ಪನಪಿಲ ಎಂಬ ಹಳ್ಳಿಯು ಕಾರ್ಕಳ ತಾಲೂಕು ಒಳಗೆ ಇತ್ತು. ಮೂಡಬಿದ್ರೆಯೂ ಕಾರ್ಕಳ ತಾಲೂಕಿಗೆ ಸೇರಿತ್ತು. 2019 ರಲ್ಲಿ ಮೂಡಬಿದ್ರೆಯನ್ನು ಹೊಸ ತಾಲೂಕು ಎಂದು ಘೋಷಿಸಲಾಗುತ್ತದೆ. ಇದರ ಪರಿಣಾಮವಾಗಿ ಈ ಪನಪಿಲ ಎಂಬ ಗ್ರಾಮವು ಕಾರ್ಕಳದಿಂದ ಕೈತಪ್ಪಿ ಮೂಡಬಿದ್ರೆ ತಾಲೂಕಿಗೆ ಸೇರಿ ಕೊಂಡಿತು.
“ಪನಪಿಲ್ದ ಅರಮನೆ” (ಪನಪಿಲದ ಅರಮನೆ)ಯು ಈ ಊರಿನ ಕೇಂದ್ರೀಯ ಬಿಂದು. ಈ ಅರಮನೆಯ ಹೆಸರಿನಿಂದಲೇ ಈ ಊರಿಗೆ “ಪನಪಿಲ” ಎಂಬ ಹೆಸರು ಬಂದಿರುತ್ತದೆ. ಈ ಅರಮನೆಗೂ ಈ ಹೆಸರು ಬರಲು ಕಾರಣ ಇದ್ದೇ ಇರುತ್ತದೆ. ಈ ಅರಮನೆಯ ಭೂಮಿ ಅಥವಾ ಜಮೀನು ಒಳಗೆ ಒಂದು “ಪನಿ ಪಲ್ಲ” ಇದೆ. ಈ ಪನಿಪಲ್ಲ ಇದ್ದ ಜಮೀನಿನಲ್ಲಿ ಅರಮನೆ ನಿರ್ಮಾಣ ಮಾಡುತ್ತಾರೆ. ಪನಿ+ಪಲ್ಲ+ಇಲ್ಲ್ =ಪನಿಪಿಲ್ಲ್ ಎಂದರು. ಅಂದರೆ ಹನಿ+ಹಳ್ಳ+ಮನೆ=ಹನಿಗಳ ಹಳ್ಳದ ಮನೆ ಎಂದರು.
ತುಲುನಾಡ್ ಕಟ್ಟುವಾಗ ಅಂದರೆ ಇಲ್ಲಿ ಹೊಲ ಗದ್ದೆ, ಕೊಳ(ಪಟ್ಲ)ಕ್ಕೆ ಗದ್ದೆಗಳ ರಚನೆ ನಿರ್ಮಾಣ ಆದಾಗ ಪ್ರತಿಯೊಂದು ಜಮೀನುಗಳನ್ನು ಗುರುತಿಸಲು ಅದಕ್ಕೆ ಒಂದು ಹೆಸರನ್ನು ಇಟ್ಟುಕೊಂಡು ಮನಸ್ಸಿನ ಒಳಗೆ ರೆಕಾರ್ಡ್ ಮಾಡಿ ಕೊಂಡಿದ್ದರು. ಆ ಹೆಸರು ಅಲ್ಲಿನ ಹಿನ್ನೆಲೆಯನ್ನು ಹಿಡಿದು ಕೊಂಡಿತ್ತು. ಆ ಹಿನ್ನೆಲೆ ಎಂದರೆ ಹಿಂದಿನ ನೆಲೆಯನ್ನು ಅರ್ಥೈಸಿಕೊಂಡು ಬಂದಿರುವ ಪ್ರಾಕೃತಿಕ ಸಾಕ್ಷಿ. ಈ ಸಾಕ್ಷಿಗಳು ಎಂದೂ ನಾಶವಾಗಿ ಹೋಗುವುದಿಲ್ಲ. ಅಂತಹ ಸಾಕ್ಷಿಗಳನ್ನು ಮಾನವನೇ ಕಠಿಣವಾದ ಶ್ರಮವಹಿಸಿ ನಾಶಮಾಡಲು ಬರಬಹುದು. ಆದರೆ ಪ್ರಕೃತಿಯು ಅದನ್ನು ಕಾಪಾಡಿಕೊಂಡು ಬಂದಿರುತ್ತದೆ. ಅದರಂತೆ “ಪನಪಿಲ್” ಅರಮನೆಯಲ್ಲಿನ ಜಮೀನಿನಲ್ಲಿ ಒಂದು “ಪಲ್ಲ”(ಹಳ್ಳ) ಇದೆ. ಇದು ಸಾಮಾನ್ಯ ಪಲ್ಲವಲ್ಲ. ಪನಿ ಪನಿ ಕೂಡುದು ಸೇರ್ದ್ ಆಯಿನ ಪಲ್ಲ(ಹನಿ ಹನಿ ಕೂಡಿಸೇರಿದ ಹಳ್ಳ)ನೇ ಪನಿ ಪಲ್ಲ ಆಯಿತು. ಕ್ರಮೇಣ ಪನಪಿಲ್ಲ್ – ಪನಪಿಲ್-ಪನಪಿಲ ಆಯಿತು. ತುಲು ಭಾಷೆಯಲ್ಲಿ ಹನಿ ಹನಿ ಮಳೆಗೆ ಪನಿಪನಿ|ಪನಪನ ಬರ್ಸ (ಮಳೆ)ಎನ್ನುವುದು ಇದೆ. ಈ ಪಲ್ಲ ಪವಿತ್ರ ಮತ್ತು ಅರ್ಥಪೂರ್ಣ.
