ಇದು ತುಲುನಾಡಿನ ಪತ್ರಡ್ಡೆ ಅಥವಾ ಪತ್ರಡ್ಯೆಯ ಮೂಲ ಇತಿಹಾಸ.ಪತ್ರಡೆ ಎಂದರೆ ಕೆಸು(ಸೇವು|ತೇವು)ಎಲೆಗಳಿಂದ ತಯಾರಿಸುವ ತುಲುನಾಡಿನ ಒಂದು ತಿಂಡಿ ತಿನಿಸು ಎಂದು ಸರ್ವರೂ ತಿಳಿದಿರುತ್ತಾರೆ.ಕೆಸು ಎಲೆಗಳಿಂದ ಎರಡು ವಿಧದ ತಿನಿಸು ಮಾಡುತ್ತಾರೆ.ಅವುಗಳಿಗೆ ಬೇರೆ ಬೇರೆ ಹೆಸರುಗಳು ಇದ್ದರೂ ಒಂದೇ ಹೆಸರಿನಲ್ಲಿ “ಪತ್ರಡೆ”ಅಥವಾ “ಪತ್ರಡ್ಡೆ” ಅಥವಾ “ಪತ್ರಡ್ಯೆ” ಎಂದು ಉಚ್ಛಾರ ಮಾಡುತ್ತಾರೆ.ಈ ತಿನಿಸಿನ ಮೂಲ ಹೆಸರು 1)ಪತ್ತಡ್ಯೆ ಅಥವಾ ಪತ್ತಡ್ಡೆ ಮತ್ತು 2)ಮುರ್ದಡ್ಯೆ ಅಥವಾ ಮುರ್ದಡ್ಡೆ.
ಪತ್ತಡ್ಡೆ:
ದೊಡ್ಡ ದೊಡ್ಡ ಕೆಸು ಎಲೆಗಳನ್ನು ತಂದು ಅದಕ್ಕೆ ರುಬ್ಬಿದ ಅಕ್ಕಿ ಹಿಟ್ಟನ್ನು ತೆಲುವಾಗಿ ಅಂಟಿಸುವುದು. ತುಲು ಭಾಷೆಯಲ್ಲಿ ಹೇಳುವುದಾದರೆ ತೇವುದ ಇರೆಕ್ಕ್ ಪತ್ತಾವುನು.ಪತ್ತಾವುನು ಎಂದರೆ ಅಂಟಿಸುವುದು ಇಲ್ಲವೇ ಪೇಸ್ಟ್ ಮಾಡುವುದು.ಹೀಗೆ ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ಅಂಟಿಸುವುದು. ಅಂದಾಜು ಪ್ರಕಾರ ಎಷ್ಟು ಎಲೆ ಬೇಕೋ ಅಷ್ಟನ್ನು ಬಳಸಿ ಅಂಟಿಸಿ ಮಡಚಿ ಬೇಯಿಸುವುದು.ಈ ರೀತಿ ಪತ್ತದ್(ಅಂಟಿಸಿ)ಮಾಡುವ ಕೆಸು ಎಲೆಯ ತಿನಸಿಗೆ ಪತ್ತಡ್ಯೆ|ಪತ್ತಡ್ಡೆ ಎಂದು ಕರೆದರು.ಕ್ರಮೇಣ ಈ ಹೆಸರನ್ನು ಪತ್ರಡ್ಡೆ|ಪತ್ರಡೆ ಎಂದು ಕರೆದರು.
ಮುರ್ದಡ್ಡೆ:
ಈ ತಿಂಡಿಗೆ ತಂತಾನೆ ಬೆಳೆದು ನಿಂತ ಸಣ್ಣ ಸಣ್ಣ ಕಾಡು ಕೆಸು ಎಲೆಗಳು ಉತ್ತಮ.ಇಲ್ಲಿ ಈ ಎಲೆಗಳನ್ನು ತಂದು ಹಚ್ಚುವುದು.ಅಂದರೆ ತುಲು ಭಾಷೆಯಲ್ಲಿ ಹೇಳಲು ಹೋದರೆ ಸಣ್ಣ ಸಣ್ಣ ಮಲ್ತ್ “ಮೂರುನು”(ಕತ್ತರಿಸುವು ದು).ಈ ರೀತಿಯಲ್ಲಿ ಹಚ್ಚಿದ ಕೆಸು ಎಲೆಗಳನ್ನು ರುಬ್ಬಿದ ಅಕ್ಕಿ ಹಿಟ್ಟಿಗೆ ಬೆರೆಸುವುದು.ಹೀಗೆ ಬೆರೆಸಿದ ಹಿಟ್ಟನ್ನು ಸಾಗುವಾಣಿ ಎಲೆ|ಬಾಳೆ ಎಲೆಗಳಲ್ಲಿ ಮಡಚಿ ಕಡುಬು ಬೇಯಿಸಿದಂತೆ ಬೇಯಿಸುವುದು.ಬೆಂದ ಮೇಲೆ ಬಿಸಿ ಆರಿದ ಮೇಲೆ ಕಡುಬುಗಳನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಇಡುವುದು.ರುಬ್ಬಿದ ಮಸಾಲೆ(ಅರೆಪ್ಪು)ಗೆ ಬೇಕಾಗುವಷ್ಟು ನೀರು ಹಾಕಿ ಕುದಿಸುವುದು.ಕುದಿಯುವ ಅರೆಪ್ಪುಗೆ ಕಡುಬು ತುಂಡುಗಳನ್ನು ಹಾಕುವುದು.ಅರೆಪ್ಪು ಒಡನೆ ಕಡುಬು ತುಂಡು ಸೇರಿದ ಬಳಿಕ ಅರೆಪ್ಪು ಗಟ್ಟಿ ಆದ ಬಳಿಕ ಸ್ಟೌವು ಆಫ್ ಮಾಡೋದು.ತಣ್ಣಗಾದ ಬಳಿಕ ತಿನ್ನುವುದು.ಮೂರ್ದು(ಕತ್ತರಿಸಿ)ತಯಾರಿಸಿದ ತಿಂಡಿಯೇ|ಅಡ್ಯೆನೇ ಮುರ್ದಡ್ಯೆ ಅಥವಾ ಮುರ್ದಡ್ಡೆ.
(ಮೇಲಿನ ಇಮೇಜುಗಳು ಪತ್ತಡ್ಡೆ ಅಥವಾ ಪತ್ತಡ್ಯೆ. ಅಂದರೆ ಪತ್ತಾದ್ ಮಲ್ಪುನ ಅಡ್ಡೆ ಪತ್ರಡೆ.)
ತುಲುನಾಡಲ್ಲಿ ಹೆಚ್ಚಿನ ಕೊಂಕಣಿಯವರು ಪತ್ತಡ್ಡೆ ಪ್ರಿಯರು.ತುಲುವರು ಹೆಚ್ಚಾಗಿ ಮುರ್ದಡ್ಡೆ ಪ್ರಿಯರು. ಈ ಎರಡೂ ಬಗೆಯ ಈ ಗಟ್ಟಿ|ಕಡುಬುಗಳನ್ನು ಬೆಂದು ಆರಿದ ಬಳಿಕ ಎಣ್ಣೆ ಒಗ್ಗರಣೆ,ಅರೆಪ್ಪುಗಳಲ್ಲಿ ಅವರವರ ರುಚಿಗೆ ಅನುಸಾರವಾಗಿ ಐಟಂ ಮಾಡಿ ತಿನ್ನುತ್ತಾರೆ. ತುಲುನಾಡಿನಾದ್ಯಂತ ಆಟಿ ತಿಂಗಳಲ್ಲಿ ಬಳಸಲೇ ಬೇಕೆಂಬ ಸಂಪ್ರದಾಯ ಇದೆ.ಹೊಸ ಅಕ್ಕಿ (ಪುದ್ದರಿ|ಪುತ್ತರಿ)ಊಟದ ದಿನ ಇದರ ಬಳಕೆ ಎಲ್ಲೆಡೆ ಇದೆ.
(ಮೇಲಿನ ಇಮೇಜುಗಳು ಮುರ್ದಡ್ಡೆ ಅಥವಾ ಮುರ್ದಡ್ಯೆ. ಅಂದರೆ ತೇವು|ಕೆಸು ಮೂರುದು (ತುಂಡರಿಸಿ)ತಯಾರಿಸುವುದು.)
ಪತ್ತಡ್ಡೆಯ ಹೆಸರು ಪತ್ರಡೆ ಆಯಿತು.ಇದರ ಜನನ ಆದಿ ಆರಂಭದಲ್ಲಿ ಆಗಿದ್ದರಿಂದ “ಪತ್ರಡೆ” ಎಂಬ ಹೆಸರು ಹೆಚ್ಚು ಪ್ರಸಿದ್ಧ ಆಯಿತು.”ಮುರ್ದಡ್ಡೆ”ಯು ನಂತರದ ಹೊಸ ಐಟಂ ಆಗಿದ್ದರಿಂದ ತುಲುವರು ಈ ಹೆಸರನ್ನು ಕರೆಯದೆ ಆದಿ ಆರಂಭದ ಹೆಸರನ್ನು ಕರೆದುಕೊಂಡು ಬಂದರು.ಮುರ್ದಡ್ಯೆಯ ಮೂಲ ಸಂಸ್ಥಾಪಕ ಮಹಿಳೆಯರು ಇದನ್ನು ಮುರ್ದಡ್ಯೆ ಎಂದು ಕರೆದರೂ ಮನೆಮಂದಿ ಎಲ್ಲರೂ ಪತ್ತಡ್ಡೆ ಎಂದೇ ಕರೆಯುತ್ತಾ ಬಂದಿದ್ದ ಪರಿಣಾಮವಾಗಿ ಈ ಹೆಸರು ಹೆಚ್ಚಾಗಿ ಚಾಲ್ತಿಯಲ್ಲಿ ಬರಲೇ ಇಲ್ಲ.ನಂತರದ ಪೀಳಿಗೆಯವರೂ ಎರಡೂ ಐಟಂಗಳನ್ನು ಒಂದೇ ಹೆಸರಲ್ಲಿ ಕರೆಯುತ್ತಾ ಬಂದರು.
ನಮ್ಮ ಮನೆಯಲ್ಲೂ ಯಾರೂ “ಮುರ್ದಡ್ಯೆ”ಎಂಬ ಹೆಸರಿನಲ್ಲಿ ಕರೆದಿದ್ದೇ ಇಲ್ಲ.ನಮ್ಮ ಮನೆಯಲ್ಲಿ ಹೆಚ್ಚಾಗಿ ಮುರ್ದಡ್ಯೆಯನ್ನೇ ಮಾಡುವುದು ಇತ್ತು .ಅದು ಮನೆ ಮಂದಿಗೆಲ್ಲಾ ಬಲು ಇಷ್ಟದ ಅಡ್ಯೆ ಆಗಿತ್ತು.ಸಾಂಬಾರ್ ಮಾಡುವ ಕೆಸು ಗಿಡಗಳನ್ನು ಬೆಳೆಸುವ ಜಾಗಕ್ಕೆ “ತೇವುದ ಕಲ”ಎಂಬ ಪ್ರತ್ಯೇಕ ಸ್ಥಳ ಜಮೀನಿನ ಒಳಗೆ ಇತ್ತು.ಅದರ ಎಲೆ ದೊಡ್ಡದಾಗಿ ಇರುತ್ತದೆ.ಈ ಎಲೆಗಳಿಂದ ಪತ್ತಡ್ಯೆ ಮಾಡುವುದು ಇತ್ತು.ಮತ್ತು ಇದರ ಎಲೆ ಬೇಯಿಸಿ ಪಲದ್ಯ ಮಾಡುತ್ತಿದ್ದರು.
“ಪತ್ತಡ್ಡೆ” ಮತ್ತು “ಮುರ್ದಡ್ಡೆ”ಯ ಇತಿಹಾಸ ನನಗೆ ಆಗಿದ್ದು ಬೇರೆ ಮನೆಯವರ ಪುದ್ದರಿ ಊಟದಲ್ಲಿ.ಅಲ್ಲಿ ಹಲವು ಬಗೆಯ ತರಕಾರಿ ಪದಾರ್ಥಗಳನ್ನು ಬಡಿಸಿದ ಬಳಿಕ ಅಲ್ಲಿಯ ಅಜ್ಜಿ ಒಬ್ಬರು”ಮುರ್ದಡ್ಡೆ ಯಾನ್ ಬಲಸುವೆ”(ಮುರ್ದಡ್ಯೆ ನಾನು ಬಡಿಸುವೆ)ಎಂದರು. ಆವರೆಗೂ ಹೆಸರು ಕೇಳದ ನನಗೆ ಅದೇನು ಎಂದು ಅರಿಯುವ ಆತುರ ನನ್ನಲ್ಲಿತ್ತು.ನಾನು ಆಗ ಪ್ರೈಮರಿ ಶಾಲೆಗೆ ಹೋಗುತ್ತಿದ್ದೆ.ಅಜ್ಜಿ ಮಣ್ಣಿನ ದೊಡ್ಡ ಬಿಸಲೆಯಿಂದ ಎಲ್ಲರಿಗೂ ಮೂರು ಮೂರು ತುಂಡುಗಳನ್ನು ಎಲೆಗಳಿಗೆ ಹಾಕುತ್ತಾ ಹೋದರು.ನನ್ನ ಎಲೆಗೂ ಬಿತ್ತು.ತಿನ್ನುವಾಗ ಅರಿತೆ ಅದು ಮನೆಯಲ್ಲಿ ಮಾಡುವ ಪತ್ರಡ್ಯೆ ಎಂದು.ಆವತ್ತೇ ಇದರ ಇತಿಹಾಸದ ಹೆಸರನ್ನು ಕೇಳಿದ್ದು.
ಅದೇ ಅಜ್ಜಿ ನಮ್ಮಾ ಮನೆಯ ಪುದ್ದರಿ ಊಟಕ್ಕೆ ಬಂದಿದ್ದರು.ನಮ್ಮ ಮನೆಯಲ್ಲಿ ಪತ್ರಡ್ಡೆ ಎಂಬ ಹೆಸರಿನಲ್ಲಿ ಎಲ್ಲರಿಗೂ ಬಡಿಸಿದ್ದರು.ಆ ಅಜ್ಜಿ ಬೇರೆ ಹೆಸರಿನಲ್ಲಿ ಕರೆದು ಅವರ ಮನೆಯಲ್ಲಿ ಬಡಿಸಿದ್ದ ನೆನಪು ನನಗೆ ಆಯಿತು.ಇದರ ಹೆಸರನ್ನು ನಾನು ಕೇಳಿದಾಗ “ತೇವುಗು ಪತ್ತಾದ್ ಮಲ್ಪುನ ಅಡ್ಡೆನೇ ಪತ್ತಡ್ಡೆ ಮತ್ತು ತೇವುನು ಮೂರ್ದು ಮಲ್ಪುನ ಅಡ್ಡೆನೇ ಮುರ್ದಡ್ಡೆ”ಎಂದರು.ಈಗ ಮನೆಯಲ್ಲಿ ಅದೇ ಮುರ್ದಡ್ಯೆ ಮಾಡುವ ಸಂದರ್ಭಗಳಲ್ಲಿ ಕೆಸು ಕಟ್ ಮಾಡುವಾಗ ನನಗೆ ಆಜ್ಜಿಯ ನೆನಪಾಗುವುದು.ಈ ಲೇಖನ ಆ ಅಜ್ಜಿಗೆ ಅರ್ಪಿಸಿದ್ದೇನೆ.”ಪತ್ತಡ್ಡೆ” ಪದವೇ “ಪತ್ರಡೆ”ಆಗಿದೆ.
ಬೇಸಿಗೆಯಲ್ಲಿ ಕೆಸು ಮುರ್ದಡ್ಯೆ ಮಾಡುವವರು ಕೆಸುವಿನ ಎಲೆಯೊಡನೆ ವಿಟಮಿನ್ ಸೊಪ್ಪು ಮತ್ತು ತಜಂಕ್ ಸೊಪ್ಪುಗಳನ್ನು ಬಳಸುತ್ತಾರೆ.ಅವುಗಳು ತಂಪುಣಿಸುವ ಸೊಪ್ಪು ಆಗಿರುತ್ತದೆ.