January 18, 2025
vedaraj
ರಾಸಾಯನಿಕ ಬಣ್ಣಗಳನ್ನು ಬಳಿದು ತಯಾರಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಅವುಗಳನ್ನು ನೀರಿನಲ್ಲಿ ವಿಸರ್ಜಿಸಿ ನೀರಿನಲ್ಲಿ ವಾಸಿಸುವ ಜಲಚರಗಳನ್ನು ಬಲಿಪಡೆದು, ಕುಡಿಯುವ ನೀರಿನ ಬಾವಿಗಳನ್ನು ಕಲುಷಿತಗೊಳಿಸಿ ಆಚರಿಸುವ ಹಬ್ಬಗಳು ಅರ್ಥಹೀನ ಎಂಬುದನ್ನು ಮನಗಂಡ ಬಾಳೆಹೊನ್ನೂರಿನ ವೇದರಾಜ್ ಭಂಡಾರಿಯವರು ಕಳೆದ ಆರು ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿಯನ್ನು ತಾವೇ ಕೈಯಾರೆ ತಯಾರಿಸಿ, ಪ್ರತಿಷ್ಠಾಪಿಸಿ, ಪೂಜಿಸಿ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ವಿನೂತನ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಭತ್ತದ  ಅರಳುಕಾಳುಗಳಿಂದ ಗಣಪನನ್ನು ತಯಾರಿಸಿ ಜನಮನದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 
 