(ಅರಮನೆಯ ಮುಖದ್ವಾರ.)
ಆ ಕಾಲದಲ್ಲಿ ಮೊದಲಾಗಿ ಜಮೀನಿಗೆ ಹೆಸರುಗಳನ್ನು ಇಡುತ್ತಿದ್ದರು. ನಂತರದಲ್ಲಿ ಆ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿ ಆ ಮನೆಗೆ ಜಮೀನಿನ ಹೆಸರನ್ನು ಇಡುತ್ತಿದ್ದರು. ಉದಾಹರಣೆಗೆ: ಜಮೀನಿನಲ್ಲಿ ಹಲವು ಬಗೆಯ ಹಕ್ಕಿಗಳು ಗೂಡುಗಳನ್ನು ಕಟ್ಟಿ ಬದುಕುವುದು ಕಂಡು “ಪಕ್ಕಿಲು ಅವುಲು”(ಅಲ್ಲಿ ಹಕ್ಕಿಗಳು)ಎಂದಿದ್ದಾರೆ . ಆ ಜಮೀನಿನಲ್ಲಿ ಮನೆ ನಿರ್ಮಾಣ ಆದಾಗ ಆ ಮನೆಗೆ “ಪಕ್ಕಲವುಲು”ಎಂದರು. ಇದೇ ಹೆಸರಲ್ಲಿ ,ಇದೇ ಜಮೀನಿನಲ್ಲಿ, ಇದೇ ಮನೆಯಲ್ಲಿ “ಪಕ್ಕಲ”ಎಂಬ ವಂಶ ವೇ ಹುಟ್ಟುತ್ತದೆ. ಅದೇ ರೀತಿಯಲ್ಲಿ ಜಮೀನಿನಲ್ಲಿ ಸೂಬು(ಸೂಂಬು)ಗಳು,ಬಾಂಗ್(ಬಾಯಿ ತೆರೆದ ಧರೆ ) ಗಳನ್ನು ಕಂಡಿದ್ದಾರೆ. ಇವುಗಳನ್ನು ಪ್ರಕೃತಿಯೇ ಸೃಷ್ಟಿ ಮಾಡಿರುವುದು. ಈಗಲೂ ನೋಡಬಹುದು. ನಂತರದ
ಲ್ಲಿ ಈ ಜಮೀನಿನಲ್ಲಿ ನಿರ್ಮಾಣ ಮಾಡಿದ ಮನೆಗೆ “ಸುಬ್ಬಂಗವುಲು”(ಅಲ್ಲಿದೆ ಸೂಂಬುಗಳು,ಬಾಂಗ್ ಗಳು)ಎಂದು ಮನದೊಳಗೆ ರೆಕಾರ್ಡಿಂಗ್ ಮಾಡಿದ್ದರು. ಕ್ರಮೇಣವಾಗಿ “ಪಕ್ಕಲವುಲು” ಎಂಬ ಹೆಸರು ಸಣ್ಣದಾಗಿ “ಪಕ್ಕಲ” ಮನೆ ಎಂದಾದರೆ “ಸುಬ್ಬಂಗವುಲು” ಎಂಬ ಹೆಸರು”ಸುಬ್ಬಂಗ” ಮನೆ ಎಂದಾಗಿದೆ.
