ಸುಮಂತ್ ತಂದೆ ತಾಯಿಗಳ ಮುದ್ದಿನ ಒಬ್ಬನೇ ಮಗ. ಸಂಪತ್ತಿನಲ್ಲೇ ಬೆಳೆದ ಸುಮಂತ್ ಕೆಲವೊಂದು ಚಟಗಳನ್ನು ಮೈಗೂಡಿಸಿಕೊಂಡಿದ್ದ. ಅದರಲ್ಲಿ ಕುಡಿತ ಬಹು ಮುಖ್ಯವಾಗಿತ್ತು. ತಂದೆ ತಾಯಿಗಳ ಮಾತನ್ನು ಲೆಕ್ಕಿಸದೆ ದಿನಾ ಕುಡಿದು ಬರುತ್ತಿದ್ದ. ತಾಯಿ ಕಮಲಮ್ಮನಿಗೆ ಬುದ್ದಿ ಹೇಳಿ ಸಾಕಾಗಿತ್ತು. ರಾತ್ರಿ ಹಗಲು ದೇವರಲ್ಲಿ ಬೇಡುತ್ತಿದ್ದರು.
ಆದಿನ ಸುಮಂತ್ ಆಫೀಸಿನಿಂದ ಬರುವಾಗ ಲೇಟಾಗಿತ್ತು. ಕಂಠ ಪೂರ್ತಿ ಕುಡಿದರೂ ಬಾರಿನಿಂದ ಹೊರ ಬರಲು ಮನಸ್ಸಾಗಲಿಲ್ಲ. ವೈಟರ್ ನ ಒತ್ತಾಯಕ್ಕೆ ಹೊರ ಬಿದ್ದವ ಕಾರಲ್ಲಿ ಕುಳಿತು ಮನೆ ಕಡೆ ಡ್ರೈವ್ ಮಾಡತೊಡಗಿದ. ಕುಡಿದ ಮತ್ತಿನಲ್ಲಿ ಕಾರು ಯದ್ವಾತದ್ವಾ ಓಡತೊಡಗಿತ್ತು. ಸ್ಟಿರೀಯೋ ಜೋರಾಗಿ ಹಾಡುತ್ತಲೇ ಇತ್ತು. ರಸ್ತೆ ದಾಟುತ್ತಿರುವ ಅಜ್ಜಿಗೆ ಗುದ್ದಿ ದೊಡ್ಡ ಸದ್ದಿನೊಂದಿಗೆ ಕಾರು ನಿಸ್ತೇಜವಾಯಿತು. ಆಕ್ಸಿಡೆಂಟ್ ಆದದ್ದು ನೋಡಿ ಸುಮಂತನ ತಲೆಗೇರಿದ್ದ ಮತ್ತು ಜರ್ರನೆ ಇಳಿಯಿತು. ಆದರೆ ಸಮಯ ಮೀರಿತ್ತು.
ಅಜ್ಜಿ ಜೀವನ್ಮರಣದಲ್ಲಿ ಹೋರಾಡುತ್ತಿದ್ದರೂ, ಡಾಕ್ಟ್ರೇ ಅವರ ತಪ್ಪಿಲ್ಲ. ಕಾರು ಹತ್ತಿರ ಬಂದಿದ್ದು ನೋಡದೆ ದಾಟಿದ್ದು ನನ್ನ ತಪ್ಪು. ನನ್ನ ಮೊಮ್ಮಗಳು ಒಬ್ಬಳೆ ಇದ್ದಾಳೆ …. ಅವಳಿಗೆ ಯಾರೂ ಗತಿ ಇಲ್ಲ ಎಂದು ದುಃಖದಲ್ಲೇ ಕೊನೆಯುಸಿರೆಳೆದರು. ಅಜ್ಜಿಯ ಕೊನೆಯ ಮಾತು ಸುಮಂತ್ ನ ಮನದಲಿ ತುಂಬಾ ನೋವುಂಟು ಮಾಡಿತ್ತು. ಜೀವ ಹೋಗುವ ಸಮಯದಲ್ಲೂ ನನ್ನ ತಪ್ಪಿಲ್ಲ ಎಂದು ಹೇಳಿದ ಅವರ ಮಾತಿನಿಂದ ಮನ ಪರಿವರ್ತನೆ ಆಯಿತು.
ಡಾಕ್ಟರ್ ರ ಪ್ರಯತ್ನದಿಂದ ಮೊಮ್ಮಗಳನ್ನು ಪತ್ತೆ ಹಚ್ಚಿದರು. ಅವಳನ್ನು ನೋಡಿ, ವಿಷಯವೆಲ್ಲಾ ತಿಳಿದ ಸುಮಂತ್ ಗೆ …ಛೇ.. ತಂದೆ, ತಾಯಿಯನ್ನು ಕಳೆದುಕೊಂಡ ಆ ಹುಡುಗಿಗೆ ಇದ್ದ ಒಂದು ಆಸರೆಯೂ ನನ್ನಿಂದಾಗಿ ಇಲ್ಲವಾಯಿತು. ಇದಕ್ಕೆ ಕಾರಣ ನನ್ನ ಈ ಹಾಳು ಕುಡಿತ… ಇನ್ನು ಮುಂದೆ ನಾನು ಕುಡಿಯುವುದಿಲ್ಲ. ಆ ಹುಡುಗಿಯನ್ನೇ ಮದುವೆಯಾಗಿ ನನ್ನಿಂದ ಅವಳ ಬಾಳಿಗೆ ಆದ ನಷ್ಟವನ್ನು ತುಂಬುತ್ತೇನೆ ಎಂದು ನಿರ್ಧರಿಸಿದವ, ಎಲ್ಲಾ ಖರ್ಚುಗಳನ್ನು ತಾನೇ ವಹಿಸಿಕೊಂಡು ಅಜ್ಜಿಯ ಕ್ರಿಯಾ ಕರ್ಮಾದಿಗಳನ್ನು ಮಾಡಿದ…….