ಬಾಳೆಹೊನ್ನೂರಿನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿರುವ ವೇದರಾಜ್ ಭಂಡಾರಿಯವರು ಆರು ವರ್ಷಗಳ ಹಿಂದೆ ತಮ್ಮ ಮಗ ವೈಷ್ಣವ್ ನ ಇಚ್ಛೆಯಂತೆ ತರಕಾರಿಯಿಂದ ಗಣಪತಿ ಮೂರ್ತಿಯನ್ನು ಯಾಕೆ ತಯಾರಿಸಬಾರದು? ಎಂದು ಆಲೋಚಿಸಿ ಬೀಟ್ರೂಟ್ ನಿಂದ ಗಣಪತಿಯನ್ನು ತಯಾರಿಸಿ ಅದನ್ನು ಪ್ರತಿಷ್ಠಾಪಿಸಿದರು. ಅವರ ಈ ಪ್ರಯತ್ನಕ್ಕೆ ಮನೆಯವರಿಂದ, ಸ್ನೇಹಿತರಿಂದ, ಹಿತೈಷಿಗಳಿಂದ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದ ಸ್ಫೂರ್ತಿಗೊಂಡ ಇವರು ಅಂದಿನಿಂದ ಪ್ರತಿವರ್ಷ ಒಂದೊಂದು ವಿಭಿನ್ನ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಎರಡನೇ ವರ್ಷ ಕ್ಯಾರೆಟ್ ನಿಂದ ಗಣಪತಿ ಮೂರ್ತಿಯನ್ನು ತಯಾರಿಸಿದರು. ಮೂರನೇ ವರ್ಷ ಕೊಬ್ಬರಿ ಮತ್ತು ಬೆಲ್ಲವನ್ನು ಬಳಸಿ ಗಣಪನನ್ನು ಪ್ರತಿಷ್ಠಾಪಿಸಿದರು.ನಾಲ್ಕನೇ ವರ್ಷ ಪೇಪರ್ ಅನ್ನು ಬಳಸಿ ಗಣಪನನ್ನು ತಯಾರಿಸಿ ಪೂಜಿಸಿದರು.ಕಳೆದ ವರ್ಷ ರಾಗಿ ಕಾಳಿನಿಂದ ಗಣಪನನ್ನು ತಯಾರಿಸಿ,ಪ್ರತಿಷ್ಠಾಪಿಸಿ ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆದ ವೇದರಾಜ್ ಭಂಡಾರಿಯವರು ಈ ವರ್ಷ ಭತ್ತದ ಅರಳುಕಾಳುಗಳಿಂದ ಗಣಪನನ್ನು ಮೂಡಿಸಿ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ.ಈ ಬಾರಿಯ ಗಣಪನನ್ನು ತಯಾರಿಸಲು ಒಂದು ಕೆಜಿಯಷ್ಟು ಭತ್ತದ ಅರಳುಕಾಳು, ಮೈದಾ ಹಿಟ್ಟಿನ ಗೋಂದು, ಪೇಪರ್ರು, ಕಾಟನ್ ಬಟ್ಟೆಗಳನ್ನು ಮಾತ್ರ ಬಳಸಿದ್ದಾರೆ. ಅಲಂಕಾರಕ್ಕಾಗಿ ಸ್ವಲ್ಪ ಮಣಿಯಿಂದ ತಯಾರಿಸಿದ ಸರಗಳನ್ನು, ಆಭರಣಗಳನ್ನು ಉಪಯೋಗಿಸಿದ್ದಾರೆ. ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸುವಾಗ ಅಲಂಕಾರಿಕ ವಸ್ತುಗಳನ್ನು ತೆಗೆದು ನೀರಿನಲ್ಲಿ ವಿಸರ್ಜಿಸಿದರೆ ಭತ್ತದ ಅರಳು, ಮೈದಾಹಿಟ್ಟಿನ ಗೋಂದು ಇವುಗಳು ನೀರಿನಲ್ಲಿರುವ ಮೀನುಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ.ಇದರಿಂದ ಯಾವುದೇ ರೀತಿಯ ಜಲಮಾಲಿನ್ಯವಾಗಲಿ, ಪರಿಸರಮಾಲಿನ್ಯವಾಗಲಿ ಉದ್ಭವಿಸುವುದಿಲ್ಲ ಎಂಬುದು ವೇದರಾಜ್ ಭಂಡಾರಿಯವರ ಅಭಿಮತ.ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಮೋದಿಜೀಯವರ “ಸ್ವಚ್ಛ್ ಭಾರತ್” ಅಭಿಯಾನಕ್ಕೆ ಬೆಂಬಲ ಸೂಚಕವಾಗಿ ಗಣಪತಿಯ ಕೈಯಲ್ಲಿ ಸ್ವಚ್ಛ್ ಭಾರತ್ ಅಭಿಯಾನದ ಬಾವುಟವನ್ನು ನೀಡಿ ಸಾರ್ವಜನಿಕರಿಗೆ ಉತ್ತಮ ಸಂದೇಶವನ್ನೂ ನೀಡುವ ಪ್ರಯತ್ನವನ್ನು ಇವರು ಮಾಡುತ್ತಾ ಬಂದಿದ್ದಾರೆ.
 
 
 
 
ನೆಲದ ಮಣ್ಣಿನಲ್ಲಿ ಇತ್ತು ನನ್ನ ಆಕೃತಿ.
ಬಣ್ಣ ಬಣ್ಣದ ಮೂರ್ತಿಗೆ ಒಪ್ಪಲಿಲ್ಲ ಪ್ರಕೃತಿ. 
ವಿಕೃತ ಮಾಡಿದವರಾರು ನನ್ನ ಮೂರುತಿ? 
ಪಳಪಳ ಲೋಹದ ಮೋಹಕೆ ಒಪ್ಪುವುದಿಲ್ಲ ನಮ್ಮ ಸಂಸ್ಕೃತಿ.
ಇನ್ನಾದರೂ ಮಾಡಿ ಪರಿಸರ, ಜಲಚರಗಳ ಜಾಗೃತಿ. 
ಇಂತಿ ನಿಮ್ಮ ಗಣಪತಿ ಗಣಪತಿ…
 
“ವೇದರಾಜ್ ಭಂಡಾರಿ. ಬಾಳೆಹೊನ್ನೂರು”
 
 
ಮೂಲತಃ ಉಡುಪಿಯವರಾದ ದೇವರಾಜ್ ಭಂಡಾರಿ ಮತ್ತು ಸುಶೀಲಾ ಭಂಡಾರಿ ದಂಪತಿಯ ಪುತ್ರರಾದ ಇವರಿಗೆ ಬಾಲ್ಯದಿಂದಲೂ ಕರಕುಶಲ ಕಲೆಯಲ್ಲಿ ತುಂಬಾ ಆಸಕ್ತಿ.ಆದರೆ ಅದಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಮನೆಯಲ್ಲಿ ಕಾಲುಮುರಿದುಕೊಂಡು ಬಿದ್ದಿದ್ದ ಬಡತನ ಅಡ್ಡಿಯಾಗಿತ್ತು.ಹಾಗಾಗಿ ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುವ ಕಾಗದಗಳು,ಖಾಲಿ ಸಿಗರೇಟ್ ಪ್ಯಾಕೆಟ್ ಗಳು,ಅದರೊಳಗಿನ ಜರಿಗಳು,ಬಣ್ಣ ಬಣ್ಣದ ಪಾಲಿಥೀನ್ ಕವರ್ ಗಳು ಇವುಗಳನ್ನೆಲ್ಲಾ ಹೆಕ್ಕಿ ತಂದು,ರಾತ್ರಿಯೆಲ್ಲಾ ಕುಳಿತು ಅವುಗಳಲ್ಲಿ ಏನಾದರೂ ಕಲೆ ಅರಳಿಸಿ,ಪೆನ್ನಿನ ರಿಫೀಲ್ ನಿಂದ ಇಂಕು ತೆಗೆದು ಅದನ್ನೇ ಬಣ್ಣವಾಗಿ ಬಳಸಿ ಚಂದದ ಚಿತ್ತಾರ ರಚಿಸಿ ಮಲಗಿರುವ ಅಮ್ಮನನ್ನು ಎಬ್ಬಿಸಿ ಅವರಿಗೆ ತೋರಿಸಿ ಅವರಿಂದ ಮೆಚ್ಚುಗೆ ಪಡೆದಾಗಲೇ ಇವರಿಗೆ ಸಮಾಧಾನ.ಅಂತಹ ಬಡತನದಲ್ಲೂ ತಂದೆ ತಾಯಿ ನನ್ನಲ್ಲಿದ್ದ ಕಲೆಗೆ ನೀಡಿದ ಪ್ರೋತ್ಸಾಹವೇ ನನ್ನ ಈ ಕ್ರಿಯಾಶೀಲತೆಗೆ ಮೂಲ ಕಾರಣ ಎಂದು ಈಗ ಸ್ವರ್ಗಸ್ಥರಾಗಿರುವ ತಂದೆ ತಾಯಿಯವರನ್ನು ವೇದರಾಜ್ ಭಾವುಕರಾಗಿ ನೆನೆಯುತ್ತಾರೆ.
 
 
ಸಾಮಾಜಿಕ ಜಾಲತಾಣಗಳಲ್ಲಿ,ಸುದ್ದಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ಈಗ ವೇದರಾಜ್ ಭಂಡಾರಿಯವರ ಪರಿಸರಸ್ನೇಹಿ ಗಣಪನದೇ ಸದ್ದು.ಹಾಗಾಗಿ ಭಂಡಾರಿವಾರ್ತೆ ಅವರನ್ನು ಮಾತಿಗೆಳೆದಾಗ….
 
