January 18, 2025
WhatsApp Image 2021-07-11 at 6.07.53 PM (1)

ಮಳೆಗಾಲದ ವಿಶೇಷ ತಿನಿಸುಗಳಲ್ಲಿ ಪತ್ರೊಡೆಯೂ ಕೂಡ ಒಂದು.ಕರಾವಳಿಯಿಂದ ತೇಲಿ ಬಂದ ಈ ಪತ್ರೊಡೆ ನೆನಪಾಗುವುದು ಮಳೆಗಾಲದಲ್ಲಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪತ್ರೊಡೆ ಇಲ್ಲದಿದ್ದರೆ ಮಳೆಗಾಲದ ಗಮ್ಮತ್ತೇ ಮಾಯವಾಗಿರುತ್ತದೆ. ಇದನ್ನು ಕೆಸುವಿನ ಎಲೆಯಿಂದ ಮಾಡುತ್ತಾರೆ. ಇದಕ್ಕೆ ತುಳುವಿನಲ್ಲಿ ಸೇವು ಅಥವಾ ತೇವು ಎನ್ನುತ್ತಾರೆ. ಮಳೆಗಾಲದಲ್ಲಿ ಹೆಚ್ಚು ತಂಪು ಇರುವ ಕಾರಣ ದೇಹಕ್ಕೆ ಶೀತ,ನೆಗಡಿ ಬಾಧಿಸಬಾರದು ಎಂದು ಮಳೆಗಾಲದಲ್ಲಿ ಪತ್ರೊಡೆಯಂತಹ ತಿಂಡಿ ಮಾಡುತ್ತಾರೆ. ಕಾರಣ ಕೆಸುವಿನ ಎಲೆ ದೇಹಕ್ಕೆ ಉಷ್ಣವನ್ನು ನೀಡುತ್ತದೆ.

ಈ ಆಹಾರದಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿರುತ್ತದೆ. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು.ಇದರಲ್ಲಿ ಫೀನಾನ್ ಗಳು, ಟ್ಯಾನಿನ್ಸ್ , ಫ್ಲೆವೊನಾಯ್ಡ್ ,ಗ್ಲೈಸೋಸೈಡ್ಸ್ ,ಸ್ಟೀರೋಲ್ಸ್ ,ಅಂಶವಿರುವುದರಿಂದ ಸಂಧಿವಾತವನ್ನು ನಿವಾರಿಸುತ್ತದೆ.ಕೆಸುವಿನ ಎಲೆಯಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಅಂಶ ಕೂಡಾ ಇದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಪತ್ರೊಡೆಯನ್ನು ತುಳುನಾಡಿನ ತುಂಬಾ ಜನ ಇಷ್ಟಪಡುತ್ತಾರೆ. ಅದರಲ್ಲೂ ಕರಾವಳಿ,.ಮಲೆನಾಡು , ಕೊಡಗು ಪ್ರದೇಶದಲ್ಲಿ ಪತ್ರೊಡೆ ಪ್ರಸಿದ್ಧ ಆಹಾರ.
ಇನ್ನು ತುಳುಕೂಟ, ಆಟಿಡೊಂಜಿ ದಿನ ಮುಂತಾದ ಊರ ಹಬ್ಬ,ನಾಡ ಹಬ್ಬದಲ್ಲಿ ಪತ್ರೊಡೆಯದ್ದೆ ಮೇಲುಗೈ.ಪತ್ರೊಡೆಯನ್ನು ಬೇರೆ ಬೇರೆ ವಿಧಾನದಲ್ಲಿ ಮಾಡುತ್ತಾರೆ. ಇಲ್ಲಿ ತುಳುನಾಡಿನ ಹೆಚ್ಚಿನ ಜನರು ಮಾಡುವ ಪತ್ರೊಡೆಯ ಬಗ್ಗೆ ತಿಳಿದುಕೊಳ್ಳೋಣ.

ಪತ್ರೊಡೆಯನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು.
• ಕೆಸುವಿನ ಎಲೆ :15 -20 (ಎಳತು ಎಲೆ ಇದ್ದರೆ ಉತ್ತಮ )
• ಅಕ್ಕಿ :2 ಲೋಟ (ಬೆಳ್ತಿಗೆ ಅಕ್ಕಿ 1 ಲೋಟ + ರೇಷನ್ ಅಕ್ಕಿ 1 ಲೋಟ ಅಥವಾ ಊಟದ ಅಕ್ಕಿಯೂ ಆಗಬಹುದು)
• ಕಲ್ಲು ಉಪ್ಪು -2 ದೊಡ್ಡ ಚಮಚ
• ಉದ್ದ ಮೆಣಸು (ಖಾರಕ್ಕೆ ತಕ್ಕ ಹಾಗೆ ) -10 – 15
• ಕೊತ್ತಂಬರಿ -2 ಚಮಚ
• ಅರಸಿನ ಪುಡಿ – 2 ಸಣ್ಣ ಚಮಚ
• ಹುಣಿಸೆ ಹಣ್ಣು – 1 ಲಿಂಬೆ ಹಣ್ಣು ಗಾತ್ರದಷ್ಟು
• ಈರುಳ್ಳಿ – ಮಧ್ಯಮ ಗಾತ್ರದ್ದು – 2
• ಮೆಂತೆ – 1/4 ಚಮಚ
• ಜೀರಿಗೆ -1 ಚಮಚ
• ಕರಿಮೆಣಸು -1 ಸಣ್ಣ ಚಮಚ (ನಾಲ್ಕು ಕಾಳು)
• ಉದ್ದಿನ ಬೇಳೆ-1/2 ಲೋಟ (ಸಣ್ಣ)
• ಹೆಸರು ಬೇಳೆ -1/2 ಲೋಟ (ಸಣ್ಣ )

 

ಮಾಡುವ ವಿಧಾನ :
ಕೆಸುವಿನ ಎಲೆಯ ನಾರು ಬಿಡಿಸಿ ಸಣ್ಣದಾಗಿ ಕತ್ತರಿಸಿಕೊಳ್ಳಿ.
ಅಕ್ಕಿ , ಉದ್ದು, ಹೆಸರು ಬೇಳೆಯನ್ನು3 ರಿಂದ 4 ಗಂಟೆ ನೆನೆಹಾಕಿ .
ರುಬ್ಬುವಾಗ ತೊಳೆದ ಅಕ್ಕಿ, ಉದ್ದು, ಹೆಸರು ಬೇಳೆ , 1/2 ಚಮಚ ಜೀರಿಗೆ , 4 ಮೆಂತೆ ಕಾಳು, 7 ಉದ್ದ ಮೆಣಸು, 1 ಸಣ್ಣಚಮಚ ಅರಸಿನ, 4 ಕಾಳು ಮೆಣಸು, 1 ಚಮಚ ಉಪ್ಪು, 1/2 ಲಿಂಬೆ ಗಾತ್ರದ ಹುಣಿಸೆ ಹಣ್ಣು, 1 ಚಮಚ ಕೊತ್ತಂಬರಿ , ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ , ತುಂಬಾ ನುಣ್ಣಗೆ ರುಬ್ಬಿಕೊಳ್ಳಬೇಕಿಲ್ಲ.ಇದನ್ನು ಒಂದು ಪಾತ್ರೆಗೆ ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿಕೊಂಡ ಕೆಸುವಿನ ಎಲೆಯನ್ನು ಹಾಕಿ ಸರಿಯಾಗಿ ಮಗುಚಿ.ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಇಡಿ. ನೀರು ಸ್ವಲ್ಪ ಬಿಸಿಯಾದ ಮೇಲೆ ಸಾಗುವಾನಿ ಎಲೆ ಅಥವಾ ಬಾಳೆ ಎಲೆ (ಎರಡೂ ಬಗೆಯ ಎಳೆಯೂ ಸಿಗದಿದ್ದರೆ ಬಟ್ಟಲಿನಲ್ಲಿ)ಯಲ್ಲಿ ರುಬ್ಬಿಕೊಂಡ ಹಿಟ್ಟನ್ನು ಹಾಕಿ ಮಡಚಿ ಬೇಯಲು ಇಡಿ.ಕನಿಷ್ಠ 40 ನಿಮಿಷ ಸಾಧಾರಣ ಉರಿಯಲ್ಲಿ ಬೇಯಬೇಕಾಗುತ್ತದೆ.

ಪತ್ರೊಡೆ ಬೇಯುತ್ತಿರುವಾಗ ಮಸಾಲೆ ತಯಾರು ಮಾಡಬೇಕು.
1 ಚಮಚ ಕೊತ್ತಂಬರಿ, 1/2 ಸಣ್ಣ ಚಮಚ ಜೀರಿಗೆ, 4 ಮೆಂತೆ ಕಾಳು, 1 ಸಾಧಾರಣ ಗಾತ್ರದ ಈರುಳ್ಳಿ , ಉದ್ದ ಮೆಣಸು 7-9, ಅರ್ಧ ಲಿಂಬೆ ಗಾತ್ರದ ಹುಣಿಸೆ ಹಣ್ಣು, 1 ಚಮಚ ಅರಸಿನ, 1 ಚಮಚ ಕಲ್ಲು ಉಪ್ಪು, ತುರಿದಿಟ್ಟ 1 ಪೂರ್ತಿ ತೆಂಗಿನಕಾಯಿ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ರುಬ್ಬಿಕೊಳ್ಳಬೇಕು.ಹೆಚ್ಚು ನುಣ್ಣಗೆ ಆಗಬೇಕಿಲ್ಲ. ದೊಡ್ಡ ಬಾಣಲೆಯಲ್ಲಿ 1 ಸಾಧಾರಣ ಗಾತ್ರದ ಈರುಳ್ಳಿಯನ್ನು ಸಪೂರವಾಗಿ ತುಂಡು ಮಾಡಿ 1/2 ಲೋಟ ನೀರು ಹಾಕಿ ಸರಿಯಾಗಿ ಬೇಯಿಸಿ.ಅದು ಬೆಂದ ಮೇಲೆ ರುಬ್ಬಿಕೊಂಡಿರುವ ಮಸಾಲೆ ಹಾಕಿ ಬೇಕಾದಷ್ಟು ನೀರು ಹಾಕಿ ಕುದಿಸಬೇಕು.ಕುದಿ ಬಂದ ಮೇಲೆ ಇದಕ್ಕೆ ಇಡ್ಲಿ ಪಾತ್ರೆಯಲ್ಲಿಇಟ್ಟಿರುವ ಪತ್ರೊಡೆಯನ್ನು ತೆಗೆದು ಸಾಧಾರಣ ಗಾತ್ರಕ್ಕೆ ತುಂಡು ಮಾಡಿ ಹಾಕಿ. ಪತ್ರೊಡೆಯನ್ನು ಹಾಕಿದ ಮೇಲೆ ಸ್ವಲ್ಪ ಕುದಿ ಬಂದ ಮೇಲೆ ಒಲೆಯಿಂದ ಇಳಿಸಿ.ಈಗ ಪತ್ರೊಡೆ ತಿನ್ನಲು ತಯಾರು. ಮಾಡಿದ ತಕ್ಷಣವೂ ತಿನ್ನಲು ರುಚಿಯಾಗಿರುತ್ತದೆ. ಸ್ವಲ್ಪ ಹೊತ್ತು ಬಿಟ್ಟು ತಿಂದಾಗ ಪತ್ರೊಡೆಗೆ ಮಸಾಲೆ ಹೀರಿಕೊಂಡು ತುಂಬಾ ರುಚಿಯಾಗಿರುತ್ತದೆ.
ವಿಶೇಷ ಸೂಚನೆ: ಕೆಸುವಿನ ಎಲೆಯಿಂದ ತುರಿಕೆ ಉಂಟಾಗದಿರಲು ತಿಂಡಿ ಮಾಡುವ ಒಂದು ದಿನ ಮೊದಲೇ ಎಲೆ ಕಿತ್ತು ತಂದಿಡಿ.ಎಲೆ ಎಳತು ಇದ್ದರೆ ತುರಿಕೆ ಇರುವುದಿಲ್ಲ.

ಚಿತ್ರದಲ್ಲಿ ಎರಡು ರೀತಿಯ ಕೆಸುವಿನ ಎಲೆ ಇದೆ.

• ಒಂದು ಮನೆಯಲ್ಲಿ ಗೋಣಿ ಚೀಲ ಮತ್ತು ಡಬ್ಬದಲಿ ಬೆಳೆಸಿರುವ ಕೆಸುವಿನ ಎಲೆ. ಇದನ್ನೇ ಹಾಕಿ ಪತ್ರೊಡೆ ಮಾಡಿದರೆ ತುರಿಕೆ ಇರುವುದಿಲ್ಲ.

• ಇನ್ನೊಂದು ರೀತಿಯ ಕೆಸುವಿನ ಎಲೆಯಲ್ಲಿಸ್ವಲ್ಪ ಮಟ್ಟಿಗೆ ತುರಿಕೆ ಇರುತ್ತದೆ. ಹುಣಿಸೆ ಹಣ್ಣು ಹಾಕಿದರೆ ಮತ್ತು ಹಿಂದಿನ ದಿನ ಎಲೆ ತಂದಿಟ್ಟರೆ ತುರಿಕೆ ಇರುವುದಿಲ್ಲ.

• ನಿಮ್ಮಲ್ಲಿ ಕೆಸುವಿನ ಎಲೆ ಕಡಿಮೆ ಇದೆ ಎಂದಾದರೆ ಇದರ ಜೊತೆ ನುಗ್ಗೆಸೊಪ್ಪು ಅಥವಾ ತಗತೆ ಸೊಪ್ಪು (ತಜಂಕ್ ಸೊಪ್ಪು) ಹಾಕಬಹುದು.
• ಕೆಲವರಿಗೆ ಕೆಸುವಿನ ಎಲೆ ಉಷ್ಣ ಎಂದಾದರೆ ಪತ್ರೊಡೆ ಮಾಡುವಾಗ ಹೆಸರು ಬೇಳೆ ಹೆಚ್ಚು ಹಾಕಿ ಮತ್ತು ಉದ್ದು ಕಡಿಮೆ ಹಾಕಿ.
• ರುಬ್ಬುವಾಗ ಅಕ್ಕಿ ಹಿಟ್ಟು ನೀರಾದರೆ ಸಣ್ಣದಾಗಿ ಕತ್ತರಿಸಿರುವ ಕೆಸುವಿನ ಎಲೆಯನ್ನು ಹೆಚ್ಚು ಹಾಕಿ , ಹಿಟ್ಟು ಗಟ್ಟಿಯಾಗುತ್ತದೆ.ಎಲೆ ಜಾಸ್ತಿಯಾದಷ್ಟು ಪತ್ರೊಡೆ ರುಚಿಯಾಗಿರುತ್ತದೆ.

ವರ್ಷದಲ್ಲಿ ಕನಿಷ್ಠ 2 ಸಲವಾದರೂ ಪತ್ರೊಡೆಯನ್ನು ತಿನ್ನಿ
100 ಗ್ರಾಂ ಪತ್ರೊಡೆಯಲ್ಲಿರುವ ಪೋಷಕಾಂಶಗಳು
ಕ್ಯಾಲೋರಿ : 100 ಗ್ರಾಂ
ಫ್ಯಾಟ್ : 0.1ಗ್ರಾಂ ಲೀಪಿಡ್ ಫ್ಯಾಟ್
ಕಾರ್ಬೋ ಹೈಡ್ರೇಟ್ :23 ಗ್ರಾಂ
ಫೈಬರ್ :0.96 ಗ್ರಾಂ ಡಯಾಟರಿ ಫೈಬರ್.

 

 

 

 

 

 

ಲೇಖಕರು : ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *