹುದು. ಇವರು ಪ್ರತಿ ವರ್ಷಕ್ಕೆ ಶುಲ್ಕ ನೀಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ಸದಸ್ಯರಿಗೆ ತಲಾ 300 ರೂಪಾಯಿ ಮತ್ತು ನಗರ ಪ್ರದೇಶದ ಸದಸ್ಯರಿಗೆ 700 ರೂಪಾಯಿ ವಿಧಿಸಲಾಗುತ್ತದೆ.
ಯಾವ್ಯಾವ ಚಿಕಿತ್ಸೆಗಳು ಮತ್ತು ಸೇವೆಗಳು ಲಭ್ಯವಿದೆ? ಈ ಯೋಜನೆಯ ಉಪಯೋಗಗಳೇನು?
- A ಮತ್ತು B ವರ್ಗದ ಸದಸ್ಯರಿಗೆ ಎಲ್ಲ ಪ್ರಾಥಮಿಕ, ಮಧ್ಯಮ ಮತ್ತು ತುರ್ತು ವೆಚ್ಚಗಳು ಉಚಿತವಾಗಿರುತ್ತದೆ.
- ಪ್ರಾಥಮಿಕ ಮತ್ತು ಮಧ್ಯಮ ಚಿಕಿತ್ಸೆಗೆ ಸರಾಸರಿ 25,000 ರೂಪಾಯಿ ಸುರಕ್ಷೆ ನೀಡುವ ಭರವಸೆ ನೀಡಲಾಗುತ್ತದೆ. ತುರ್ತು ಚಿಕಿತ್ಸೆಗಳಿಗೆ 1.5 ಲಕ್ಷಗಳವರೆಗೆ ಸುರಕ್ಷೆ ಭರವಸೆ ನೀಡಲಾಗುತ್ತದೆ. ಚಿಕಿತ್ಸಾ ವೆಚ್ಚಗಳು ಪ್ಯಾಕೇಜು ದರದ ಮೇಲೆ ಅವಲಂಭಿಸಿರುತ್ತದೆ.
- ತುರ್ತು ಆರೋಗ್ಯ ಚಿಕಿತ್ಸೆಗಳಾದ ಆಕಸ್ಮಿಕ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ/ ಶಸ್ತ್ರ ಚಿಕಿತ್ಸೆ ಯನ್ನು ಹತ್ತಿರದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು. 48 ಗಂಟೆಗಳ ನಿಗಾ ದ ನಂತರ ಹೆಚ್ಚಿನ ಚಿಕಿತ್ಸೆ ಅಥವಾ ಮುಂದಿನ ಆರೈಕೆಗೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಬಹುದು. “ ಮೊದಲು ಚಿಕಿತ್ಸೆ, ನಂತರ ಪಾವತಿ “ ಎಂಬ ತತ್ವದ ಮೇಲೆ ಆಸ್ಪತ್ರೆಗಳು ಸೇವೆ ನೀಡುವ ಕಾನೂನನ್ನು ಈ ಯೋಜನೆಯ ಮೂಲಕ ಅಳವಡಿಸಲಾಗುತ್ತದೆ.
- 108 ಮತ್ತು 104 ಸಹಾಯವಾಣಿಗಳು ಉಚಿತ ರೋಗ ಪರೀಕ್ಷೆ, ಉಚಿತ ಔಷಧಿ ಮತ್ತು ಡಯಾಲಿಸಿಸ್, ಉಚಿತ ರಕ್ತ ಶೇಖರಣಾ ಘಟಕ, ಬಿಳಿರಕ್ತಕಣಗಳು ಮತ್ತು ಇತರ ಕಣಗಳ ಬಗ್ಗೆ ಮಾಹಿತಿ ಮತ್ತು ಉಚಿತ ಉನ್ನತ ಸೌಲಭ್ಯಗಳನ್ನು ನೀಡುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಉಚಿತ ಮಾಹಿತಿ ನೀಡುವುದರ ಜೊತೆಗೆ ಅಗತ್ಯ ನೆರವು ನೀಡುತ್ತದೆ.
- ಈಗ ಜಾರಿಯಲ್ಲಿರುವ ಎಲ್ಲ ಆರೋಗ್ಯ ವಿಮೆ ಸುರಕ್ಷಾ ಯೋಜನೆಗಳು ಒಂದೇ ಕಾರ್ಡ್ ನಲ್ಲಿ ಸಿಗಲಿದೆ.
- ರಾಜ್ಯದ 1.4 ಕೋಟಿ ಕುಟುಂಬಗಳು ಈ ಯೋಜನೆಯ ಪಲಾನುಭವಿಗಳಾಗುತ್ತಾರೆ. ಮತ್ತು ಉಚಿತ ಆರೋಗ್ಯ ಸುರಕ್ಷೆ ಪಡೆಯುತ್ತಾರೆ.
ಈ ಯೋಜನೆಯು ಆರೋಗ್ಯ ವಿಮಾ ಕಂಪೆನಿಗಳ ಸಹಭಾಗಿತ್ವದೊಂದಿಗೆ ಆರಂಭಿಸಲಾಗುತ್ತದೆ. A ವರ್ಗದ ಸದಸ್ಯರ ಆರೋಗ್ಯ ವಿಮೆ ಪ್ರೀಮಿಯಂನ್ನು ಸಂಪೂರ್ಣವಾಗಿ ಸರ್ಕಾರಗಳು ಭರಿಸುತ್ತವೆ. B ವರ್ಗದ ಸದಸ್ಯರ ಪ್ರೀಮಿಯಂನ 30% ನ್ನು ಸರ್ಕಾರ ಭರಿಸುತ್ತದೆ. ಈ ಯೋಜನೆ ಉತ್ತಮ ಆರೋಗ್ಯ ಕವಚ ಯೋಜನೆಯಾಗಿದ್ದು ಸರ್ಕಾರ ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿಯದೇ ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ರಾಜ್ಯದ ಎಲ್ಲ ಬಡ – ಮಧ್ಯಮ ವರ್ಗಕ್ಕೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.
ಪೂರಕ ಮಾಹಿತಿ: ಗೂಗಲ್
✍ : ಭಂಡಾರಿ ವಾರ್ತಾ ತಂಡ