“ಕೆದು”(ಸಣ್ಣ ಹಳ್ಳ)ಇದ್ದ ಜಮೀನು|ಮನೆಗೆ “ಕೆದಿಲ” ಎಂದರು. ಅಲೆಯುತ್ತಾ ಇರುವ ಅಲೆ(ಬಿಳಿ)ಹಕ್ಕಿಗಳು ಇರುವ ಜಮೀನು|ಮನೆಗೆ “ಅಲೆಕ್ಕಿ”ಎಂದರೆ ದೊಡ್ಡ ಜಾತಿಯ ಹಕ್ಕಿ(ಗಿಡುಗ,ಬಾವಲಿ, ಗರುಡ,ಗೂಬೆ ಇತ್ಯಾದಿ)ಹಕ್ಕಿಗಳು ಇರುವ ಜಮೀನು|ಮನೆಗೆ “ದೊಲೆಕ್ಕಿ-ದೊಲ್ಲೆಕ್ಕಿ”ಎಂದಿದ್ದಾರೆ.ಇಲ್ಲಿ ದೋಲೆ ಹಕ್ಕಿ ಎಂದರೆ ದೋಲು (ದೊಡ್ಡ ಗಾತ್ರದ)ಹಕ್ಕಿಗಳು ಬದುಕು ತಿದ್ದ ಜಮೀನು. ಇವುಗಳು ಗುಡ್ಡಗಳ ಪಕ್ಕದಲ್ಲಿ ಎತ್ತರದ ಜಮೀನಿನಲ್ಲಿ ಇರುವುದು ಇತ್ತು.
ಹನಿ ಹನಿ ಕೂಡಿ ಹಳ್ಳ (ಪನಿ ಪನಿ ಕೂಡುದು ಪಲ್ಲ) ಎಂಬಂತೆ ಇಲ್ಲಿನ ಪಲ್ಲ ಹಿಂದಿನಿಂದಲೂ ನೆಲೆಯಾಗಿದ್ದಾ ಗಿದೆ ಎಂದು ಇಲ್ಲಿನ ಪ್ರಾಕೃತಿಕ ಲಕ್ಷಣಗಳು ಹೇಳುತ್ತದೆ. ಈ ಪಲ್ಲವು ಬಹಳಷ್ಟು ವಿಶಾಲವಾಗಿದೆ. ಈ ಪಲ್ಲವು ಬರೇ ಆಕಾಶದಿಂದ ಬೀಳುವ ಮಳೆ ಹನಿಗಳಿಂದ ಕೂಡಿ ಪಲ್ಲ ಆಗಿಲ್ಲ.ಭೂಮಿಯಿಂದಲೂ ಒರತೆ|ಒಸರುಗಳ ಹನಿಗಳೂ ಸೇರಿ ಪಲ್ಲವಾಗಿದೆ.ಮಳೆ ಹನಿಗಳು ಬಿದ್ದಾಗ ಗುಳ್ಳೆಗಳು ಹೇಗೆ ಉದ್ಭವಿಸುವುದೋ ಅದೇ ರೀತಿಯ ಲ್ಲಿ ಒಸರು ಜಿನುಗುವ ದೃಶ್ಯದ ಗುಳ್ಳೆಗಳನ್ನು ಈ ಪಲ್ಲದ ಲ್ಲಿ ನಿರಂತರವಾಗಿ ವರ್ಷ ಪೂರ್ತಿ ಕಂಡಿದ್ದಾರೆ. ಭೂಮಿ ಯ ಅಡಿಯಿಂದ ಊಜು(OOZE:ತುಲು-ಆಂಗ್ಲ)ನ ಅಂದರೆ ಸ್ರವಿಸುವ, ಸೋರುವ, ತೊಟ್ಟಿಕ್ಕುವ ಹಿನ್ನೆಲೆ ಇಲ್ಲಿ ಕಂಡಿದ್ದಾರೆ. ಈಗಲೂ ಈ ಪಲ್ಲದಲ್ಲಿ ವರ್ಷ ಇಡೀ ಒಸರು ನೀರು ಗುಳ್ಳೆಗಳ ರೂಪದಲ್ಲಿ ಮೇಲೆ ಬಂದು ಅದೃಶ್ಯವಾಗುತ್ತದೆ. ಆಕಾಶದಿಂದ ಮಳೆ ಹನಿಗಳು ಉದುರುತ್ತಿವೆಯೋ ಎಂದು ಭಾಸವಾಗುತ್ತದೆ.
(ಪನಿಪಲ್ಲ)
ಈ ಪಲ್ಲಕ್ಕೆ ಬರೇ ಆಕಾಶದ ಮೇಲಿಂದ ಬೀಳುವ ಹನಿಗಳು ಮತ್ತು ಭೂಮಿಯ ಅಡಿಯಿಂದ ತೊಟ್ಟಿಕ್ಕುವ ಹನಿಗಳು ಅಲ್ಲದೆ ಈ ಜಮೀನಿನಲ್ಲಿ ಬಿದ್ದ ಎಲ್ಲಾ ಮಳೆ ಹನಿಗಳು ಒಟ್ಟಾಗಿ ಹರಿದು ಈ ಪಲ್ಲಕ್ಕೆ ಬಂದು ಸೇರುತ್ತದೆ. ನಂತರದಲ್ಲಿ ಇಲ್ಲಿಂದಲೇ ನೀರು ಹರಿದು ಕೊಳಕ್ಕೆ ಗದ್ದೆಗಳಿಗೆ ನೀರು ಉಣಿಸಿ ಕಾಲುವೆ, ನಾಲೆ (ಹೊಳೆ)ಮುಖಾಂತರ ಕಡಲು ಸೇರುತ್ತದೆ.
ಸುಮಾರು ಒಂದೂವರೆ ಎಕ್ರೆ ವಿಸ್ತಾರದಲ್ಲಿ ಇರುವ ಅರಮನೆಯ, ನಾಗಬನಗಳ, ಅರಮನೆಯಲ್ಲೇ ಇರುವ ಬಸದಿಯ,ಲೆಕ್ಕೆಸಿರಿ-ಮೈ ಸೈಂದಾಯ, ಗುಲಿಗ-ಪಂಜು ರ್ಲಿ,ಜುಮಾದಿ,ಕಲ್ಕುಟ್ಟಿ-ಕಲ್ಕುಡ ಇತ್ಯಾದಿ ಇತ್ಯಾದಿ ಬೂತೊಗಳ ಸಾನಗಳ, ಅರಮನೆಯ ಶಾಲೆಯ ಮೇಲೆ ಬೀಳುವ ಮಳೆ ಹನಿಗಳು ಹರಿದು ಈ ಪವಿತ್ರ ಪಲ್ಲಕ್ಕೆ ಸೇರುತ್ತದೆ. ಎಲ್ಲಾ ಬಲು ವಿಸ್ತಾರವಾದ ಮಜಲ್, ಬೊಟ್ಟು ಎಂಬ ಗದ್ದೆಗಳ ಹೆಚ್ಚುವರಿ ನೀರು ಈ ಪಲ್ಲಕ್ಕೆ ಹರಿಯಬೇಕು. ಅಲ್ಲದೆ ಬೆಟ್ಟದ ಮೇಲೆ ನಿರ್ಮಾಣ ಮಾಡಿದ್ದ 5-6 ಎಕ್ರೆ ವಿಸ್ತಾರದ ಕೆಂಚರಟ್ಟ ಅಣೆಕಟ್ಟದ ಹೆಚ್ಚುವರಿ ನೀರು ಈ ಪಲ್ಲಕ್ಕೇನೇ ಹರಿಯಬೇಕು. ಒಟ್ಟಿನಲ್ಲಿ ಎಲ್ಲಾ ದಿಕ್ಕುಗಳಿಂದ ಬಿದ್ದ ಹನಿ ಹನಿ ನೀರು ಸೇರಿ ಈ ಪಲ್ಲಕ್ಕೆ ಹರಿಯುತ್ತದೆ. ಹನಿ ಹನಿ ಗೂಡಿ ಹಳ್ಳಆಗಿದೆ ಎಂಬುವುದಕ್ಕೆ ಯಾವುದೇ ಸಂಶಯವಿಲ್ಲ.
(ಧಾನ್ಯ ಅಳೆಯುವ ಪಲ್ಲ)
ಹನಿ ಹನಿ ಕೂಡಿ ಹಳ್ಳ .ತೆನೆ ತೆನೆ ಕೂಡಿ ಪಲ್ಲ(ಬಲ್ಲ) ಎಂಬ ಗಾದೆ ಇದೆ. ಈ ಗಾದೆ ಪನಪಿಲದ ಅರಮನೆಗೆ ಅನ್ವಯಿಸುತ್ತದೆ. ಹನಿ ಹನಿ ನೀರು ಸೇರಿ ಬೃಹತ್ ಪಲ್ಲ ಆದ ರೀತಿಯಲ್ಲಿ ತೆನೆ ತೆನೆ ಕೂಡಿ ಪಲ್ಲ(ಬಲ್ಲ)ವೂ ಇಲ್ಲಿದೆ. ಇಲ್ಲೊಂದು ಬೃಹತ್ ಬಲು ದೊಡ್ಡ ವಿಸ್ತಾರವಾದ ಭತ್ತ ಬೆಳೆಯುವ ಮಜಲ್ ಗದ್ದೆ ಇದೆ. ಅದನ್ನು ಅರಮನೆ ದ ಬಾಕ್ಯಾರ್ ಅಥವಾ ಪಟ್ಟದ ಬಾಕ್ಯಾರ್ ಎಂದು ಕರೆಯುತ್ತಾರೆ. ಈ ಗದ್ದೆಗೆ ಬಿತ್ತಲು 12 ಮುಡಿ ಅಂದರೆ ಸುಮಾರು 6-7 ಕ್ವಿಂಟಾಲ್ ಬೀಜ ಬೇಕಾಗುತ್ತದೆ. ಇದರ ಗಾತ್ರದ ಇನ್ನೊಂದು ಗದ್ದೆ ಅಂಬೊಡಿದ ಬಾಕ್ಯಾರ್ ಇಲ್ಲಿದೆ. “ಕೊಳ”(ಪಟ್ಲ ಪ್ರದೇಶವನ್ನು ಗದ್ದೆಯನ್ನಾಗಿ ಪರಿವರ್ತನೆ ಮಾಡಿರುವುದು)ಕ್ಕೆ ಗದ್ದೆಗಳ ಸಾಲುಗಳು ಇವೆ. ಒಂದು ಕಾಲದಲ್ಲಿ ಇಡೀ ಪನಪಿಲ ಊರು ಅಲ್ಲದೆ ಪಕ್ಕದ ಹಳ್ಳಿಗಳಿಂದ ಗೇಣಿದಾರರು ಈ ಅರಮನೆಗೆ ಗೇಣಿ ಕೊಡುವುದು ಇತ್ತು. ಸಾವಿರಾರು ಮುಡಿ ಅಕ್ಕಿಯ ಧನಿಕರು (ಸಾವಿರ ಮುಡಿ ಉಸ್ಟೊಲಿದಾರರು) ಆಗಿದ್ದರು ಇವರು. ಭತ್ತವನ್ನು ಅಳೆಯುವ “ಪಲ್ಲ”ಎಂಬ ಧಾನ್ಯ ಅಳೆಯುವ ಮಾನ ಇಲ್ಲಿದೆ. ಒಂದು ಪಲ್ಲ ಎಂದರೆ ನೂರು ಸೇರು. ಈ ಪಲ್ಲ ಎಂಬ ಮಾನವನ್ನು ಕಲ್ಲಿನಿಂದ
ಮಾಡಲಾಗಿದೆ. ಇದಲ್ಲದೆ ನೂರು ಮುಡಿ ಭತ್ತ ಸಂಗ್ರಹಿ ಸಿಡುವ ಮರದ “ಪನ”ತ(Grains Storage)ಈ ಅರಮನೆಯಲ್ಲಿ ಇದೆ. ಒಂದು ಸಾವಿರ ಕ್ಕಿಂತಲೂ ಹೆಚ್ಚು ಅಕ್ಕಿ ಮುಡಿಗಳನ್ನು ಸಂಗ್ರಹಿಸಿಡುವ ಗಟ್ಟಿಮುಟ್ಟಾದ ಅಟ್ಟ ಇಲ್ಲಿದೆ.
ಪನಿಪಲ್ಲ ಅರಮನೆಯ ಹೆಸರು ಊರಿಗೆ “ಪನಪಿಲ್”, “ಪನಪಿಲ” ಎಂದಾಯಿತು. ಹನಿ ಹನಿಗೂಡಿ ಹಳ್ಳ , ತೆನೆ ತೆನೆಗೂಡಿ ಪಲ್ಲ ಎಂಬ ಗಾದೆಯು ಸತ್ಯ ಎಂಬುದನ್ನು ಈ ಪನಪಿಲದ ಅರಮನೆಯು ಎತ್ತಿ ಹಿಡಿದಿದೆ. ಪವಿತ್ರತೆ ಯನ್ನು ,ಸತ್ಯತೆಯನ್ನು,ಪ್ರತ್ಯಕ್ಷತೆಯನ್ನು ಈ ಅರಮನೆ ಯು ಉಳಿಸಿಕೊಂಡಿದೆ.
ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)