 
“ನಾವು ಚಿಕ್ಕವರಿದ್ದಾಗ ಗಣಪತಿ ಮೂರ್ತಿಗಳನ್ನು ಅವುಗಳ ರಾಸಾಯನಿಕ ಬಣ್ಣ ಕುಡಿಯುವ ನೀರನ್ನು ಮಲಿನಗೊಳಿಸುತ್ತದೆ ಎಂಬ ಕಾರಣ ನೀಡಿ ಬಾವಿಗಳಲ್ಲಿ ವಿಸರ್ಜಿಸಲು ಅಡ್ಡಿಪಡಿಸುತ್ತಿದ್ದರು.ಹಾಗಾಗಿ ಮೊದಲಿನಿಂದಲೂ ಈ ರೀತಿಯ ಪರಿಸರಕ್ಕೆ ಮಾರಕವಲ್ಲದ ಗಣಪತಿಯ ವಿಗ್ರಹ ತಯಾರಿಯ ಚಿಂತನೆ ಇತ್ತು.ಕಳೆದ ಆರು ವರ್ಷಗಳಿಂದ ಆ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇನೆ.ಇದನ್ನು ನೋಡಿ ಹಲವರು,ಹಲವು ಸಂಘ ಸಂಸ್ಥೆಗಳು ಬದಲಾಗಿ ಪರಿಸರಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುತ್ತಿದ್ದಾರೆ.ಅದೇ ನನಗೆ ಸಮಾಧಾನ.ಕಸದಿಂದ ರಸ ಕಲ್ಪನೆಯಲ್ಲಿ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಳಸಿ ಏನಾದರೂ ಕ್ರಿಯೇಟಿವ್ ಆಗಿ ತಯಾರಿಸುವುದು ಹೇಗೆ,ಹಣ್ಣು ತರಕಾರಿಯಿಂದ ವಿವಿಧ ಕಲಾತ್ಮಕ ರಚನೆಗಳನ್ನು ಅರಳಿಸುವುದು ಹೇಗೆ ಎಂಬ ಬಗ್ಗೆ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ.ಬಾಳೇಹೊನ್ನೂರಿನ ಅನಂತ್ಯ ಸ್ಕೂಲ್ ನಲ್ಲಿ ಬೇಸಿಗೆ ಶಿಬಿರದಲ್ಲಿ ಇದೇ ವಿಷಯದ ಕುರಿತು ಮಕ್ಕಳಿಗೆ ಕಾರ್ಯಾಗಾರ ನಡೆಸಿಕೊಂಡು ಬಂದಿದ್ದೇನೆ.
 
 
ಔಷದೀಯ ಸಸ್ಯಗಳ ಆರೈಕೆ,ಸಂಗ್ರಹ ಮಾಡುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಹವ್ಯಾಸವಿದೆ.
ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವೂ ಇದೆ.ಈಗಾಗಲೇ ನನ್ನ ಸಂಗ್ರಹದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಹಳೆಯ ನಾಣ್ಯಗಳು ಇವೆ.
ಪ್ರಾಚೀನ ಕಾಲದ ವಸ್ತುಗಳನ್ನು,ಪಾತ್ರೆಗಳನ್ನು ಸಂಗ್ರಹಿಸುವ ಹವ್ಯಾಸವೂ ಸಹಾ ಇದೆ.ನನ್ನ ಈ ಹವ್ಯಾಸ ಅರಿತ ಮಿತ್ರರು,ಬಂಧುಗಳು ತಮ್ಮ ಬಳಿಯಿರುವ ಪ್ರಾಚೀನ ವಸ್ತುಗಳನ್ನು,ಪಾತ್ರೆಗಳನ್ನು,ದಿನಬಳಕೆಯ ಸಾಮಗ್ರಿಗಳನ್ನು ತಂದುಕೊಟ್ಟು ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ.ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ,ಸಂಶೋದಕರಿಗೆ,ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಒಂದು ಮ್ಯೂಸಿಯಂ ಮಾಡುವ ಉದ್ದೇಶವೂ ನನಗಿದೆ.ಸಾಹಿತ್ಯದ ಬಗ್ಗೆ ಆಸಕ್ತಿಯೂ ಇದ್ದು ಸುಮಾರು ಒಂದು ಸಾವಿರಕ್ಕೂ ಮೇಲ್ಪಟ್ಟು ಕವನಗಳನ್ನು ರಚಿಸಿದ್ದೇನೆ.” ಎಂದು ತಮ್ಮ ಆಸಕ್ತಿಯನ್ನು,ಹವ್ಯಾಸವನ್ನು ಹೊರಹಾಕಿದರು.
 
 
ಭಂಡಾರಿ ಸಮಾಜದ ಅಪರೂಪದ ವ್ಯಕ್ತಿತ್ವದ ಇವರ ಕುಟುಂಬದ ಹಿನ್ನೆಲೆ ಬಗ್ಗೆ  ಕೇಳಿದಾಗ… “ನನ್ನ ತಂದೆ ದೇವರಾಜ್ ಭಂಡಾರಿ ಮೂಲತಃ ಉಡುಪಿಯವರು.ತಾಯಿ ಸುಶೀಲಾ ತೀರ್ಥಹಳ್ಳಿ ತಾಲೂಕಿನ ನಾಬಳ ಗ್ರಾಮದವರು.ಈಗ ಇಬ್ಬರೂ ದೈವಾಧೀನರಾಗಿದ್ದಾರೆ. ನನ್ನ ಅಕ್ಕ ಶ್ರೀಮತಿ ನವೀನಿ ಸುರೇಶ್ ಭಂಡಾರಿ ಕೊಟ್ಟಿಗೆಹಾರದ ನಿಡುವಾಳೆಯಲ್ಲಿ ನೆಲೆಸಿದ್ದರೆ,ತಮ್ಮ ಶ್ರೀ ಸುನಿಲ್ ರಾಜ್ ಭಂಡಾರಿ ಬಾಳೇಹೊನ್ನೂರಿನಲ್ಲಿಯೇ ನೆಲೆಸಿದ್ದಾರೆ.ಮತ್ತು ನನ್ನ ಪತ್ನಿ ಶ್ರೀಮತಿ ಪ್ರಿಯಾಂಕ ಭಂಡಾರಿ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದವರು.ನನಗಿಬ್ಬರು ಮಕ್ಕಳು ಹಿರಿಯವನು ವೈಷ್ಣವ್ ರಾಜ್ ಭಂಡಾರಿ,ಕಿರಿಯವನು ವಿಹಾನ್ ವಿಷ್ಣು ರಾಜ್ ಭಂಡಾರಿ.” ಹೀಗೆಂದು ತಮ್ಮ ಕುಟುಂಬದ ಪರಿಚಯ ಮಾಡಿಕೊಟ್ಟರು.
 
ವೇದರಾಜ್ ಭಂಡಾರಿಯವರು ಒಬ್ಬ ಆಸಕ್ತಿ ಕೆರಳಿಸುವ ವ್ಯಕ್ತಿ.ಹಲವಾರು ಸೃಜನಶೀಲ ಹವ್ಯಾಸಗಳ ಆಗರ.ವಿದ್ಯಾರ್ಥಿಗಳಿಗೆ ಮಾಹಿತಿಯ ಖಣಜ.ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವ ಸ್ನೇಹಜೀವಿ.ಇವರೊಂದಿಗೆ ಮಾತನಾಡಲು,ಅವರ ಹವ್ಯಾಸಗಳ ಬಗ್ಗೆ ಆಸಕ್ತಿ ಇರುವವರು,ನಾಣ್ಯಗಳ,ಪ್ರಾಚೀನ ವಸ್ತುಗಳ ಬಗ್ಗೆ ಮಾಹಿತಿಗಾಗಿ ಅಥವಾ ನಿಮ್ಮ ಊರಿನಲ್ಲಿ ಅವರಿಂದ ಒಂದು ಕರಕುಶಲ ಕಲೆಯ ಕಾರ್ಯಾಗಾರ ಆಯೋಜಿಸಲು ಇಚ್ಚಿಸುವವರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಮೊಬೈಲ್ : 94496 10581 
 
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *